Explainer: ಆಸ್ಟ್ರೇಲಿಯಾ ವಿರುದ್ಧ ಸೋತರೂ ಏಷ್ಯನ್ ಕಪ್ ನಾಕೌಟ್ ಹಂತಕ್ಕೆ ಭಾರತ ಅರ್ಹತೆ ಪಡೆಯಬಹುದು; ಹೇಗೆಂದರೆ
AFC Asian Cup 2023: ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲತ ನಂತರವೂ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುವ ಅವಕಾಶ ಭಾರತಕ್ಕಿದೆ. ಸದ್ಯ ಮುಂದೆ ಭಾರತವು ಬಿ ಗುಂಪಿನ ಉಳಿದ ಪಂದ್ಯದಲ್ಲಿ ಉಜ್ಬೇಕಿಸ್ತಾನ್ ಮತ್ತು ಸಿರಿಯಾ ವಿರುದ್ಧ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ.
ಎಎಫ್‌ಸಿ ಏಷ್ಯನ್ ಕಪ್ 2023ರಲ್ಲಿ (AFC Asian Cup) ಭಾರತ ಫುಟ್ಬಾಲ್ ತಂಡವು ಸೋಲಿನ ಆರಂಭ ಪಡೆದಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 2-0 ಅಂತರದಿಂದ ಮುಗ್ಗರಿಸಿದ ಸುನಿಲ್ ಛೆಟ್ರಿ ಬಳಗವು ಅಭಿಯಾನವನ್ನು ಸೋಲಿನೊಂದಿಗೆ ಆರಂಭಿಸಿತು.
ಜನವರಿ 12ರ ಶನಿವಾರ ಸಂಜೆ ಕತಾರ್‌ನಲ್ಲಿ ನಡೆದ ಪಂದ್ಯವು ರೋಚಕವಾಗಿ ಸಾಗಿತು. ಮೊದಲಾರ್ಧದಲ್ಲಿ ಉಭಯ ತಂಡಗಳು ಕೂಡಾ ಗೋಲು ಗಳಿಸುವಲ್ಲಿ ವಿಫಲವಾದವು. ಆಸ್ಟ್ರೇಲಿಯಾ ದಾಳಿಯನ್ನು ವಿಫಲಗೊಳಿಸಿದ ಭಾರತವು ರಕ್ಷಣಾತ್ಮಕ ಆಟವಾಡಿತು. ಬಲಿಷ್ಠರ ವಿರುದ್ಧ ಗಾಂಭೀರ್ಯದ ಪ್ರದರ್ಶನದ ಹೊರತಾಗಿಯೂ ದ್ವಿತಿಯಾರ್ಧದಲ್ಲಿ ಕಾಂಗರೂಗಳ ಗೋಲನ್ನು ತಡೆಯಲು ಛೆಟ್ರಿ ಪಡೆಯಿಂದ ಸಾಧ್ಯವಾಗಲಿಲ್ಲ.
ಕತಾರ್ ದೇಶದಲ್ಲಿ ಭಾರತ ತಂಡದ ಅಭಿಮಾನಿಗಳ ಸಂಖ್ಯೆ ದುಪ್ಪಟ್ಟಿದ್ದರೂ ಭಾರತೀಯ ಫುಟ್ಬಾಲ್ ತಂಡಕ್ಕೆ ಗೆಲುವು ಎದುರಾಗಲಿಲ್ಲ. ಆದರೂ, ಪಂದ್ಯದುದ್ದಕ್ಕೂ ಛೆಟ್ರಿ ಬಳಗವನ್ನು ಅಭಿಮಾನಿಗಳು ಹುರಿದುಂಬಿಸಿದರು.
ಸೋತರೂ ನಕೌಟ್ ಹಂತಕ್ಕೆ ತಲುಪಬಹುದು ಭಾರತ
ಮೊದಲ ಪಂದ್ಯದಲ್ಲಿ ಬ್ಲೂ ಟೈಗರ್ಸ್ ಸೋಲಿನ ನಂತರವೂ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುವ ದೊಡ್ಡ ಅವಕಾಶ ಹೊಂದಿದೆ. ಸದ್ಯ ಮುಂದೆ ಭಾರತವು ಬಿ ಗುಂಪಿನ ಉಳಿದ ಪಂದ್ಯದಲ್ಲಿ ಉಜ್ಬೇಕಿಸ್ತಾನ್ ಮತ್ತು ಸಿರಿಯಾ ವಿರುದ್ಧ ಎರಡು ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಒಂದು ವೇಳೆ ಭಾರತವು ಈ ಎರಡೂ ಪಂದ್ಯಗಳನ್ನು ಭರ್ಜರಿಯಾಗಿ ಗೆಲ್ಲುವಲ್ಲಿ ಯಶಸ್ವಿಯಾದರೆ, ತಂಡವು 3 ಪಂದ್ಯಗಳಿಂದ 6 ಅಂಕ ಕಲೆ ಹಾಕಿದಂತಾಗುತ್ತದೆ. ಆಗ ಛೆಟ್ರಿ ಪಡೆ ಗುಂಪಿನಲ್ಲಿ ಮೊದಲ ಅಥವಾ ಎರಡನೆಯ ಸ್ಥಾನ ಪಡೆಯುವ ಅವಕಾಶ ಪಡೆಯುತ್ತದೆ. ಆಗ ತಂಡವು ಸ್ವಯಂಚಾಲಿತವಾಗಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯುತ್ತದೆ.
