ಕನ್ನಡ ಸುದ್ದಿ  /  Sports  /  Harbhajan Singh Lifts Lid Over Rumoures Rift With Ms Dhoni

Harbhajan on MS Dhoni: 'ಅವರು ಬ್ಯುಸಿ ಇರ್ತಾರೆ, ನಾವು ಆಗಾಗ ಭೇಟಿಯಾಗುತ್ತಿಲ್ಲ'; ಧೋನಿ ಕುರಿತ ವದಂತಿಗಳ ಬಗ್ಗೆ ಹರ್ಭಜನ್ ಸ್ಪಷ್ಟನೆ

ಶುಕ್ರವಾರ ದೋಹಾದಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ವೇಳೆ ಮಾತನಾಡಿದ ಹರ್ಭಜನ್, ಅಂತಿಮವಾಗಿ ತಾನು ಮತ್ತು ಧೋನಿ "ಒಳ್ಳೆಯ ಸ್ನೇಹಿತರು" ಎಂದು ಹೇಳುವ ಮೂಲಕ ವದಂತಿಗಳಿಗೆ ಇತಿಶ್ರೀ ಹಾಡಿದರು.

ಧೋನಿ, ಹರ್ಭಜನ್‌ ಸಿಂಗ್
ಧೋನಿ, ಹರ್ಭಜನ್‌ ಸಿಂಗ್

ಭಾರತ 2011ರಲ್ಲಿ ವಿಶ್ವಕಪ್ ಗೆದ್ದ ತಂಡದ ಇಬ್ಬರು ಸದಸ್ಯರಾದ ಎಂಎಸ್ ಧೋನಿ ಮತ್ತು ಹರ್ಭಜನ್ ಸಿಂಗ್ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವದಂತಿಗಳು ಕೆಲವು ಸಮಯದಿಂದ ಹರಿದಾಡುತ್ತಿವೆ. ಇವರಿಬ್ಬರೂ ದೀರ್ಘಕಾಲದವರೆಗೆ ಭಾರತ ಕ್ರಿಕೆಟ್‌ ತಂಡದ ಭಾಗವಾಗಿದ್ದವರು. ತಮ್ಮ ವೃತ್ತಿಜೀವನದಲ್ಲಿ ಅನೇಕ ಸ್ಮರಣೀಯ ಗೆಲುವುಗಳು ಮತ್ತು ಪ್ರಶಸ್ತಿಗಳನ್ನು ಇವರಿಬ್ಬರೂ ಹಂಚಿಕೊಂಡಿದ್ದಾರೆ. ಅದೇ ರೀತಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲೂ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದಾರೆ. ಭಾರತದ ಅನುಭವಿ ಹಾಗೂ ಮಾಜಿ ಬೌಲರ್ ಇದೀಗ ಭಾರತದ ಮಾಜಿ ನಾಯಕ ಧೋನಿ ಜೊತೆಗಿನ ವದಂತಿಯನ್ನು ತಳ್ಳಿಹಾಕಿದ್ದಾರೆ.

ಈ ಇಬ್ಬರು ಹಿರಿಯ ಕ್ರಿಕೆಟಿಗರು ಈ ವಿಷಯದ ಬಗ್ಗೆ ಮಾತನಾಡಲು ಮಾಧ್ಯಮಗಳ ಮುಂದೆ ಬಂದಿರಲಿಲ್ಲ. 2021ರ ಡಿಸೆಂಬರ್‌ನಲ್ಲಿ ತಮ್ಮ 18 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ತೆರೆ ಎಳೆದು ನಿವೃತ್ತಿ ಘೋಷಿಸಿದ ಹರ್ಭಜನ್, ಆ ಬಗ್ಗೆ ಸುಳಿವು ನೀಡಿದ್ದರು. "ಯಾರಾದರೂ 400ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದ ಮೇಲೂ, ತಂಡದಲ್ಲಿ ಅವನಿಗೆ ಅವಕಾಶ ಸಿಗದಿದ್ದಾಗ ಅಥವಾ ಆತನ ಕಡೆಗಣನೆಗೆ ಸೂಕ್ತ ಕಾರಣವನ್ನು ತಿಳಿಸದಿದ್ದರೆ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳು ಉದ್ಭವಿಸುತ್ತವೆ. ನಾನು ತಂಡದಿಂದ ಹೊರಗುಳಿಯುವ ಬಗ್ಗೆ ಅನೇಕರನ್ನು ಕೇಳಿದೆ. ಆದರೆ ನನಗೆ ಯಾರಿಂದಲೂ ಉತ್ತರ ಬಂದಿಲ್ಲ,” ಎಂದು ಹರ್ಭಜನ್ ದೈನಿಕ್ ಜಾಗರನ್‌ಗೆ ಹೇಳಿದ್ದರು.

