Maxwell on IPL 2023: ಕಾಲಿನ ಗಾಯದ ಬಗ್ಗೆ ಮ್ಯಾಕ್ಸಿ ಮಾತು; ಇನ್ನೂ ಫಿಟ್ ಆಗಿಲ್ವಂತೆ ಆರ್‌ಸಿಬಿ ಆಲ್‌ರೌಂಡರ್!
ಐಪಿಎಲ್‌ನ 16ನೇ ಸೀಸನ್‌ನ ಆರಂಭಕ್ಕೂ ಮುನ್ನ ಮಾತನಾಡಿದ ಮ್ಯಾಕ್ಸ್‌ವೆಲ್, ತಮ್ಮ ಗಾಯದ ಬಗ್ಗೆ ವಿವರಿಸಿದ್ದಾರೆ. ತಾನು 100 ಪ್ರತಿಶತದಷ್ಟು ಫಿಟ್ ಆಗಲು ಇನ್ನೂ ತಿಂಗಳುಗಳು ಬೇಕಾಗುತ್ತವೆ. ಆದರೆ ಈ ಬಾರಿಯ ಪಂದ್ಯಾವಳಿಯಲ್ಲಿ ಆಡುವಷ್ಟು ಕಾಲು ಫಿಟ್ ಆಗಿದೆ ಎಂದು ಹೇಳಿದರು.
ಕಳೆದ ವರ್ಷ (2022)ದ ನವೆಂಬರ್ ತಿಂಗಳಲ್ಲಿ, ಆಸ್ಟ್ರೇಲಿಯಾದ ಪ್ರಮುಖ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ (Glenn Maxwell) ಗಾಯಾಳುವಾದರು. ಮೆಲ್ಬೋರ್ನ್‌ನಲ್ಲಿ ನಡೆದ ಹುಟ್ಟುಹಬ್ಬದ ಪಾರ್ಟಿ ಸಮಯದಲ್ಲಿ ಕಾಲು ಮುರಿದುಕೊಂಡ ಮ್ಯಾಕ್ಸಿ, ಅಂತಾರಾಷ್ಟ್ರೀಯ ಪಂದ್ಯಗಳನ್ನು ಕಳೆದುಕೊಳ್ಳಬೇಕಾಯ್ತು. ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಕೂಡಾ ಕೆಲ ತಿಂಗಳುಗಳ ಕಾಲ ಮೈದಾನದಿಂದ ಹೊರಗುಳಿದರು. ಸುದೀರ್ಘ ವಿಶ್ರಾಂತಿಯ ಬಳಿಕ ಈಗ ಮ್ಯಾಕ್ಸಿ ಬ್ಯಾಟ್ ಹಾಗೂ ಬಾಲ್ ಹಿಡಿಯುವ ಹಂತಕ್ಕೆ ಚೇತರಿಸಿಕೊಂಡಿದ್ದಾರೆ. ಈಗಾಗಲೇ ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಂಡಿದ್ದ ಅವರು, ಸದ್ಯ ಭಾರತದ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2023ರ ಆವೃತ್ತಿಗೆ ಸಜ್ಜಾಗಿದ್ದಾರೆ.
ಈಗಾಗಲೇ ಬೆಂಗಳೂರಿಗೆ ಆಗಮಿಸಿರುವ ಮ್ಯಾಕ್ಸಿ, ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ. ಆದರೆ ಈ ಋತುವಿನ ಆರಂಭಕ್ಕೂ ಮುನ್ನ, ಅವರು ತಮ್ಮ ಗಾಯದ ಬಗ್ಗೆ ಪ್ರಮುಖ ಮಾಹಿತಿಯೊಂದನ್ನು ಬಹಿರಂಗ ಪಡಿಸಿದ್ದಾರೆ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡ ಹಾಗೂ ಅಭಿಮಾನಿಗಳ ಆತಂಕ ಹೆಚ್ಚಿಸಿದೆ.
ಮೆಲ್ಬೋರ್ನ್ ನಗರದಲ್ಲಿ ತಮ್ಮ ಸ್ನೇಹಿತನ 50ನೇ ಹುಟ್ಟುಹಬ್ಬದ ಪಾರ್ಟಿಯಲ್ಲಿ ಮ್ಯಾಕ್ಸ್‌ವೆಲ್ ಭಾಗವಹಿಸಿದ್ದರು. ಸ್ನೇಹಿತನ ನಿವಾಸದಲ್ಲಿ ಟೆನಿಸ್ ಕೋರ್ಟ್‌ನಲ್ಲಿ ಓಡುತ್ತಿದ್ದಾಗ ಇಬ್ಬರೂ ಎಡವಿ ಬಿದ್ದಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳು ವರದಿ ಮಾಡಿತ್ತು. ಅದಾದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನ ದೀರ್ಘಾವಧಿಯ ಪುನರ್ವಸತಿಗೆ ಒಳಗಾಗಿದ್ದರು. ಇತ್ತೀಚೆಗೆ ಮುಕ್ತಾಯಗೊಂಡ ಭಾರತದ ವಿರುದ್ಧದ ಏಕದಿನ ಸರಣಿಯ ಮೂಲಕ ಆಸೀಸ್ ತಂಡಕ್ಕೆ ಮರಳಿದ್ದರು.
