ಟಿ20 ಇತಿಹಾಸದಲ್ಲಿ ಅತ್ಯಧಿಕ ಮೊತ್ತ, ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್; ಇದು ಬರೋಡಾ ತಂಡ ನಡೆಸಿದ ದಾಖಲೆಗಳ ದಂಡಯಾತ್ರೆ
SMAT 2024: ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2024ಲ್ಲಿ ಇಂದೋರ್ನಲ್ಲಿ ನಡೆದ ಸಿಕ್ಕಿಂ ವಿರುದ್ಧದ ಪಂದ್ಯದಲ್ಲಿ ಬರೋಡಾ 349 ರನ್ ಗಳಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿದೆ. ಇದೊಂದೆ ಅಲ್ಲ, ಹಲವು ವಿಶ್ವದಾಖಲೆಗಳು ಪುಡಿಯಾಗಿವೆ.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2024ಲ್ಲಿ ಬರೋಡಾ ತಂಡ ವಿಶ್ವದಾಖಲೆ ನಿರ್ಮಿಸಿದೆ. ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ 349 ರನ್ ರನ್ ಗಳಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತ ಗಳಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ವರ್ಷ ಅಕ್ಟೋಬರ್ 23ರಂದು ಗ್ಯಾಂಬಿಯಾ ವಿರುದ್ಧ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 344 ರನ್ ಗಳಿಸಿ ಜಿಂಬಾಬ್ವೆ ಸೃಷ್ಟಿಸಿದ್ದ ದಾಖಲೆಯನ್ನು ಬರೋಡಾ ತಂಡವು ಪುಡಿಗಟ್ಟಿದೆ. ಇಂದೋರ್ನ ಎಮರಾಲ್ಡ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಿಕ್ಕಿಂ ತಂಡದ ವಿರುದ್ಧ ಬರೋಡಾದ ಅಗ್ರ ಕ್ರಮಾಂಕದ ಬ್ಯಾಟರ್ಗಳು ದಂಡಯಾತ್ರೆ ನಡೆಸಿದ ಕಾರಣ ಈ ನೂತನ ವಿಶ್ವದಾಖಲೆ ನಿರ್ಮಿಸಲು ಸಾಧ್ಯವಾಯಿತು.
ಬರೋಡಾ ಬ್ಯಾಟರ್ಸ್ ಅಬ್ಬರ
ಮೊದಲು ಬ್ಯಾಟಿಂಗ್ ನಡೆಸಿದ ಬರೋಡಾ, ಭರ್ಜರಿ ಆರಂಭ ಪಡೆಯಿತು. ಟಾಪ್-5 ಬ್ಯಾಟರ್ಗಳ ಪೈಕಿ ಮೂವರು ಅರ್ಧಶತಕ, ಒಬ್ಬರು ಶತಕ, ಮತ್ತೊಬ್ಬರು 40+ ಸ್ಕೋರ್ ಮಾಡಿದ್ದಾರೆ. ಶಶ್ವಾಂತ್ ರಾವತ್ 16 ಎಸೆತಗಳಲ್ಲಿ 43 ರನ್, ಅಭಿಮನ್ಯು ಸಿಂಗ್ 17 ಎಸೆತಗಳಲ್ಲಿ 53 ರನ್, ಶಿವಾಲಿಕ್ ಶರ್ಮಾ 17 ಎಸೆತಗಳಲ್ಲಿ 53 ರನ್, ವಿ ಸೋಲಂಕಿ 16 ಎಸೆತಗಳಲ್ಲಿ 50 ರನ್ ಸಿಡಿಸಿದರೆ, ಭಾನು ಪನಿಯಾ ಅವರು ಕೇವಲ 51 ಎಸೆತಗಳಲ್ಲಿ 134 ರನ್ ಗಳಿಸಿ ಔಟಾಗದೆ ಉಳಿದರು. ಅವರ ಇನ್ನಿಂಗ್ಸ್ನಲ್ಲಿ 15 ಸಿಕ್ಸರ್ಗಳಿವೆ. ಇನ್ನಿಂಗ್ಸ್ನಲ್ಲಿ 18 ಬೌಂಡರಿ, 37 ಸಿಕ್ಸರ್ ಸಿಡಿಸಿದರು. ಇವರೆಲ್ಲರ ಆರ್ಭಟದಿಂದ ಬೃಹತ್ ಮೊತ್ತವನ್ನು ದಾಖಲಿಸಲು ನೆರವಾಯಿತು. ಈ ಐವರ ಪೈಕಿ ಮೂವರೂ 300 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನಲ್ಲಿ ರನ್ ಗಳಿಸಿದ್ದರು. ಬರೋಡಾ ಪವರ್ ಪ್ಲೇನಲ್ಲಿ 100, 11ನೇ ಓವರ್ ನಲ್ಲಿ 200 ಹಾಗೂ 18ನೇ ಓವರ್ನಲ್ಲಿ 300 ರನ್ ಗಳಿಸಿತು.
