Rishabh Pant Health update: 'ಲವ್ ಯೂ ಬ್ರದರ್'; ಪಂತ್ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ ತ್ರಿಮೂರ್ತಿಗಳು
“ನಿನ್ನೊಳಗೆ ಏನೋ ಒಂದು ವಿಶೇಷ ಶಕ್ತಿ ಇದೆ ಎಂಬುದನ್ನು ನಂಬು. ನೀನು ಎದುರಿಸುವ ಎಲ್ಲಾ ಅಡೆತಡೆಗಳಿಗಿಂತ ಅದು ದೊಡ್ಡದಾಗಿದೆ ಮತ್ತು ದೃಢವಾಗಿದೆ. ನಿನ್ನನ್ನು ನೋಡಲು ತುಂಬಾ ಖುಷಿಯಾಗುತ್ತಿದೆ ತಮ್ಮ . ನೀನು ಮೈದಾನಕ್ಕಿಳಿಯುವ ದಿನಕ್ಕಾಗಿ ಕಾಯುತ್ತಿದ್ದೇನೆ” ಎಂದು ಹರ್ಭಜನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್ ತಿಂಗಳು ಭಾರತ ಸೇರಿದಂತೆ ಜಾಗತಿಕ ಕ್ರಿಕೆಟ್ ಲೋಕಕ್ಕೆ ದಂಗು ಬಡಿಸಿತ್ತು. ಭೀಕರ ಕಾರು ಅಪಘಾತದಿಂದಾಗಿ, ಭಾರತ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟರ್ ಹಾಗೂ ವಿಕೆಟ್ ಕೀಪರ್ ರಿಷಬ್ ಪಂತ್ ಗಂಭಿರ ಗಾಯಗೊಂಡರು. ಹೀಗಾಗಿ ಕನಿಷ್ಠ ಒಂದು ವರ್ಷದವರೆಗೆ ಅವರು ಮೈದಾನಕ್ಕೆ ಇಳಿಯದಂತಾಗಿದೆ. 2023ರಲ್ಲಿ ನಡೆಯಲಿರುವ ಬಹುಪಾಲು ಕ್ರಿಕೆಟ್ ಪಂದ್ಯಗಳಿಂದ ಪಂತ್ ಹೊರಗುಳಿದಿದ್ದಾರೆ. ಇದರರ್ಥ ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಸೇರಿದಂತೆ, ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮತ್ತು 2023ರ ವಿಶ್ವಕಪ್ ಸೇರಿದಂತೆ ದೊಡ್ಡ ಪಂದ್ಯಾವಳಿಗಳನ್ನೇ ಕಳೆದುಕೊಳ್ಳಲಿದ್ದಾರೆ.
ಪಂತ್ ಶೀಘ್ರದಲ್ಲೇ ಗುಣಮುಖರಾಗುವಂತೆ ಬಿಸಿಸಿಐ, ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಸೇರಿದಂತೆ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಈ ನಡುವೆ, ಭಾರತ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಎಸ್ ಶ್ರೀಶಾಂತ್; ಇತ್ತೀಚೆಗೆ ಪಂತ್ ಅವರನ್ನು ಅವರ ಮನೆಗೆ ಹೋಗಿ ಭೇಟಿ ಮಾಡಿದ್ದಾರೆ. ಪಂತ್ ಅವರ ಆರೋಗ್ಯ ವಿಚಾರಿಸಿದ ಹಿರಿಯ ಕ್ರಿಕೆಟಿಗರು ಪರಸ್ಪರ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಮೂವರು ಕೂಡಾ ತಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
“ನಿನ್ನೊಳಗೆ ಏನೋ ಒಂದು ವಿಶೇಷ ಶಕ್ತಿ ಇದೆ ಎಂಬುದನ್ನು ನಂಬು. ನೀನು ಎದುರಿಸುವ ಎಲ್ಲಾ ಅಡೆತಡೆಗಳಿಗಿಂತ ಅದು ದೊಡ್ಡದಾಗಿದೆ ಮತ್ತು ದೃಢವಾಗಿದೆ. ನಿನ್ನನ್ನು ನೋಡಲು ತುಂಬಾ ಖುಷಿಯಾಗುತ್ತಿದೆ ತಮ್ಮ . ನೀನು ಮೈದಾನಕ್ಕಿಳಿಯುವ ದಿನಕ್ಕಾಗಿ ಕಾಯುತ್ತಿದ್ದೇನೆ” ಎಂದು ಹರ್ಭಜನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
“ಭ್ರಾತೃತ್ವವೇ ಸರ್ವಸ್ವ. ನಾವು ಹೃದಯದಿಂದ ಪ್ರೀತಿಸುವ ಎಲ್ಲರಲ್ಲೂ ಕುಟುಂಬವನ್ನು ಕಾಣಬಹುದು. ನಮ್ಮ ಸಹೋದರ ರಿಷಭ್ ಪಂತ್ ಬೇಗನೆ ಚೇತರಿಸಿಕೊಳ್ಳಲಿ ಎಂದು ನಾನು ಹಾರೈಸುತ್ತೇನೆ” ಎಂದು ರೈನಾ ಟ್ವೀಟ್ ಮಾಡಿದ್ದಾರೆ.