ಇದನ್ನೂ ಓದಿ | ಏಷ್ಯನ್ ಕಪ್ 2023: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಛೆಟ್ರಿ ಪಡೆ; ಭಾರತ ವಿರುದ್ಧ ಆಸ್ಟ್ರೇಲಿಯಾಗೆ ಗೆಲುವು
ಒಂದು ವೇಳೆ ಭಾರತವು ಒಂದು ಪಂದ್ಯದಲ್ಲಿ ಗೆದ್ದು ಇನ್ನೊಂದರಲ್ಲಿ ಸೋತರೂ, ತಂಡಕ್ಕೆ ಮೂರು ಅಂಕಗಳು ಸಿಗುತ್ತವೆ. ಆಗ ಗುಂಪಿನ ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಿ ಭಾರತದ ಭವಿಷ್ಯ ನಿರ್ಧಾರವಾಗುತ್ತದೆ. ಒಂದು ವೇಳೆ ಭಾರತವು ಕನಿಷ್ಠ ಎರಡನೇ ಸ್ಥಾನ ಪಡೆದರೆ, ಮುಂದಿನ ಹಂತ ಪ್ರವೇಶಿಸುವುದು ಖಚಿತವಾಗುತ್ತದೆ.
ಒಂದು ವೇಳೆ ಮುಂದಿನ ಎರಡು ಪಂದ್ಯಗಳಿಂದ ಒಂದು ಅಥವಾ ಎರಡು ಅಂಕಗಳನ್ನು ಗಳಿಸಲು ಸಾಧ್ಯವಾದರೂ ಸಹ, ಇತರ ತಂಡಗಳ ಫಲಿತಾಂಶಗಳನ್ನು ಅವಲಂಬಿಸಿ ತಂಡವು ಮೂರನೇ ಸ್ಥಾನ ಪಡೆಯುವ ಅವಕಾಶ ಹೊಂದಿರುತ್ತದೆ. ತಂಡದ ಗೋಲು ವ್ಯತ್ಯಾಸವು ನಾಲ್ಕನೇ ಸ್ಥಾನದಲ್ಲಿರುವ ತಂಡಕ್ಕಿಂತ ಮೇಲಿರುವಂತೆ ತಂಡ ನೋಡಿಕೊಳ್ಳಬೇಕು. ಇಂಥಾ ಸಂದರ್ಭದಲ್ಲಿ ಮೂರನೇ ಸ್ಥಾನ ಪಡೆದರೂ ನಾಕೌಟ್‌ಗೆ ಅರ್ಹತೆ ಪಡೆಯುವ ಅವಕಾಶವಿದೆ.
ಇದನ್ನೂ ಓದಿ | ಮಲೇಷ್ಯಾ ಓಪನ್ ಫೈನಲ್ ಪ್ರವೇಶಿಸಿದ ಸಾತ್ವಿಕ್-ಚಿರಾಗ್; 2ನೇ ಸೂಪರ್ 1000 ಪ್ರಶಸ್ತಿಗೆ ಒಂದೇ ಹೆಜ್ಜೆ
ನಿಯಮ ಏನು ಹೇಳುತ್ತದೆ?
AFC ಏಷ್ಯನ್ ಕಪ್ 2023ರ ನಿಯಮಗಳ ಪ್ರಕಾರ, ಎಲ್ಲಾ ಆರು ಗುಂಪುಗಳ ಅಗ್ರ ಎರಡು ತಂಡಗಳು ನೇರವಾಗಿ ಸ್ಪರ್ಧೆಯ 16ರ ಸುತ್ತಿಗೆ ಅರ್ಹತೆ ಪಡೆಯುತ್ತವೆ. ಈ 12 ತಂಡಗಳ ಜೊತೆಗೆ, ಎಲ್ಲಾ ಆರು ಗುಂಪುಗಳಲ್ಲಿ ಮೂರನೇ ಸ್ಥಾನ ಪಡೆದ ಅಗ್ರ ನಾಲ್ಕು ತಂಡಗಳು 16ರ ಅಂತಿಮ ಸುತ್ತಿನಲ್ಲಿ ಅಂತಿಮ ನಾಲ್ಕು ಸ್ಥಾನಗಳನ್ನು ಪಡೆಯಲಿವೆ. ಹೀಗಾಗಿ, ಭಾರತವು ಕನಿಷ್ಠ ಮೂರನೇ ಸ್ಥಾನವನ್ನು ಗಳಿಸುವುದನ್ನು ಖಚಿತಪಡಿಸಿಕೊಂಡರೆ 16ರ ಸುತ್ತಿಗೆ ಅರ್ಹತೆ ಪಡೆಯಬಹುದು.