ಕನ್ನಡ ಸುದ್ದಿ  /  Sports  /  Harmanpreet Kaur To Lead Mumbai Indians Wpl

Women's Premier League: ಮುಂಬೈ ಇಂಡಿಯನ್ಸ್ ವನಿತೆಯರ ತಂಡಕ್ಕೆ ಕೌರ್ ನಾಯಕಿ; ನೀತಾ ಅಂಬಾನಿ ಅಧಿಕೃತ ಘೋಷಣೆ

ಕಳೆದೊಂದು ದಶಕದಿಂದ, ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಭಾರತ ವನಿತೆಯರ ಕ್ರಿಕೆಟ್‌ ತಂಡಕ್ಕೆ ಕೌರ್‌ ಆಧಾರಸ್ತಂಭವೆನಿಸಿದ್ದಾರೆ. ರಾಷ್ಟ್ರೀಯ ಮಹಿಳಾ ತಂಡದ ನಾಯಕಿಯಾಗಿರುವ ಅವರು, ತಂಡವನ್ನು ಮುನ್ನಡೆಸಿದ ಸುದೀರ್ಘ ಅನುಭವ ಹೊಂದಿದ್ದಾರೆ.

ಹರ್ಮನ್‌ಪ್ರೀತ್ ಕೌರ್
ಹರ್ಮನ್‌ಪ್ರೀತ್ ಕೌರ್

ಮುಂಬೈ: ಇದೇ ಶನಿವಾರದಿಂದ ವಾಣಿಜ್ಯ ನಗರಿ ಮುಂಬೈನಲ್ಲಿ ಚೊಚ್ಚಲ ಆವೃತ್ತಿಯ ವಿಮೆನ್ಸ್‌ ಪ್ರೀಮಿಯರ್ ಲೀಗ್‌ (WPL)ಗೆ ಚಾಲನೆ ಸಿಗಲಿದೆ. ಆವೃತ್ತಿಯ ಆರಂಭಕ್ಕೂ ಮುನ್ನ, ಭಾರತ ವನಿತೆಯರ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಮುಂಬೈ ಇಂಡಿಯನ್ಸ್ (Mumbai Indians) ತಂಡವು ನಾಯಕಿ ಎಂದು ಅಧಿಕೃತವಾಗಿ ಘೋಷಿಸಿದೆ.

ಇತ್ತೀಚೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಐಸಿಸಿ ವನಿತೆಯರ ಟಿ20 ವಿಶ್ವಕಪ್‌ನಲ್ಲಿ, 150 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಪೂರೈಸಿದ ಮೊದಲ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಹರ್ಮನ್‌ಪ್ರೀತ್ ಪಾತ್ರರಾಗಿದ್ದರು. ಅವರನ್ನು ಕಳೆದ ತಿಂಗಳು ನಡೆದ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 1.8 ಕೋಟಿ ರೂಪಾಯಿಗೆ ಖರೀದಿಸಿತ್ತು.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡಕ್ಕೆ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರೇ ನಾಯಕರಾಗಿದ್ದಾರೆ. ಭಾರತ ವನಿತೆಯರ ತಂಡದ ನಾಯಕಿಯನ್ನು ಖರೀದಿಸುವ ಮೂಲಕ, ಅವರನ್ನೇ ನಾಯಕಿಯಾಗಿ ಘೋಷಿಸುವುದು ಬಹುತೇಕ ಖಚಿತವಾಗಿತ್ತು. ಆದರೆ, ಅಧಿಕೃತ ಘೋಷಣೆ ಫ್ರಾಂಚೈಸಿಯಿಂದ ಬಂದಿರಲಿಲ್ಲ. ಇಂದು ಫ್ರಾಂಚೈಸಿಯಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿದೆ.

ಕಳೆದೊಂದು ದಶಕದಿಂದ, ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ಭಾರತ ವನಿತೆಯರ ಕ್ರಿಕೆಟ್‌ ತಂಡಕ್ಕೆ ಕೌರ್‌ ಆಧಾರಸ್ತಂಭವೆನಿಸಿದ್ದಾರೆ. ರಾಷ್ಟ್ರೀಯ ಮಹಿಳಾ ತಂಡದ ನಾಯಕಿಯಾಗಿರುವ ಅವರು, ತಂಡವನ್ನು ಮುನ್ನಡೆಸಿದ ಸುದೀರ್ಘ ಅನುಭವ ಹೊಂದಿದ್ದಾರೆ.

