Hockey: ಸಖತ್ ಆಟ; ಈವರೆಗೆ ಒಂದ್‌ ಲೆಕ್ಕ ಇನ್ಮುಂದೆ ಒಂದ್‌ ಲೆಕ್ಕ; ಹಾಕಿಯಲ್ಲಿ ಯಶಸ್ಸಿನ ಸುವರ್ಣಯುಗದತ್ತ ಭಾರತದ ಆತ್ಮವಿಶ್ವಾಸದ ಹೆಜ್ಜೆಗಳು
ಕನ್ನಡ ಸುದ್ದಿ  /  ಕ್ರೀಡೆ  /  Hockey: ಸಖತ್ ಆಟ; ಈವರೆಗೆ ಒಂದ್‌ ಲೆಕ್ಕ ಇನ್ಮುಂದೆ ಒಂದ್‌ ಲೆಕ್ಕ; ಹಾಕಿಯಲ್ಲಿ ಯಶಸ್ಸಿನ ಸುವರ್ಣಯುಗದತ್ತ ಭಾರತದ ಆತ್ಮವಿಶ್ವಾಸದ ಹೆಜ್ಜೆಗಳು

Hockey: ಸಖತ್ ಆಟ; ಈವರೆಗೆ ಒಂದ್‌ ಲೆಕ್ಕ ಇನ್ಮುಂದೆ ಒಂದ್‌ ಲೆಕ್ಕ; ಹಾಕಿಯಲ್ಲಿ ಯಶಸ್ಸಿನ ಸುವರ್ಣಯುಗದತ್ತ ಭಾರತದ ಆತ್ಮವಿಶ್ವಾಸದ ಹೆಜ್ಜೆಗಳು

ಕ್ರೀಡೆ ಎಂದರೆ ಒಂದು ಸೊಗಸಾದ ಕಾವ್ಯ. ಒಂದು ಚೆಲುವಾದ ಸಾಹಿತ್ಯ. ರಂಗುರಂಗಿನ ಆಟದ ಲೋಕದಲ್ಲಿ ಒಂದಷ್ಟು ಕೌತುಕಗಳೂ, ಕಥೆಗಳೂ ಇವೆ. ಮೈದಾನದ ಒಳಗೆ, ಹೊರಗೆ ಆಟ ಮತ್ತು ಆಟಗಾರರ ಏಳು-ಬೀಳುಗಳ ಗುಚ್ಛವೇ ಈ ‘ಸಖತ್ ಆಟ’. ಇನ್ಮುಂದೆ ಈ ಅಂಕಣ ಪ್ರತಿ ಭಾನುವಾರ ನಿಮ್ಮೊಂದಿಗೆ.

ಹಾಕಿಯಲ್ಲಿ ಯಶಸ್ಸಿನ ಸುವರ್ಣಯುಗದತ್ತ ಭಾರತದ ಆತ್ಮವಿಶ್ವಾಸದ ಹೆಜ್ಜೆಗಳು
ಹಾಕಿಯಲ್ಲಿ ಯಶಸ್ಸಿನ ಸುವರ್ಣಯುಗದತ್ತ ಭಾರತದ ಆತ್ಮವಿಶ್ವಾಸದ ಹೆಜ್ಜೆಗಳು

1928, 1932, 1936, 1948, 1952, 1956, 1964 ಮತ್ತು 1980 - ಈ ವರ್ಷಗಳು ನೆನಪಿದ್ಯಾ? ಭಾರತದ ಹಾಕಿ ಬಂಗಾರದ ಫಸಲು ತೆಗೆದ ವರ್ಷಗಳು! ಒಂದಲ್ಲ, ಎರಡಲ್ಲ, ಒಲಿಂಪಿಕ್ಸ್​​​ ಇತಿಹಾಸದಲ್ಲಿ ಸತತ 8 ಬಾರಿ ಫೈನಲ್​​ ಪ್ರವೇಶಿಸಿದ ಏಕೈಕ ತಂಡ ಎಂಬ ಹೆಗ್ಗಳಿಕೆ ನಮ್ಮದು. 1956 ಮತ್ತು 1964ರ ಮಧ್ಯೆ ನಡೆದ 1960ರ ಒಲಿಂಪಿಕ್​​ ಫೈನಲ್​ನಲ್ಲೂ ಭಾರತ ಹಾಕಿ ತಂಡವು ಶರಣಾಗಿ ಪದಕದ ಬಣ್ಣವನ್ನು ಬದಲಿಸಿತ್ತು!

