ಕನ್ನಡ ಸುದ್ದಿ  /  Sports  /  Gautam Gambhir On Virat Kohli Century

Gambhir on Kohli: 'ನಿಮ್ಮ 50, 100 ಚೆನ್ನಾಗಿರುತ್ತವೆ; ಆದರೆ ಬಾಂಗ್ಲಾ ವಿರುದ್ಧ ಸೋತಿದ್ದನ್ನು ಮರೆಯಬೇಡಿ' -ವಿರಾಟ್‌ಗೆ 'ಗಂಭೀರ' ಪಾಠ

ಭಾರತವು ಬಾಂಗ್ಲಾದೇಶದ ವಿರುದ್ಧದ ಸರಣಿಯನ್ನು 2-1 ಅಂತರದಲ್ಲಿ ಕಳೆದುಕೊಂಡಿತ್ತು. ಈ ಬಗ್ಗೆ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮಾತನಾಡಿದ್ದಾರೆ.

ವಿರಾಟ್ ಕೊಹ್ಲಿ; ಗೌತಮ್ ಗಂಭೀರ್
ವಿರಾಟ್ ಕೊಹ್ಲಿ; ಗೌತಮ್ ಗಂಭೀರ್

ಕೋಲ್ಕತ್ತಾದ ಈಡನ್‌ ಗಾರ್ಡನ್ಸ್‌ ಮೈದಾನಲ್ಲಿ ನಡೆದ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ನಾಲ್ಕು ವಿಕೆಟ್‌ಗಳ ಜಯ ದಾಖಲಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಲಂಕಾ ನೀಡಿದ 216 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತ, ಕೇವಲ 43.2 ಓವರ್‌ಗಳಲ್ಲಿ ಗುರಿ ಬೆನ್ನತ್ತಿತು. ಜವಾಬ್ದಾರಿಯುತ ಆಟವಾಡಿದ ಕನ್ನಡಿಗ ಕೆ ಎಲ್ ರಾಹುಲ್, ಅಜೇಯ 64 ರನ್ ಗಳಿಸಿ ಭಾರತದ ಪರ ಮಿಂಚಿದರು. ಆರಂಭಿಕ ಆಘಾತ ಅನುಭವಿಸಿದ ಅತಿಥೇಯರು, 86 ರನ್‌ ಆಗುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಆ ಬಳಿಕ ನಿಧಾನಗತಿಯ ಆಟದೊಂದಿಗೆ ಕಂಬ್ಯಾಕ್ ಮಾಡಿದರು. ಅಂತಿಮವಾಗಿ ಐತಿಹಾಸಿಕ ಈಡನ್ ಗಾರ್ಡನ್ಸ್‌ನಲ್ಲಿ ಸರಣಿ ಗೆದ್ದುಕೊಂಡರು. ಇದಕ್ಕೂ ಮೊದಲು ನಡೆದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ 67 ರನ್‌ಗಳ ಭರ್ಜರಿ ಜಯ ದಾಖಲಿಸಿತ್ತು.

ವಿರಾಟ್ ಕೊಹ್ಲಿ ಆರಂಭಿಕ ಪಂದ್ಯದಲ್ಲಿ 87 ಎಸೆತಗಳಲ್ಲಿ 113 ರನ್ ಗಳಿಸುವ ಮೂಲಕ ತಮ್ಮ 45ನೇ ಏಕದಿನ ಶತಕವನ್ನು ಸಿಡಿಸುವ ಮೂಲಕ ಮಿಂಚಿದ್ದರು. ಇದು ಕೊಹ್ಲಿಯ 74ನೇ ಅಂತಾರಾಷ್ಟ್ರೀಯ ಶತಕ ಮತ್ತು ಏಕದಿನದಲ್ಲಿ ಸತತ ಎರಡನೇ ಶತಕ. ಅವರು ಈ ಹಿಂದೆ ಬಾಂಗ್ಲಾದೇಶದ ವಿರುದ್ಧ ಕಳೆದ ತಿಂಗಳು 113 ರನ್ ಗಳಿಸಿದ್ದರು. ಆದಾಗ್ಯೂ, ಭಾರತವು ಬಾಂಗ್ಲಾದೇಶದ ವಿರುದ್ಧದ ಸರಣಿಯನ್ನು 2-1 ಅಂತರದಲ್ಲಿ ಕಳೆದುಕೊಂಡಿತ್ತು. ಈ ಬಗ್ಗೆ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಮಾತನಾಡಿದ್ದಾರೆ.

