ಪಿಎಸ್‌ಜಿ ತೊರೆದು ರಿಯಲ್ ಮ್ಯಾಡ್ರಿಡ್ ಸೇರಿದ ಕೈಲಿಯನ್ ಎಂಬಪ್ಪೆ; ಚಾಂಪಿಯನ್ಸ್ ಲೀಗ್ ವಿಜೇತ ತಂಡಕ್ಕೆ ಆನೆಬಲ
Kylian Mbappe: ಫ್ರಾನ್ಸ್ ಫುಟ್ಬಾಲ್ ತಂಡದ ನಾಯಕ ಕೈಲಿಯನ್ ಎಂಬಪ್ಪೆ ರಿಯಲ್ ಮ್ಯಾಡ್ರಿಡ್ ಪರ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಇನ್ನೇನು ಚಾಂಪಿಯನ್ಸ್ ಲೀಗ್ ವಿಜೇತ ತಂಡ ಅಧಿಕೃತ ಘೋಷಣೆ ಮಾಡಲಿದೆ.
ಇತ್ತೀಚೆಗಷ್ಟೇ ದಾಖಲೆಯ 15ನೇ ಬಾರಿಗೆ ಚಾಂಪಿಯನ್ಸ್ ಲೀಗ್ ಟ್ರೋಫಿ ಗೆದ್ದ ರಿಯಲ್ ಮ್ಯಾಡ್ರಿಡ್‌ಗೆ ಮತ್ತೆ ಆನೆ ಬಲ ಬಂದಂತಾಗಿದೆ. ವಿಶ್ವದ ಬಲಿಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಕೈಲಿಯನ್ ಎಂಬಪ್ಪೆ, ರಿಯಲ್ ಮ್ಯಾಡ್ರಿಡ್ ಪರ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಯಾಗಿದೆ. ಫ್ರಾನ್ಸ್ ರಾಷ್ಟ್ರೀಯ ಫುಟ್ಬಾಲ್ ತಂಡದ ಚಾಂಪಿಯನ್ ಆಟಗಾರ ಈವರೆಗೆ ಪ್ಯಾರಿಸ್ ಸೇಂಟ್ ಜರ್ಮೈನ್ (ಪಿಎಸ್‌ಜಿ) ಪರ ಆಡುತ್ತಿದ್ದರು. ಪಿಎಸ್‌ಜಿಯೊಂದಿಗಿನ ಈ ಹಿಂದಿನ ಒಪ್ಪಂದವು ಜೂನ್ 30ರಂದು ಕೊನೆಗೊಂಡಿದೆ. ಹೀಗಾಗಿ ನಿರೀಕ್ಷೆಯಂತೆಯೇ, 25 ವರ್ಷದ ಕೈಲಿಯನ್ ಎಂಬಪ್ಪೆ ರಿಯಲ್ ಮ್ಯಾಡ್ರಿಡ್ ಪರ ಆಡಲು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ರಿಯಲ್ ಮ್ಯಾಡ್ರಿಡ್ ಸೇರಿಕೊಳ್ಳಲಿರುವ ಖ್ಯಾತ ಆಟಗಾರ ಈಗಾಗಲೇ ಋತುವಿನ ಕೊನೆಯಲ್ಲಿ ಪಿಎಸ್‌ಜಿ ತೊರೆಯುವುದಾಗಿ ಸ್ಪಷ್ಟಪಡಿಸಿದ್ದರು. ಪಿಎಸ್‌ಜಿ ಪರ ಆಡಿದ ಅಂತಿಮ ಋತುವಿನಲ್ಲಿ, ಫ್ರೆಂಚ್ ಫಾರ್ವರ್ಡ್ ಆಟಗಾರ ಯುಇಎಫ್ಎ ಚಾಂಪಿಯನ್ಸ್ ಲೀಗ್‌ನ ಸೆಮಿಫೈನಲ್‌ಗೆ ತಂಡವನ್ನು ಮುನ್ನಡೆಸಿದರು.
ಎಂಬಪ್ಪೆ ನೇತೃತ್ವದ ಪಿಎಸ್‌ಜಿ ತಂಡವು ಇತ್ತೀಚೆಗೆ ಮುಕ್ತಾಯಗೊಂಡ ಋತುವಿನಲ್ಲಿ ರಿಯಲ್ ಮ್ಯಾಡ್ರಿಡ್ ತಂಡದ ಪ್ರತಿಸ್ಪರ್ಧಿ ಬಾರ್ಸಿಲೋನಾವನ್ನು ಚಾಂಪಿಯನ್ಸ್ ಲೀಗ್‌ನಿಂದಲೇ ಹೊರಹಾಕಿತ್ತು. ಅದರ ಬೆನ್ನಲ್ಲೇ, ಇದೇ ಭಾನುವಾರ (ಜೂನ್ 2) ವೆಂಬ್ಲೆಯಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಫೈನಲ್ ಪಂದ್ಯದಲ್ಲಿ ಬೊರುಸಿಯಾ ಡಾರ್ಟ್ಮಂಡ್ ತಂಡವನ್ನು ಮಣಿಸಿದ ರಿಯಲ್ ಮ್ಯಾಡ್ರಿಡ್ ಕ್ಲಬ್ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದೀಗ ಮುಂದೆ ಈ ಬಲಿಷ್ಠ ರಿಯಲ್ ಮ್ಯಾಡ್ರಿಡ್ ತಂಡವನ್ನು ಎಂಬಪ್ಪೆ ಸೇರಿಕೊಳ್ಳಲಿದ್ದಾರೆ.