8 ಚಿನ್ನದ ಪದಕ, 1 ಬೆಳ್ಳಿ, 3 ಕಂಚು- ಒಲಿಂಪಿಕ್ಸ್​​ ಇತಿಹಾಸದಲ್ಲಿ ಭಾರತ ಹಾಕಿ ತಂಡದ ಸಾಧನೆ ಇದು. ಜಗತ್ತಿನ ಯಾವ ತಂಡವೂ ಇದುವರೆಗೂ ಒಲಿಂಪಿಕ್ಸ್​​​ನಲ್ಲಿ 8 ಸ್ವರ್ಣದ ಪದಗಳಿಗೆ ಮುತ್ತಿಕ್ಕಿಲ್ಲ ಎಂಬುದು ವಿಶೇಷ. ಭಾರತದ ಹತ್ತಿರಕ್ಕೂ ಯಾವ ದೇಶ ಸುಳಿದಿಲ್ಲ ಎನ್ನುವುದು ಮತ್ತೊಂದು ಹೆಗ್ಗಳಿಕೆ. ಅಂದು ಭಾರತವನ್ನು ಸುವರ್ಣ ಯುಗ ಎನ್ನುತ್ತಿದ್ದರು. ಆದರೆ ಭಾರತ ಹಾಕಿ ಸರಿಯಾಗಿ 43 ವರ್ಷವಾಗಿದೆ ಚಿನ್ನದ ಬಣ್ಣ ಕಾಣದೆ!

ಕ್ರಿಕೆಟ್ ಎಂಬುದು​ ನೆಪವಷ್ಟೆ

1980ರ ಬಳಿಕ ಹಾಕಿ ತಂಡದ ಬಲ ಕ್ರಮೇಣ ಕ್ಷೀಣಿಸಿತು. ಸದ್ಯ ಸುವರ್ಣ ಯುಗವನ್ನು ಮರಳಿ ಪಡೆಯಲು 43 ವರ್ಷಗಳಿಂದ ಸತತ ಹೋರಾಟ ನಡೆಸುತ್ತಿದೆ. ಭಾರತ ಹಾಕಿ ತಂಡ. ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ ಇತಿಹಾಸ ಇವತ್ತು ನಿನ್ನೆಯದಲ್ಲ. ಹಲವು ಇತಿಹಾಸಗಳಲ್ಲಿ ಹಾಕಿಯ ಉಲ್ಲೇಖವನ್ನು ಗಮನಿಸಬಹುದು. 1983ರಲ್ಲಿ ಭಾರತ ಏಕದಿನ ಕ್ರಿಕೆಟ್ ವಿಶ್ವಕಪ್​​ ಗೆದ್ದಿದ್ದೇ ಗೆದ್ದಿದ್ದು, ಹಾಕಿ ಸಂಪೂರ್ಣ ಮರೆಯಾಯಿತು.