ಐಪಿಎಲ್‌ನ 16ನೇ ಸೀಸನ್‌ನ ಆರಂಭಕ್ಕೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಆರ್‌ಸಿಬಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಮಾತನಾಡಿದ ಮ್ಯಾಕ್ಸ್‌ವೆಲ್, ತಮ್ಮ ಗಾಯದ ಬಗ್ಗೆ ವಿವರಿಸಿದ್ದಾರೆ. ತಾನು 100 ಪ್ರತಿಶತದಷ್ಟು ಫಿಟ್ ಆಗಲು ಇನ್ನೂ ತಿಂಗಳುಗಳು ಬೇಕಾಗುತ್ತವೆ. ಆದರೆ ಈ ಬಾರಿಯ ಪಂದ್ಯಾವಳಿಯಲ್ಲಿ ಆಡುವಷ್ಟು ಕಾಲು ಫಿಟ್ ಆಗಿದೆ ಎಂದು ಹೇಳಿದರು.
"ಕಾಲು ಸರಿಯಾಗಿದೆ. ನಾನು ಶೇಕಡಾ 100ರಷ್ಟು ಗುಣಮುಖನಾಗಲು ಇನ್ನೂ ಕೆಲ ತಿಂಗಳುಗಳು ಬೇಕಾಗಲಿದೆ. ಆಶಾದಾಯಕವಾಗಿ ಈ ಪಂದ್ಯಾವಳಿಯಲ್ಲಿ ಆಡಲು, ಮತ್ತು ನನ್ನ ಜವಾಬ್ದಾರಿ ನಿರ್ವಹಿಸಲು ಇಷ್ಟು ಸಾಕು" ಎಂದು ಅವರು ಹೇಳಿದ್ದಾರೆ.
ಕೋವಿಡ್ ನಿರ್ಬಂಧಗಳಿಂದಾಗಿ ಎರಡು ವರ್ಷಗಳ ಅಂತರದ ಬಳಿಕ ಐಪಿಎಲ್ ತನ್ನ ಮೂಲ ಸ್ವರೂಪಕ್ಕೆ ಮರಳುತ್ತಿದೆ. ಭಾರತದಲ್ಲೇ ಆಯಾ ತಂಡಗಳ ತವರಿನಲ್ಲಿ ಪಂದ್ಯಗಳು ನಡೆಯುತ್ತಿದ್ದು, ಮ್ಯಾಕ್ಸ್‌ವೆಲ್ ಆರ್‌ಸಿಬಿಯ ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ.
“ಅಂತಿಮವಾಗಿ ಒಂದೆರಡು ವರ್ಷಗಳ ನಂತರ ಬಯೋ ಬಬಲ್ಸ್ ನಿರ್ಬಂಧದಿಂದ ಮುಕ್ತರಾಗುತ್ತಿದ್ದೇವೆ. ಇದು ಬಹಳ ರೋಮಾಂಚನಕಾರಿಯಾಗಿದೆ. ನಮ್ಮ ತವರಿನ ಅಭಿಮಾನಿಗಳ ಮುಂದೆ ಆಡಲು ನಾನು ಸಾಕಷ್ಟು ಉತ್ಸುಕನಾಗಿದ್ದೇನೆ” ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಆಸೀಸ್ ಆಲ್‌ರೌಂಡರ್ ಕಳೆದ ಸೀಸನ್‌ನಲ್ಲಿ ಆರ್‌ಸಿಬಿಗೆ ಉತ್ತಮ ಕೊಡುಗೆ ನೀಡಿದ್ದರು. 13 ಪಂದ್ಯಗಳಲ್ಲಿ 301 ರನ್ ಗಳಿಸುವುದರೊಂದಿಗೆ ಆರು ವಿಕೆಟ್‌ಗಳನ್ನು ಕೂಡಾ ಪಡೆದಿದ್ದರು. ಪ್ಲೇಆಫ್ ಹಂತಕ್ಕೆ ಅರ್ಹತೆ ಪಡೆಯಲು ತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿತ್ತು.
ವಿಭಾಗ