ಕನ್ನಡ ಸುದ್ದಿ  /  Sports  /  Ganguly Names Permanent Player In India Wtc Final Xi

Sourav Ganguly: 'ಆತ ಇದಕ್ಕಿಂತ ಹೆಚ್ಚು ಇನ್ನೇನು ಮಾಡ್ಬೇಕು?'; ಭಾರತ ತಂಡದ 'ಕಾಯಂ ಆಟಗಾರ'ನ ಹೆಸರಿಸಿದ ದಾದಾ

ಗಿಲ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಏಕದಿನ ಹಾಗೂ ಟಿ20 ಎರಡರಲ್ಲೂ ಶತಕಗಳನ್ನು ಸಿಡಿಸಿದ್ದಾರೆ. ಗಿಲ್ ಅವರ ಕ್ರಿಕೆಟ್‌ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, 23 ವರ್ಷದ ಯುವ ಆಟಗಾರ ಭಾರತ ತಂಡದಲ್ಲಿ 'ಶಾಶ್ವತ ಆಟಗಾರ' ಎಂದು ಉದ್ಘರಿಸಿದ್ದಾರೆ.

ಸೌರವ್‌ ಗಂಗೂಲಿ
ಸೌರವ್‌ ಗಂಗೂಲಿ (PTI)

ಕೆಎಲ್ ರಾಹುಲ್ ಅವರ ಕಳಪೆ ಫಾರ್ಮ್‌ನಿಂದಾಗಿ ಅವರನ್ನು ಟೆಸ್ಟ್‌ ತಂಡದಿಂದ ಹೊರಗಿಡಲಾಗಿದೆ. ಹೀಗಾಗಿ ಸುದೀರ್ಘ ಸ್ವರೂಪದ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಅವರ ಜೊತೆಗಾರ ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿತ್ತು. ಸದ್ಯಕ್ಕೆ ಯುವ ಕ್ರಿಕೆಟಿಗ ಶುಬ್ಮನ್ ಗಿಲ್, ಎಲ್ಲಾ ಅನುಮಾನ ಹಾಗೂ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೂರನೇ ಟೆಸ್ಟ್‌ನಲ್ಲಿ ಕೆ ಎಲ್‌ ರಾಹುಲ್‌ ಬದಲಿಗೆ ಬಂದ ಗಿಲ್‌, ಯಶಸ್ವಿಯಾಗಿ ಬ್ಯಾಟ್‌ ಬೀಸಲು ವಿಫಲರಾದರು. ಅವರು ಸ್ಪಿನ್ನರ್ ಸ್ನೇಹಿ ಇಂದೋರ್ ಪಿಚ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆದರೆ ಅವರ ಆಟದ ಶೈಲಿ ಉತ್ತಮವಾಗಿಯೇ ಇತ್ತು. ಅಂತಿಮವಾಗಿ ಅಹಮದಾಬಾದ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್‌ನಲ್ಲಿ ಗಿಲ್ ಅಮೋಘ ಶತಕ ಸಿಡಿಸಿದ್ದರು.

ಗಿಲ್ ಈಗಾಗಲೇ ಏಕದಿನ ಹಾಗೂ ಟಿ20 ತಂಡದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಅದಾಗಲೇ ಅವರನ್ನು ಭವಿಷ್ಯದ ಆಟಗಾರ ಎಂದು ಬಿಂಬಿಸುತ್ತಾ ಬರಲಾಗುತ್ತಿದೆ. ವಾಸ್ತವವಾಗಿ, ಅವರು ಟೆಸ್ಟ್ ಆರಂಭಿಕರಾಗಿ ರನ್ ಗಳಿಸಿರುವುದು ಇದೇ ಮೊದಲಲ್ಲ. ರಾಹುಲ್ ಫಾರ್ಮ್ ಕಳೆದುಕೊಂಡಾಗ, ಆಸ್ಟ್ರೇಲಿಯಾದಲ್ಲಿ ಗಿಲ್ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದ್ದರು.‌ ಅಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಆಸ್ಟ್ರೇಲಿಯ ಪ್ರವಾಸದ ನಂತರದ‌ ಕೆಲ ಪಂದ್ಯಗಳಲ್ಲಿ ಗಿಲ್ ಆರಂಭಿಕರಾಗಿ ಆಡಿದ್ದರೂ, ದೊಡ್ಡ‌ ಮೊತ್ತ ಗಳಿಸಲು ವಿಫಲರಾದರು.

ಗಿಲ್ ಗಾಯಗೊಂಡಿದ್ದರಿಂದ ರಾಹುಲ್ ಮತ್ತೆ ಇಂಗ್ಲೆಂಡ್‌ನಲ್ಲಿ ನಡೆದ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆದರು. ಆಗ ಅವಕಾಶಕ್ಕಾಗಿ ಕಾಯುತ್ತಿದ್ದ ರಾಹುಲ್‌, ಸಿಕ್ಕ ಅವಕಾಶವನ್ನು ತಮ್ಮ ಎರಡೂ ಕೈಗಳಿಂದ ಬಾಚಿಕೊಂಡರು. ಹೀಗಾಗಿ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಮರಳಿ ಪಡೆಯಲು ಗಿಲ್ ಒಂದು ವರ್ಷಕ್ಕೂ ಹೆಚ್ಚು ಕಾಲ ಕಾಯಬೇಕಾಯಿತು. ಅದರಂತೆಯೇ, ಈಗ ರಾಹುಲ್‌ ವಿಫಲರಾಗಿದ್ದಾರೆ. ಅವರ ಬದಲಿಗೆ ಸಿಕ್ಕ ಅವಕಾಶವನ್ನು ಬಳಸಿ ಅಮೋಘ ಆರಂಭ ಪಡೆದಿದ್ದಾರೆ. ಅವರು ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದರು. ಈಗ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ನಲ್ಲಿ ಮತ್ತೊಂದು ಉತ್ತಮ ಪ್ರದರ್ಶನ ನೀಡಿದ್ದಾರೆ.

