Anjum Chopra: 'ದೀಪ್ತಿ ಶರ್ಮಾರನ್ನು ನಾಯಕಿ ಮಾಡಬೇಕಿತ್ತು: ದೇಶೀಯ ಟೂರ್ನಿಯಲ್ಲಿ ಭಾರತೀಯರೇ ತಂಡ ಮುನ್ನಡೆಸಿದರೆ ಉತ್ತಮ'
ಕನ್ನಡ ಸುದ್ದಿ  /  ಕ್ರೀಡೆ  /  Anjum Chopra: 'ದೀಪ್ತಿ ಶರ್ಮಾರನ್ನು ನಾಯಕಿ ಮಾಡಬೇಕಿತ್ತು: ದೇಶೀಯ ಟೂರ್ನಿಯಲ್ಲಿ ಭಾರತೀಯರೇ ತಂಡ ಮುನ್ನಡೆಸಿದರೆ ಉತ್ತಮ'

Anjum Chopra: 'ದೀಪ್ತಿ ಶರ್ಮಾರನ್ನು ನಾಯಕಿ ಮಾಡಬೇಕಿತ್ತು: ದೇಶೀಯ ಟೂರ್ನಿಯಲ್ಲಿ ಭಾರತೀಯರೇ ತಂಡ ಮುನ್ನಡೆಸಿದರೆ ಉತ್ತಮ'

ಭಾರತ ವನಿತೆಯರ ಕಿಕೆಟ್‌ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ, ಡಬ್ಲ್ಯುಪಿಎಲ್ ತಂಡಗಳನ್ನು ಹೆಚ್ಚು ಭಾರತೀಯರು ಮುನ್ನಡೆಸುವುದನ್ನು ನೋಡಲು ತಾವು ಇಷ್ಟಪಡುವುದಾಗಿ ಹೇಳಿದ್ದಾರೆ.

ದೀಪ್ತಿ ಶರ್ಮಾ
ದೀಪ್ತಿ ಶರ್ಮಾ

ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುಜರಾತ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದೊಂದಿಗೆ ವಿಮೆನ್ಸ್‌ ಪ್ರೀಮಿಯರ್ ಲೀಗ್ (WPL)ಗೆ ಶನಿವಾರ ಚಾಲನೆ ಸಿಕ್ಕಿದೆ. ಚೊಚ್ಚಲ ಋತುವಿನ ಹರಾಜು ಪ್ರಕ್ರಿಯೆಯನ್ನು ಫೆಬ್ರವರಿ 13ರಂದು ನಡೆಸಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಒಟ್ಟು 87 ಆಟಗಾರರು ಹರಾಜಾದರು. ಎಲ್ಲಾ ಐದು ಫ್ರಾಂಚೈಸಿಗಳು ಒಟ್ಟಾರೆಯಾಗಿ 59,50,00,000 ಕೋಟಿ ರೂಪಾಯಿಗಳನ್ನು ಆಟಗಾರ್ತಿಯರ ಮೇಲೆ ಸುರಿಸಿತು. ಹರಾಜಿನಲ್ಲಿ ಬಿಕರಿಯಾದ ಮೊದಲ ಆಟಗಾರ್ತಿ ಭಾರತದ ಸ್ಮೃತಿ ಮಂಧನ. ವಿಶೇಷವೆಂದರೆ ಅತಿ ಹೆಚ್ಚು ಮೊತ್ತಕ್ಕೆ ಬಿಕರಿಯಾದ ಆಟಗಾರ್ತಿ ಕೂಡಾ ಇವರೇ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಇವರ ಖರೀದಿಗೆ ಬರೋಬ್ಬರಿ 3.40 ಕೋಟಿ ರೂಪಾಯಿ ಪುಡಿಮಾಡಿತು. ಮತ್ತೊಂದೆಡೆ ಆಸ್ಟ್ರೇಲಿಯಾದ ಆಶ್ಲೀ ಗಾರ್ಡ್ನರ್ ಮತ್ತು ಇಂಗ್ಲೆಂಡ್‌ನ ನಟಾಲಿ ಸ್ಕೈವರ್-ಬ್ರಂಟ್ ಅತ್ಯಂತ ದುಬಾರಿ ವಿದೇಶಿ ಆಟಗಾರ್ತಿಯರಾಗಿ ಹೊರಹೊಮ್ಮಿದರು.

ಐದು ತಂಡಗಳ ಪೈಕಿ ಕೇವಲ ಎರಡು ತಂಡಗಳು ಮಾತ್ರ ಭಾರತೀಯ ಆಟಗಾರ್ತಿಯರನ್ನು ತಮ್ಮ ತಂಡಗಳಿಗೆ ನಾಯಕಿಯರನ್ನಾಗಿ ಆಯ್ಕೆ ಮಾಡಿಕೊಂಡಿವೆ. ಅವುಗಳೇ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ. ಹರ್ಮನ್‌ಪ್ರೀತ್ ಕೌರ್ ಎಂಐ ತಂಡವನ್ನು ಮುನ್ನಡೆಸಿದರೆ, ಸ್ಮೃತಿ ಮಂಧನ ಆರ್‌ಸಿಬಿ ನಾಯಕಿಯಾಗಿದ್ದಾರೆ. ಉಳಿದ ತಂಡಗಳು ಆಸ್ಟ್ರೇಲಿಯಾದ ಆಟಗಾರ್ತಿಯರನ್ನು ತಮ್ಮ ನಾಯಕಿಯಾಗಿ ಆಯ್ಕೆ ಮಾಡಿಕೊಂಡಿದೆ. ಡೆಲ್ಲಿ ಕ್ಯಾಪಿಟಲ್ಸ್‌ಗೆ ಮೆಗ್ ಲ್ಯಾನಿಂಗ್, ಗುಜರಾತ್ ಜೈಂಟ್ಸ್‌ಗೆ ಬೆಥ್ ಮೂನಿ ಮತ್ತು ಯುಪಿ ವಾರಿಯರ್ಜ್‌ಗೆ ಅಲಿಸ್ಸಾ ಹೀಲಿ ನಾಯಕತ್ವ ವಹಿಸಿದ್ದಾರೆ.