ಭಾರತ ತಂಡದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್ ಅವರನ್ನೊಳಗೊಂಡ ಮಾಜಿ ಹಾಗೂ ಅನುಭವಿ ಆಟಗಾರರ ಸಮಿತಿಯು ಗುರುವಾರ ನಡೆದ ಎರಡನೇ ಏಕದಿನ ಪಂದ್ಯದ ಮಧ್ಯಂತರದಲ್ಲಿ ಕೊಹ್ಲಿ ಅವರ ಇತ್ತೀಚಿನ ಪ್ರದರ್ಶನಗಳ ಬಗ್ಗೆ ಮಾತನಾಡಿದರು. ಈ ವೇಳೆ ಮಾತನಾಡಿದ ಗಂಭೀರ್‌, "ವೈಯಕ್ತಿಕ ಪ್ರದರ್ಶನದ" ಬದಲಿಗೆ ತಂಡದ ಸಾಂಘಿಕ ಪ್ರದರ್ಶನದ ಮೇಲೆ ಕೇಂದ್ರೀಕರಿಸಬೇಕೆಂದು ಒತ್ತಾಯಿಸಿದರು.

“ಬಾಂಗ್ಲಾದೇಶದ ವಿರುದ್ಧ ಭಾರತ ತನ್ನ ಕೊನೆಯ ಏಕದಿನ ಸರಣಿಯನ್ನು ಕಳೆದುಕೊಂಡಿದ್ದನ್ನು ನಾವು ಮರೆಯಬಾರದು. ನಾವು ಅದನ್ನು ಮರೆತುಬಿಟ್ಟಿದ್ದೇವೆ. ಹೌದು, ವೈಯಕ್ತಿಕ ಪ್ರದರ್ಶನ ಮುಖ್ಯ. ವೈಯಕ್ತಿಕ ಶತಕಗಳು ಕೂಡಾ ಮುಖ್ಯ. ನೀವು 50 ಶತಕಗಳು ಅಥವಾ 100 ಶತಕಗಳನ್ನು ಸಿಡಿಸಿ ದಾಖಲೆ ಬರೆದಾಗ ಅದು ತುಂಬಾ ಚೆನ್ನಾಗಿ ಕಾಣುತ್ತದೆ. ಆದರೆ ಬಾಂಗ್ಲಾದೇಶದಲ್ಲಿ ಏನಾಯಿತು ಎಂಬುದನ್ನು ನೀವು ಎಂದಿಗೂ ಮರೆಯಬಾರದು. ಏಕೆಂದರೆ ಅದು ದೊಡ್ಡ ಕಲಿಕೆಯಾಗಬೇಕು” ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.

“ಬಾಂಗ್ಲಾದೇಶದ ವಿರುದ್ಧ ಬಾಂಗ್ಲಾದೇಶದಲ್ಲಿ ಸೋತಿರುವ ಭಾರತವು, ಈ ಸರಣಿಯ ಮೇಲೆ ಮಾತ್ರ ಗಮನಹರಿಸುವುದಕ್ಕಿಂತ ನಾವು ಅಲ್ಲಿಂದ ಕಲಿಯಬೇಕು ಎಂದು ನಾನು ಭಾವಿಸುತ್ತೇನೆ. ಹಿಂದೆ ಏನಾಯಿತು ಎಂಬುದನ್ನು ಮರೆಯಬಾರದು,” ಎಂದು ಮಾಜಿ ಆರಂಭಿಕ ಆಟಗಾರ ಹೇಳಿದ್ದಾರೆ.

ಗುರುವಾರದ ಪಂದ್ಯದಲ್ಲಿ ಕೊಹ್ಲಿ ಕೇವಲ 4 ರನ್‌ ಗಳಿಸಿ ಔಟಾದರು. ಭಾರತವು ಮುಂದೆ ಭಾನುವಾರದಂದು ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಕೊನೆಯ ಪಂದ್ಯವು ಜನವರಿ 15 ರಂದು ತಿರುವನಂತಪುರಂನಲ್ಲಿ ನಡೆಯಲಿದೆ.

ಗಮನಿಸಬಹುದಾದ ಇತರೆ ಸುದ್ದಿಗಳು

ಕನ್ನಡಿಗ ಕೆಎಲ್ ರಾಹುಲ್ ತಾಳ್ಮೆಯ ಆಟಕ್ಕೆ ಸಿಕ್ಕ ಜಯ; ಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಟೀಂ ಇಂಡಿಯಾ

ಕನ್ನಡಿಗ ಕೆ.ಎಲ್. ರಾಹುಲ್ ಸಿಡಿಸಿದ ತಾಳ್ಮೆಯ ಅರ್ಧ ಶತಕದ ನೆರವಿನಿಂದ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 4 ವಿಕೆಟ್ ಗಳ ಗೆಲುವು ಸಾಧಿಸಿದೆ. ಜೊತೆಗೆ ರೋಹಿತ್ ಪಡೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ತಮ್ಮದಾಗಿಸಿಕೊಂಡಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.