ಗಿಲ್ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಏಕದಿನ ಹಾಗೂ ಟಿ20 ಎರಡರಲ್ಲೂ ಶತಕಗಳನ್ನು ಸಿಡಿಸಿದ್ದಾರೆ. ಗಿಲ್ ಅವರ ಕ್ರಿಕೆಟ್‌ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿದ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, 23 ವರ್ಷದ ಯುವ ಆಟಗಾರ ಭಾರತ ತಂಡದಲ್ಲಿ 'ಶಾಶ್ವತ ಆಟಗಾರ' ಎಂದು ಉದ್ಘರಿಸಿದ್ದಾರೆ. ಜೂನ್ 7ರಂದು ಇಂಗ್ಲೆಂಡ್‌ನ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೆ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಭಾರತದ ಆಡುವ ಬಳಗವನ್ನು ಆಯ್ಕೆ ಮಾಡಲು ಕುಳಿತಾಗ ಗಿಲ್‌ ಪ್ರಮುಖ ಆಟಗಾರ ಎಂದು ತಿಳಿಸಿದ್ದಾರೆ.

“ಮೊದಲನೆಯದಾಗಿ, ಆಸ್ಟ್ರೇಲಿಯಾವನ್ನು ಸೋಲಿಸಿದ್ದಕ್ಕಾಗಿ ಭಾರತಕ್ಕೆ ಅಭಿನಂದನೆಗಳು. ಭಾರತವು ಈಗಾಗಲೇ ಆಸ್ಟ್ರೇಲಿಯಾದಲ್ಲಿ ಗೆದ್ದಿದೆ. ಅಲ್ಲದೆ ಇಂಗ್ಲೆಂಡ್‌ನಲ್ಲೂ ಗೆದ್ದಿದ್ದಾರೆ. ಹೀಗಾಗಿ ಇಂಗ್ಲೆಂಡ್‌ನಲ್ಲಿ ಮತ್ತೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಗೆಲ್ಲದಿರಲು ಯಾವುದೇ ಕಾರಣಗಳಿಲ್ಲ. ಚೆನ್ನಾಗಿ ಬ್ಯಾಟ್ ಮಾಡಿ ಕನಿಷ್ಠ 350ರಿಂದ 400 ರನ್‌ ಗಳಿಸಿ. ಅಷ್ಟಾದರೆ ಸಾಕು. ನೀವು ಗೆಲ್ಲುವ ಸ್ಥಿತಿಯಲ್ಲಿರುತ್ತೀರಿ. ಹೌದು, ನಾನು ಶುಬ್ಮನ್ ಗಿಲ್ ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವುದನ್ನು ನೋಡುತ್ತೇನೆ. ಆತ ಕಳೆದ ಆರು-ಏಳು ತಿಂಗಳುಗಳಲ್ಲಿ ಅದ್ಭುತ ಆಟ ಪ್ರದರ್ಶಿಸಿದ್ದಾನೆ. ಆತ ಇದಕ್ಕಿಂತ ಹೆಚ್ಚು ಇನ್ನೇನು ಮಾಡಬೇಕು? ಆತ ಈಗ ಭಾರತ ತಂಡದ ಕಾಯಂ ಆಟಗಾರ," ಎಂದು ಗಂಗೂಲಿ Rev Sportsಗೆ ತಿಳಿಸಿದ್ದಾರೆ.

ಇದೇ ವೇಳೆ ಬಿಸಿಸಿಐ ಮಾಜಿ ಅಧ್ಯಕ್ಷರು ಭಾರತದ ಪ್ರಮುಖ ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾರನ್ನು ಶ್ಲಾಘಿಸಿದ್ದಾರೆ. “ಅಶ್ವಿನ್ ಮತ್ತು ಜಡೇಜಾ ತುಂಬಾ ಚೆನ್ನಾಗಿ ಆಡಿದ್ದಾರೆ. ಇದೇ ವೇಳೆ ನಾವು ಅಕ್ಷರ್ ಪಟೇಲ್ ಬಗ್ಗೆಯೂ ಮಾತನಾಡಬೇಕು. ಆತ ಸದ್ದಿಲ್ಲದಂತೆ ಬ್ಯಾಟ್‌ಗ್‌ನಲ್ಲಿ ಕೊಡುಗೆ ನೀಡಿದ್ದಾನೆ. ಬೌಲಿಂಗ್ ಮಾಡಲು ಬಂದಾಗಲೆಲ್ಲಾ ಚೆನ್ನಾಗಿ ಬೌಲಿಂಗ್ ಮಾಡುತ್ತಾನೆ. ಈ ಮೂವರನ್ನು ತಂಡದಲ್ಲಿ ಹೊಂದಿರುವುದೇ ಭಾರತದ ಶಕ್ತಿ. ಹೀಗಾಗಿ ಈ ಮೂವರನ್ನು ನೀವು ತಂಡದಿಂದ ದೂರವಿಡಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ,” ಎಂದು ಗಂಗೂಲಿ ಹೇಳಿದ್ದಾರೆ.