ಪ್ರೊ ಕಬಡ್ಡಿ ಲೀಗ್​ 11: ಫೈನಲ್ ಪ್ರವೇಶಿಸಿದ ಹರಿಯಾಣ ಸ್ಟೀಲರ್ಸ್, ಪಾಟ್ನಾ ಪೈರೇಟ್ಸ್; ಡಿ 29ರಂದು ಪ್ರಶಸ್ತಿಗಾಗಿ ಕಾದಾಟ
ಕನ್ನಡ ಸುದ್ದಿ  /  ಕ್ರೀಡೆ  /  ಪ್ರೊ ಕಬಡ್ಡಿ ಲೀಗ್​ 11: ಫೈನಲ್ ಪ್ರವೇಶಿಸಿದ ಹರಿಯಾಣ ಸ್ಟೀಲರ್ಸ್, ಪಾಟ್ನಾ ಪೈರೇಟ್ಸ್; ಡಿ 29ರಂದು ಪ್ರಶಸ್ತಿಗಾಗಿ ಕಾದಾಟ

ಪ್ರೊ ಕಬಡ್ಡಿ ಲೀಗ್​ 11: ಫೈನಲ್ ಪ್ರವೇಶಿಸಿದ ಹರಿಯಾಣ ಸ್ಟೀಲರ್ಸ್, ಪಾಟ್ನಾ ಪೈರೇಟ್ಸ್; ಡಿ 29ರಂದು ಪ್ರಶಸ್ತಿಗಾಗಿ ಕಾದಾಟ

PKL Season 11: 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​​​ನಲ್ಲಿ ಹರಿಯಾಣ ಸ್ಟೀಲರ್ಸ್, ಪಾಟ್ನಾ ಪೈರೇಟ್ಸ್ ತಂಡಗಳು ಫೈನಲ್ ಪ್ರವೇಶಿಸಿವೆ. ಡಿಸೆಂಬರ್​29ರಂದು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.

ಪ್ರೊ ಕಬಡ್ಡಿ ಲೀಗ್​ 11: ಫೈನಲ್ ಪ್ರವೇಶಿಸಿದ ಹರಿಯಾಣ ಸ್ಟೀಲರ್ಸ್, ಪಾಟ್ನಾ ಪೈರೇಟ್ಸ್; ಡಿ 29ರಂದು ಪ್ರಶಸ್ತಿಗಾಗಿ ಕಾದಾಟ
ಪ್ರೊ ಕಬಡ್ಡಿ ಲೀಗ್​ 11: ಫೈನಲ್ ಪ್ರವೇಶಿಸಿದ ಹರಿಯಾಣ ಸ್ಟೀಲರ್ಸ್, ಪಾಟ್ನಾ ಪೈರೇಟ್ಸ್; ಡಿ 29ರಂದು ಪ್ರಶಸ್ತಿಗಾಗಿ ಕಾದಾಟ

11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ ಫೈನಲ್ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್-ಪಾಟ್ನಾ ಪೈರೇಟ್ಸ್​ ತಂಡಗಳು ಮುಖಾಮುಖಿಯಾಗಲಿವೆ. ಡಿಸೆಂಬರ್​ 29ರ ಭಾನುವಾರ ನಡೆಯುವ ಫೈನಲ್​ನಲ್ಲಿ ಹರಿಯಾಣ ಚೊಚ್ಚಲ ಪ್ರಶಸ್ತಿಗೆ, ಪಾಟ್ನಾ ನಾಲ್ಕನೇ ಪ್ರಶಸ್ತಿಗೆ ಕಾದಾಟ ನಡೆಸಲಿವೆ.  ಈ ಫೈನಲ್ ಪಂದ್ಯ ಪುಣೆಯ ಬಾಲೆವಾಡಿ ಶ್ರೀಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆಯಲಿದೆ. ಇಂದು (ಡಿಸೆಂಬರ್ 27) ನಡೆದ ಮೊದಲ ಸೆಮಿಫೈನಲ್​ನಲ್ಲಿ ಯುಪಿ ಯೋಧಾಸ್ ತಂಡವನ್ನು (28-25) ಮಣಿಸಿದ ಹರಿಯಾಣ ಸತತ 2ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟರೆ, 2ನೇ ಸೆಮಿಫೈನಲ್​ನಲ್ಲಿ ದಬಾಂಗ್ ಡೆಲ್ಲಿಯನ್ನು ಸೋಲಿಸಿದ ಪಾಟ್ನಾ ತಂಡ (28-32) 5ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆಯಿತು.

