ಕನ್ನಡ ಸುದ್ದಿ  /  Sports  /  Hitman Rohit Sharma Creates World Record Of Most Sixes In T20i Cricket

IND vs AUS: ಟಿ20ಯಲ್ಲಿ ವಿಶ್ವ ದಾಖಲೆ ಬರೆದ ಹಿಟ್‌ಮ್ಯಾನ್!‌; ರೋಹಿತ್‌ ಹೆಸರಲ್ಲಿ ಹೊಸ ರೆಕಾರ್ಡ್...‌

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಈವರೆಗೂ ಯಾರೂ ಮಾಡದ ಹೊಸ ರೆಕಾರ್ಡ್‌ ತಮ್ಮ ಹೆಸರಲ್ಲಿ ಬರೆದುಕೊಂಡಿದ್ದಾರೆ.

ಟಿ20ಯಲ್ಲಿ ವಿಶ್ವ ದಾಖಲೆ ಬರೆದ ಹಿಟ್‌ಮ್ಯಾನ್!‌; ರೋಹಿತ್‌ ಹೆಸರಲ್ಲಿ ಹೊಸ ರೆಕಾರ್ಡ್...‌
ಟಿ20ಯಲ್ಲಿ ವಿಶ್ವ ದಾಖಲೆ ಬರೆದ ಹಿಟ್‌ಮ್ಯಾನ್!‌; ರೋಹಿತ್‌ ಹೆಸರಲ್ಲಿ ಹೊಸ ರೆಕಾರ್ಡ್...‌ (Twitter/ BCCI)

ನಾಗ್ಪುರ: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಈವರೆಗೂ ಯಾರೂ ಮಾಡದ ಹೊಸ ರೆಕಾರ್ಡ್‌ ತಮ್ಮ ಹೆಸರಲ್ಲಿ ಬರೆದುಕೊಂಡಿದ್ದಾರೆ. ಟಿ20ಯಲ್ಲಿ ಅತೀ ಹೆಚ್ಚು ಸಿಕ್ಸರ್‌ ಸಿಡಿಸಿದ ಆಟಗಾರರ ಪೈಕಿ ಮೊದಲ ಸ್ಥಾನ ಅಲಂಕರಿಸಿದ್ದಾರೆ!

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ನಾಗ್ಪುರದಲ್ಲಿ ಶುಕ್ರವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಮೊದಲ ಓವರ್‌ನಲ್ಲಿಯೇ ಸಿಕ್ಸರ್‌ ಸಿಡಿಸುವ ಮೂಲಕ ಟಿ20ಯಲ್ಲಿ ಮಾರ್ಟಿನ್‌ ಗುಪ್ಟಿಲ್‌ ಹೆಸರಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ.

ಈವರೆಗೂ ನ್ಯೂಜಿಲೆಂಡ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಮಾರ್ಟಿನ್ ಗುಪ್ಟಿಲ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದರು. ಗುಪ್ಟಿಲ್ ಇದುವರೆಗೆ ಟಿ20 ಕ್ರಿಕೆಟ್‌ನಲ್ಲಿ 172 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದೀಗ ಅವರನ್ನು ಹಿಂದಿಕ್ಕಿದ ರೋಹಿತ್‌ 173 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನಕ್ಕೆ ಬಡ್ತಿಪಡೆದಿದ್ದಾರೆ. ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ 124 ಸಿಕ್ಸ್‌ ಸಿಡಿಸಿ ಮೂರನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್‌ನ ಮಾಜಿ ನಾಯಕ ಇಯಾನ್ ಮಾರ್ಗನ್ (120) ನಾಲ್ಕನೇ ಮತ್ತು ಆಸ್ಟ್ರೇಲಿಯಾದ ನಾಯಕ ಆರೋನ್ ಫಿಂಚ್ (118) ಐದನೇ ಸ್ಥಾನದಲ್ಲಿದ್ದಾರೆ.

ಟಿ20ಯಲ್ಲಿ ಅತ್ಯಧಿಕ ರನ್‌ ಸರದಾರ..

ಸಿಕ್ಸ್‌ ವಿಚಾರದ ಜತೆಗೆ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ರೋಹಿತ್ ಶರ್ಮಾ ರಾಜ! ಅಂದರೆ, T20I ಕ್ರಿಕೆಟ್‌ನಲ್ಲಿ 3600 ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಏಕೈಕ ಆಟಗಾರ. ವಿರಾಟ್ ಕೊಹ್ಲಿ ಇಲ್ಲಿಯವರೆಗೆ 3586 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ 3497 ರನ್‌ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಭಾರತಕ್ಕೆ ರೋಚಕ ಗೆಲುವು..

