ಕನ್ನಡ ಸುದ್ದಿ  /  Sports  /  Former Pakistan Skipper Believes India Need Icc Title

Virat Kohli century: 'ಸಚಿನ್ ಶತಕ ದಾಖಲೆಯನ್ನು ಕೊಹ್ಲಿ ಬ್ರೇಕ್ ಮಾಡೋದು ದೊಡ್ಡ ವಿಷಯವಲ್ಲ; ಭಾರತಕ್ಕೆ ಐಸಿಸಿ ಕಪ್ ಬೇಕಿದೆ'

ವಿರಾಟ್‌ ಕೊಹ್ಲಿ 200 ಶತಕಗಳನ್ನು ಪೂರೈಸುತ್ತಾರೋ ಬಿಡುತ್ತಾರೋ ಎಂಬುದು ಇಲ್ಲಿ ದೊಡ್ಡ ವಿಚಾರವಲ್ಲ ಎಂದು ಹೇಳಿರುವ ಪಾಕಿಸ್ತಾನದ ಮಾಜಿ ನಾಯಕ, ಭಾರತೀಯ ಕ್ರಿಕೆಟ್‌ನ ಕಠೋರ ವಾಸ್ತವವನ್ನು ಎತ್ತಿ ತೋರಿಸಿದ್ದಾರೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ, ಶನಿವಾರ ಚಟ್ಟೋಗ್ರಾಮ್‌ನಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಬರೋಬ್ಬರಿ 1,214 ದಿನಗಳ ಸುದೀರ್ಘ ಅಂತರದ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್‌ 44ನೇ ಶತಕ ಸಿಡಿಸಿ ಮಿಂಚಿದರು. ಈ ಶತಕದ ಮೂಲಕ ಅವರು ಆಸ್ಟ್ರೇಲಿಯಾದ ಶ್ರೇಷ್ಠ ಆಟಗಾರ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದರು.

ಹೆಚ್ಚು ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದವರ ಪಟ್ಟಿಯಲ್ಲಿ ಸದ್ಯ ವಿರಾಟ್‌ ಎರಡನೇ ಸ್ಥಾನದಲ್ಲಿ ಮಿಂಚುತ್ತಿದ್ದಾರೆ. ಕ್ರಿಕೆಟ್‌ ದಂತಕಥೆ ಹಾಗೂ ಕ್ರಿಕೆಟ್‌ ದೇವರು ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ. ಹೀಗಾಗಿ, ಸಚಿನ್ ಅವರ 100 ಶತಕಗಳ ದಾಖಲೆಯನ್ನು ಕೊಹ್ಲಿ ಮುರಿಯಬಹುದೇ ಎಂಬ ಚರ್ಚೆ ಮತ್ತೆ ಪ್ರಾರಂಭವಾಗಿದೆ. ಆದರೆ ಪಾಕಿಸ್ತಾನದ ಮಾಜಿ ನಾಯಕರೊಬ್ಬರು ಈ ಬಗ್ಗೆ ಭಿನ್ನ ರಾಗ ಎಳೆದಿದ್ದಾರೆ.

ವಿರಾಟ್‌ ಕೊಹ್ಲಿ 200 ಶತಕಗಳನ್ನು ಪೂರೈಸುತ್ತಾರೋ ಬಿಡುತ್ತಾರೋ ಎಂಬುದು ಇಲ್ಲಿ ದೊಡ್ಡ ವಿಚಾರವಲ್ಲ ಎಂದು ಹೇಳಿರುವ ಅವರು, ಭಾರತೀಯ ಕ್ರಿಕೆಟ್‌ನ ಕಠೋರ ವಾಸ್ತವವನ್ನು ಎತ್ತಿ ತೋರಿಸಿದ್ದಾರೆ.

ಕೊಹ್ಲಿ ಈಗ ಸಚಿನ್ ಅವರ ಏಕದಿನ ಕ್ರಿಕೆಟ್‌ನ ದಾಖಲೆಯ 49 ಶತಕದ ದಾಖಲೆಯನ್ನು ಮುರಿಯಲು ಕೇವಲ ಐದು ಶತಕಗಳಷ್ಟು ಹಿಂದಿದ್ದಾರೆ. ಮತ್ತೊಂದೆಡೆ ಅಂತಾರಾಷ್ಟ್ರೀಯ ಶತಕದ ದಾಖಲೆ ಬ್ರೇಕ್‌ ಮಾಡಲು ಇನ್ನೂ 28 ಶತಕಗಳು ಬೇಕಿವೆ. ವಿರಾಟ್‌ ಈಗಲೂ ಎಲ್ಲಾ ಮೂರು ಸ್ವರೂಪಗಳಲ್ಲಿ ಸಕ್ರಿಯವಾಗಿ ಆಡುತ್ತಿರುವುದರಿಂದ, ಸಚಿನ್ ಅವರ ದಾಖಲೆಯನ್ನು ಮುರಿಯುವ ಸಾಧ್ಯತೆ ಇನ್ನೂ ಇದೆ.

ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ರಶೀದ್ ಲತೀಫ್ ಅವರಿಗೆ ಆ ಸಾಧ್ಯತೆ ಇದೆಯೇ ಎಂಬ ಬಗ್ಗೆ ಕೇಳಲಾಯಿತು. ಆದರೆ ಹಿರಿಯ ಕ್ರಿಕೆಟಿಗ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡುತ್ತಾ, ಸಚಿನ್ ಅವರ ದಾಖಲೆಯನ್ನು ಮುರಿಯುವ ಕೊಹ್ಲಿಯ ಪ್ರಯತ್ನವನ್ನು ಅಭಿಮಾನಿಗಳು ಕಾಯುತ್ತಿಲ್ಲ ಎಂದು ಹೇಳಿದ್ದಾರೆ. ಆದರೆ, ಭಾರತ ತಂಡವು ಮತ್ತೊಂದು ಐಸಿಸಿ ಪ್ರಶಸ್ತಿಯನ್ನು ಗೆಲ್ಲಬೇಕೆಂದು ಅಭಿಮಾನಿಗಳು ಹಾತೊರೆಯುತ್ತಿದ್ದಾರೆ ಎಂದಿದ್ದಾರೆ.

“ಇದು ಶತಕಗಳ ಸಂಖ್ಯೆಯನ್ನು ಎಣಿಸುತ್ತಾ ಕೂರುವ ಸಮಯವಲ್ಲ. ಅದು ದೊಡ್ಡ ವಿಷಯವೂ ಅಲ್ಲ. ಭಾರತವೀಗ ಪ್ರಶಸ್ತಿ ಗೆಲ್ಲಲೇಬೇಕು. ಭಾರತ ಟ್ರೋಫಿ ಗೆದ್ದು ವರ್ಷಗಳೇ ಕಳೆದಿವೆ. ಕೊಹ್ಲಿ 100 ಶತಕ ಅಥವಾ 200 ಶತಕವೇ ಬಾರಿಸಲಿ. ಅದು ಮುಖ್ಯವಲ್ಲ. ಭಾರತೀಯ ಕ್ರಿಕೆಟ್‌ಗೆ ಮತ್ತು ಅಭಿಮಾನಿಗಳಿಗೆ ಪ್ರಶಸ್ತಿ ಗೆಲ್ಲುವುದೇ ಮುಖ್ಯ. ಆರ್ಥಿಕವಾಗಿ ನೋಡಿದರೆ ಭಾರತ ತಂಡ ತುಂಬಾ ಬಲಿಷ್ಠವಾಗಿದೆ. ಐಪಿಎಲ್ ಆಯೋಜನೆಯ ಮೂಲಕ ಭಾರತೀಯ ಕ್ರಿಕೆಟ್‌ಗೆ ತುಂಬಾ ಬಲ ಬಂದಿದೆ. ಆದರೆ, ಅಭಿಮಾನಿಗಳು ಮತ್ತು ಮಾಧ್ಯಮಗಳು ಪ್ರಶಸ್ತಿ ಬೇಕು ಎಂದು ಒತ್ತಡ ಹೇರುತ್ತಿದ್ದಾರೆ,” ಎಂದರು.

“ಕೊಹ್ಲಿ ಬೇಕಾದರೆ 100 ಶತಕ ಬಾರಿಸಬಹುದು. ಆದರೆ ಸದ್ಯದ ಬೇಡಿಕೆ ಬದಲಾಗಿದೆ. ಏಷ್ಯಾಕಪ್ ಗೆಲ್ಲಲು ಸಾಧ್ಯವಾಗಲಿಲ್ಲ. ಹಾಗೆಯೇ ಚಾಂಪಿಯನ್ಸ್ ಟ್ರೋಫಿ, 2019ರ ವಿಶ್ವಕಪ್, ಕೊನೆಯ ಎರಡು ಟಿ20 ವಿಶ್ವಕಪ್‌ಗಳು ಹೀಗೆ ಎಲ್ಲವನ್ನೂ ಭಾರತ ಸೋತಿದೆ. 100 ಶತಕಗಳಿಗೆ ತನ್ನದೇ ಆದ ಸ್ಥಾನವಿದೆ. ಆದರೆ ಭಾರತ ಮತ್ತು ಭಾರತೀಯ ಕ್ರಿಕೆಟ್ ಮಂಡಳಿಯು ಪ್ರಶಸ್ತಿ ಗೆಲ್ಲುವ ಅಗತ್ಯವಿದೆ” ಎಂದು ಅವರು ಒತ್ತಿ ಹೇಳಿದರು.

2013ರಲ್ಲಿ ಭಾರತವು ಇಂಗ್ಲೆಂಡ್ ಅನ್ನು ಸೋಲಿಸಿ ತಮ್ಮ ಚೊಚ್ಚಲ ಚಾಂಪಿಯನ್ಸ್ ಟ್ರೋಫಿ ಗೆದ್ದಿತ್ತು. ಆ ಬಳಿಕ ಮೆನ್ ಇನ್ ಬ್ಲೂ ತಂಡವು ಮತ್ತೊಂದು ICC ಟ್ರೋಫಿಯನ್ನು ಗೆದ್ದಿಲ್ಲ. ಸದ್ಯ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್‌ ಹಾಗೂ ಏಷ್ಯಾಕಪ್‌ ಮೇಲೆ ಭಾರತದ ಕಣ್ಣಿದೆ.