ಹಾಕಿ ಬದಿಗೆ ಸರಿಯಲು ಕ್ರಿಕೆಟ್​​ ಎಂಬುದು ಎಷ್ಟೋ ಮಂದಿಯ ನೆಪ ಅಷ್ಟೇ. ರಾಷ್ಟ್ರೀಯ ಕ್ರೀಡೆ ಹಾಕಿಯಾದರೂ, ಬೆಳೆದಿದ್ದು ಮಾತ್ರ ಕ್ರಿಕೆಟ್​. ಇದೆಲ್ಲಾ ಬಿಡಿ. ಮತ್ತೆ ಹಾಕಿಯತ್ತ ವಾಲೋಣ. ಈವರೆಗೆ ಒಂದ್‌ ಲೆಕ್ಕ ಇನ್ಮುಂದೆ ಒಂದ್‌ ಲೆಕ್ಕ ಎನ್ನುವಂತೆ, ಹಾಕಿ ಆಟದಲ್ಲೂ ಇದೇ ಆಗುತ್ತಿದೆ. ಈಚೆಗೆ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಭಾರತ ಹಾಕಿ ಅತ್ಯುತ್ತಮ ಸಾಮರ್ಥ್ಯವನ್ನೇ ತೋರುವ ಮೂಲಕ ಹೊಸ ಶಕೆ ಆರಂಭಿಸಿದೆ.

1980ರ ನಂತರ ಲೀಗ್​​​​​​, ಪ್ರೀಕ್ವಾರ್ಟರ್​​ ಫೈನಲ್​​ಗೆ ಸುಸ್ತಾಗುತ್ತಿದ್ದ ಭಾರತ, 2022ರಿಂದ ಯಶಸ್ಸಿನ ಹೊಸ ದಿಕ್ಕುಗಳತ್ತ ಹೆಜ್ಜೆಗಳನ್ನು ಇಡತೊಡಗಿದೆ. ಬಲಾಢ್ಯ ತಂಡಗಳನ್ನು ಸೋಲಿಸುತ್ತಿರುವುದೇ ಇದಕ್ಕೆ ಪ್ರಮುಖ ಸಾಕ್ಷಿ. ಇಷ್ಟು ವರ್ಷ ಲೀಗ್​​, ಪ್ರೀಕ್ವಾರ್ಟರ್​​ನಲ್ಲೇ ಮನೆಗೆ ಮರಳುತ್ತಿದ್ದ ತಂಡ ಕಳೆದಿಂದ ಭಿನ್ನ, ವಿಭಿನ್ನ ತಂತ್ರಗಳೊಂದಿಗೆ ಗಮನ ಸೆಳೆಯುತ್ತಿರುವುದು ವಿಶೇಷ. ಅಗ್ರಮಾನ್ಯ ತಂಡಗಳಿಗೇ ಚಳ್ಳೆಹಣ್ಣು ತಿನಿಸುತ್ತಿದೆ.

ಹಾಕಿಯ ಆತ್ಮವಿಶ್ವಾಸದ ಹೆಜ್ಜೆಗಳು

ಒಲಿಂಪಿಕ್ಸ್​​ನಲ್ಲಿ 8 ಚಿನ್ನ ಗೆದ್ದಿರುವ ಭಾರತ, ಕಾಮನ್​ವೆಲ್ತ್​​ನಲ್ಲಿ ಮಾತ್ರ ಬೆಳ್ಳಿ ಪದಕಕ್ಕೇ ಫುಲ್​ಸ್ಟಾಪ್​ ಇಟ್ಟಿದೆ. 2022ರ ಕಾಮನ್​ವೆಲ್ತ್​ ಕ್ರೀಡಾಕೂಟದ​​ ಬಳಿಕ ಭಾರತದ ಹಾಕಿ ಚಿತ್ರಣ ಬದಲಾಗುತ್ತಿದೆ. ಮತ್ತೆ ಯಶಸ್ಸಿನತ್ತ ಹೊಸ ಹೆಜ್ಜೆ ಹಾಕುತ್ತಿದೆ. ಕಾಮನ್​ವೆಲ್ತ್​​​ ಗೇಮ್ಸ್​​ನಲ್ಲಿ ಹಾಕಿ ಚಿನ್ನ ಗೆಲ್ಲಲಿಲ್ಲ ಎಂಬ ಕೊರಗು ಬಿಟ್ಟರೆ, ಭಾರತ ಪುರುಷ ಮತ್ತು ಮಹಿಳಾ ಆಟಗಾರರ ಹೋರಾಟ ಆಶಾದಾಯಕ ಬೆಳವಣಿಗೆ ಕಾಣುತ್ತಿರುವುದೇ ಇದಕ್ಕೆ ಸಾಕ್ಷಿ.

