ಕನ್ನಡ ಸುದ್ದಿ  /  Sports  /  Gurcharan Singh Says New Players Could Not Replace India Legends

Gurcharan Singh: 'ಗವಾಸ್ಕರ್, ಸಚಿನ್, ಕೊಹ್ಲಿ ಅವರನ್ನು ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ; ಹೊಸಬರು ಅವರ ನೆರಳಿಗೂ ಸಮನಲ್ಲ'

ಭಾರತೀಯ ಕ್ರಿಕೆಟ್‌ಗೆ ನೀಡಿದ ಅಪಾರ ಕೊಡುಗೆಗಾಗಿ ಈ ವರ್ಷ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಮತ್ತು ದಿಗ್ಗಜ ಕೋಚ್ ಗುರುಚರಣ್ ಸಿಂಗ್ ಅವರು, ಭಾರತ ಕ್ರಿಕೆಟ್‌ ತಂಡದ ಕುರಿತು ಮಾತನಾಡಿದ್ದಾರೆ.

ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ
ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ

ಭಾರತ ಕ್ರಿಕೆಟ್‌ ತಂಡಕ್ಕೆ ಬ್ಯಾಟರ್‌ಗಳ ಬಲವೇ ಹೆಚ್ಚು. ವಿಶ್ವದಲ್ಲೇ ಬಲಿಷ್ಠ ತಂಡವೆನಿಸಿಕೊಂಡಿರುವ ಭಾರತ, ಹಲವಾರು ದಿಗ್ಗಜ ಕ್ರಿಕೆಟಿಗರನ್ನು ಸೃಷ್ಠಿಸಿದೆ. ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ಕಪಿಲ್‌ ದೇವ್‌ ಮೊದಲಾದವರು ಒಂದು ಕಾಲದಲ್ಲಿ ಜಾಗತಿಕ ಕ್ರಿಕೆಟ್‌ನ ತಾರೆಗಳಾಗಿ ಮಿಂಚಿದ್ದಾರೆ. ಈಗಲೂ ಕ್ರಿಕೆಟ್‌ ಎಂದಾಕ್ಷಣ ಇವರು ಸ್ಮೃತಿಪಟಲಗಳಲ್ಲಿ ಇವರು ಹೆಸರು ಮೊದಲು ಬರುತ್ತದೆ. ಸದ್ಯ ವಿರಾಟ್ ಕೊಹ್ಲಿ, ರೋಹಿತ್‌ ಶರ್ಮಾರಂತಹ ಆಟಗಾರರು ಕ್ರಿಕೆಟ್‌ ಲೋಕವನ್ನು ಆಕ್ಷರಶಃ ಆಳುತ್ತಿದ್ದಾರೆ. ಹೀಗೆ ಒಬ್ಬರ ಮೇಲೊಬ್ಬರಂತೆ ಹಲವು ಮಂದಿ ಭಾರತ ಕ್ರಿಕೆಟ್‌ನ ಮೇರು ತಾರೆಗಳಾಗಿ ಮಿಂಚಿದ್ದಾರೆ.

ಭಾರತೀಯ ಕ್ರಿಕೆಟ್‌ಗೆ ನೀಡಿದ ಅಪಾರ ಕೊಡುಗೆಗಾಗಿ ಈ ವರ್ಷ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಮಾಜಿ ಪ್ರಥಮ ದರ್ಜೆ ಕ್ರಿಕೆಟಿಗ ಮತ್ತು ದಿಗ್ಗಜ ಕೋಚ್ ಗುರುಚರಣ್ ಸಿಂಗ್ ಅವರು, ಭಾರತ ಕ್ರಿಕೆಟ್‌ ತಂಡದ ಕುರಿತು ಮಾತನಾಡಿದ್ದಾರೆ. ಗವಾಸ್ಕರ್, ತೆಂಡೂಲ್ಕರ್ ಮತ್ತು ಕೊಹ್ಲಿಯಂತಹ ಆಟಗಾರರು ಭಾರತ ಕ್ರಿಕೆಟ್‌ ನಿರ್ಮಿಸಿದ ಶ್ರೇಷ್ಠ ಕ್ರಿಕೆಟಿಗರಾಗಿ ಸದಾ ಉಳಿಯುತ್ತಾರೆ. ಮುಂದೆ ಬರುವ ಹೊಸಬರು ಅವರ ನೆರಳಿಗೂ ಸಮನಾಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

