ಕನ್ನಡ ಸುದ್ದಿ  /  Sports  /  Greg Chappell Said I Will Be The Next Captain 2 Months Later I Was Dropped Virender Sehwag Drops Bombshell

ಕ್ಯಾಪ್ಟನ್ಸಿ ನೀಡುವುದಾಗಿ ನಂಬಿಸಿ ದ್ರೋಹ ಬಗೆದರು: ಅಚ್ಚರಿ ಹೇಳಿಕೆ ನೀಡಿದ ಸೆಹ್ವಾಗ್​

Virender Sehwag: ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಸುಮಾರು ವರ್ಷಗಳೇ ಕಳೆದ ಬಳಿಕ ತಮಗೆ ನಾಯಕತ್ವ ಸಿಗದಿರುವ ಬಗ್ಗೆ ಸೆಹ್ವಾಗ್​ ಮೌನ ಮುರಿದಿದ್ದಾರೆ. ನಾಯಕತ್ವ ನೀಡುವುದಾಗಿ ಹೇಳಿ ಮೋಸ ಮಾಡಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.

ವಿರೇಂದ್ರ ಸೆಹ್ವಾಗ್​​
ವಿರೇಂದ್ರ ಸೆಹ್ವಾಗ್​​

ವೀರೇಂದ್ರ ಸೆಹ್ವಾಗ್.. (Virender Sehwag) ಡೇರಿಂಗ್​ ಆ್ಯಂಡ್ ಡ್ಯಾಶಿಂಗ್​ ಓಪನರ್​.! ತನಗೆ ತಿಳಿದಿದ್ದು ಒಂದೇ ದಂಡಂ ದಶಗುಣಂ ಆಟ.! ಹೊಡಿ, ಇಲ್ಲ ಔಟಾಗು ಎಂಬ ಮಂತ್ರವನ್ನು ಪಟಿಸುತ್ತಿದ್ದ ಸೆಹ್ವಾಗ್​, ಬೌಲರ್​​ಗಳ ಮೇಲೆ ದಂಡ ಯಾತ್ರೆ ನಡೆಸುತ್ತಿದ್ದರು. ಎಲ್ಲರೂ ಸಿಂಗಲ್​ ಮೂಲಕ ಖಾತೆ ತೆರೆಯುತ್ತಿದ್ದರೆ, ಸೆಹ್ವಾಗ್​ ಮಾತ್ರ ಬೌಂಡರಿ ಸಿಡಿಸಿಯೇ ಖಾತೆ ತರೆಯುತ್ತಿದ್ದರು. ಇದು ಸೆಹ್ವಾಗ್​ ಸ್ಟೈಲ್​.!

ಬೌಲರ್​ಗಳು ಸಹ ಸೆಹ್ವಾಗ್​​ ಎದುರು ಬೌಲಿಂಗ್​ ಮಾಡೋದಕ್ಕೆ ಹೆದರುತ್ತಿದ್ದರು. ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡುತ್ತಿದ್ದ ಸೆಹ್ವಾಗ್​, ಸಿಡಿಲಬ್ಬರದ ಬ್ಯಾಟಿಂಗ್​​ ಮೂಲಕವೇ ಪಂದ್ಯದ ಚಿತ್ರಣವನ್ನು ಬದಲಿಸುತ್ತಿದ್ದರು. ಘರ್ಜನೆ, ಆರ್ಭಟ, ಅಬ್ಬರ, ಗುಡುಗು - ಸಿಡಿಲು.. ಹೀಗೆ ಅದೆಷ್ಟೋ ಪದಗಳಿಗೆ ಸೆಹ್ವಾಗ್ ಸಮನಾರ್ಥಕ ಪದ.

ಆರಂಭಿಕನಾಗಿ ತಂಡವನ್ನು ಧೈರ್ಯಕ್ಕೆ ತುಂಬುತ್ತಿದ್ದ ವೀರೂ, 2007 ರಲ್ಲಿ ಟಿ20 ವಿಶ್ವಕಪ್​ ಮತ್ತು 2011ರಲ್ಲಿ ಏಕದಿನ ವಿಶ್ವಕಪ್​​ ಗೆದ್ದ ಭಾರತ ತಂಡದ ಸದಸ್ಯರೂ ಆಗಿದ್ದರು. ಓಪನರ್​​​ ಆಗಿ ರನ್​ ಶಿಖರ ನಿರ್ಮಿಸುತ್ತಿದ್ದ ಡೆಲ್ಲಿ ಆಟಗಾರ, ಪಾರ್ಟ್​​ ಟೈಮ್​ ನಾಯಕನಾಗಿಯೂ ತಂಡವನ್ನು ಮುನ್ನಡೆಸಿದ್ದಾರೆ. 12 ಏಕದಿನ, 4 ಟೆಸ್ಟ್​​, 1 ಟಿ20 ಪಂದ್ಯವನ್ನೂ ಮುನ್ನಡೆಸಿದ್ದಾರೆ.

