ಆರ್ಸಿಬಿಯ ಕೊಹ್ಲಿಯಂತೆ ಪ್ರೊ ಕಬಡ್ಡಿ ಲೀಗ್ ಇತಿಹಾಸದಲ್ಲಿ ಈವರೆಗೆ ಪ್ರಶಸ್ತಿ ಗೆಲ್ಲದ 3 ದಿಗ್ಗಜ ಆಟಗಾರರು ಇವರೇ ನೋಡಿ
ಪ್ರೊ ಕಬಡ್ಡಿ ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಕೆಲವು ಆಟಗಾರರಿಗೆ ಒಮ್ಮೆಯೂ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಪಟ್ಟಿಯಲ್ಲಿರುವ ಮೂವರು ಲೆಜೆಂಡರಿ ಆಟಗಾರರು ಯಾರು ಎಂಬುದನ್ನು ನೋಡೋಣ. ಇವರಲ್ಲಿ ಒಬ್ಬರು ವಿದೇಶಿ ಆಟಗಾರ ಕೂಡಾ ಇದ್ದಾರೆ.
ಪ್ರೊ ಕಬಡ್ಡಿ ಲೀಗ್‌ನ ಇತಿಹಾಸದಲ್ಲಿ ನಾವು ಅನೇಕ ಶ್ರೇಷ್ಠ ಆಟಗಾರರನ್ನು ಕಂಡಿದ್ದೇವೆ. ಸದ್ಯ 11 ಸೀಸನ್ ಶುರುವಾಗುತ್ತಿದ್ದು, ಹೊಸ ಆಟಗಾರರು ಕೂಡ ಇದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಹಿಂದೆ ಅನೇಕ ಸೀಸನ್‌ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದರೂ ಕೆಲ ಆಟಗಾರರಿಗೆ ಒಮ್ಮೆಯೂ ಪಿಕೆಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಮೂವರು ದಿಗ್ಗಜ ಆಟಗಾರರ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ. ಅವರು ಅಮೋಘ ಪ್ರದರ್ಶನ ನೀಡಿದ್ದರೂ, ಒಮ್ಮೆಯೂ ಟ್ರೋಫಿ ಗೆದ್ದಿಲ್ಲ.
ಬಲಿಷ್ಠ ಆಟಗಾರರ ಕುರಿತು ನೋಡೋಣ…
ದೀಪಕ್ ನಿವಾಸ್ ಹೂಡಾ
ಅನುಭವಿ ಆಟಗಾರ ದೀಪಕ್ ನಿವಾಸ್ ಹೂಡಾ ಅವರು ಬೆಂಗಾಲ್ ವಾರಿಯರ್ಸ್ ಪರ ಆಡಿದ್ದ ಸೀಸನ್ 9 ರಲ್ಲಿ PKLನ ಕೊನೆಯ ಭಾಗವಾಗಿದ್ದರು. ಅಂದಿನಿಂದ, ಸತತ ಎರಡು ಸೀಸನ್‌ಗಳಲ್ಲಿ ಅವರನ್ನು ಯಾವುದೇ ತಂಡವು ಹರಾಜಿನಲ್ಲಿ ಖರೀದಿಸಿಲ್ಲ. ಪ್ರೊ ಕಬಡ್ಡಿ ಲೀಗ್ ಸೀಸನ್ 9ರಲ್ಲಿ ಬಂಗಾಳದ ಭಾಗವಾಗಿರುವುದರ ಜೊತೆಗೆ, ದೀಪಕ್ ಹೂಡಾ ತೆಲುಗು ಟೈಟಾನ್ಸ್ (ಸೀಸನ್ -1 ಮತ್ತು 2), ಪುಣೇರಿ ಪಲ್ಟನ್ (ಸೀಸನ್ -3, 4 ಮತ್ತು 5) ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ (ಸೀಸನ್ -6,7,8) ಪರ ಆಡಿದ್ದರು. ಆದಾಗ್ಯೂ, ಈ ಅವಧಿಯಲ್ಲಿ ಅವರು ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಲಿಲ್ಲ. ಈ ನಡುವೆ ದೀಪಕ್ ರಾಜಕೀಯಕ್ಕೆ ಕೂಡ ಬಂದಿದ್ದು, ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
