ಕನ್ನಡ ಸುದ್ದಿ  /  Sports  /  Gujarat Giants Vs Royal Challengers Bangalore Women Match Results

Women's Premier League: ಕೊನೆಯವರೆಗೂ ಹೋರಾಡಿ ಸತತ ಮೂರನೇ ಸೋಲು ಕಂಡ ಆರ್‌ಸಿಬಿ; ರೋಚಕ ಪಂದ್ಯ ಗೆದ್ದ ಗುಜರಾತ್

ಸ್ಮೃತಿ ಮಂಧನ ಪಡೆಯು ಆಡಿದ ಎಲ್ಲಾ ಮೂರೂ ಪಂದ್ಯಗಳಲ್ಲೂ ಸೋತರೆ, ಗುಜರಾತ್‌ ಟೂರ್ನಿಯ ಮೊದಲ ಜಯ ಗಳಿಸಿತು.

ರೋಚಕ ಪಂದ್ಯ ಗೆದ್ದ ಗುಜರಾತ್
ರೋಚಕ ಪಂದ್ಯ ಗೆದ್ದ ಗುಜರಾತ್ (WPL twitter)

ಮುಂಬೈ: ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ ರೋಚಕ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧ ಗುಜರಾತ್‌ ಜೈಂಟ್ಸ್ ರೋಚಕ ಜಯ ಗಳಿಸಿದೆ. ಗೆಲ್ಲಲು ಬೃಹತ್‌ ಟಾರ್ಗೆಟ್‌ ಪಡೆದ ಆರ್‌ಸಿಬಿ, ಅಂತಿಮ ಕ್ಷಣದವರೆಗೂ ಹೋರಾಡಿತು. ಆದರೆ, ಗುರಿಯನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾದ ಗುಜರಾತ್, ಅಂತಿಮವಾಗಿ 11 ರನ್‌ಗಳಿಂದ ಗೆದ್ದು ಬೀಗಿತು.

ಗುಜರಾತ್‌ ನೀಡಿದ 202 ರನ್‌ಗಳ ಗುರಿ ಬೆನ್ನತ್ತಿದ ಬೆಂಗಳೂರು ಅಂತಿಮವಾಗಿ 6 ವಿಕೆಟ್‌ ನಷ್ಟಕ್ಕೆ 190 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಆ ಮೂಲಕ ಕೇವಲ 11 ರನ್‌ ಕೊರತೆಯಿಂದ ಗುಜರಾತ್‌ಗೆ ಶರಣಾಯ್ತು. ಸದ್ಯ ಸ್ಮೃತಿ ಮಂಧನ ಪಡೆಯು ಆಡಿದ ಎಲ್ಲಾ ಮೂರೂ ಪಂದ್ಯಗಳಲ್ಲೂ ಸೋತರೆ, ಗುಜರಾತ್‌ ಟೂರ್ನಿಯ ಮೊದಲ ಜಯ ಗಳಿಸಿತು.

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ತಂಡವು ಆರ್‌ಸಿಬಿಗೆ 202 ರನ್‌ಗಳ ಗುರಿ ನೀಡಿತು. ಈ ನಡುವೆ, ಗುಜರಾತ್‌ ಆಟಗಾರ್ತಿ ಸೋಫಿಯ ಡಂಕ್ಲಿ ಡಬ್ಲ್ಯೂಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ಕೇವಲ 18 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದ ಡಂಕ್ಲಿ ಅಂತಿಮವಾಗಿ 28 ಎಸೆತಗಳಲ್ಲಿ 65 ರನ್‌ ಗಳಿಸಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ 11 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್‌ ಸೇರಿತ್ತು. ಕಡಿಮೆ ಎಸೆತಗಳಲ್ಲಿ ವೇಗವಾಗಿ ಅರ್ಧಶತಕ ಪೂರೈಸುವ ಮೂಲಕ, ಡಬ್ಲ್ಯೂಪಿಎಲ್‌ನಲ್ಲಿ ವೇಗದ ಅರ್ಧಶತಕ ಸಿಡಿಸಿದ ದಾಖಲೆಗೆ ಡಂಕ್ಲಿ ಪಾತ್ರರಾದರು.

ಮತ್ತೊಂದೆಡೆ ಗುಜರಾತ್‌ ತಂಡವು ದೊಡ್ಡ ಮೊತ್ತ ಗಳಿಸುವಲ್ಲಿ ಭಾರತದ ಆಟಗಾರ್ತಿ ಹರ್ಲೀನ್‌ ಡಿಯೋಲ್‌ ಕೂಡಾ ಕಾರಣರಾದರು. 45 ಎಸೆತಗಳನ್ನು ಎದುರಿಸಿದ ಆಟಗಾರ್ತಿ 9 ಬೌಂಡರಿ ಹಾಗೂ 1 ಸಿಕ್ಸರ್‌ ಸಹಿತ 67 ರನ್‌ ಸಿಡಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ಆರಂಭದಿದಂಲೂ ಗುಜರಾತ್‌ ಬ್ಯಾಟರ್‌ಗಳು ಸ್ಫೋಟಕ ಬ್ಯಾಟಿಂಗ್‌ ನಡೆಸಿದರು. ಸಬ್ಬಿನೇನಿ ಮೇಘನ ಕಡಿಮೆ ಮೊತ್ತಕ್ಕೆ ಔಟಾದರೂ, ಹರ್ಲಿನ್‌ ಮತ್ತು ಡಂಕ್ಲಿ ಉತ್ತಮ ಜೊತೆಯಾಟ ಆಡಿದರು. ಗಾರ್ಡ್ನರ್‌, ಹೇಮಲತಾ ಹಾಗೂ ಸದರ್ಲ್ಯಾಂಡ್‌ ಸಾಂದರ್ಭಿಕವಾಗಿ ಮಿಂಚಿದರು. ಡೆತ್‌ ಓವರ್‌ಗಳಲ್ಲಿ ಮೇಲಿಂದ ಮೇಲೆ ವಿಕೆಟ್‌ ಕಳೆದುಕೊಂಡ ಹಿನ್ನೆಲೆಯಲ್ಲಿ ತಂಡದ ಒಟ್ಟು ಮೊತ್ತ ಕೊಂಚ ಕಡಿಮೆಯಾಯ್ತು. ಆದರೂ, ಅಂತಿಮವಾಗಿ ತಡವು 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 201 ರನ್‌ ಗಳಿಸಿತು.