ಪಿಎಸ್‌ಜಿ ಪರ ಈವರೆಗೆ ಆಡಿದ ಏಳು ಋತುಗಳಲ್ಲಿ, ಎಂಬಪ್ಪೆ ಚಾಂಪಿಯನ್ಸ್ ಲೀಗ್ ಪ್ರಶಸ್ತಿಯನ್ನು ಗೆಲ್ಲಲು ವಿಫಲರಾಗಿದ್ದಾರೆ. ಮುಂದೆ ಮ್ಯಾಡ್ರಿಡ್ ಪರ ಅದೃಷ್ಟ ಬದಲಾಯಿಸುವ ಇರಾದೆಯಲ್ಲಿದ್ದಾರೆ.
ರಿಯಲ್ ಮ್ಯಾಡ್ರಿಡ್ ತಂಡವು ಮುಂದಿನ ವಾರ (ಬಹುತೇಕ ಸೋಮವಾರ) ಎಂಬಪ್ಪೆ ಅವರನ್ನು ತಮ್ಮ ತಂಡದ ಮುಂದಿನ ಆಟಗಾರನಾಗಿ ಘೋಷಿಸಲು ಸಜ್ಜಾಗಿದೆ. ಮಾಜಿ ಪಿಎಸ್‌ಜಿ ಸೂಪರ್‌ಸ್ಟಾರ್ ಫ್ರಾನ್ಸ್ ರಾಷ್ಟ್ರೀಯ ತಂಡರ ಪರ ಯುಇಎಫ್ಎ ಯುರೋಸ್ 2024 ಆಡಲು ಸಜ್ಜಾಗುತ್ತಿದ್ದಾರೆ.
ಎಂಬಾಪ್ಪೆ ಹೇಳಿದ್ದೇನು?
ಫ್ರಾನ್ಸ್ ನಾಯಕ ಎಂಬಪ್ಪೆ ಇತ್ತೀಚೆಗಷ್ಟೇ ರಿಯಲ್ ಮ್ಯಾಡ್ರಿಡ್ ಸೇರುವ ಕುರಿತು ಹೇಳಿಕೊಂಡಿದ್ದರು. ಹಲವು ವರ್ಷಗಳಿಂದ ನನಗೆ ಅತಿದೊಡ್ಡ ಫ್ರೆಂಚ್ ಕ್ಲಬ್ ಸದಸ್ಯನಾಗಲು ಅವಕಾಶ ಸಿಕ್ಕಿತು. ಇದು ನನ್ನ ಇಲ್ಲಿಯವರೆಗಿನ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟ ವಿಶ್ವದ ಅತ್ಯುತ್ತಮ ಕ್ಲಬ್‌ಗಳಲ್ಲಿ ಒಂದಾಗಿದೆ ಎಂದು ಎಂಬಪ್ಪೆ ಹೇಳಿದ್ದಾರೆ. ನಾನು ದೇಶವನ್ನು ತೊರೆಯುತ್ತೇನೆ ಎಂದು ಘೋಷಿಸುವುದು ಇಷ್ಟು ಕಷ್ಟ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ. ಆದರೆ, ಏಳು ವರ್ಷಗಳ ನಂತರ ನನಗೆ ಇದು ಹೊಸ ಸವಾಲಿನ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ, ಎಂದು ಅವರು ಹೇಳಿದ್ದಾರೆ.
2018ರ ಫಿಫಾ ವಿಶ್ವಕಪ್ ಗೆದ್ದ ಫ್ರಾನ್ಸ್ ತಂಡದ ಸ್ಟಾರ್ ಆಟಗಾರ ಎಂಬಪ್ಪೆ, ಪಿಎಸ್‌ಜಿ ಪರ ಸಾರ್ವಕಾಲಿಕ ಅತಿ ಹೆಚ್ಚು ಗೋಲ್ ಗಳಿಸಿದ ಆಟಗಾರನಾಗಿದ್ದಾರೆ. 2017ರಲ್ಲಿ ಎಎಸ್ ಮೊನಾಕೊ ಕ್ಲಬ್‌ನಿಂದ ಪಿಎಸ್‌ಜಿ ಸೇರಿಕೊಂಡ ಆಟಗಾರ 256 ಗೋಲುಗಳನ್ನು ಗಳಿಸಿದ್ದಾರೆ.