French Open 2023: ಸೆಮಿಫೈನಲ್​ ಪ್ರವೇಶಿಸಿದ ಹಾಲಿ ಚಾಂಪಿಯನ್​ ಸ್ವಿಯಾಟೆಕ್​; ಇತಿಹಾಸ ನಿರ್ಮಿಸಿದ ಬ್ರೆಜಿಲ್​ ಆಟಗಾರ್ತಿ ಬೆಟ್ರಿಜ್ ಹಡ್ಡಾದ್
ಕನ್ನಡ ಸುದ್ದಿ  /  ಕ್ರೀಡೆ  /  French Open 2023: ಸೆಮಿಫೈನಲ್​ ಪ್ರವೇಶಿಸಿದ ಹಾಲಿ ಚಾಂಪಿಯನ್​ ಸ್ವಿಯಾಟೆಕ್​; ಇತಿಹಾಸ ನಿರ್ಮಿಸಿದ ಬ್ರೆಜಿಲ್​ ಆಟಗಾರ್ತಿ ಬೆಟ್ರಿಜ್ ಹಡ್ಡಾದ್

French Open 2023: ಸೆಮಿಫೈನಲ್​ ಪ್ರವೇಶಿಸಿದ ಹಾಲಿ ಚಾಂಪಿಯನ್​ ಸ್ವಿಯಾಟೆಕ್​; ಇತಿಹಾಸ ನಿರ್ಮಿಸಿದ ಬ್ರೆಜಿಲ್​ ಆಟಗಾರ್ತಿ ಬೆಟ್ರಿಜ್ ಹಡ್ಡಾದ್

French Open 2023: ಫ್ರೆಂಚ್​ ಓಪನ್​​ ಟೂರ್ನಿಯಲ್ಲಿ ಹಾಲಿ ಚಾಂಪಿಯನ್​ ಇಗಾ ಸ್ವಿಯಾಟೆಕ್​ ಮತ್ತು ಇತಿಹಾಸ ನಿರ್ಮಿಸಿದ ಬ್ರೆಜಿಲ್​ ಆಟಗಾರ್ತಿ ಬೆಟ್ರಿಜ್ ಹಡ್ಡಾದ್ ಸೆಮಿಫೈನಲ್​ ಪ್ರವೇಶಿಸಿದ್ದಾರೆ.

ಇಂದು ನಡೆಯುವ ಸೆಮಿಫೈನಲ್​ ಪಂದ್ಯದಲ್ಲಿ ಇಗಾ ಸ್ವಿಯಾಟೆಕ್​ ಮತ್ತು ಬೆಟ್ರಿಜ್ ಹಡ್ಡಾದ್ ಕಾದಾಟ.
ಇಂದು ನಡೆಯುವ ಸೆಮಿಫೈನಲ್​ ಪಂದ್ಯದಲ್ಲಿ ಇಗಾ ಸ್ವಿಯಾಟೆಕ್​ ಮತ್ತು ಬೆಟ್ರಿಜ್ ಹಡ್ಡಾದ್ ಕಾದಾಟ.

ಬ್ರೆಜಿಲ್​ ಆಟಗಾರ್ತಿ ಬೆಟ್ರಿಜ್​ ಹಡ್ಡಾದ್ ಮೈಯಾ (Beatriz Haddad Maia) ಹಾಗೂ ಹಾಲಿ ಚಾಂಪಿಯನ್​ ಇಗಾ ಸ್ವಿಯಾಟೆಕ್​ (Iga Swiatek) ಫ್ರೆಂಚ್ ಓಪನ್​ 2023 (French Open 2023) ಗ್ರ್ಯಾಂಡ್​ ಸ್ಲಾಮ್​ನಲ್ಲಿ ಸೆಮಿಫೈನಲ್​ಗೇರಿದ್ದು, ಪ್ರಶಸ್ತಿಯ ಕನಸಿಗೆ ಚಿಗುರೊಡೆದಿದೆ. ಹಾಲಿ ರನ್ನರ್​ಅಪ್ ಆಗಿದ್ದ ವಿಶ್ವದ ನಂ 6 ಕೋಕೊ ಗೌಫ್ (Coco Gauff), 7ನೇ ಶ್ರೇಯಾಂಕಿತ ಆಟಗಾರ್ತಿ ಒನ್ಸ್​ ಜಬೇರ್ (Ons Jabeur)​​ ಕ್ವಾರ್ಟರ್​ಫೈನಲ್​​​ನಲ್ಲಿ ಎಡವಿದರು. ಇದರೊಂದಿಗೆ ಪ್ರಶಸ್ತಿ ಕನಸು ಭಗ್ನವಾಯಿತು.