2. ಸುರ್ಜೀತ್ ಸಿಂಗ್
ಪ್ರೊ ಕಬಡ್ಡಿ ಲೀಗ್ ಸೀಸನ್ 11ರಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ಪರ ಕಾಣಿಸಿಕೊಂಡ ಅನುಭವಿ ಕವರ್ ಡಿಫೆಂಡರ್ ಸುರ್ಜೀತ್ ಸಿಂಗ್ ಇಲ್ಲಿಯವರೆಗೆ ಒಂದೇ ಒಂದು ಪಿಕೆಎಲ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಸುರ್ಜಿತ್ ತಮ್ಮ ಪಿಕೆಎಲ್ ವೃತ್ತಿಜೀವನದಲ್ಲಿ ಪುಣೇರಿ ಪಲ್ಟನ್ (ಸೀಸನ್ 3), ಯು ಮುಂಬಾ (ಸೀಸನ್ 4), ಬೆಂಗಾಲ್ ವಾರಿಯರ್ಸ್ (ಸೀಸನ್ 5 ಮತ್ತು 6), ಪುಣೇರಿ ಪಲ್ಟನ್ (ಸೀಸನ್ -7), ತಮಿಳ್ ತಲೈವಾಸ್ (ಸೀಸನ್ -8), ತೆಲುಗು ಟೈಟಾನ್ಸ್ (ಸೀಸನ್- 9) ಪರ ಆಡಿದ್ದಾರೆ. ಅಲ್ಲದೆ ಬೆಂಗಳೂರು ಬುಲ್ಸ್ (ಸೀಸನ್-10) ತಂಡದ ಭಾಗವಾಗಿದ್ದಾರೆ. ಪಿಕೆಎಲ್ ಇತಿಹಾಸದಲ್ಲಿ ಒಟ್ಟು 6 ತಂಡಗಳಲ್ಲಿ ಆಡಿದ್ದರೂ ಸುರ್ಜೀತ್ ಸಿಂಗ್ ಒಂದು ಬಾರಿಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.
3. ಜಾಂಗ್ ಕುನ್ ಲೀ
ಪಿಕೆಎಲ್ 7ರ ನಂತರ, ಈಗ ಪ್ರೊ ಕಬಡ್ಡಿ ಲೀಗ್‌ನ 11ನೇ ಸೀಸನ್‌ನಲ್ಲಿ ಪುನರಾಗಮನ ಮಾಡಲಿರುವ ಕೊರಿಯಾದ ಸ್ಟಾರ್ ರೈಡರ್ ಜಾಂಗ್ ಕುನ್ ಲೀ ಮತ್ತೊಮ್ಮೆ ಪಾಟ್ನಾ ಪೈರೇಟ್ಸ್ ಪರ ಆಡಲಿದ್ದಾರೆ. ಪಿಕೆಎಲ್ ಇತಿಹಾಸದಲ್ಲಿ ಒಮ್ಮೆಯೂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗದ ದುರದೃಷ್ಟಕರ ದಂತಕಥೆ ಆಟಗಾರರಲ್ಲಿ ಜಾಂಗ್ ಕುನ್ ಲೀ ಅವರ ಹೆಸರೂ ಸೇರಿದೆ. ಜಂಗ್ ಕುನ್ ಲೀ ಅವರು ಸೀಸನ್ 1ರಲ್ಲಿ ಬೆಂಗಾಲ್ ವಾರಿಯರ್ಸ್‌ನೊಂದಿಗೆ ತಮ್ಮ PKL ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದರ ನಂತರ, ಅವರು ಸತತ 6 ಋತುಗಳವರೆಗೆ ಈ ಫ್ರಾಂಚೈಸಿಯ ಭಾಗವಾಗಿದ್ದರು. ಕುನ್ ಲೀ ಪಿಕೆಎಲ್ 7 ರಲ್ಲಿ ಪಾಟ್ನಾ ಪೈರೇಟ್ಸ್‌ಗಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದರು.
ವರದಿ: ವಿನಯ್ ಭಟ್.
ಇದನ್ನೂ ಓದಿ | PKL 11: ಪ್ರೊ ಕಬಡ್ಡಿ ಲೀಗ್‌ನ ಮೊದಲ ಆವೃತ್ತಿಯಲ್ಲಿ ನಾಯಕತ್ವ ವಹಿಸಿದ್ದ ಆಟಗಾರರು ಈಗ ಎಲ್ಲಿದ್ದಾರೆ?