T20 ಕ್ರಿಕೆಟ್​​ನಲ್ಲಿ ಭಾರತ ತಂಡದ ಮೊದಲ ಕ್ಯಾಪ್ಟನ್​​​​​​​ ಎನಿಸಿದ್ದ ಸೆಹ್ವಾಗ್​​ ಅವರಿಗೆ ಪೂರ್ಣಾವಧಿ ನಾಯಕನಾಗುವ ಅವಕಾಶ ಸಿಗಲೇ ಇಲ್ಲ. ಈ ಬಗ್ಗೆ ಹಲವು ಬಾರಿ ಚರ್ಚೆಗಳು ನಡೆದಿವೆ. ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಸುಮಾರು ವರ್ಷಗಳೇ ಕಳೆದ ಬಳಿಕ ತಮಗೆ ನಾಯಕತ್ವ ಸಿಗದಿರುವ ಬಗ್ಗೆ ಸೆಹ್ವಾಗ್​ ಮೌನ ಮುರಿದಿದ್ದಾರೆ. ನಾಯಕತ್ವ ನೀಡುವುದಾಗಿ ಹೇಳಿ ಮೋಸ ಮಾಡಿದ್ದರು ಎಂಬ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಇತ್ತೀಚೆಗೆ ಖಾಸಗಿ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಾಯಕತ್ವ ನೀಡದಿರುವ ಕುರಿತು ಮಾತನಾಡಿರುವ ಸೆಹ್ವಾಗ್​, ಅಂದು ಟೀಮ್​ ಇಂಡಿಯಾದ ಕೋಚ್​ ಆಗಿದ್ದ ಗ್ರೆಗ್​ ಚಾಪೆಲ್ (Greg Chappell)​​​​ ನನಗೆ ಮೋಸ ಮಾಡಿದ್ದರು. ಸೌರವ್​ ಗಂಗೂಲಿ (Sourav Ganguly) ನಾಯಕನ ತ್ಯಜಿಸಿದ ನಂತರ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ನಿಮಗೆ ಸಿಗಲಿದೆ ಎಂದು ಹೇಳಿದ್ದರು. ಆದರೆ ಅದಾಗಿ ಎರಡು 2 ತಿಂಗಳಲ್ಲಿ ನನ್ನನ್ನೇ ತಂಡದಿಂದ ಹೊರ ಗಿಟ್ಟಿದ್ದರು ಎಂದು ಅಚ್ಚರಿ ಅಂಶವನ್ನು ಬಹಿರಂಗಪಡಿಸಿದ್ದಾರೆ.

ಮೊದಲಿಗೆ ಸೌರವ್ ಗಂಗೂಲಿ ಬಳಿಕ ಸೆಹ್ವಾಗ್​ಗೆ ನಾಯಕತ್ವ ನೀಡಬೇಕೆಂಬ ಕೂಗು ಜೋರಾಗಿತ್ತು. ಈ ಕೂಗಿನ ನಡುವೆಯೂ ರಾಹುಲ್ ದ್ರಾವಿಡ್​ಗೆ (Rahul Dravid) ಪಟ್ಟ ಕಟ್ಟಲಾಗಿತ್ತು. ದ್ರಾವಿಡ್​​ರಿಂದ ಧೋನಿಗೆ ನಾಯಕತ್ವ ಹಸ್ತಾಂತರ ಮಾಡಲಾಯಿತು. ಸೆಹ್ವಾಗ್​ರ ಕೋಪ ತಣ್ಣಗಾಗಿಸುವ ಲೆಕ್ಕಾಚಾರದಲ್ಲಿ ಉಪನಾಯಕತ್ವ ನೀಡಿದರಾದರೂ, ಇಲ್ಲಿಂದ ಸೆಹ್ವಾಗ್​ಗೆ ತಂಡದ ಜವಾಬ್ದಾರಿ ಹೊರುವ ಅವಕಾಶ ಸಿಗಲೇ ಇಲ್ಲ. ಕೇವಲ ಪಾರ್ಟ್​​ ಟೈಮ್​ ನಾಯಕನಾಗಿದ್ದರು.

ಇನ್ನು ಇದೇ ವೇಳೆ ವಿದೇಶಿ ಕೋಚ್​​ಗಳ ನೇಮಕದ ಕುರಿತು ಕೆಂಡ ಕಾರಿದ್ದಾರೆ. ಭಾರತದಲ್ಲೇ ಅನೇಕರು ಕೋಚಿಂಗ್​​ ಸ್ಥಾನಕ್ಕೆ ಅರ್ಹರಿದ್ದಾರೆ. ವಿದೇಶಿ ಕೋಚ್​​ಗಳು ನಮಗೆ ಅಗತ್ಯ ಇಲ್ಲ. ನಾನಿನ್ನೂ ತಂಡದಲ್ಲಿದ್ದಾಗ ಒಬ್ಬರನ್ನು ಕೇಳಿದ್ದೆ. ನಮಗೆ ವಿದೇಶಿ ಅಗತ್ಯ ಇದ್ಯಾ ಎಂದು ಪ್ರಶ್ನಿಸಿದ್ದೆ. ಅದಕ್ಕೆ ಅವರು, ಭಾರತೀಯರೇ ಕೋಚ್​ ಆದರೆ, ಪಕ್ಷಪಾತ ಹೆಚ್ಚಾಗುತ್ತದೆ. ಇಷ್ಟ ಬಂದವರಿಗೆ ಮಣೆ ಹಾಕುತ್ತಾರೆ. ಇಷ್ಟ ಬಂದವರು ಅವಕಾಶ ಪಡೆಯುತ್ತಾರೆ ಎಂದು ಹೇಳಿದ್ದರು. ನಿಜ ಹೇಳಬೇಕಂದರೆ ವಿದೇಶಿ ಕೋಚ್​ಗಳೂ ಇದಕ್ಕೆ ಹೊರತಾಗಿಲ್ಲ ಎಂದು ಹೇಳಿದ್ದಾರೆ.