ಅಂದು ಎಂಎಸ್ ಧೋನಿ, ಇಂದು ಗುಕೇಶ್, ನಡುವೆ ಹಾಕಿ ತಂಡಕ್ಕೆ; ವಿಶ್ವ ಚಾಂಪಿಯನ್ನರ ಯಶಸ್ಸಿಗೆ ಪ್ಯಾಡಿ ಆಪ್ಟನ್ ಮಾಸ್ಟರ್ ಮೈಂಡ್
Paddy Upton: ವಿಶ್ವ ಚೆಸ್ ಚಾಂಪಿಯನ್ಶಿಪ್ ಅಂತಿಮ ಅಥವಾ 14ನೇ ಸುತ್ತಿನಲ್ಲಿ ಗುಕೇಶ್ ದೊಮ್ಮರಾಜು ಆಟದ ಸಮಯದ ಪ್ರತಿ ನಿಮಿಷದಲ್ಲೂ ಏನು ಮಾಡಬೇಕು ಎನ್ನುವುದನ್ನು ಊಹಿಸಿಕೊಂಡು ಅದಕ್ಕೆ ಆತನನ್ನು ಸಿದ್ಧಗೊಳಿಸಿದವರು ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್.
ಪ್ಯಾಡಿ ಆಪ್ಟನ್ ಒಬ್ಬ ಮೈಂಡ್ ಟ್ರೈನರ್. ಮೆಂಟಲ್ ಟ್ರೇನಿಂಗ್ ಎನ್ನುವುದು ಬಹಳ ಮುಖ್ಯ. ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುವಾಗ ಅದು ಯಾವ ಆಟವೇ ಆಗಿರಲಿ, ಅದು ಮೈಂಡ್ ಗೇಮ್ ಆಗಿರುತ್ತದೆ. ಪ್ಲಾನಿಂಗ್ ಅಂಡ್ ಎಕ್ಸಿಕ್ಯೂಶನ್ ಬಹಳ ಮುಖ್ಯವಾಗುತ್ತದೆ. ನಮ್ಮ ಎದುರಾಳಿ ಏನು ಚಿಂತಿಸುತ್ತಿರಬಹುದು ಎನ್ನುವುದನ್ನು ಚಿಂತಿಸಬೇಕಾಗುತ್ತದೆ. ಅದಕ್ಕೆ ನಮ್ಮ ಉತ್ತರ ಹೇಗಿರಬೇಕು ಎನ್ನುವುದನ್ನು ಮುಂದಾಗಿ ಆಲೋಚಿಸಬೇಕಾಗುತ್ತದೆ. ನಾವು ಯೋಚಿಸಿದ್ದು ಸರಿ ಎನ್ನುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಒಂದಲ್ಲ, ನಮ್ಮ ಎದುರಾಳಿ ಹತ್ತು ರೀತಿಯಲ್ಲಿ ಯೋಚಿಸಬಹುದು ಎನ್ನುವುದನ್ನು ನಾವು ಯೋಚಿಸಬೇಕಾಗುತ್ತದೆ. ಪ್ರತಿ ಸನ್ನಿವೇಶಕ್ಕೂ ನಮ್ಮ ನಡೆ ಹೇಗಿರಬೇಕು ಎನ್ನುವುದರ ನಿರ್ಧಾರ ಕೂಡ ಮುಂಚೆಯೇ ಆಗಿರಬೇಕು. ಗುಕೇಶ್ ಆಟದ ಸಮಯದ ಪ್ರತಿ ನಿಮಿಷವನ್ನು ಕೂಡ ಹೀಗಾದರೆ ಏನು ಮಾಡಬೇಕು ಎನ್ನುವುದನ್ನು ಊಹಿಸಿಕೊಂಡು ಅದಕ್ಕೆ ಆತನನ್ನು ಸಿದ್ಧಗೊಳಿಸಿದವರು ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್.
