Kannada News  /  Sports  /  Gavaskar Suggests Better To Have Medical Experts In Selection Panel
ಸುನಿಲ್ ಗವಾಸ್ಕರ್
ಸುನಿಲ್ ಗವಾಸ್ಕರ್

Gavaskar on BCCI: 'ಆಯ್ಕೆ ಸಮಿತಿಯಲ್ಲಿ ವೈದ್ಯಕೀಯ ತಜ್ಞರು ಇರಬೇಕು': ಬಿಸಿಸಿಐಗೆ ಗವಾಸ್ಕರ್ ಸಲಹೆ

09 January 2023, 18:36 ISTHT Kannada Desk
09 January 2023, 18:36 IST

"ಕ್ರಿಕೆಟ್‌ನಲ್ಲಿ ಫಿಟ್ನೆಸ್ ಅನ್ನು ಪ್ರಧಾನ ಅಂಶವಾಗಿ ಪರಿಗಣಿಸಬೇಕು. ಅಲ್ಲದೆ ಖಂಡಿತವಾಗಿಯೂ ಈ ಫಿಟ್ನೆಸ್ ಪರೀಕ್ಷೆಗಳನ್ನು ಸಾರ್ವಜನಿಕರ ಗಮನಕ್ಕೆ ಬರುವಂತೆ ಮತ್ತು ಮಾಧ್ಯಮಗಳ ಮುಂದೆ ಅದು ಬಹಿರಂಗಗೊಳ್ಳುವಂತೆ ಮಾಡಬೇಕು. ಆಗ ಮಾತ್ರ ಆಟಗಾರನು 'ಯೋ ಯೋ' ಅಥವಾ ‘ನೋ ನೋ’ ಎಂಬುದು ನಮಗೆ ತಿಳಿಯುತ್ತದೆ" ಎಂದು ಗವಾಸ್ಕರ್‌ ಹೇಳಿದ್ದಾರೆ.

ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಭಾರತವು ಸೋತು ನಿರ್ಗಮಿಸಿದ ನಂತರ ಬಿಸಿಸಿಐ ಎಚ್ಚೆತ್ತುಕೊಂಡಿದೆ. ಆ ಬಳಿಕ ನಡೆದ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಸಭೆಯಲ್ಲಿ, ಭಾರತೀಯ ಆಟಗಾರನನ್ನು ಆಯ್ಕೆ ಮಾಡಲು ಅರ್ಹತಾ ಮಾನದಂಡವಾಗಿ ಯೋ-ಯೋ ಫಿಟ್‌ನೆಸ್ ಪರೀಕ್ಷೆಯನ್ನು ಮರುಪರಿಚಯಿಸಲು ಮಂಡಳಿ ನಿರ್ಧರಿಸಿತು.

ಟ್ರೆಂಡಿಂಗ್​ ಸುದ್ದಿ

ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿದ್ದಾಗ, ಈ ಪರೀಕ್ಷೆಯು ಪ್ರಚಲಿತದಲ್ಲಿತ್ತು. ಸದ್ಯ ಯೋ ಯೋ ಟೆಸ್ಟ್‌ ಮರುಜಾರಿಗೆ ಚಿಂತನೆ ನಡೆಸಿರುವುದಕ್ಕೆ ಪರ ವಿರೋಧಗಳ ಚರ್ಚೆ ನಡೆದಿದೆ. ಈ ನಡುವೆ, ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಕೂಡಾ ಬಿಸಿಸಿಐನ ಯೋ-ಯೋ ಪರೀಕ್ಷೆಯ ಬಗ್ಗೆ ಲೇವಡಿ ಮಾಡಿದ್ದಾರೆ. ಆಯ್ಕೆ ಸಮಿತಿಯಲ್ಲಿ ಭಾರತದ ಮಾಜಿ ಕ್ರಿಕೆಟಿಗರು ಇರುವುದಕ್ಕಿಂತ, ವೈದ್ಯಕೀಯ ತಜ್ಞರನ್ನು ಇರಬೇಕು ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ 'ಮಿಡ್ ಡೇ'ಯಲ್ಲಿ ತಮ್ಮ ಅಂಕಣದಲ್ಲಿ ಬರೆದಿರುವ ಗವಾಸ್ಕರ್, ಸ್ಪಿನ್ನರ್‌ಗಳು ಮತ್ತು ವೇಗಿಗಳು ಮತ್ತು ವಿಕೆಟ್‌ ಕೀಪರ್‌ಗಳ ಫಿಟ್‌ನೆಸ್ ಮಟ್ಟದಲ್ಲಿ ವ್ಯತ್ಯಾಸ ಇರುವುದರಿಂದ, ಯೋ-ಯೋ ಪರೀಕ್ಷೆಯು ವಿಫಲಗೊಳ್ಳುತ್ತದೆ ಎಂದು ವಿವರಿಸಿದರು.

