ಬೆಂಗಳೂರಲ್ಲಿ ಕ್ರೀಡಾ ಮ್ಯೂಸಿಯಂ, ಸ್ಪೋರ್ಟ್ಸ್ ಸಿಟಿ ನಿರ್ಮಾಣ; ಮೀಸಲಾತಿ ಕುರಿತೂ ಮಾತನಾಡಿದ ಗೃಹ ಸಚಿವ ಪರಮೇಶ್ವರ-home minister parameshwara spoke about the construction of sports museum in bangaluru and sports city in devanahalli prs ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಬೆಂಗಳೂರಲ್ಲಿ ಕ್ರೀಡಾ ಮ್ಯೂಸಿಯಂ, ಸ್ಪೋರ್ಟ್ಸ್ ಸಿಟಿ ನಿರ್ಮಾಣ; ಮೀಸಲಾತಿ ಕುರಿತೂ ಮಾತನಾಡಿದ ಗೃಹ ಸಚಿವ ಪರಮೇಶ್ವರ

ಬೆಂಗಳೂರಲ್ಲಿ ಕ್ರೀಡಾ ಮ್ಯೂಸಿಯಂ, ಸ್ಪೋರ್ಟ್ಸ್ ಸಿಟಿ ನಿರ್ಮಾಣ; ಮೀಸಲಾತಿ ಕುರಿತೂ ಮಾತನಾಡಿದ ಗೃಹ ಸಚಿವ ಪರಮೇಶ್ವರ

Dr G Parameshwara: ಬೆಂಗಳೂರಿನಲ್ಲಿ ಕ್ರೀಡಾ ಮ್ಯೂಸಿಯಂ, ದೇವನಹಳ್ಳಿಯಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಾಣದ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಮಾತನಾಡಿದ್ದಾರೆ.

ಮೇಜರ್ ಧ್ಯಾನ್ ಚಂದ್ ಮತ್ತು ರಾಷ್ಟ್ರೀಯ ಕ್ರೀಡಾ ದಿನದಂದು ಭಾರತದ ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರನ್ನು ಗೃಹ ಸಚಿವ ಪರಮೇಶ್ವರ ಅವರು ಸನ್ಮಾನಿಸಿದರು.
ಮೇಜರ್ ಧ್ಯಾನ್ ಚಂದ್ ಮತ್ತು ರಾಷ್ಟ್ರೀಯ ಕ್ರೀಡಾ ದಿನದಂದು ಭಾರತದ ಮಾಜಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರನ್ನು ಗೃಹ ಸಚಿವ ಪರಮೇಶ್ವರ ಅವರು ಸನ್ಮಾನಿಸಿದರು.

ಬೆಂಗಳೂರು: ದೇವನಹಳ್ಳಿ ಸಮೀಪ ಸ್ಪೋರ್ಟ್ಸ್​ ಸಿಟಿ (ಕ್ರೀಡಾ ನಗರ) ನಿರ್ಮಿಸಲು ಸರ್ಕಾರ ಆದೇಶ ನೀಡಿದೆ. ಜೊತೆಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾ ಮ್ಯೂಸಿಯಂ ನಿರ್ಮಾಣಕ್ಕೂ ಸರ್ಕಾರ ಚಿಂತನೆ ನಡೆಸಿದೆ' ಎಂದು ಭಾಗವಹಿಸಿದ್ದ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ತಿಳಿಸಿದ್ದಾರೆ. ಇದೇ ವೇಳೆ ಪ್ರಸ್ತುತ ಯುವಕರಿಗೆ ಕ್ರೀಡಾ ಮನೋಭಾವನೆ ಬೆಳೆಸುವುದರಿಂದ ಆಗುವ ಬದಲಾವಣೆ ಏನು ಎಂಬುದನ್ನು ವಿವರಿಸಿದ್ದಾರೆ.

ಕಂಠೀರವ ಕ್ರೀಡಾಂಗಣದ ಒಲಂಪಿಕ್ ಭವನದಲ್ಲಿ ರಾಜ್ಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಆಯೋಜಿಸಿದ್ದ ಪದ್ಮಭೂಷಣ, ಹಾಕಿಪಟು ಮೇಜರ್ ಧ್ಯಾನ್ ಚಂದ್ ಜನ್ಮದಿನ ಹಾಗೂ ರಾಷ್ಟ್ರೀಯ ಕ್ರೀಡಾ ದಿನ ಕಾರ್ಯಕ್ರಮದಲ್ಲಿ ಪರಮೇಶ್ವರ ಪಾಲ್ಗೊಂಡಿದ್ದರು. ಇದೇ ವೇಳೆ ಯುವಕರಲ್ಲಿ ಕ್ರೀಡಾ ಬದ್ಧತೆ ಕಡಿಮೆಯಾಗುತ್ತಿದೆ. ಕ್ರೀಡೆಯ ಬಗ್ಗೆ ಧ್ಯಾನ್ ಚಂದ್​ಗಿದ್ದ ಮನಸ್ಥಿತಿ ಮತ್ತು ಬದ್ಧತೆಯನ್ನು ಅನುಕರಿಸುವಂತೆ ಸಲಹೆ ನೀಡಿದ್ದಾರೆ.

