ಕನ್ನಡ ಸುದ್ದಿ  /  Sports  /  Gambhir Picks Top Six Odi Players Of India

Gautam Gambhir: 'ಆತನ ಹೊರತು ಬೇರೊಬ್ಬನನ್ನು ಆಡಿಸಲು ಸಾಧ್ಯವೇ'; ಭಾರತದ ಅಗ್ರ ಆರು ಆಟಗಾರರನ್ನು ಹೆಸರಿಸಿದ ಗಂಭೀರ್

ಟೀಂ ಇಂಡಿಯಾದಲ್ಲಿ ಈಗಲೂ ಆರಂಭಿಕ ಆಟಗಾರನ ಬಗ್ಗೆ ಚರ್ಚೆ ನಡೆಯುತ್ತಿರುವುದಕ್ಕೆ ಗಂಭೀರ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ನಾವು ಇನ್ನೂ ಈ ಬಗ್ಗೆ ಚರ್ಚಿಸುತ್ತಿರುವುದು ನನಗೆ ಆಶ್ಚರ್ಯವಾಗಿದೆ. ಏಕೆಂದರೆ ಈ ಹಿಂದಿನ ಇನ್ನಿಂಗ್ಸ್‌ನಲ್ಲಿ ಯಾರಾದರೂ ದ್ವಿಶತಕ ಸಿಡಿಸಿದವರು ಇದ್ದಾರೆ ಎಂದರೆ, ಅಲ್ಲಿಗೆ ಚರ್ಚೆ ಮುಗಿದಿದೆ. ಅದು ಖಂಡಿತವಾಗಿಯೂ ಇಶಾನ್ ಕಿಶನ್ ಆಗಿರಬೇಕು,” ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ವಿರಾಟ್‌ - ಕಿಶನ್‌
ವಿರಾಟ್‌ - ಕಿಶನ್‌ (AFP)

2023ರ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಭಾರತದ ಏಕದಿನ ತಂಡದಲ್ಲಿ ಆರಂಭಿಕರ ಆಯ್ಕೆ ಬಗ್ಗೆ ಯಾವುದೇ ಗೊಂದಲ ಇರಬಾರದು ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಹೇಳಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಯುವ ಆಟಗಾರ ಇಶಾನ್ ಕಿಶನ್ ಭಾರತದ ಪರ ಇನ್ನಿಂಗ್ಸ್ ಆರಂಭಿಸಬೇಕು ಎಂದು ಮಾಜಿ ಎಡಗೈ ಬ್ಯಾಟರ್ ಹೇಳಿದ್ದಾರೆ. ಇವರ ಹೊರತಾಗಿ ಬೇರೊಬ್ಬನ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಬಾಂಗ್ಲಾದೇಶ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಬಾರಿಸಿದ ವೇಗದ ದ್ವಿಶತಕವು, ಗಂಭೀರ್‌ಗೆ ಅವರ ಮೇಲೆ ಭಾರಿ ನಂಬಿಕೆ ಮೂಡಿಸಿದೆ. ಹೀಗಾಗಿ ಶುಭಮನ್ ಗಿಲ್ ಮತ್ತು ಕೆಎಲ್ ರಾಹುಲ್ ಅವರನ್ನು ಗಂಭೀರ್‌ ಬದಿಗೆ ಸರಿಸಿದ್ದಾರೆ. ಇದೀಗ ಶಿಖರ್ ಧವನ್ ಕೂಡಾ ಸ್ಪರ್ಧೆಯಿಂದ ಹೊರಗುಳಿದಿದ್ದು, ಇಶಾನ್‌ ಕಿಶನ್‌ ಉತ್ತಮ ಆಯ್ಕೆ ಎಂದಿದ್ದಾರೆ.

ಟೀಂ ಇಂಡಿಯಾದಲ್ಲಿ ಈಗಲೂ ಆರಂಭಿಕ ಆಟಗಾರನ ಬಗ್ಗೆ ಚರ್ಚೆ ನಡೆಯುತ್ತಿರುವುದಕ್ಕೆ ಗಂಭೀರ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ. “ನಾವು ಇನ್ನೂ ಈ ಬಗ್ಗೆ ಚರ್ಚಿಸುತ್ತಿರುವುದು ನನಗೆ ಆಶ್ಚರ್ಯವಾಗಿದೆ. ಏಕೆಂದರೆ ಈ ಹಿಂದಿನ ಇನ್ನಿಂಗ್ಸ್‌ನಲ್ಲಿ ಯಾರಾದರೂ ದ್ವಿಶತಕ ಸಿಡಿಸಿದವರು ಇದ್ದಾರೆ ಎಂದರೆ, ಅಲ್ಲಿಗೆ ಚರ್ಚೆ ಮುಗಿದಿದೆ. ಅದು ಖಂಡಿತವಾಗಿಯೂ ಇಶಾನ್ ಕಿಶನ್ ಆಗಿರಬೇಕು,” ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದ್ದಾರೆ.

