ಹಾಕಿ ಗುಂಪು ಹಂತದಲ್ಲಿ ಭಾರತ ಶುಭಾರಂಭ; ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳ ರೋಚಕ ಜಯ
ಕನ್ನಡ ಸುದ್ದಿ  /  ಕ್ರೀಡೆ  /  ಹಾಕಿ ಗುಂಪು ಹಂತದಲ್ಲಿ ಭಾರತ ಶುಭಾರಂಭ; ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳ ರೋಚಕ ಜಯ

ಹಾಕಿ ಗುಂಪು ಹಂತದಲ್ಲಿ ಭಾರತ ಶುಭಾರಂಭ; ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳ ರೋಚಕ ಜಯ

Indian Hockey Team: ಪ್ಯಾರಿಸ್‌ ಒಲಿಂಪಿಕ್ಸ್​ನಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಗೆಲುವಿನ ಆರಂಭ ಪಡೆದಿದೆ. ನ್ಯೂಜಿಲೆಂಡ್ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ 3-2 ಗೋಲುಗಳ ಅಂತರದಿಂದ ಗೆದ್ದು ಬೀಗಿದೆ.

ಹಾಕಿ ಗುಂಪು ಹಂತದಲ್ಲಿ ಭಾರತ ಶುಭಾರಂಭ; ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳ ರೋಚಕ ಜಯ
ಹಾಕಿ ಗುಂಪು ಹಂತದಲ್ಲಿ ಭಾರತ ಶುಭಾರಂಭ; ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳ ರೋಚಕ ಜಯ (PTI)

ಟೊಕಿಯೊ ಒಲಿಂಪಿಕ್ಸ್​​​​ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡ, ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ರೋಚಕ ಗೆಲುವಿನೊಂದಿಗೆ ತನ್ನ ಮೊದಲ ಪಂದ್ಯದಲ್ಲಿ ಶುಭಾರಂಭ ಕಂಡಿದೆ. ಜುಲೈ 27ರ ಶನಿವಾರ ನಡೆದ ಬಿ ಗುಂಪಿನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳಿಂದ ಗೆದ್ದು ಬೀಗಿದೆ. ಕೊನೆಯ ಒಲಿಂಪಿಕ್ಸ್ ಆಡುತ್ತಿರುವ ಗೋಲ್ ಕೀಪರ್​​​ ಪಿಆರ್​​ ಶ್ರೀಜೇಶ್ ಎದುರಾಳಿ ತಂಡದ 7 ಪೆನಾಲ್ಟಿ ಕಾರ್ನರ್​​​ಗಳನ್ನು ತಡೆದು ಮಿಂಚಿದರು.

ಫ್ರೆಂಚ್ ರಾಜಧಾನಿಯ ಯೆವೆಸ್-ಡು-ಮನೋಯಿರ್ ಸ್ಟೇಡಿಯಂ-2 ರಲ್ಲಿ ಜರುಗಿದ ಈ ಪಂದ್ಯದ ಮೊದಲ ಕ್ವಾರ್ಟರ್​​​ನಲ್ಲಿ 0-1 ಹಿನ್ನಡೆ ಅನುಭವಿಸಿದ ಟೀಮ್ ಇಂಡಿಯಾ, 2ನೇ ಮತ್ತು 3ನೇ ಕ್ವಾರ್ಟರ್​​ನಲ್ಲಿ ಬಲಿಷ್ಠ ಪುನರಾಗಮನ ಮಾಡಿತು. 8ನೇ ನಿಮಿಷದಲ್ಲಿ ಲೇನ್ ಸ್ಯಾಮ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ನ್ಯೂಜಿಲೆಂಡ್​​ಗೆ ಮುನ್ನಡೆ ತಂದುಕೊಟ್ಟಿದ್ದರು. ಆದರೆ ಭಾರತ ಮುಂದಿನ ಎರಡೂ ಕ್ವಾರ್ಟರ್​​ಗಳಲ್ಲಿ ಒಂದೊಂದು ಗೋಲು ಗಳಿಸಿ ಮೇಲುಗೈ ಸಾಧಿಸಿತು.

ಮಂದೀಪ್ ಸಿಂಗ್ ಮತ್ತು ವಿವೇಕ್ ಸಾಗರ್ ಪ್ರಸಾದ್ ಗೋಲು ಗಳಿಸಿ ತಂಡದ ಕೈ ಹಿಡಿದರು. ಎರಡನೇ ಕ್ವಾರ್ಟರ್​​​​ನಲ್ಲಿ ಭಾರತ ಗೋಲು ಗಳಿಸಿ ಪಂದ್ಯವನ್ನು 1-1ರಲ್ಲಿ ಸಮಬಲಗೊಳಿಸಿತು. 24ನೇ ನಿಮಿಷದಲ್ಲಿ ಮಂದೀಪ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿದರು. ವಿರಾಮದ ವೇಳೆಗೆ ಪಂದ್ಯ 1-1ರ ಸಮಬಲ ಸಾಧಿಸಿತ್ತು. ವಿವೇಕ್ ಸಾಗರ್ ಮೂರನೇ ಕ್ವಾರ್ಟರ್​​​ನಲ್ಲಿ ಗೋಲು ಸಿಡಿಸಿದರು. ಇದರೊಂದಿಗೆ ಭಾರತ 2-1ರಲ್ಲಿ ಮುನ್ನಡೆ ಸಾಧಿಸಿತು.

ಆದರೆ, ನಾಲ್ಕನೇ ಕ್ವಾರ್ಟರ್​​ನಲ್ಲಿ ಕಿವೀಸ್ ಮತ್ತೊಂದು ಗೋಲು ಗಳಿಸಿ ಪಂದ್ಯವನ್ನು 2-2ರಲ್ಲಿ ಸಮಗೊಳಿಸಿತು. ಆಗ ಪಂದ್ಯ ಡ್ರಾ ಹಂತಕ್ಕೆ ಬಂದು ನಿಂತಿತು. ಆದರೆ, ಪಂದ್ಯ ಮುಗಿಯಲು 2 ನಿಮಿಷಗಳಿದ್ದ ಸಮಯದಲ್ಲಿ ನಾಯಕ ಹರ್ಮನ್​ ಪ್ರೀತ್ ಸಿಂಗ್ ಪೆನಾಲ್ಟಿ ಸ್ಟ್ರೋಕ್ ಗೋಲು ಗಳಿಸಿ ಗೆಲುವು ತಂದು ಕೊಟ್ಟರು. ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಭಾರತ ತಂಡಕ್ಕೆ ಅಗತ್ಯವಾಗಿತ್ತು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.