ಹರಿಯಾಣದಲ್ಲಿ ಭೀಕರ ರಸ್ತೆ ಅಪಘಾತ: ಒಲಿಂಪಿಕ್ಸ್ ಪದಕ ವಿಜೇತೆ ಮನು ಭಾಕರ್ ಚಿಕ್ಕಪ್ಪ, ಅಜ್ಜಿ ದುರ್ಮರಣ
Manu Bhaker: ಪ್ಯಾರಿಸ್ ಒಲಿಂಪಿಕ್ಸ್ ವಿಜೇತೆ ಮನು ಭಾಕರ್ ಅವರ ಚಿಕ್ಕಪ್ಪ ಮತ್ತು ಅಜ್ಜಿ ರಸ್ತೆ ಅಪಘಾತವೊಂದರಲ್ಲಿ ದುರಂತ ಸಾವು ಕಂಡಿದ್ದಾರೆ. ಈ ಘಟನೆ ಹರಿಯಾಣದಲ್ಲಿ ನಡೆದಿದೆ.

ಹರಿಯಾಣ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಎರಡು ಕಂಚಿನ ಪದಕ ಜಯಿಸಿದ್ದ ಭಾರತದ ಸ್ಟಾರ್ ಶೂಟರ್ ಮನು ಭಾಕರ್ (Manu Bhaker) ಅವರ ಅಜ್ಜಿ ಮತ್ತು ಚಿಕ್ಕಪ್ಪ ಭೀಕರ ರಸ್ತೆಯೊಂದರಲ್ಲಿ ಸಾವನ್ನಪ್ಪಿದ್ದಾರೆ. ಮನು ಅವರ ಚಿಕ್ಕಪ್ಪ ಯುಧ್ವೀರ್ ಸಿಂಗ್, ಅಜ್ಜಿ ಸಾವಿತ್ರಿ ದೇವಿ ಮೃತಪಟ್ಟವರು. ಇಬ್ಬರು ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹೇಂದರ್‌ಗಢ ಜಿಲ್ಲೆಯ ಬೈಪಾಸ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
ವರದಿಗಳ ಪ್ರಕಾರ, ರಾಂಗ್ ಸೈಡ್‌ನಿಂದ ವೇಗವಾಗಿ ಬಂದ ಬ್ರೆಝಾ ಕಾರಿನ ಚಾಲಕ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತ ಸಂಭವಿಸಿದ ತಕ್ಷಣ ಇಬ್ಬರು ನೆಲಕ್ಕೆ ಬಿದ್ದ ಬೆನ್ನಲ್ಲೇ ಸ್ಥಳದಲ್ಲೇ ಮೃತಪಟ್ಟಿದರು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ 2 ದಿನಗಳ ನಂತರ ಈ ದುರ್ಘಟನೆ ನಡೆದಿದೆ. ಸಂತೋಷ ತುಂಬಿದ್ದ ಮನೆಯಲ್ಲಿ ಈಗ ಮೌನ ಆವರಿಸಿದೆ.
ಕೆಲಸಕ್ಕೆ ಹೋಗುತ್ತಿದ್ದ ವೇಳೆ ಅಪಘಾತ
ಚಾಲಕನಾಗಿ ಕೆಲಸ ಮಾಡುತ್ತಿದ್ದ ಯುಧ್ವೀರ್ ಸಿಂಗ್ ಅವರು ಕೆಲಸಕ್ಕೆ ಹೋಗುತ್ತಿದ್ದ ಈ ದುರಂತ ಘಟನೆ ಸಂಭವಿಸಿದೆ. ಅವರ ತಾಯಿ ಸಾವಿತ್ರಿ ದೇವಿ ಅವರು ಲೋಹರು ಚೌಕ್ನಲ್ಲಿರುವ ತನ್ನ ಕಿರಿಯ ಮಗನನ್ನು ಭೇಟಿ ಮಾಡಲು ಅವರೊಂದಿಗೆ ಬಂದಿದ್ದರು. ಇಬ್ಬರೂ ಕಲ್ಯಾಣ ಮಾಡ್ ಪ್ರದೇಶವನ್ನು ತಲುಪುತ್ತಿದ್ದಂತೆ ರಸ್ತೆಯ ರಾಂಗ್ ಸೈಡ್‌ನಿಂದ ವೇಗವಾಗಿ ಬಂದ ಬ್ರೆಜಾ ಕಾರು ಡಿಕ್ಕಿ ಹೊಡೆದಿದೆ.
ಕಾರು ಚಾಲಕನ ನಿಯಂತ್ರಣ ತಪ್ಪಿ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಅಪಘಾತ ಸಂಭವಿಸಿದ ಬೆನ್ನಲ್ಲೇ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸಿವಿಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ಅಪಘಾತಕ್ಕೆ ಕಾರಣವಾದ ಚಾಲಕನನ್ನು ಬಂಧಿಸಲು ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಈ ದುರಂತ ಸ್ಥಳೀಯ ಸಮುದಾಯವನ್ನು ಬೆಚ್ಚಿಬೀಳಿಸಿದೆ. ಮನು ಭಾಕರ್ ಮತ್ತು ಅವರ ಕುಟುಂಬಕ್ಕೆ ಸಂತಾಪ ವ್ಯಕ್ತವಾಗಿದೆ. ಘಟನೆಯ ಕುರಿತು ಪೊಲೀಸ್ ತನಿಖೆ ಮುಂದುವರಿದಿದ್ದು, ಹಿಟ್ ಅಂಡ್ ರನ್ ಚಾಲಕನನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ.
ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸಿದ್ದ ಮನು
ಶೂಟಿಂಗ್ ಕ್ರೀಡೆಯಲ್ಲಿ ಮಾಡಿದ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ ಮನು ಭಾಕರ್ ಅವರಿಗೆ ಜನವರಿ 17ರ ಶುಕ್ರವಾರ 2024ರ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 10 ಮೀ ಏರ್ ಪಿಸ್ತೂಲ್, ಮಿಶ್ರ ತಂಡ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ತಲಾ ಕಂಚಿನ ಪದಕ ಗೆದ್ದಿದ್ದರು.
