ಅತ್ಯಾಚಾರ ಆರೋಪ ವಿರುದ್ಧ ಕಾನೂನು ಹೋರಾಟಕ್ಕಿಳಿದ ವರುಣ್ ಕುಮಾರ್; ತುರ್ತು ರಜೆ ಪಡೆದ ಹಾಕಿ ಆಟಗಾರ
ಕನ್ನಡ ಸುದ್ದಿ  /  ಕ್ರೀಡೆ  /  ಅತ್ಯಾಚಾರ ಆರೋಪ ವಿರುದ್ಧ ಕಾನೂನು ಹೋರಾಟಕ್ಕಿಳಿದ ವರುಣ್ ಕುಮಾರ್; ತುರ್ತು ರಜೆ ಪಡೆದ ಹಾಕಿ ಆಟಗಾರ

ಅತ್ಯಾಚಾರ ಆರೋಪ ವಿರುದ್ಧ ಕಾನೂನು ಹೋರಾಟಕ್ಕಿಳಿದ ವರುಣ್ ಕುಮಾರ್; ತುರ್ತು ರಜೆ ಪಡೆದ ಹಾಕಿ ಆಟಗಾರ

Varun Kumar: ಅತ್ಯಾಚಾರ ಆರೋಪದಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಹಾಕಿ ಆಟಗಾರ ವರುಣ್ ಕುಮಾರ್‌ ಹೇಳಿದ್ದಾರೆ. ಹೀಗಾಗಿ ರಾಷ್ಟ್ರೀಯ ಕರ್ತವ್ಯದಿಂದ ವರುಣ್‌ ಅವರಿಗೆ ಹಾಕಿ ಇಂಡಿಯಾ ತುರ್ತು ರಜೆ ನೀಡಿದೆ.

ಅತ್ಯಾಚಾರ ಆರೋಪ ವಿರುದ್ಧ ಕಾನೂನು ಹೋರಾಟಕ್ಕಿಳಿದ ವರುಣ್ ಕುಮಾರ್
ಅತ್ಯಾಚಾರ ಆರೋಪ ವಿರುದ್ಧ ಕಾನೂನು ಹೋರಾಟಕ್ಕಿಳಿದ ವರುಣ್ ಕುಮಾರ್ (HT_PRINT)

ಪೋಕ್ಸೊ ಕಾಯ್ದೆಯಡಿ ಅತ್ಯಾಚಾರದ ಆರೋಪ ಎದುರಿಸುತ್ತಿರುವ ಭಾರತೀಯ ಹಾಕಿ ಆಟಗಾರ ವರುಣ್ ಕುಮಾರ್ (Varun Kumar), ಎಫ್ಐಎಚ್ ಪ್ರೊ ಲೀಗ್‌ನಿಂದ (FIH Pro League) ಹಿಂದೆ ಸರಿದಿದ್ದಾರೆ. ಆ ಮೂಲಕ ತಮ್ಮ ಮೇಲಿನ ಆರೋಪದ ವಿರುದ್ಧ ಹೋರಾಡಲು ಅರ್ಜುನ ಪ್ರಶಸ್ತಿ ವಿಜೇತ ಆಟಗಾರ ಮುಂದಾಗಿದ್ದಾರೆ.

ಯುವತಿ ಮಾಡಿದ ಅತ್ಯಾಚಾರ ಆರೋಪದಿಂದಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಆಟಗಾರ ಹೇಳಿದ್ದಾರೆ.‌ ಹೀಗಾಗಿ 28 ವರ್ಷದ ಆಟಗಾರನಿಗೆ ಹಾಕಿ ಇಂಡಿಯಾ ರಾಷ್ಟ್ರೀಯ ಕರ್ತವ್ಯದಿಂದ ತುರ್ತು ರಜೆ ನೀಡಿದೆ.