ಪುರುಷರ ಹಾಕಿ ತಂಡ ಫೈನಲ್​​​ನಲ್ಲಿ ಆಸ್ಟ್ರೇಲಿಯಾ ವಿರುದ್ಧ 7-0 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಯಾಗಿತ್ತು. ಆದರೆ ಆಟಗಾರರ ಛಲಬಿಡದ ಹೋರಾಟ ಇಂದಿಗೂ ಮನಸ್ಸಿಗೆ ನಾಟುತ್ತದೆ. ಇದೇ ಕಾಮನ್​ವೆಲ್ತ್​​​ನಲ್ಲಿ ಮಹಿಳೆಯರು ಕಂಚು ಗೆದ್ದುಕೊಂಡು ಭಾರತದ ಕೀರ್ತಿ ಪತಾಕೆಯನ್ನು ಇನ್ನಷ್ಟು ಮೇಲಕ್ಕೆ ಹಾರಿಸಿದ್ದರು. ಮಹಿಳಾ ತಂಡ ನ್ಯೂಜಿಲೆಂಡ್ ತಂಡವನ್ನು ಮಣಿಸಿತ್ತು.

ಹಾಕಿ ಯಶಸ್ಸಿಗೆ ಮತ್ತೊಂದು ಅಡಿಗಲ್ಲು ಅಂದರೆ ಅದು, ಈ ವರ್ಷ ಈ ತಿಂಗಳು ನಡೆದ ಜೂನಿಯರ್​​​ ಏಷ್ಯಾಕಪ್. ಏಷ್ಯಾಕಪ್​​ ಫೈನಲ್​​ನಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿ ಕಿರಿಯರ ತಂಡ ಚರಿತ್ರೆ ಬರೆಯಿತು. ಹ್ಯಾಟ್ರಿಕ್​ ಹಾಗೂ 4ನೇ ಟ್ರೋಫಿ ಗೆಲುವು ಇದಾಗಿತ್ತು. ಜೂನಿಯರ್​ ಮಹಿಳಾ ಏಷ್ಯಾಕಪ್​​​​ನಲ್ಲೂ ಭಾರತವೇ ಮೇಲುಗೈ ಸಾಧಿಸಿತ್ತು. ಹೀಗೆ ಹಂತ ಹಂತದಲ್ಲೂ ಹಾಕಿ, ಬೆಳವಣಿಗೆ ಸಾಧಿಸುತ್ತಿದ್ದು, ಯುವ ಪೀಳಿಗೆಯನ್ನು ಬಡಿದೆಬ್ಬಿಸುತ್ತಿದೆ.

ಬದಲಾಯ್ತು ಕಣಿವೆ ರಾಜ್ಯ ಜಮ್ಮು

ಮತ್ತೊಂದು ಖುಷಿಯ ವಿಚಾರ ಅಂದರೆ, ಉಸಿರುಗಟ್ಟಿದ ವಾತಾವರಣ ಹೊಂದಿದ್ದ ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲೀಗ ಹಾಕಿ ಕಲರವ ಹೆಚ್ಚಾಗಿದೆ. ಭಯೋತ್ಪಾದನೆ, ಉಗ್ರ ಚಟುವಟಿಕೆಗಳಿಗೆ ತಾಣವಾಗಿದ್ದ ಜಮ್ಮು ಮತ್ತು ಕಾಶ್ಮೀರದ ಕಡೆ ಸದ್ಯ ಹೊಸ ಗಾಳಿ ಬೀಸುತ್ತಿದೆ. ಆರ್ಟಿಕಲ್​​ 370 ರದ್ದು ಮಾಡುವುದುಕ್ಕೂ ಮುಂಚೆ, ಅಲ್ಲಿ ಇದದ್ದು ಉಸಿರುಗಟ್ಟಿದ ವಾತಾವರಣ. ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಆರ್ಟಿಕಲ್ 370 ರದ್ದುಗೊಳಿಸಿದ ನಂತರ ವಿಷಮ ವಾತಾವರಣವು, ಆಹ್ಲಾದಕರವಾಗಿ ಪರಿವರ್ತನೆಗೊಳ್ಳುತ್ತಿದೆ. ಅಲ್ಲದೆ ಸಾಕಷ್ಟು ಬದಲಾಗಿದೆ. ಯುವ ಸಮೂಹ ಕ್ರೀಡೆಯತ್ತ ಒಲವು ತೋರಿಸುತ್ತಿದೆ. ಮೊದಲು ಬೆರಳೆಣಿಕೆಯಷ್ಟಿದ್ದ ಕ್ರೀಡಾಪಟುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಕ್ರೀಡೆಯಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿದ್ದ ವೃತ್ತಿಪರರ ಸಂಖ್ಯೆ ದುಪ್ಪಾಟ್ಟುಗುತ್ತಿರುವುದು ಮಹತ್ವದ ಬೆಳವಣಿಗೆ.