“ನಾನು ಹೇಳಲು ಪ್ರಯತ್ನಿಸುತ್ತಿರುವ ಅಂಶವೆಂದರೆ, ಫಿಟ್‌ನೆಸ್ ಎಂಬುದು ವೈಯಕ್ತಿಕ ವಿಷಯ. ಅಲ್ಲದೆ ಒಂದೇ ಮಾನದಂಡವು ಎಲ್ಲರಿಗೂ ಸರಿಹೊಂದುವಂತಹ ಯಾವುದೇ ವಿಷಯ ಇದರಲ್ಲಿಲ್ಲ. ಸ್ಪಿನ್ನರ್‌ಗಳಿಗಿಂತ ವೇಗದ ಬೌಲರ್‌ಗಳಿಗೆ ವಿಭಿನ್ನ ಮಟ್ಟದ ಫಿಟ್‌ನೆಸ್‌ ಮಾನದಂಡದ ಅಗತ್ಯವಿದೆ. ವಿಕೆಟ್ ಕೀಪರ್‌ಗಳಿಗೆ ಇನ್ನೂ ಹೆಚ್ಚಿನ ಮಟ್ಟದ ತಪಾಸಣೆಯ ಅಗತ್ಯವಿದೆ. ಇದೇ ವೇಳೆ ಬ್ಯಾಟರ್‌ಗಳಿಗೆ ಬಹುಶಃ ಕನಿಷ್ಠ ಮಟ್ಟದ ಮಾನದಂಡ ಅಗತ್ಯವಿದೆ. ಆದ್ದರಿಂದ ಪ್ರತಿಯೊಬ್ಬರಿಗೂ ಒಂದೇ ಮಾನದಂಡಗಳನ್ನು ಹೊಂದಿಸಿದಾಗ ಅದು ಸರಹೋಗುವುದಿಲ್ಲ,” ಎಂದು ಅವರು ಹೇಳಿದ್ದಾರೆ.

"ಕ್ರಿಕೆಟ್‌ನಲ್ಲಿ ಫಿಟ್ನೆಸ್ ಅನ್ನು ಪ್ರಧಾನ ಅಂಶವಾಗಿ ಪರಿಗಣಿಸಬೇಕು. ಅಲ್ಲದೆ ಖಂಡಿತವಾಗಿಯೂ ಈ ಫಿಟ್ನೆಸ್ ಪರೀಕ್ಷೆಗಳನ್ನು ಸಾರ್ವಜನಿಕರ ಗಮನಕ್ಕೆ ಬರುವಂತೆ ಮತ್ತು ಮಾಧ್ಯಮಗಳ ಮುಂದೆ ಅದು ಬಹಿರಂಗಗೊಳ್ಳುವಂತೆ ಮಾಡಬೇಕು. ಆಗ ಮಾತ್ರ ಆಟಗಾರನು 'ಯೋ ಯೋ' ಅಥವಾ ‘ನೋ ನೋ’ ಎಂಬುದು ನಮಗೆ ತಿಳಿಯುತ್ತದೆ" ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ ಬಿಸಿಸಿಐಯು ಆಯ್ಕೆಯ ಮಾನದಂಡವಾಗಿ DEXA (ಡ್ಯುಯಲ್ ಎನರ್ಜಿ ಎಕ್ಸ್-ರೇ ಅಬ್ಸಾರ್ಪ್ಟಿಯೋಮೆಟ್ರಿ) ಅನ್ನು ಬಳಸುತ್ತಿದೆ. ಇದು ಮೂಳೆ ಸಾಂದ್ರತೆ ಮತ್ತು ದೇಹದ ಕೊಬ್ಬಿನ ಪ್ರಮಾಣ ಸೇರಿದಂತೆ ವಿವಿಧ ಅಂಶಗಳನ್ನು ಪರಿಶೀಲಿಸುತ್ತದೆ.