ರೋಲ್ಯಾಂಡ್​ ಗ್ಯಾರಸ್​ನಲ್ಲಿ (Roland Garros) ನಡೆದ ಪಂದ್ಯದಲ್ಲಿ ಕಳೆದ ವರ್ಷ ಫೈನಲಿಸ್ಟ್​ಗಳ ಮುಖಾಮುಖಿಯಲ್ಲಿ ಪೊಲೆಂಡ್​ನ ಇಗಾ ಸ್ವಿಯಾಟೆಕ್​ 6-4, 6-2ರ ನೇರ ಸೆಟ್​ಗಳಿಂದ ಅಮೆರಿಕದ ಕೋಕೊ ಗೌಫ್​ ಎದುರು ಜಯ ಸಾಧಿಸಿದರು. ಆ ಮೂಲಕ ಸತತ 2ನೇ ಸೆಮೀಸ್​ ಪ್ರವೇಶಿಸಿದರು. ಒಂದು ಗಂಟೆ 28 ನಿಮಿಷಗಳಲ್ಲಿ ಗೌಫ್ ಅವರನ್ನು ಸೋಲಿಸಿದರು. ಜೊತೆಗೆ ಸತತ 12ನೇ ಜಯ ಸಾಧಿಸಿದ ಸ್ವಿಯಾಟೆಕ್​, ಮುಂದಿನ ಸುತ್ತಿನಲ್ಲಿ ಬೆಟ್ರಿಜ್​​ ಹಡ್ಡಾದ್​ ಅವರ ಎದುರು ಸೆಣಸಾಟ ನಡೆಸಲಿದ್ದಾರೆ.

ಸವಾಲಿಗೆ ಸಿದ್ಧ ಎಂದ ಸ್ವಿಯಾಟೆಕ್​

ಸೆಮಿಫೈನಲ್​ಗೇರಿದ ಬಳಿಕ ಮಾತನಾಡಿದ ಸ್ವಿಯಾಟೆಕ್​, ಬ್ರೆಜಿಲ್‌ನ ಬೆಟ್ರಿಜ್ ಹಡ್ಡಾದ್ ಮೈಯಾ ವಿರುದ್ಧ ಸೆಮಿಫೈನಲ್ ಹಣಾಹಣಿ ಏನೇ ಇರಲಿ, ಸಿದ್ಧವಾಗಿದ್ದೇನೆ ಎಂದು ವಿಶ್ವದ ನಂಬರ್ ಒನ್ ಆಟಗಾರ್ತಿ ಹೇಳಿದ್ದಾರೆ. ನಾವು ವರ್ಷದಲ್ಲಿ ಅನೇಕ ಟೂರ್ನಿಗಳನ್ನು ಆಡುತ್ತೇವೆ. ಆದರೆ ಕಳೆದ ಟೂರ್ನಿಗಳಿಗೆ ಹೋಲಿಸಿದರೆ ನಾನು ತುಂಬಾ ತಾಜಾತನದಿಂದ ಕಣಕ್ಕಿಳಿದಿದ್ದೇನೆ. ನೀವು ಹಿಂದಿನ ಪಂದ್ಯಗಳಿಗೂ ಈ ಪಂದ್ಯಕ್ಕೂ ಗಮನಿಸಿ, ನಾನು ನಿಜವಾಗಿಯೂ ಕೋರ್ಟ್‌ನಲ್ಲಿ ಹೆಚ್ಚು ಸಮಯವನ್ನು ಕಳೆಯಲಿಲ್ಲ, ನಾನು ನಿಜವಾಗಿಯೂ ಸಂತೋಷವಾಗಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.