ತಾನು ಅಪ್ರಾಪ್ತೆಯಾಗಿದ್ದಾಗ ಆಟಗಾರ ತನ್ನ ಮೇಲೆ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. 2018ರಲ್ಲಿ ಇನ್‌ಸ್ಟಾಗ್ರಾಮ್ ಮೂಲಕ ವರುಣ್ ಅವರ ಪರಿಚಯವಾಯ್ತು. ತಾನು 17 ವರ್ಷದವಳಿದ್ದಾಗ ಮದುವೆಯಾಗುವುದಾಗಿ ಭರವಸೆ ನೀಡಿದ್ದ ಆಟಗಾರ, ಹಲವು ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು 22 ವರ್ಷದ ಯುವತಿ ದೂರು ನೀಡಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಆಟಗಾರನ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | ಭಾರತ ಹಾಕಿ ಆಟಗಾರ ವರುಣ್ ಕುಮಾರ್ ಮೇಲೆ ಅತ್ಯಾಚಾರ ಆರೋಪ; ಪೋಕ್ಸೋ ಕಾಯ್ದೆಯಡಿ ಬೆಂಗಳೂರಿನಲ್ಲಿ ಪ್ರಕರಣ ದಾಖಲು

“ಯುವತಿ ನೀಡಿದ ದೂರಿನ ಆಧಾರದ ಮೇಲೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ ಸೂಕ್ತ ಸೆಕ್ಷನ್ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರಚೋದನೆ) ಅಡಿಯಲ್ಲಿ ಹಾಕಿ ಆಟಗಾರನ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ” ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.‌

ಪೊಲೀಸರು ನನ್ನನ್ನು ಸಂಪರ್ಕಿಸಿಲ್ಲ

ಸದ್ಯ ಹಾಕಿ ಇಂಡಿಯಾ ಅಧ್ಯಕ್ಷ ದಿಲೀಪ್ ಟಿರ್ಕಿ ಅವರಿಗೆ ಪತ್ರ ಬರೆದಿರುವ ವರುಣ್, ತಮ್ಮ ವಿರುದ್ಧದ ದೂರು ಸುಳ್ಳು ಎಂದು ಹೇಳಿದ್ದಾರೆ.

“ನಾನು ಈ ಹಿಂದೆ ಸಂಬಂಧ ಹೊಂದಿದ್ದಾಗಿ ಹುಡುಗಿಯೊಬ್ಬಳು ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾಳೆ ಎಂದು ಮಾಧ್ಯಮ ವರದಿಗಳ ಮೂಲಕ ನನಗೆ ಗೊತ್ತಾಗಿದೆ. ಬೆಂಗಳೂರಿನಲ್ಲಿ ಎಫ್ಐಆರ್‌ ದಾಖಲಾಗಿದೆ ಎಂದು ತಿಳಿದುಬಂದಿದೆ. ಆದರೆ ಈ ಸಂಬಂಧ ಯಾವುದೇ ಪೊಲೀಸ್ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿಲ್ಲ” ಎಂದು ವರುಣ್ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ | ಜಸ್ಪ್ರೀತ್ ಬುಮ್ರಾ ವಿಶ್ವದ ಪರಿಪೂರ್ಣ ಬೌಲರ್; ದಕ್ಷಿಣ ಆಫ್ರಿಕಾ ಮಾಜಿ ವೇಗಿ ವೆರ್ನಾನ್ ಫಿಲಾಂಡರ್

“ಈ ಪ್ರಕರಣವು ನನ್ನಿಂದ ಹಣ ಸುಲಿಗೆ ಮಾಡುವ ಉದ್ದೇಶಪೂರ್ವಕ ಪ್ರಯತ್ನವಲ್ಲದೆ ಬೇರೇನೂ ಅಲ್ಲ. ನಾನು ಭಾರತಕ್ಕಾಗಿ ಆಡಿ ಅರ್ಜುನ ಪ್ರಶಸ್ತಿ ವಿಜೇತನಾಗಿರುವುದರಿಂದ, ನನ್ನ ಖ್ಯಾತಿ ಮತ್ತು ಘನತೆಯನ್ನು ಹಾಳುಮಾಡುವ ಉದ್ದೇಶದಿಂದ ಮಾಡಿದ ಪ್ರಯತ್ನವಾಗಿದೆ. ಅಂತಹ ಪ್ರಕರಣವು ನನ್ನ ವೃತ್ತಿಜೀವನ ಮತ್ತು ಘನತೆಗೆ ಅಡ್ಡಿಯಾಗಬಹುದು ಎಂದು ಅವರಿಗೆ ತಿಳಿದಿದೆ” ಎಂದು ವರುಣ್‌ ಹೇಳಿಕೊಂಡಿದ್ದಾರೆ.