ಇದು ಮೂಳೆ ಸಾಂದ್ರತೆಯನ್ನು ಅಳೆಯುವ ಪರೀಕ್ಷೆಯಾಗಿದೆ. ಆಟಗಾರರ ಮೂಳೆಯ ಬಲ ಅಥವಾ ಸಾಮರ್ಥ್ಯವನ್ನು ಅಳೆಯಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಲ್ಲದೆ ಈ ತಪಾಸಣೆಯ ಮೂಲಕ ಮೂಳೆಯಲ್ಲಿ ಸಂಭವನೀಯ ಮುರಿತದ ಮಾಹಿತಿಯನ್ನು ಸಹ ನಿಖರವಾಗಿ ಪಡೆಯಬಹುದು. ಅಂದರೆ, ತಪಾಸಣೆ ನಡೆದ ನಂತರದ ದಿನಗಳಲ್ಲಿ ಆಟಗಾರನ ಮೂಳೆ ಮುರಿತಕ್ಕೊಳಗಾಗುವ ಸಾಧ್ಯತೆ ಇದೆಯೋ ಇಲ್ಲವೋ ಎಂಬುದು ಕೂಡಾ ಈ ಡೆಕ್ಸಾ ಪರೀಕ್ಷೆಯ ಮೂಲಕ ಮುಂಚಿತವಾಗಿ ತಿಳಿದುಬರುತ್ತದೆ.

“ಸಿಎಸಿಯು ಆಯ್ಕೆ ಸಮಿತಿಯ ತಂಡದಲ್ಲಿ ಒಬ್ಬರು ಕೂಡಾ ಬಯೋ-ಮೆಕಾನಿಕ್ಸ್ ತಜ್ಞ ಅಥವಾ ವೈದ್ಯಕೀಯ ತಜ್ಞರಿಲ್ಲ. ಅರ್ಹತೆಯು ಆಟಗಾರನ ದೈಹಿಕ ಕ್ಷಮತೆಯನ್ನು ಆಧರಿಸಿರುವುದರಿಂದ, ಆಯ್ಕೆ ಸಮಿತಿಯಲ್ಲಿ ಮಾಜಿ ಕ್ರಿಕೆಟಿಗರಿಗಿಂತ ಇಂತಹ ತಜ್ಞರು ಇರುವುದು ಉತ್ತಮ,” ಎಂದು ಗವಾಸ್ಕರ್ ಬರೆದಿದ್ದಾರೆ.

“ಒಂದು ವೇಳೆ ತಂಡದಲ್ಲಿ ಒಂದು ಸ್ಥಾನಕ್ಕಾಗಿ ಇಬ್ಬರು ಆಟಗಾರರ ನಡುವೆ ಪೈಪೋಟಿ ಏರ್ಪಟ್ಟರೆ, ಈ ತಜ್ಞರು ಇಬ್ಬರಲ್ಲಿ ಹೆಚ್ಚು ಫಿಟ್ ಇರುವ ಒಬ್ಬರನ್ನು ಆಯ್ಕೆ ಮಾಡಲು ಸುಲಭವಾಗುತ್ತದೆ. ಇಂತಹ ಸಮಯದಲ್ಲಿ ಇಬ್ಬರು ಆಟಗಾರರು ಗಳಿಸಿದ ರನ್ ಅಥವಾ ವಿಕೆಟ್‌ಗಳನ್ನು ಲೆಕ್ಕಿಸಬಾರದು,” ಎಂದು ಸಲಹೆ ನೀಡಿದ್ದಾರೆ.