ಒಂದು ವರ್ಷಕ್ಕೂ ಹೆಚ್ಚು ಕಾಲ ಟಿ20ಯಲ್ಲಿ ಬ್ಯಾಕ್‌ಅಪ್ ಓಪನರ್ ಆಗಿರುವ ಕಿಶನ್, ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಕೇವಲ 126 ಎಸೆತಗಳಲ್ಲಿ ದ್ವಿಶತಕ ಸಿಡಿಸುವ ಮೂಲಕ ಸಿಕ್ಕ ಏಕೈಕ ಅವಕಾಶವನ್ನು ಸದುಪಯೋಗಪಡಿಸಿದರು. ಪಂದ್ಯ ಗೆಲ್ಲುವಲ್ಲಿ ಅವರ ಪಾತ್ರ ನಿರ್ಣಾಯಕವಾಗಿತ್ತು. ಇದೀಗ ಇವರ ಸ್ಥಾನದ ಬಗ್ಗೆ ಚರ್ಚೆ ಮುಗಿದಿದ್ದು, ಕಿಶನ್‌ಗೆ ಲಾಂಗ್ ರನ್ ನೀಡಬೇಕು ಎಂದು ಗಂಭೀರ್ ಹೇಳಿದ್ದಾರೆ.

ನೀವು ಇಶಾನ್ ಕಿಶನ್‌ನ ಆಚೆಗೆ ಯಾರ ಬಗ್ಗೆಯೂ ಯೋಚಿಸಲು ಸಾಧ್ಯವಿಲ್ಲ. ಅವರಿಗೆ ಹೆಚ್ಚು ಆಡುವ ಅವಕಾಶ ನೀಡಬೇಕು. ಅವರು ವಿಕೆಟ್‌ ಕೀಪಿಂಗ್‌ ಕೂಡಾ ಮಾಡಬಲ್ಲರು. ಹೀಗಾಗಿ ಅವರಿಂದ ತಂಡಕ್ಕೆ ಎರಡೆರಡು ಲಾಭಗಳಿವೆ. ಆದ್ದರಿಂದ ನಾನು ಆರಂಭಿಕ ಆಟಗಾರನ ಚರ್ಚೆ ಇರಬಾರದು ಎಂದು ಹೇಳುತ್ತೇನೆ. ಬೇರೆ ಯಾರಿಂದಾದರೂ ದ್ವಿಶತಕ ಬಂದಿದ್ದರೆ, ನಾವು ಆ ವ್ಯಕ್ತಿಯ ಬಗ್ಗೆ ಮಾತನಾಡುತ್ತಿದ್ದೆವು ಎಂದು ನಾನು ಭಾವಿಸುತ್ತೇನೆ," ಎಂದು ಗೌತಿ ಹೇಳಿದ್ದಾರೆ.

ಇದೇ ವೇಳೆ ಕೆಕೆಆರ್‌ ತಂಡದ ಮಾಜಿ ನಾಯಕ, ಟೀಂ ಇಂಡಿಯಾದ ಅಗ್ರ ಆರು ಬ್ಯಾಟರ್‌ಗಳು ಯಾರಿರಬೇಕು ಎಂಬುದನ್ನು ಕೂಡಾ ಹೇಳಿದ್ದಾರೆ. ಭಾರತದ ಏಕದಿನ ತಂಡದಲ್ಲಿ ರೋಹಿತ್ ಶರ್ಮಾ ಅವರು ಕಿಶನ್ ಜತೆಗೂಡಿ ಇನ್ನಿಂಗ್ಸ್‌ ತೆರೆಯಬೇಕು. ನಂತರ ವನ್‌ ಡೌನ್‌ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಬಂದರೆ, ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಬರಬೇಕು. ನಂತರ ಶ್ರೇಯಸ್ ಅಯ್ಯರ್ ಮತ್ತು ಹಾರ್ದಿಕ್ ಪಾಂಡ್ಯ ಬ್ಯಾಟ್‌ ಬೀಸಬೇಕು ಎಂದು ಹೇಳಿದ್ದಾರೆ.

"ಶ್ರೇಯಸ್ ಅವರನ್ನು ಹೊರತುಪಡಿಸಿ ಬೇರೆ ಆಟಗಾರರನ್ನು ನೋಡುವುದು ತುಂಬಾ ಕಷ್ಟ. ಏಕೆಂದರೆ ಅವರು ಕಳೆದ ಒಂದೂವರೆ ವರ್ಷಗಳಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ" ಎಂದು ಗಂಭೀರ್ ಹೇಳಿದರು. ಇದೇ ವೇಳೆ ಕನ್ನಡಿಗ ಕೆ ಎಲ್ ರಾಹುಲ್ ತಮ್ಮ ತಂಡದಲ್ಲಿ ಬ್ಯಾಕಪ್ ಓಪನರ್ ಮತ್ತು ಕೀಪರ್ ಆಗಿರುತ್ತಾರೆ ಎಂದು ಗಂಭೀರ್ ಹೇಳಿದ್ದಾರೆ.