ಕರ್ನಾಟಕದಲ್ಲಿ ಹಾಕಿ ಬೆಳವಣಿಗೆ

ಭಾರತದ ಹಾಕಿ ಕ್ರೀಡೆ ಎಂದರೆ ಮೊದಲು ಹೊಳೆಯುವುದೇ ಪಂಜಾಬ್, ಹರಿಯಾಣದ ಕ್ರೀಡಾಳುಗಳ ಹೆಸರುಗಳು. ಹಾಗಂತ ಹಾಕಿಗೆ ಕನ್ನಡಿಗರ ಕೊಡುಗೆಯೇನೂ ಕಡಿಮೆ ಇಲ್ಲ. ಭಾರತದ ಹಾಕಿ ಕಂಡ ಸುವರ್ಣ ಯುಗದಲ್ಲಿ ಕನ್ನಡಿಗರ ಕಾಣಿಕೆಯೂ ಇದೆ ಎಂಬುದು ವಿಶೇಷ. 1964ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಭಾರತ ತಂಡದಲ್ಲಿ ಕನ್ನಡಿಗ ಬಂಡು ಪಾಟೀಲ.

ಬೆಳಗಾವಿಯ ಕಂಟೋನ್ಮೆಂಟ್ ಪ್ರದೇಶದ ಪ್ರತಿಭಾನ್ವಿತ ಆಟಗಾರ. ಮ್ಯೂನಿಕ್‌ ಒಲಿಂಪಿಕ್ಸ್‌ನಲ್ಲಿ (1972) ಭಾರತ ಕಂಚಿನ ಪದಕ ಜಯಿಸಿತ್ತು. ಅಂದಿನ ಭಾರತ ತಂಡದಲ್ಲಿ ಎಂಪಿ ಗಣೇಶ್, ಎಂಪಿ ಗೋವಿಂದ ಪ್ರಮುಖ ಆಕರ್ಷಣೆಯಾಗಿದ್ದರು. 1980ರಲ್ಲಿ ಮಾಸ್ಕೊ ಒಲಿಂಪಿಕ್ಸ್‌ ಚಿನ್ನ ಗೆದ್ದ ಭಾರತ ತಂಡ ದಲ್ಲಿ ಕರ್ನಾಟಕದ ಸೋಮಯ್ಯ ಇದ್ದರು ಎಂಬುದು ಮತ್ತೊಂದು ಹೆಮ್ಮೆಯ ಸಂಗತಿ. 1992ರ ಬಾರ್ಸಿಲೋನಾ ಒಲಿಂಪಿಕ್ಸ್‌ನಲ್ಲಿ ಕೊಡಗಿನ ಎಬಿ ಸುಬ್ಬಯ್ಯ, ಸಿ ಪೂಣಚ್ಚ, ಬಾಗಲಕೋಟೆಯ ರವಿ ನಾಯ್ಕರ್ ಹಾಗೂ ಉಡುಪಿ ಜಿಲ್ಲೆಯ ಆಶಿಶ್ ಬಲ್ಲಾಳ ಭಾರತ ತಂಡದಲ್ಲಿದ್ದರು.