ಎಂಟು ಓವರ್‌ಗಳಿಗೆ ಸೀಮಿತಗೊಂಡ ಎರಡನೇ ಟಿ20 ಪಂದ್ಯದಲ್ಲಿ, ಆಸ್ಟ್ರೇಲಿಯಾ ವಿರುದ್ಧ ಭಾರತ ರೋಚಕ ಗೆಲುವ ಸಾಧಿಸಿದೆ. ನಾಯಕ ರೋಹಿತ್ ಶರ್ಮಾ ಅಜೇಯ 46 ರನ್‌ ಗಳಿಸಿ ಭಾರತದ ಗೆಲುವಿನಲ್ಲಿನ ಪ್ರಮುಖ ಪಾತ್ರ ವಹಿಸಿದರು. ಭಾಗಶಃ ಮಳೆ ವಶಪಡಿಸಿಕೊಂಡಿದ್ದ ಪಂದ್ಯವನ್ನು ಅಂತಿಮವಾಗಿ ಭಾರತ ವಶಪಡಿಸಿಕೊಂಡಿತು. ಟೀಂ ಇಂಡಿಯಾ ಆರು ವಿಕೆಟ್‌ಗಳ ಜಯ ಸಾಧಿಸಿತು. ಹೀಗಾಗಿ ಪಂದ್ಯಕ್ಕಾಗಿ ಸಾಕಷ್ಟು ಹೊತ್ತು ಕಾದಿದ್ದ ನಾಗ್ಪುರದ ಅಭಿಮಾನಿಗಳಿಗೆ ಭಾರತ ಸಿಹಿ ಸುದ್ದಿ ಕೊಟ್ಟಿತು.

ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಭರ್ಜರಿ ನಾಲ್ಕು ಸಿಕ್ಸರ್‌ಗಳು ಮತ್ತು ಬೌಂಡರಿಗಳನ್ನು ಸಿಡಿಸಿದರು. ಆರಂಭಿಕನಾಗಿ ಬಂದು ಅಜೇಯರಾಗಿ ಉಳಿದ ಕ್ಯಾಪ್ಟನ್‌, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮ ಓವರ್‌ ವೇಳೆ ಬಂದ ಮ್ಯಾಚ್‌ ಫಿನಿಷರ್‌ ದಿನೇಶ್‌ ಕಾರ್ತಿಕ್‌ ಸತತ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ ಮತ್ತೊಂದು ಬೌಂಡರಿ ಸಿಡಿಸಿ ಗೆಲುವು ತಮ್ಮದಾಗಿಸಿಕೊಂಡರು. ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ತಂಡ ಗೆಲುವಿನ ನಗೆ ಬೀರಿತು.

ನಾಗ್ಪುರದಲ್ಲಿ ಮಳೆಯಿಂದಾಗಿ ಕ್ರೀಡಾಂಗಣ ಪೂರ್ತಿ ಒದ್ದೆಯಾಗಿತ್ತು. ಹೀಗಾಗಿ 7 ಗಂಟೆಗೆ ಆರಂಭವಾಗಬೇಕಿದ್ದ ಪಂದ್ಯ ಎರಡೂವರೆ ಗಂಟೆ ತಡವಾಗಿ ಆರಂಭವಾಯ್ತು. ಸತತ ಮೂರು ಬಾರಿ ಪಿಚ್ ಮತ್ತು ಮೈದಾನವನ್ನು ಪರಿಶೀಲಿಸಲಾಯಿತು. ಕೊನೆಗೂ ಮೂರನೇ ಬಾರಿಗೆ ಫೀಲ್ಡ್ ಅಂಪೈರ್‌ಗಳಾದ ನಿತಿನ್ ಮೆನನ್ ಮತ್ತು ಆನಂದ್ ಪಡ್ನಾಭನ್ 8 ಓವರ್‌ಗಳ ಪಂದ್ಯ ನಡೆಸಲು ತೀರ್ಮಾನಿಸಿದರು. ಅದರಂತೆ 9.15ಕ್ಕೆ ಟಾಸ್‌ ನಡೆದು, 9.30ಕ್ಕೆ ಪಂದ್ಯ ಆರಂಭವಾಯ್ತು. ಟಾಸ್‌ ಗೆದ್ದ ಭಾರತ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.