ದಾಖಲೆ ಬರೆದ ಬೆಟ್ರಿಜ್​ ಹಡ್ಡಾದ್​

ರ್ಯಾಂಕಿಂಗ್​ ಪಟ್ಟಿಯಲ್ಲಿ 14ನೇ ಸ್ಥಾನ ಪಡೆದಿರುವ ಬೆಟ್ರಿಜ್​ ಹಡ್ಡಾದ್​ ಮೈಯಾ ಅವರು ಕ್ಲೇ ಕೋರ್ಟ್​ ಗ್ರ್ಯಾಂಡ್​ ಸ್ಲಾಂನಲ್ಲಿ ಸೆಮಿಫೈನಲ್​ಗೇರಿದ ಮೊಟ್ಟ ಮೊದಲ ಬ್ರೆಜಿಲ್​ ದೇಶದ ಆಟಗಾರ್ತಿ ಎಂದ ಚರಿತ್ರೆ ಬರೆದಿದ್ದಾರೆ.  ಅಂತಿಮ ಎಂಟರ ಘಟ್ಟದಲ್ಲಿ ಟುನೀಷಿಯಾದ ವಿಶ್ವದ ನಂ.7 ಒನ್ಸ್​ ಜಬೇರ್​ ಎದುರು 3-6, 7-6, 6-1ರ ಅಂತರದಲ್ಲಿ ಆಘಾತ ನೀಡಿದರು. ಎರಡು ಗಂಟೆ 29 ನಿಮಿಷಗಳಲ್ಲಿ ಒನ್ಸ್​ ಜಬೇರ್ ಅವರನ್ನು ಸೋಲಿಸಿದರು.

ಕಳೆದ ವರ್ಷ ವಿಂಬಲ್ಡನ್ (Wimbledon)​ ಮತ್ತು ಯುಎಸ್​ ಓಪನ್​ (US Open) ಟೂರ್ನಿಯಲ್ಲಿ ಜಬೇರ್ ರನ್ನರ್​ಅಪ್​ ಆಗಿದ್ದರು. ಈ ಈ ಪಂದ್ಯದಲ್ಲಿ ಮೊದಲ ಸೆಟ್​ ಅನ್ನು ಸುಲಭವಾಗಿ ಗೆದ್ದುಕೊಂಡ ಬಳಿಕ 2ನೇ ಸೆಟ್​ನಲ್ಲಿ ಸಾಕಷ್ಟು ಸವಾಲು ಎದುರಿಸಿದರು. 2ನೇ ಸೆಟ್ ಟ್ರೈ ಬ್ರೇಕರ್​​ ಆಯಿತು. ಕೊನೆಗೆ ಬೆಟ್ರಿಜ್ ಗೆದ್ದು ಪೈಪೋಟಿ ನೀಡಿದರು. 3ನೇ ಸೆಟ್​ನಲ್ಲಿ ಜಬೇರ್ ನೀರಸ ಪ್ರದರ್ಶನ ನೀಡಿದ ಪರಿಣಾಮ​ ಬೆಟ್ರಿಜ್ ಗೆದ್ದು ದಾಖಲೆಯ ಸೆಮೀಸ್​ ಪ್ರವೇಶಿಸಿದರು.

1966ರಲ್ಲಿ ಮರಿಯಾ ಬ್ಯೂನೊ ನಂತರ ರೋಲ್ಯಾಂಡ್ ಗ್ಯಾರೋಸ್ ಸೆಮಿಸ್‌ಗೆ ಅರ್ಹತೆ ಪಡೆದ ಮೊದಲ ಬ್ರೆಜಿಲಿಯನ್ ಮಹಿಳೆ ಎಂಬ ಖ್ಯಾತಿಗೆ ಬೆಟ್ರಿಜ್ ಹಡ್ಡಾದ್ ಪಾತ್ರರಾದರು. ಕ್ಲೇ ಕೋರ್ಟ್ ಪಂದ್ಯಾವಳಿಯ ಮೊದಲು ಹಡ್ಡಾದ್ ಯಾವುದೇ ಗ್ರ್ಯಾಂಡ್ ಸ್ಲಾಮ್‌ನಲ್ಲಿ 2ನೇ ಸುತ್ತು ದಾಟಲು ವಿಫಲರಾಗಿದ್ದರು. ಈಗ ಸೆಮಿಸ್‌ನಲ್ಲಿ ವಿಶ್ವದ ನಂ.1 ಇಗಾ ಸ್ವಿಯಾಟೆಕ್ ಅವರನ್ನು ಎದುರಿಸಲಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.