ಮೊದಲ ಸೆಮೀಸ್​ನಲ್ಲಿ ಹರಿಯಾಣಗೆ ಗೆಲುವು

ಪುಣೆಯ ಬಾಲೆವಾಡಿ ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಯುಪಿ ಯೋಧಾಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಹರಿಯಾಣ ಸ್ಟೀಲರ್ಸ್ ಸತತ 2ನೇ ಬಾರಿಗೆ ಫೈನಲ್​ಗೇರಿದೆ. ಕಳೆದ ಬಾರಿ ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಂಡಿದ್ದ ಹರಿಯಾಣ 28-25 ಅಂಕಗಳ ಅಂತರದಿಂದ ಜಯಭೇರಿ ಬಾರಿಸುವ ಮೂಲಕ ಫೈನಲ್​ಗೇರಿ ಚೊಚ್ಚಲ ಟ್ರೋಫಿ ಗೆಲುವಿನ ಕನಸಿನಲ್ಲಿದೆ. ಎಲಿಮಿನೇಟರ್​ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 46-18 ಅಂಕಗಳಿಂದ ಅಮೋಘ ಗೆಲುವು ಸೆಮಿಫೈನಲ್ ಪ್ರವೇಶಿಸಿದ್ದ ಯುಪಿ ಯೋಧಾಸ್, ಮೊದಲ ಬಾರಿಗೆ ಫೈನಲ್​ಗೆ ಅರ್ಹತೆ ಪಡೆಯಲು ವಿಫಲವಾಯಿತು.

ಹರಿಯಾಣ-ಯುಪಿ ನಡುವಿನ ಸೆಮಿಫೈನಲ್ ಕದನ ರೋಚಕವಾಗಿತ್ತು. ಆರಂಭದಿಂದಲೂ ಉಭಯ ತಂಡಗಳ ನಡುವಿನ ಹೋರಾಟವು ಜಿದ್ದಾಜಿದ್ದಿನಿಂದ ಕೂಡಿತ್ತು. ಮೊದಲಾರ್ಧ ಮುಕ್ತಾಯಕ್ಕೆ ಹರಿಯಾಣ 12 ಮತ್ತು ಯುಪಿ 11 ಅಂಕ ಪಡೆದಿತ್ತು. ಬಳಿಕ ದ್ವಿತೀಯಾರ್ಧದ ಆರಂಭದಲ್ಲಿ ಹರಿಯಾಣ 6 ಅಂಕ ಮುನ್ನಡೆ ಪಡೆಯಿತು. ಇನ್ನೇನು ಪಂದ್ಯ ಮುಗಿಯಲು 10 ನಿಮಿಷ ಇದ್ದಾಗ ಪ್ರತಿರೋಧ ತೋರಿದ ಯುಪಿ ಗೆಲುವಿನ ಸನಿಹಕ್ಕೆ ಬಂದಿತು. ಆದರೆ ಅಂತಿಮವಾಗಿ ಹರಿಯಾಣ 3 ಅಂಕಗಳಿಂದ ಗೆದ್ದು ಎರಡನೇ ಫೈನಲ್​ಗೇರಿದ್ದು, ಚೊಚ್ಚಲ ಪಿಕೆಎಲ್ ಟ್ರೋಫಿಯ ನಿರೀಕ್ಷೆಯಲ್ಲಿದೆ.