ಕೆಲ ತಂಡಗಳಿಗೆ ಭಾರತೀಯರೇ ನಾಯಕಿಯರಾಗಿ ಆಯ್ಕೆಯಾಗಬಹುದು ಎಂಬ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಮೂರು ತಂಡಗಳ ನಾಯಕತ್ವವನ್ನು ಆಸೀಸ್‌ ಆಟಗಾರ್ತಿಯರು ಪಡೆದರು. ಹೀಗಾಗಿ ಟೂರ್ನಿಯಲ್ಲಿ ಆಸೀಸ್‌ ಆಟಗಾರ್ತಿಯರಿಗೆ ಪ್ರಾಧಾನ್ಯತೆ ಸಿಕ್ಕಿತು. ಈ ನಡುವೆ ಭಾರತ ವನಿತೆಯರ ಕಿಕೆಟ್‌ ತಂಡದ ಮಾಜಿ ನಾಯಕಿ ಅಂಜುಮ್ ಚೋಪ್ರಾ, ಡಬ್ಲ್ಯುಪಿಎಲ್ ತಂಡಗಳನ್ನು ಹೆಚ್ಚು ಭಾರತೀಯರು ಮುನ್ನಡೆಸುವುದನ್ನು ನೋಡಲು ನಾನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

“ಬಹುತೇಕ ತಂಡಗಳು ವಿದೇಶಿ ಆಟಗಾರ್ತಿಯರನ್ನು ನಾಯಕಿಯರನ್ನಾಗಿ ಆಯ್ಕೆ ಮಾಡಿರುವುದು ನನಗೆ ಇಷ್ಟವಾಗಲಿಲ್ಲ. ಏಕೆಂದರೆ ಇದು ಭಾರತೀಯ ಲೀಗ್ ಮತ್ತು ಭಾರತೀಯ ಮೈದಾನಗಳಲ್ಲಿ ಆಡಲಾಗುತ್ತಿದೆ. ಹೀಗಾಗಿ ಭಾರತೀಯರಿಗೆ ಸಾಮರ್ಥ್ಯ ಇದೆ ಎಂದಿದ್ದರೆ, ಭಾರತೀಯರೇ ನಾಯಕಿಯರಾಗಬೇಕಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ದೀಪ್ತಿ ಶರ್ಮಾ ನಾಯಕಿಯಾಗಬಹುದಿತ್ತು ಎಂದು ನಾನು ಭಾವಿಸಿದೆ. ಏಕೆಂದರೆ ಅವರು ಕಳೆದ ಮಹಿಳಾ ಟಿ20 ಚಾಲೆಂಜ್‌ನಲ್ಲಿ ನಾಯಕತ್ವ ವಹಿಸಿದ ಅನುಭವ ಹೊಂದಿದ್ದರು” ಎಂದು ಚೋಪ್ರಾ ಹೇಳಿದ್ದಾರೆ. ಆದರೆ, ಆರು ಬಾರಿ ಟಿ20 ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದ ಆಟಗಾರ್ತಿಯರು ಭಾರತಕ್ಕೆ ಹೋಲಿಸಿದರೆ ಹೆಚ್ಚು ಅನುಭವ ಹೊಂದಿದ್ದಾರೆ ಎಂದು ಚೋಪ್ರಾ ಒಪ್ಪಿಕೊಂಡರು.

“ಆಸ್ಟ್ರೇಲಿಯಾದ ಆಟಗಾರ್ತಿಯರು ವಿಶ್ವ ಚಾಂಪಿಯನ್ ಆಗಿದ್ದಾರೆ. ಅವರು ಸ್ವದೇಶದಲ್ಲಿ ಪ್ರಮುಖ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅವರ ಅನುಭವವನ್ನು ಅಂತಾರಾಷ್ಟ್ರೀಯ ಹಂತದಲ್ಲಿ ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಹೀಗಾಗಿ ಮೆಗ್ ಲ್ಯಾನಿಂಗ್‌ಗಿಂತ ಮುಂದೆ ಜೆಮಿಮಾ ರೋಡ್ರಿಗಸ್ ಅವರು ನಾಯಕಿಯಾಗಲು ಸಾಧ್ಯವಿಲ್ಲ. ಇದೇ ವೇಳೆ ಆಸ್ಟ್ರೇಲಿಯಾದ ಆಟಗಾರ್ತಿಯರಂತೆ ಭಾರತದ ಆಟಗಾರರಿಗೆ ಹೆಚ್ಚಿನ ನಾಯಕತ್ವದ ಸಾಮರ್ಥ್ಯವಿಲ್ಲ” ಎಂದು ಅವರು ಹೇಳಿದರು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.