ವಿಶ್ವದ ಮೂರನೇ ತಂಡ ಬರೋಡಾ
ಹಾರ್ದಿಕ್ ಪಾಂಡ್ಯ ಈ ಪಂದ್ಯವನ್ನು ಆಡದಿದ್ದರೂ, ಕೃನಾಲ್ ಪಾಂಡ್ಯ ಬ್ಯಾಟಿಂಗ್ ಮಾಡಲು ಬರದಿದ್ದರೂ, ಬರೋಡಾ ಆಟಗಾರರು ಇಂದೋರ್ನಲ್ಲಿ ಹಲವು ದಾಖಲೆ ನಿರ್ಮಾಣ ಮಾಡಿತು. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇನ್ನಿಂಗ್ಸ್ವೊಂದರಲ್ಲಿ 300+ ರನ್ ಗಡಿ ದಾಟಿದ ಮೂರನೇ ತಂಡ ಹೆಬ್ಬಳಿಕೆಗೆ ಪಾತ್ರವಾಯಿತು. ಬರೋಡಾಗಿಂತ ಮೊದಲು ಜಿಂಬಾಬ್ವೆ ಮತ್ತು ನೇಪಾಳ ತಂಡಗಳು ಈ ಸಾಧನೆ ಮಾಡಿದ್ದವು. ಆದರೆ ಟಿ20 ಇನ್ನಿಂಗ್ಸ್ನಲ್ಲಿ 350 ರನ್ ಗಳಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಒಂದು ರನ್ನಿಂದ ವಿಫಲವಾಯಿತು.
ಈ ವರ್ಷದಲ್ಲಿ ಹೈದರಾಬಾದ್ನಲ್ಲಿ ಬಾಂಗ್ಲಾದೇಶದ ವಿರುದ್ಧ 297 ರನ್ ಗಳಿಸಿದ್ದ ಭಾರತ ತಂಡದ ದಾಖಲೆಯನ್ನೂ ಧ್ವಂಸ ಮಾಡಿದೆ. 297 ರನ್ಗಳೊಂದಿಗೆ ಭಾರತ ನೆಲದಲ್ಲಿ ಅತ್ಯಧಿಕ ರನ್ ಗಳಿಸಿದ ಟೀಮ್ ಇಂಡಿಯಾದ ದಾಖಲೆಯನ್ನು ಬರೋಡಾ ಮುರಿದಿದೆ. ಬರೋಡಾ ಒಂದು ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ಸಿಕ್ಸರ್ಗಳನ್ನು ಸಿಡಿಸಿದ ದಾಖಲೆ ಹೊಂದಿದೆ. ಒಟ್ಟು 37 ಸಿಕ್ಸರ್ ಬಾರಿಸಿದೆ ಅಂದರೆ ಪ್ರತಿ ಮೂರು ಎಸೆತಗಳಿಗೆ ಸುಮಾರು ಒಂದು ಸಿಕ್ಸರ್ ಎಂದರ್ಥ. ವಿಶ್ವದಲ್ಲಿ ಯಾವುದೇ ತಂಡವು ಈ ದಾಖಲೆ ಬರೆದಿಲ್ಲ ಎಂಬುದು ವಿಶೇಷ.