ಪಾಟ್ನಾಗೆ ಜಯಭೇರಿ, 5ನೇ ಬಾರಿಗೆ ಫೈನಲ್​ಗೆ

ಮೊದಲ ಸೆಮಿಫೈನಲ್​ನಂತೆ ಪಾಟ್ನಾ ಪೈರೇಟ್ಸ್ ಮತ್ತು ದಬಾಂಗ್ ಡೆಲ್ಲಿ ನಡುವಿನ 2ನೇ ಸೆಮಿಫೈನಲ್ ಸಹ ರೋಚಕತೆಯಿಂದ ಕೂಡಿತ್ತು. ಆದರೆ ಕೊನೆಗೆ ಪಾಟ್ನಾವೇ ಮೇಲುಗೈ ಸಾಧಿಸಿತು. 3, 4, 5 ಹಾಗೂ 8ನೇ ಆವೃತ್ತಿಗಳಲ್ಲಿ ಫೈನಲ್​ ಪ್ರವೇಶಿಸಿದ್ದ ಪಾಟ್ನಾ ಒಟ್ಟು 3 ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. 8ನೇ ಸೀಸನ್​ನಲ್ಲಿ ರನ್ನರ್​ಅಪ್​ಗೆ ತೃಪ್ತಿಪಟ್ಟುಕೊಂಡಿತ್ತು. ಇದೀಗ ಐದನೇ ಸಲ ಅಂತಿಮ ಸುತ್ತಿಗೇರಿರುವ ಪಾಟ್ನಾ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ಲೆಕ್ಕಾಚಾರದಲ್ಲಿದೆ. ಮತ್ತೊಂದೆಡೆ ಸೆಮಿಫೈನಲ್​ನಲ್ಲಿ ಸೋತಿರುವ ಡಬಾಂಗ್ ಡೆಲ್ಲಿ, ಮೂರನೇ ಬಾರಿಗೆ ಫೈನಲ್ ಪ್ರವೇಶಿಸಲು ವಿಫಲವಾಯಿತು.

ಪಂದ್ಯದ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡ ಪಾಟ್ನಾ ಯಾವ ಹಂತದಲ್ಲೂ ಡೆಲ್ಲಿಗೆ ಲೀಡ್​ ಬಿಟ್ಟುಕೊಡಲಿಲ್ಲ. ಮೊದಲಾರ್ಧ ಮುಕ್ತಾಯಕ್ಕೆ ಡೆಲ್ಲಿ 10 ಅಂಕ, ಪಾಟ್ನಾ 17 ಅಂಕ ಪಡೆದಿತ್ತು. ದ್ವಿತೀಯಾರ್ಧದಲ್ಲೂ ಪಾಟ್ನಾ ಪ್ರಾಬಲ್ಯ ಮುಂದುವರೆಸಿತು. ಮೂರನೇ ಕ್ವಾರ್ಟರ್​ನಲ್ಲೂ ಡೆಲ್ಲಿ ಹಿಂದುಳಿದಿತ್ತು. ಆದರೆ ಕೊನೆಯ 5 ನಿಮಿಷಗಳಲ್ಲಿ ಡೆಲ್ಲಿ ಬಲಿಷ್ಠವಾಗಿ ಪುನರಾಗಮನ ಮಾಡಿತು. ಹೀಗಾಗಿ ಪಂದ್ಯ 26-26ರಲ್ಲಿ ಸಮಬಲ ಸಾಧಿಸಿತು. ಆದರೆ ಅಂತಿಮವಾಗಿ ಪಾಟ್ನಾ 32-28 ಅಂಕಗಳಿಂದ ಗೆದ್ದು ಫೈನಲ್​ಗೆ ಅರ್ಹತೆ ಪಡೆಯಿತು. ಇದೀಗ ಡಿಸೆಂಬರ್​ 29ರಂದು ಭಾನುವಾರ ನಡೆಯುವ ಫೈನಲ್​ನಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಎದುರಿಸಲಿದೆ.

 

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.