2008ರ ಬೀಜಿಂಗ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯದ ಭಾರತ, 2012ರ ಲಂಡನ್ ಒಲಿಂಪಿಕ್ಸ್‌ಗೆ ಮತ್ತೆ ಮರಳಿತು. ಎಸ್‌ವಿ ಸುನೀಲ್, ವಿ.ಅರ್ ರಘುನಾಥ್, ಭರತ್ ಚೆಟ್ರಿ ಅವರು ಅಮೋಘ ಪ್ರದರ್ಶನದಿಂದ ಗಮನ ಸೆಳೆದರು. ಅವರ ಯೋಗದಾನದ ಫಲ 2016ರ ಟೋಕಿಯೊ ಒಲಿಂಪಿಕ್ಸ್​​ನಲ್ಲಿ ಭಾರತ ಪುರುಷರ ತಂಡವು ಕಂಚಿನ ಪದಕ ಜಯಿಸಿತ್ತು. ಆ ಮೂಲಕ ಪದಕ ಬರ ನೀಗಿಸಿತ್ತು.

ಆದರೆ ಬೇಸರದ ಸಂಗತಿ ಏನೆಂದರೆ ಕಳೆದ ವರ್ಷ ನಡೆದ ಕಾಮನ್‌ವೆಲ್ತ್ ಗೇಮ್ಸ್​ನ ಹಾಕಿಯಲ್ಲಿಯೂ ಪದಕದ ದಾಖಲೆ ಬರೆದಿತ್ತು. ಆದರೆ, ಈ ಸಾಧನೆಯ ಸಾಲಿನಲ್ಲಿ ನಿಂತ ಆಟಗಾರರ ಪೈಕಿ ಕನ್ನಡದ ಕಲಿಗಳೇ ಇರಲಿಲ್ಲ! ಪ್ರತಿಬಾರಿಯೂ ಭಾರತ ತಂಡದ ಆತ್ಮಬಲ ಹೆಚ್ಚಿಸುವಲ್ಲಿ ಕರ್ನಾಟಕದ ಆಟಗಾರರ ಕೊಡುಗೆ ತುಂಬಾನೆ ಇತ್ತು. ಹಾಗಾಗಿ, ಮುಂದೆ ಪ್ರತಿಭಾನ್ವಿತರಿಗೆ ಮೋಸ ಆಗದಿರಲಿ.

ಮೂಲ ಸೌಕರ್ಯಗಳ ಕೊರತೆ

ರಾಷ್ಟ್ರಮಟ್ಟದಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದರೂ ಹಾಕಿ ಆಟದ ಬೆಳವಣಿಗೆ ಕುಂಠಿತವಾಗುತ್ತಿರುವು ವಿಪರ್ಯಾಸ. ಅದಕ್ಕೆ ಕಾರಣ ಮೂಲಸೌಕರ್ಯಗಳ ಕೊರತೆ. ಒಂದೂ ಹಾಕಿ ಕ್ರೀಡಾ ಹಾಸ್ಟೆಲ್ ಕೊರತೆ ಕಾಡುತ್ತಿದೆ. ಸೂಕ್ತ ಸೌಲಭ್ಯಗಳಿಲ್ಲ. ಜೊತೆಗೆ ಟೂರ್ನಿಗಳ ಕೊರತೆಯೂ ಇದೆ. ಹಾಕಿ ರಾಷ್ಟ್ರೀಯ ಕ್ರೀಡೆಯಾದರೂ ಉನ್ನತ ಮಟ್ಟದ ತರಬೇತಿ ಪಡೆಯಲು ಅಕಾಡೆಮಿಗಳು, ವಸತಿನಿಲಯಗಳ ಕೊರತೆ ಕಾಡುತ್ತಿದೆ. ಹೀಗೆ ಇನ್ನಷ್ಟು ಸಮಸ್ಯೆಗಳ ಪಟ್ಟಿ ದೊಡ್ಡದು ಇದ್ದರೂ, ಸರ್ಕಾರಗಳು ಮನವಿಗಳನ್ನು ಕಸದ ಬುಟ್ಟಿಗೆ ಎಸೆಯುತ್ತಿವೆ.