“ಭಾರತದಿಂದ ಮತ್ತೊಬ್ಬ ಕೊಹ್ಲಿಯನ್ನು ಉತ್ಪಾದಿಸಲು ಸಾಧ್ಯವಿಲ್ಲ. ಮತ್ತೊಬ್ಬ ಸುನಿಲ್ ಗವಾಸ್ಕರ್ ಅಥವಾ ಸಚಿನ್ ತೆಂಡೂಲ್ಕರ್ ಅವರನ್ನು ಕೂಡಾ ಸೃಷ್ಟಿಸಲು ಸಾಧ್ಯವಿಲ್ಲ. ಮತ್ತೊಬ್ಬ ರೋಹಿತ್ ಅವರನ್ನು ನಿರ್ಮಿಸಲು ಸಾಧ್ಯವಿಲ್ಲ. ಈ ಕ್ರಿಕೆಟಿಗರು ದಂತಕಥೆಗಳು. ಇವರ ಪರಂಪರೆ ಮುಗಿಯುತ್ತಾ ಬಂದಿದೆ. ಕಾಲಾನಂತರದಲ್ಲಿ ಹೊಸ ಹೊಸ ಆಟಗಾರರು ಬರುತ್ತಿದ್ದಾರೆ. ಆದರೆ ಈ ದಿಗ್ಗಜರಿಗೆ ಸರಿಸಮನಾಗಲು ಯಾರಿಂದಲೂ ಸಾಧ್ಯವಿಲ್ಲ. ಅವರಂತಹ ಆಟಗಾರರು ಯಾವಾಗಲೂ ಶ್ರೇಷ್ಠರಾಗಿಯೇ ಉಳಿಯುತ್ತಾರೆ,” ಎಂದು ಸಿಂಗ್‌ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

10 ಸಾವಿರ ಟೆಸ್ಟ್ ರನ್‌ಗಳನ್ನು ಪೂರೈಸಿದ ಮೊದಲ ಕ್ರಿಕೆಟಿಗ ಸುನಿಲ್ ಗವಾಸ್ಕರ್. ಇದುವರೆಗೆ ಕಂಡ ಅತ್ಯುತ್ತಮ ಆರಂಭಿಕ ಆಟಗಾರನೆಂದೇ ಇವರನ್ನು ಪರಿಗಣಿಸಲಾಗಿದೆ. 70 ಮತ್ತು 80ರ ದಶಕದಲ್ಲಿ ವೆಸ್ಟ್ ಇಂಡೀಸ್ ದೈತ್ಯರ ವಿರುದ್ಧ ಹೋರಾಡಿದ ಇವರ ಆಟದ ವೈಖರಿ ಇತಿಹಾಸದ ಒಂದು ಭಾಗವಾಗಿದೆ. ಗವಾಸ್ಕರ್ ನಿವೃತ್ತರಾದಾಗ, ಅವರ ಸಾಧನೆಯನ್ನು ಸರಿಗಟ್ಟುವುದು ತುಂಬಾ ಕಷ್ಟ ಎಂಬ ಸಾಮೂಹಿಕ ಭಾವನೆ ಇತ್ತು. ಆದರೆ ನಂತರ ಬಂದ ಸಚಿನ್ ತೆಂಡೂಲ್ಕರ್ ದಾಖಲೆಗಳ ಮೇಲೆ ದಾಖಲೆಗಳನ್ನು ಬರೆದರು. ಎಂದಿಗೂ ಊಹಿಸದಂತಹ ಮಟ್ಟಕ್ಕೆ ರನ್ ಮಳೆಯನ್ನೇ ಹರಿಸಿದರು.

ತೆಂಡೂಲ್ಕರ್ ಅವರು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು 100 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ ಏಕೈಕ ಕ್ರಿಕೆಟಿಗರಾಗಿ ನಿವೃತ್ತರಾದರು. ಎರಡೂ ಸ್ವರೂಪಗಳಲ್ಲಿ ಅವರ ರನ್ ರಾಶಿ, ಇನ್ನೂ ಬೇಧಿಸಲಾಗಿಲ್ಲ. ಏಕದಿನ ಶತಕಗಳಲ್ಲಿ ಅವರನ್ನು ಮೀರಿಸಲು, ವಿರಾಟ್ ಕೊಹ್ಲಿ ಕೇವಲ ನಾಲ್ಕು ಶತಕಗಳಷ್ಟು ಹಿಂದಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪಡೆದ ಬಗ್ಗೆ ಮಾತನಾಡಿದ ಬಗ್ಗೆ ಸಿಂಗ್‌, “ಈ ವಯಸ್ಸಿನಲ್ಲಿ, ನಾನು ಈ ಪ್ರಶಸ್ತಿಯನ್ನು ನಿರೀಕ್ಷಿಸಿರಲಿಲ್ಲ. ಈ ವಯಸ್ಸಿನಲ್ಲಿ ನನ್ನನ್ನು ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ನಾನು ಧನ್ಯವಾದ ಸಲ್ಲಿಸುತ್ತೇನೆ. ಈ ಗೌರವದಿಂದಾಗಿ ತುಂಬಾ ಸಂತೋಷವಾಗಿದೆ” ಎಂದು ಅವರು ಹೇಳಿದ್ದಾರೆ.