“ಮುಂಬೈ ಇಂಡಿಯನ್ಸ್ ವನಿತೆಯರ ತಂಡದ ಮೊಟ್ಟಮೊದಲ ನಾಯಕಿಯಾಗಿ ಹರ್ಮನ್ ಪ್ರೀತ್ ಕೌರ್ ಅವರ ಹೆಸರನ್ನು ಘೋಷಿಸಲು ತುಂಬಾ ಸಂತಸವಾಗುತ್ತಿದೆ. ರಾಷ್ಟ್ರೀಯ ತಂಡದ ನಾಯಕಿಯಾಗಿ ಅವರು, ಭಾರತೀಯ ಮಹಿಳಾ ತಂಡಕ್ಕೆ ಕೆಲವು ಅವಿಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದಾರೆ. ತರಬೇತುದಾರರಾದ ಚಾರ್ಲೋಟ್ ಮತ್ತು ಜೂಲನ್ ಬೆಂಬಲದೊಂದಿಗೆ, ಅವರು ಎಂಐ ಮಹಿಳಾ ತಂಡವು ಉನ್ನತ ದರ್ಜೆಯ ಕ್ರಿಕೆಟ್ ಆಡಲು ಸ್ಫೂರ್ತಿ ತುಂಬುವ ವಿಶ್ವಾಸವಿದೆ. ಎಂಐ ತಂಡದ ಹೊಸ ಅಧ್ಯಾಯದ ಆರಂಭವನ್ನು ನಾವು ಎದುರು ನೋಡುತ್ತಿದ್ದೇವೆ. ನಮ್ಮ ಅಭಿಮಾನಿಗಳ ನೆಚ್ಚಿನ ಎಂಐ ಬ್ರ್ಯಾಂಡ್‌ನ ಆಟವನ್ನು ವನಿತೆಯರು ಆಡುವುದನ್ನು ನೋಡಲು ನಾನು ಕಾತರದಿಂದ ಕಾಯುತ್ತಿದ್ದೇವೆ. ತಂಡದ ಉತ್ಸಾಹಿ ಪ್ರಯಣಕ್ಕೆ ಹೆಚ್ಚಿನ ಶಕ್ತಿ ಸಿಗುವಂತಾಗಲಿ” ಎಂದು ತಂಡದ ಮಾಲಕಿ ನೀತಾ ಅಂಬಾನಿ ಹೇಳಿದ್ದಾರೆ.

ಫ್ರಾಂಚೈಸಿಯು ಈಗಾಗಲೇ ಮುಖ್ಯ ಕೋಚ್ ಆಗಿ ಚಾರ್ಲೋಟ್ ಎಡ್ವರ್ಡ್ಸ್ ಅವರನ್ನು ನೇಮಿಸಿದೆ. ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಿದ ಭಾರತದ ಮೊದಲ ಕ್ರಿಕೆಟರ್ ಎನಿಸಿರುವ ಹರ್ಮನ್‌ಪ್ರೀತ್, ಭಾರತೀಯ ಕ್ರಿಕೆಟ್‌ನ ಶ್ರೇಷ್ಠತೆಯನ್ನು ವಿಶ್ವಕ್ಕೆ ಪ್ರದರ್ಶಿಸುವ ಸಾಮರ್ಥ್ಯ ಹೊಂದಿದ್ದಾರೆ. ಜಾಗತಿಕ ಮಹಿಳಾ ಕ್ರಿಕೆಟ್‌ನ ಕೆಲ ಅತ್ಯುನ್ನತ ತಾರೆಯರು ಈಗಾಗಲೇ ಮುಂಬೈ ತಂಡದ ಪಾಲಾಗಿದ್ದಾರೆ. ಅಲ್ಲದೆ ಯುವ ಆಟಗಾರ್ತಿಯರನ್ನುಹೊಂದಿರುವ ತಂಡವನ್ನು ಈಗ ಕೌರ್ ಮುನ್ನಡೆಸಲಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡಕ್ಕೆ ಚಾರ್ಲೋಟ್ ಎಡ್ವರ್ಡ್ಸ್ ಮುಖ್ಯ ಕೋಚ್ ಆಗಿ ಈ ಹಿಂದೆಯೇ ನೇಮಕಗೊಂಡಿದ್ದಾರೆ. ಜೂಲನ್ ಗೋಸ್ವಾಮಿ ಅವರು ಮೆಂಟರ್ ಹಾಗೂ ಬೌಲಿಂಗ್ ಕೋಚ್ ಆಗಿದ್ದಾರೆ.

ಕೌರ್ ಸಾರಥ್ಯದ ಮುಂಬೈ ತಂಡದಲ್ಲಿ ಹಲವು ಪ್ರತಿಭಾವಣತ ಆಟಗಾರ್ತಿಯರಿದ್ದಾರೆ. ವಿಶ್ವಕಪ್‌ನಲ್ಲಿ ಮಿಂಚಿದ ನಾಟ್ ಸಿವರ್-ಬ್ರಂಟ್, ಅಮೆಲಿಯಾ ಕೆರ್, ಪೂಜಾ ವಸ್ತ್ರಾಕರ್, ಯಸ್ತಿಕಾ ಭಾಟಿಯಾ, ಹೀದರ್ ಗ್ರಹಾಂ, ಇಸಬೆಲ್ ವೊಂಗ್, ಅಮನ್ಜೋತ್ ಕೌರ್, ಧಾರಾ ಗುಜ್ಜರ್, ಶೇಕಾ ಇಶಾಕ್, ಹ್ಯಾಲಿ ಮ್ಯಾಥ್ಯೂಸ್, ಕ್ಲೋಯಿ ಟ್ರೈಯಾನ್, ಹುಮೈರಾ ಕಾಜಿ, ಪ್ರಿಯಾಂಕಾ ಬಾಲ, ಸೋನಂ ಯಾದವ್, ನೀಲಮ್ ಬಿಸ್ಟ್, ಜಿಂಟಿಮನಿ ಕಲಿಟಾ ಅವರು ತಂಡದ ಪ್ರಮುಖ ಆಟಗಾರ್ತಿಯರಾಗಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡವು ಡಬ್ಲ್ಯುಪಿಎಲ್ 2023ರ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಮಾರ್ಚ್ 4ರಂದು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ನಡೆಯಲಿದೆ.