ಇಂಡಿಯನ್‌ ಹಾಕಿ ಫೆಡರೇಷನ್‌ ಸ್ಥಾಪನೆ (1925ರಲ್ಲಿ)

ಇಂಡಿಯನ್‌ ಹಾಕಿ ಫೆಡರೇಷನ್‌ ಸರ್ಕಾರಿ ಸಂಸ್ಥೆ ಆಗಿದ್ದು, ನವೆಂಬರ್‌ 7, 1925ರಂದು ಗ್ವಾಲಿಯರ್‌ನಲ್ಲಿ. ಆದರೆ, 2008ರ ಏಪ್ರಿಲ್‌ 28ರಂದು ಇಂಡಿಯನ್‌ ಹಾಕಿ ಫೆಡರೇಷನ್‌ ಅನ್ನು ಕಾರಣಾಂತರಗಳಿಂದ ಇಂಡಿಯನ್‌ ಒಲಿಂಪಿಕ್‌ ಅಸೋಸಿಯೇಷನ್‌ ವಜಾಗೊಳಿಸಿತು. ದೇಶದ ಹಾಕಿ ಆಟವನ್ನು ಮತ್ತಷ್ಟು ಎತ್ತರಕ್ಕೇರಿಸುವುದು ಹಾಕಿ ಇಂಡಿಯಾದ ಮೂಲ ಉದ್ದೇಶ. ಕ್ರೀಡಾ ಸಚಿವಾಲಯದ ಅಡಿಯಲ್ಲಿ ಪ್ರಾರಂಭವಾದ ಭಾರತದ ಮೊದಲ ಕ್ರೀಡಾ ಪ್ರಾಧಿಕಾರ ಇದು. 2009ರ ಮೇ20ರಂದು ಶುರುವಾದ ಪ್ರಾಧಿಕಾರದ ಕೇಂದ್ರ ಕಚೇರಿ ದೆಹಲಿಯಲ್ಲಿದೆ.

ಅಂದು ದಾಖಲೆಗಳ ಬೇಟೆ

ಭಾರತದ ಪುರುಷರ ಹಾಕಿ ತಂಡವು ಮೊದಲ ಯುರೋಪಿಯನ್ನೇತರ ಭಾಗವಾಗಿತ್ತು. ಒಲಿಂಪಿಕ್ಸ್​ನಲ್ಲಿ 8 ಬಂಗಾರದ ಪದಕ ಜಯಿಸಿದೆ. 1932ರ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಯುಎಸ್‌ಎ ಅನ್ನು 24-1ರಿಂದ ಮಣಿಸಿತ್ತು. ಇದು ಜಾಗತಿಕ ಕ್ರೀಡಾಕೂಟದಲ್ಲೇ ಅತೀ ಹೆಚ್ಚು ಗೋಲು. ರೂಪ್‌ಸಿಂಗ್‌ 10 ಗೋಲು ಬಾರಿಸಿ ಒಲಿಂಪಿಕ್ಸ್‌ನಲ್ಲಿ ದಾಖಲೆ ಬರೆದಿದ್ದರು. 2018ರ ಏಷ್ಯನ್‌ ಗೇಮ್ಸ್‌ನಲ್ಲೂ ಹಾಂಗ್‌ಕಾಂಗ್‌ ವಿರುದ್ಧ ಭಾರತ 26-0 ಅಂತರದಲ್ಲಿ ಸೋಲಿಸಿರುವುದು ಸಾರ್ವತ್ರಿಕ ದಾಖಲೆ.