ಈ ನಡುವೆ ಶ್ರೀಶಾಂತ್ ಕೂಡಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಐ ಲವ್ ಯೂ ಸಹೋದರ ಎಂದಿರುವ ಶ್ರೀಶಾಂತ್ ಸದಾ ಸ್ಫೂರ್ತಿ ತುಂಬುತ್ತಿರಿ ಎಂದು ಹಾರೈಸಿದ್ದಾರೆ.
ಈ ಋತುವಿನ ಐಪಿಎಲ್‌ನಿಂದ ಪಂತ್ ಹೊರಗುಳಿದಿರುವುದರಿಂದ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಡೇವಿಡ್ ವಾರ್ನರ್ ಅವರನ್ನು ನಾಯಕನನ್ನಾಗಿ ಘೋಷಿಸಿದೆ. ಇದೇ ವೇಳೆ ಆಲ್ ರೌಂಡರ್ ಅಕ್ಷರ್ ಪಟೇಲ್ ಅವರನ್ನು ಉಪನಾಯಕನನ್ನಾಗಿ ಘೋಷಿಸಿದೆ. ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ವಾರ್ನರ್ ಮುನ್ನಡೆಸಲಿದ್ದಾರೆ.
ಇದೇ ವೇಳೆ ಪಂತ್ ಕುರಿತು ಮಾತನಾಡಿರುವ ಆಸೀಸ್ ಪವರ್ ಹಿಟ್ಟರ್, ಶೀಘ್ರವಾಗಿ ಚೇತರಿಸಿಕೊಳ್ಳಲು ಹಾರೈಸಿದ್ದಾರೆ. “ನಾವು ಪ್ರತಿ ಋತುವಿನಲ್ಲೂ ಉತ್ತಮ ಪ್ರೇರಣೆಯೊಂದಿಗೆ ಕಣಕ್ಕಿಳಿದಿದ್ದೇವೆ. ಆದರೆ ಈ ಬಾರಿ ನಿಮ್ಮ ಅನುಪಸ್ಥಿತಿಯಲ್ಲಿ ಪ್ರಶಸ್ತಿಯನ್ನು ಎತ್ತಿಹಿಡಿಯಲು ನಾವು ಇನ್ನಷ್ಟು ಪ್ರೇರೇಪಿಸಲ್ಪಟ್ಟಿದ್ದೇವೆ. ನಾವು ನಿಮ್ಮ ಚೇತರಿಕೆಯ ಹಾದಿಯಲ್ಲಿ ಸದಾ ನಿಮ್ಮೊಂದಿಗೆ ಇರಲಿದ್ದೇವೆ. ನಮ್ಮ ಪಂದ್ಯಗಳಲ್ಲಿ ಯಾವುದಾದರೂ ಒಂದನ್ನು ವೀಕ್ಷಿಸಲು ಬನ್ನಿ” ಎಂದು ಫ್ರಾಂಚೈಸಿ ನೀಡಿದ ಹೇಳಿಕೆಯಲ್ಲಿ ವಾರ್ನರ್ ಹೇಳಿದ್ದಾರೆ.