ಪ್ಯಾಡಿ ಆಪ್ಟನ್ ಸೌತ್ ಆಫ್ರಿಕನ್. ಮೂಲತಃ ಕ್ರಿಕೆಟಿಗ. ಭಾರತ 2011ರಲ್ಲಿ ವಿಶ್ವಕಪ್ ಗೆದ್ದಾಗ, ಒಲಂಪಿಕ್ಸ್ನಲ್ಲಿ ಹಾಕಿ ತಂಡ ಕಂಚು ಗೆದ್ದಾಗ ಆ ತಂಡಗಳ ಮಾನಸಿಕ ತರಬೇತಿ ಹೊಣೆ ಹೊತ್ತವರು ಇದೆ ಪ್ಯಾಡಿ ಆಪ್ಟನ್. ಸೆಲ್ಫ್ ಡೌಟ್ ಮತ್ತು ಪ್ಯಾನಿಕ್ ಅಟ್ಯಾಕ್ ಆಗುವುದು ಈ ಮಟ್ಟದಲ್ಲಿ ಬಹಳ ಸಾಮಾನ್ಯ. ಯಾರು ತಮ್ಮ ಮೆದುಳನ್ನು ಸರಿಯಾಗಿ ನಿಯಂತ್ರಿಸುತ್ತಾರೆ ಅವರಿಗೆ ಗೆಲುವು. ಇಲ್ಲಿ ಆಟಕ್ಕಿಂತ ಮುಖ್ಯ ಮೆಂಟಲ್ ಸ್ಟ್ರೆಂಥ್. ಮ್ಯಾಗ್ನ್ಯೂಸ್ನಂತಹ ಚಾಂಪಿಯನ್ ಆಟಗಾರನ ಕೈ ಕೂಡ ಅದುರಲು ಶುರುವಾಗುತ್ತದೆ ಎಂದರೆ ಆಟಕ್ಕಿಂತ, ಅಲ್ಲಿ ಇರಬಹುದಾದ ಒತ್ತಡ ಎಷ್ಟಿರಬಹುದು ಎನ್ನುವುದರ ಊಹೆ ನಿಮಗಾಗಬಹುದು. ಒತ್ತಡ ನಿರ್ವಹಣೆ ಫಲಿತಾಂಶವನ್ನು ನಿರ್ಧರಿಸುತ್ತದೆ. ಮೊನ್ನೆ ಗುಕೇಶ್ ಗೆದ್ದಿರುವುದು ಒತ್ತಡ ನಿರ್ವಹಣೆಯಲ್ಲಿ!
ನೀವು ವರ್ಲ್ಡ್ ಚಾಂಪಿಯನ್ ಆದರೂ ಕೂಡ ಜನ, ಸಮಾಜ ಸುಲಭವಾಗಿ ನಿಮ್ಮನ್ನು ಒಪ್ಪುವುದಿಲ್ಲ. ಹೀಗೆಳೆಯುವಿಕೆ ನಿಲ್ಲುವುದಿಲ್ಲ. ರಷ್ಯನ್ ಚೆಸ್ ಫೆಡರೇಶನ್ ಚೀನಿ ಆಟಗಾರ ಅಷ್ಟೊಂದು ಬಾಲಿಶ ತಪ್ಪುಗಳನ್ನು ಮಾಡಲು ಹೇಗೆ ಸಾಧ್ಯ? ಎಂದು ಗುಕೇಶ್ ಗೆಲುವಿನ ಬಗ್ಗೆ ಗುಮಾನಿ ವ್ಯಕ್ತಪಡಿಸಿದ್ದಾರೆ. ಒತ್ತಡ ಎಂತಹವರನ್ನು ಕೂಡ ಕುಗ್ಗಿಸುತ್ತದೆ ಎನ್ನುವುದು ಗೊತ್ತಿರುವ ವಿಷಯ. ಹೀಗಿದ್ದೂ ಕೊಂಕು ತೆಗೆಯುವುದು ಮಾತ್ರ ತಪ್ಪುವುದಿಲ್ಲ. ಕೋಟಿ ಕೋಟಿ ಜನರಲ್ಲಿ ಒಬ್ಬ ಗುಕೇಶ್ ಹುಟ್ಟಬಹುದು. ಉಳಿದೆಲ್ಲಾ ಮಕ್ಕಳನ್ನು ನಾವು ರೈಟ್ ಆಫ್ ಮಾಡಲು ಸಾಧ್ಯವಿಲ್ಲ. ಶ್ರಮವಹಿಸಿ , ಕಷ್ಟಪಟ್ಟು ಕಾರ್ಯಮಗ್ನರಾಗಬೇಕು ಅದಷ್ಟೇ ನನಗೆ ಮುಖ್ಯವಾಗುವುದು. ಉಳಿದಂತೆ ಫಲಿತಾಂಶದಿಂದ ಜಗತ್ತು ನಮ್ಮನ್ನು ನೋಡುವ ರೀತಿ ಬದಲಾಗುತ್ತದೆ ಅಷ್ಟೇ , ನಮ್ಮನ್ನು ನಾವು ನೋಡಿಕೊಳ್ಳುವ ರೀತಿ ಮಾತ್ರ ಎಂದಿಗೂ ಬದಲಾಗಬಾರದು. ಭಗವಂತನ ಸೃಷ್ಟಿಯಲ್ಲಿ ನಾವೆಲ್ಲರೂ ಅನನ್ಯ. ನಮ್ಮಲ್ಲಿರುವ ಶಕ್ತಿಯ ಪರಿಚಯ ನಮಗಿಲ್ಲದೆ ಹೋಗುವುದು ಮಾತ್ರ ವಿಪರ್ಯಾಸ. ಶುಭವಾಗಲಿ…
ರಂಗಸ್ವಾಮಿ ಮೂಕನಹಳ್ಳಿ ಅವರ ಫೇಸ್ಬುಕ್ ಪೋಸ್ಟ್ ಅನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ. ಅವರ ಪೋಸ್ಟ್ ಈ ಮುಂದಿನಂತಿದೆ ನೋಡಿ.