ಕನ್ನಡ ಸುದ್ದಿ  /  Sports  /  Gambhir Says Mohammed Siraj On Par With Kohli For Player Of The Series Award

Gambhir on Siraj: 'ಕೊಹ್ಲಿ ಮಾತ್ರ ಅಲ್ಲ, ಆತ ಕೂಡಾ ಸರಣಿಶ್ರೇಷ್ಠ ಪ್ರಶಸ್ತಿಗೆ ಅರ್ಹ' -ಗಂಭೀರ್ ಹೇಳಿದ್ದು ಆರ್‌ಸಿಬಿ ಆಟಗಾರನ ಹೆಸರು

ಕೊಹ್ಲಿ ಅವರ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಿದರೂ, ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಇದಕ್ಕೆ ಸಂಪೂರ್ಣ ಸಮಾಧಾನಗೊಂಡಿಲ್ಲ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಮಾಜಿ ನಾಯಕ ವಿರಾಟ್‌ ಮಾತ್ರ ಅತ್ಯುತ್ತಮ ಪ್ರದರ್ಶನ ನೀಡಿದ್ದಲ್ಲ ಎಂದು ಅವರು ಹೇಳಿದ್ದಾರೆ.

ಗೌತಮ್ ಗಂಭೀರ್, ವಿರಾಟ್ ಕೊಹ್ಲಿ
ಗೌತಮ್ ಗಂಭೀರ್, ವಿರಾಟ್ ಕೊಹ್ಲಿ (PTI)

ಭಾನುವಾರ ಮುಗಿದ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ‌, ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅಮೋಘ ಶತಕ ಸಿಡಿಸಿ ಮಿಂಚಿದರು. ಟೀಮ್ ಇಂಡಿಯಾವು ದಸುನ್ ಶನಕಾ ನೇತೃತ್ವದ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಮೂರು ಪಂದ್ಯಗಳಲ್ಲಿ ಎರಡು ಭರ್ಜರಿ ಶತಕ ಸಿಡಿಸಿದ ಕೊಹ್ಲಿ, ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಕೊಹ್ಲಿ ಅವರ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನಕ್ಕೆ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿ ನೀಡಿದರೂ, ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಇದಕ್ಕೆ ಸಂಪೂರ್ಣ ಸಮಾಧಾನಗೊಂಡಿಲ್ಲ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತದ ಮಾಜಿ ನಾಯಕ ವಿರಾಟ್‌ ಮಾತ್ರ ಅತ್ಯುತ್ತಮ ಪ್ರದರ್ಶನ ನೀಡಿದ್ದಲ್ಲ ಎಂದು ಅವರು ಹೇಳಿದ್ದಾರೆ.

ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ವಿಶೇಷವಾಗಿ ಉಲ್ಲೇಖಿಸಿದ ಗಂಭೀರ್, ಇತ್ತೀಚೆಗೆ ಮುಕ್ತಾಯಗೊಂಡ ಸರಣಿಯಲ್ಲಿನ ಅದ್ಭುತ ಪ್ರದರ್ಶನಕ್ಕಾಗಿ ಭಾರತದ ವೇಗಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಸಿರಾಜ್ ಕೂಡಾ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಕೊಹ್ಲಿಯೊಂದಿಗೆ ಹಂಚಿಕೊಳ್ಳಬೇಕಿತ್ತು ಎಂದು ಗಂಭೀರ್‌ ಹೇಳಿದ್ದಾರೆ.

ತಿರುವನಂತಪುರದಲ್ಲಿ ಪ್ರವಾಸಿ ಲಂಕಾವನ್ನು ವೈಟ್‌ವಾಶ್ ಮಾಡಿದ ಮೂರನೇ ಪಂದ್ಯದ ಬಳಿಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡ ಗಂಭೀರ್, ಈ ಪ್ರಶಸ್ತಿಗೆ ಸಿರಾಜ್ ಏಕೆ ಪ್ರಮುಖ ಅಭ್ಯರ್ಥಿ ಎಂಬುದನ್ನು ವಿವರಿಸಿದ್ದಾರೆ.

“ಅವರು ವಿರಾಟ್ ಕೊಹ್ಲಿಗೆ ಸರಿಸಮಾನಾಗಿ ಆಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಸಿರಾಜ್‌ ಪ್ರದರ್ಶನ ಅಸಾಧಾರಣವಾಗಿತ್ತು. ನಾವು ಯಾವಾಗಲೂ ಶತಕ ಸಿಡಿಸಲು ಆಟಗಾರರನ್ನು ಪ್ರಚೋದಿಸುತ್ತೇವೆ ಎಂದು ನನಗೆ ತಿಳಿದಿದೆ. ಆದರೆ, ಮೊಹಮ್ಮದ್ ಈ ಸಂಪೂರ್ಣ ಸರಣಿಯಲ್ಲಿ ಸಂಪೂರ್ಣವಾಗಿ ಅಸಾಧಾರಣರಾಗಿದ್ದರು” ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