ಭಜ್ಜಿ ಹೇಳಿಕೆಯು ದೇಶದ ಕ್ರಿಕೆಟ್ ರಂಗದಲ್ಲಿ ಸಾಕಷ್ಟು ಚರ್ಚೆಗಳಿಗೆ ಕಾರಣವಾಯ್ತು. ಅದಾದ ಒಂದು ತಿಂಗಳ ನಂತರ, ಅಂದರೆ 2022ರ ಜನವರಿಯಲ್ಲಿ ಈ ಬಗ್ಗೆ ಚರ್ಚೆಗಳು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಹರ್ಭಜನ್ ಸಮರ್ಥನೆ ನೀಡಲು ಬಂದರು. ತನ್ನ ಹೇಳಿಕೆಯಲ್ಲಿ ಯಾರನ್ನೂ ವೈಯಕ್ತಿಕವಾಗಿ ದೂರುವ ಉದ್ದೇಶ ಇರಲಿಲ್ಲ. ನಾನು ಬಿಸಿಸಿಐ ಅನ್ನು ಗುರಿಯಾಗಿಸಿ ಈ ರೀತಿ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದರು.

"ಎಂಎಸ್ ವಿರುದ್ಧ ನನಗೆ ಯಾವುದೇ ದೂರುಗಳಿಲ್ಲ. ವಾಸ್ತವವಾಗಿ, ಅವರು ಇಷ್ಟು ವರ್ಷಗಳಿಂದ ನನಗೆ ಉತ್ತಮ ಸ್ನೇಹಿತರಾಗಿದ್ದರು. ನಾನು ಈ ಬಗ್ಗೆ ಅಂದಿನ ಸರ್ಕಾರ್ (ಸರ್ಕಾರ)ಬಿಸಿಸಿಐಗೆ ದೂರು ನೀಡಿದ್ದೇನೆ. ನಾನು ಬಿಸಿಸಿಐ ಅನ್ನು ಸರ್ಕಾರ ಎಂದು ಕರೆಯುತ್ತೇನೆ. ಆಗಿನ ಆಯ್ಕೆದಾರರು ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸುತ್ತಿರಲಿಲ್ಲ. ಅವರು ತಂಡವನ್ನು ಒಗ್ಗೂಡಿಸಲು ಬಿಡಲಿಲ್ಲ,” ಎಂದು ಅವರು ನ್ಯೂಸ್ 18ಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಶುಕ್ರವಾರ ದೋಹಾದಲ್ಲಿ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ ವೇಳೆ ಮಾತನಾಡಿದ ಹರ್ಭಜನ್, ಅಂತಿಮವಾಗಿ ತಾನು ಮತ್ತು ಧೋನಿ "ಒಳ್ಳೆಯ ಸ್ನೇಹಿತರು" ಎಂದು ಹೇಳುವ ಮೂಲಕ ವದಂತಿಗಳಿಗೆ ಇತಿಶ್ರೀ ಹಾಡಿದರು.

“ಎಂಎಸ್ ಧೋನಿ ಅವರೊಂದಿಗೆ ನನಗೆ ಯಾಕೆ ಸಮಸ್ಯೆ ಇರಬೇಕು? ನಾವು ಭಾರತಕ್ಕಾಗಿ ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ನಾವಿಬ್ಬರೂ ತುಂಬಾ ಒಳ್ಳೆಯ ಸ್ನೇಹಿತರು. ಅವರು ತಮ್ಮ ಜೀವನದಲ್ಲಿ ಬ್ಯುಸಿಯಾದರು. ನಾನು ನನ್ನ ಜೀವನದಲ್ಲಿ ಬ್ಯುಸಿಯಾದೆ. ಹೀಗಾಗಿ ನಾವು ಆಗಾಗ್ಗೆ ಭೇಟಿಯಾಗುತ್ತಿಲ್ಲ. ಆದರೆ ನಮ್ಮ ನಡುವೆ ಯಾವುದೇ ಬಿರುಕು ಇಲ್ಲ,” ಎಂದು ಅವರು ಹೇಳಿದರು.

"ನನಗೆ ತಿಳಿದಿರುವಂತೆ, ಅವರು ನನ್ನ ಯಾವುದೇ ಆಸ್ತಿಯನ್ನು ಕಿತ್ತುಕೊಂಡಿಲ್ಲ. ಆದರೆ ಅವರ ಕೆಲವು ಆಸ್ತಿಗಳಲ್ಲಿ, ವಿಶೇಷವಾಗಿ ಅವರ ಫಾರ್ಮ್‌ಹೌಸ್‌ನಲ್ಲಿ ನನಗೆ ಆಸಕ್ತಿ ಇದೆ" ಎಂದು ಭಜ್ಜಿ ನಗುತ್ತಾ ಹೇಳಿದರು.