ಒಟ್ಟಿನಲ್ಲಿ ಕಾಮನ್​ವೆಲ್ತ್​, ಏಷ್ಯನ್​​ ಗೇಮ್ಸ್​, ಏಷ್ಯಾಕಪ್, ಚಾಂಪಿಯನ್​ಶಿಪ್ ಲೀಗ್.. ಹೀಗೆ ಪ್ರತಿಯೊಂದರಲ್ಲೂ ಹಂತ ಹಂತವಾಗಿ ಹಿಡಿತ ಸಾಧಿಸುತ್ತಾ ಹೊರಟಿದೆ. ರಾಜ್ಯದ ಮೂಲೆ ಮೂಲೆಯಲ್ಲೂ ಹಾಕಿ ಪ್ರತಿಭೆಗಳಿವೆ. ಅವುಗಳನ್ನು ಹೆಕ್ಕಿ ತೆಗೆಯುವ ಕೆಲಸ ಆಗಬೇಕು. ಹಣಕಾಸಿನ ನೆರವು, ಅಗತ್ಯ ಮೂಲಸೌಕರ್ಯ ನೀಡುವ ಮೂಲಕ ಪ್ರೋತ್ಸಾಹ, ಬೆಂಬಲ ಕೊಡುತ್ತಿರಬೇಕು. ಪ್ರತಿಭಾನ್ವಿತರಿಗೆ ಮೋಸ ಆಗದಿರಲಿ. ಇದರಿಂದ ದೇಶದಲ್ಲಿ ಈ ಕ್ರೀಡೆ ನೂತನ ಆಯಾಮ ಕಂಡುಕೊಳ್ಳಲು ಎಲ್ಲಾ ರೀತಿಯ ಸಾಧ್ಯತೆಗಳೂ ನಮ್ಮ ಮುಂದಿವೆ. ಇದರೊಂದಿಗೆ ಒಲಿಂಪಿಕ್ಸ್​ನಲ್ಲಿ 4 ದಶಕಗಳಿಂದ ಪದಕದ ಬರ ಎದುರಿಸುತ್ತಿರುವ ಭಾರತ, ಪದಕಗಳ ಬೇಟೆ ಶುರು ಮಾಡಲಿ ಅನ್ನೋದೇ ನಮ್ಮೆಲ್ಲರ ಆಶಯ.

-ಪ್ರಸನ್ನಕುಮಾರ್​ ಪಿಎನ್​

ಈ ಬರಹದ ಬಗ್ಗೆ ನಿಮ್ಮ ಅಭಿಪ್ರಾಯಗಳಿಗೆ ಸ್ವಾಗತ. ಕ್ರೀಡೆಗಳ ಆಗು-ಹೋಗುಗಳ ಕುರಿತ ‘ಸಖತ್​ ಆಟ’ ಅಂಕಣಕ್ಕೆ ನೀವೂ ವಿಷಯಗಳನ್ನು ಸಲಹೆ ಕೊಡಬಹುದು. ಇ-ಮೇಲ್ ವಿಳಾಸ: ht.kannada@htdigital.in

ಇಂತಹ ಮತ್ತಷ್ಟು ಅಂಕಣ ಬರಹಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಕ್ಷಣ ಕ್ಷಣದ ಮಾಹಿತಿಗಾಗಿ ಹಿಂದೂಸ್ತಾನ್ ಟೈಮ್ಸ್​ ಕನ್ನಡ​ ವೆಬ್​ಸೈಟ್​​ ವೀಕ್ಷಿಸಿ.

ಪ್ರತಿಯೊಂದು ಅಪ್​​ಡೇಟ್​ ಸುದ್ದಿಗಳಿಗಾಗಿ ನಮ್ಮ ವಾಟ್ಸಾಪ್​ ಕಮುನಿಟಿಗೆ ಸೇರಿ.

ಮಹತ್ವದ ಮಾಹಿತಿಗಾಗಿ ಟ್ವಿಟರ್​​​ ಮತ್ತು ಫೇಸ್​ಬುಕ್ ಹಾಗೂ ಶೇರ್​​ಚಾಟ್​​ನಲ್ಲಿ ಫಾಲೋ ಮಾಡಿ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.