ರನ್ ಮಷಿನ್ ಕೊಹ್ಲಿ, 3ನೇ ಏಕದಿನದಲ್ಲಿ ಭಾರತವು ಬೃಹತ್ ಮೊತ್ತ ದಾಖಲಿಸುವಲ್ಲಿ (390/5) ನೆರವಾದರೆ, ವೇಗಿ ಸಿರಾಜ್ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ದ್ವೀಪ ರಾಷ್ಟ್ರದ ಬ್ಯಾಟಿಂಗ್ ಕುಸಿತಕ್ಕೆ ಕಾರಣರಾದರು. ಶ್ರೀಲಂಕಾ 22 ಓವರ್‌ಗಳಲ್ಲಿ ಕೇವಲ 73 ರನ್‌ಗಳಿಗೆ ಆಲೌಟ್‌ ಆಯ್ತು. ಇದಕ್ಕೆ ಪ್ರಮುಖ ಕಾರಣ ಸಿರಾಜ್ ಎನ್ನುವುದರಲ್ಲಿ ಅನುಮಾನವಿಲ್ಲ. ನಾಲ್ಕು ನಿರ್ಣಾಯಕ ವಿಕೆಟ್‌ಗಳನ್ನು ಪಡೆದು ಸಿರಾಜ್‌ ಮಿಂಚಿದರು.

“ಆತ ಇನ್ನೂ ಹೆಚ್ಚು ಬಾರಿ ಐದು ವಿಕೆಟ್‌ಗಳನ್ನು ಪಡೆಯುತ್ತಾನೆ ಎಂದು ನಾನು ಭಾವಿಸುತ್ತೇನೆ. ಈ ಪಂದ್ಯದಲ್ಲಿ ಅದು ಆಗದಿರಬಹುದು. ಆದರೆ ಆತ ಚೆನ್ನಾಗಿ ಆಡಿದ್ದಾನೆ. ಹೀಗಾಗಿ ಕೊಹ್ಲಿಯೊಂದಿಗೆ ಆತನೂ ಸರಣಿ ಶ್ರೇಷ್ಠ ಪ್ರಶಸ್ತಿ ಹಂಚಿಕೊಳ್ಳಬಹುದಿತ್ತು” ಎಂದು ಗಂಭೀರ್ ನುಡಿದರು.

ಸಿರಾಜ್ ಪ್ರಮುಖ ವಿಕೆಟ್ ಟೇಕರ್ ಆಗಿ ಸರಣಿಯನ್ನು ಮುಗಿಸಿದ್ದಾರೆ. 10.22 ಸರಾಸರಿಯೊಂದಿಗೆ, ಮೂರು ಪಂದ್ಯಗಳ ಸರಣಿಯಲ್ಲಿ 9 ವಿಕೆಟ್‌ಗಳನ್ನು‌ ಆರ್‌ಸಿಬಿ ಆಟಗಾರ ಪಡೆದಿದ್ದಾರೆ.

ಮತ್ತೊಂದೆಡೆ, ರೋಹಿತ್‌ ಶರ್ಮಾ ಕುರಿತು ಗಂಭೀರ್‌ ಮಾತನಾಡಿದ್ದಾರೆ. ದೊಡ್ಡ ಹೊಡೆತಗಳಿಗೆ ಹೆಸರುವಾಸಿಯಾದ ರೋಹಿತ್, ಸದ್ಯ ಶತಕದ ಬರ ಎದುರಿಸುತ್ತಿದ್ದಾರೆ. ತಮ್ಮ ಕೊನೆಯ 50 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳಲ್ಲಿ ಮೂರಂಕಿ ಮೊತ್ತವನ್ನು ತಲುಪಲು ರೋಹಿತ್ ವಿಫಲರಾಗಿದ್ದಾರೆ. ಹೀಗಾಗಿ ಕೆಲವು ತಿಂಗಳ ಹಿಂದೆ ಕೊಹ್ಲಿ ಇದ್ದ ಜಾಗದಲ್ಲಿ ರೋಹಿತ್‌ ಅವರನ್ನು ಕೂಡಾ ನೋಡಬೇಕು ಎಂದು ಅವರು ಹೇಳಿದ್ದಾರೆ. “ಕಳೆದ ಮೂರೂವರೆ ವರ್ಷಗಳಲ್ಲಿ ವಿರಾಟ್ ಶತಕ ಗಳಿಸದಿದ್ದಾಗ ನಾವು ಅವರನ್ನು ನೋಡಿದಂತೆಯೇ ರೋಹಿತ್‌ ಶರ್ಮಾರನ್ನು ಕೂಡಾ ನೋಡಬೇಕೆಂದು ನಾನು ಭಾವಿಸುತ್ತೇನೆ. ರೋಹಿತ್ ಶರ್ಮಾ ಬಗ್ಗೆಯೂ ನಾವು ಕೊಹ್ಲಿಯಂತೆಯೇ ಸಮಾನವಾಗಿರಬೇಕು. ಏಕೆಂದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ಇನ್ನಿಂಗ್ಸ್‌ಗಳು ಸಾಕಷ್ಟು ಹೆಚ್ಚು,” ಎಂದು ಗಂಭೀರ್ ಹೇಳಿದ್ದಾರೆ.