ಆಟದಿಂದ ಹಿಂದೆ ಸರಿದು ಹೋರಾಟಕ್ಕಿಳಿದ ವರುಣ್

ಪ್ರೊ ಲೀಗ್ ಪಂದ್ಯಗಳನ್ನು ಆಡುವ ಸಲುವಾಗಿ ಭುವನೇಶ್ವರದಲ್ಲಿ ಭಾರತ ತಂಡದೊಂದಿಗೆ ಇದ್ದ ವರುಣ್, ಆರೋಪಗಳ ವಿರುದ್ಧ ಕಾನೂನು ಪ್ರಕಾರ ಹೋರಾಡುವುದಾಗಿ ಹೇಳಿದ್ದಾರೆ.

“ಈ ಘಟನೆಯು ನನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾ ಕಠಿಣ ಸಮಯ. ಒಬ್ಬ ಕ್ರೀಡಾಪಟುವಾಗಿ ಕೊನೆಯವರೆಗೂ ಛಲಬಿಡದೆ ಹೋರಾಡುವುದನ್ನು ನಾನು ಕಲಿತಿದ್ದೇನೆ. ಆದ್ದರಿಂದ ಈ ಕಷ್ಟದ ಸಮಯದಲ್ಲಿ ನಿಮ್ಮ ಬೆಂಬಲವನ್ನು ನಾನು ಕೋರುತ್ತೇನೆ” ಎಂದು ವರುಣ್ ಹೇಳಿದ್ದಾರೆ.

ಮೂಲಗಳ ಪ್ರಕಾರ, ದೂರು ನೀಡಿದ ಯುವತಿಯು ಬೆಂಗಳೂರಿನ ಸಾಯಿ ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ವಾಲಿಬಾಲ್ ಆಟಗಾರ್ತಿಯಾಗಿದ್ದರು. ಇಬ್ಬರು ನಡುವಿನ ಸಂಬಂಧವು ಅಲ್ಲೇ ಆರಂಭವಾಗಿತ್ತು. ಸದ್ಯ ಯುವತಿ ಏರ್ ಹೋಸ್ಟೆಸ್ ಆಗಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ | ಎಫ್ಐಎಚ್ ಹಾಕಿ ಪ್ರೊ ಲೀಗ್; ಆಸ್ಟ್ರೇಲಿಯಾ ವಿರುದ್ಧ ಭಾರತ ವನಿತೆಯರಿಗೆ 0-3 ಅಂತರದ ಸೋಲು

ಕಳೆದ ವರ್ಷ ತಂದೆ ತೀರಿಕೊಂಡ ನಂತರ, ವರುಣ್ ತಮ್ಮ ಫೋನ್‌ ಕರೆ ಹಾಗೂ ಸಂದೇಶಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.

ಹಿಮಾಚಲ ಪ್ರದೇಶದವರಾದ ವರುಣ್, 2017ರಲ್ಲಿ ಭಾರತ ಹಾಕಿ ತಂಡಕ್ಕೆ ಪದಾರ್ಪಣೆ ಮಾಡಿದರು. ಪ್ರಸ್ತುತ ಅವರು ಪಂಜಾಬ್ ಪೊಲೀಸ್‌ ಇಲಾಖೆಯಲ್ಲಿ ಡಿಎಸ್‌ಪಿಯಾಗಿ ಬಡ್ತಿ ಪಡೆದಿದ್ದಾರೆ. 2021ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ವರುಣ್, 2022ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಗೆದ್ದ ಹಾಕಿ ತಂಡದಲ್ಲಿದ್ದರು.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.