ಕ್ರೀಡಾನಗರ, ಮ್ಯೂಸಿಯಂ ನಿರ್ಮಾಣ: ಪರಂ

ಸರ್ಕಾರವು ಕ್ರೀಡಾಪಟುಗಳಿಗೆ ಮೀಸಲಾತಿ ಕಲ್ಪಿಸುತ್ತಿರುವ ಕುರಿತು ಪ್ರಸ್ತಾಪಿಸಿದ ಪರಮೇಶ್ವರ ಅವರು, ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ಕ್ರೀಡಾಪಟುಗಳಿಗೆ ಮೊದಲ ಬಾರಿಗೆ ಮೀಸಲಾತಿ ಕಲ್ಪಿಸಲಾಯಿತು. ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿಯೂ ಶೇ. 3ರಷ್ಟು ಮೀಸಲಾತಿ‌ ಕಲ್ಪಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಇಲಾಖೆಯ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಿ, ಎಲ್ಲ ರೀತಿಯ ಉತ್ತೇಜನ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕ್ರೀಡಾ ನಗರ ನಿರ್ಮಾಣದ ಕುರಿತೂ ತುಟಿ ಬಿಚ್ಚಿದ ಗೃಹ ಸಚಿವ, ಬೆಂಗಳೂರು ಐಟಿ ಸಿಟಿ ಎಂದು ವಿಶ್ವದ ಗಮನ ಸೆಳೆದಿದೆ.‌ ಇದೇ ರೀತಿ ಕ್ರೀಡೆಯಲ್ಲೂ ವಿಶ್ವದ ಗಮನ ಸೆಳೆಯಬೇಕಿದೆ. ಅದಕ್ಕಾಗಿ ದೇವನಹಳ್ಳಿ ಸಮೀಪ 50 ಎಕರೆ ಜಾಗದಲ್ಲಿ ಸ್ಪೋರ್ಟ್ಸ್ ಸಿಟಿ ನಿರ್ಮಿಸಲು ಸರ್ಕಾರ ಆದೇಶಿಸಿದೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾ ಮ್ಯೂಸಿಯಂ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ. ಆದರೆ ಎರಡು ಯೋಜನೆಗಳು ವೆಚ್ಚ ಎಷ್ಟಾಗಬಹುದು ಎಂಬುದರ ಮಾಹಿತಿ ನೀಡಿಲ್ಲ.

ಭಾರತದ ಕ್ರೀಡಾಪಟುಗಳಿಗೆ ಯಾವುದೇ ರೀತಿಯ ಕೊರತೆಯಾಗಿಲ್ಲ. ಎಲ್ಲರ ನಿರೀಕ್ಷೆಯಂತೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಚಾಂಪಿಯನ್​ಶಿಪ್‌, ಮೆಡಲ್ ತರಲಾಗುತ್ತಿಲ್ಲ. ಆಫ್ರಿಕಾ ದೇಶಗಳು ಸೇರಿದಂತೆ ಸಣ್ಣ ದೇಶಗಳಲ್ಲಿ ಕ್ರೀಡೆಗೆ ಯಾವ ಸವಲತ್ತುಗಳು ಇಲ್ಲ. ಒಲಂಪಿಕ್‌ನಲ್ಲಿ ಮೆಡಲ್ ತರುತ್ತಿದ್ದಾರೆ. ನಮ್ಮ ಯುವಕರು ಬೇರೆಯವರಿಗಿಂತ ಕಡಿಮೆಯೇನಿಲ್ಲ. ಆದರೆ, ದೃಢ ಸಂಕಲ್ಪ ಮತ್ತು ಛಲದ ಕೊರತೆಯಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಕ್ರೀಡಾಮನೋಭಾವನೆ ಬೆಳೆಸಿಕೊಂಡರೆ ದುಶ್ಚಟಗಳು ದೂರ

ಇಂದಿನ ಅಥ್ಲೀಟ್ಸ್​ಗೆ ಸಿಗುತ್ತಿರುವ ಸವಲತ್ತು ಈ ಹಿಂದೆ ಬೇರೆ ಯಾವ ಸರ್ಕಾರಗಳು ನೀಡಿಲ್ಲ. ರಾಜ್ಯದಲ್ಲಿ ಕಂಠೀವರ ಕ್ರೀಡಾಂಗಣದಲ್ಲಿ ಮಾತ್ರ ಒಂದೇ ಒಂದು ಸಿಂಡರ್ ಟ್ರ್ಯಾಕ್ ಇತ್ತು. ಈಗ ಸಿಂಥೆಟಿಕ್ ಟ್ರ್ಯಾಕ್ ಮಾಡಲಾಗಿದೆ.‌ ರಾಜ್ಯದ 18 ಜಿಲ್ಲೆಗಳಲ್ಲಿ ಸಿಂಥೆಟಿಕ್ ಟ್ರ್ಯಾಕ್ ಹೊಂದಿರುವ ಕ್ರೀಡಾಂಗಣಗಳಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರ ಪಡೆದು ಸಾಧನೆ ಮಾಡಿಯೇ ತೀರುತ್ತೇವೆ ಎಂಬ ಸಂಕಲ್ಪದೊಂದಿಗೆ ಆಡಬೇಕು ಎಂದು ಕಿವಿಮಾತು ಹೇಳಿದ್ದಾರೆ.

ದೇಶದಲ್ಲಿ ಕ್ರೀಡೆಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ. ಇದು 2 ಕಾರಣಕ್ಕೆ ಬಹಳ ಮುಖ್ಯ. ಕತಾರ್ ದೇಶದ ದೋಹಾದಲ್ಲಿ 8 ಕ್ರೀಡಾಂಗಣಗಳನ್ನು ನಿರ್ಮಿಸಲಾಗಿದೆ. ಸಣ್ಣ ದೇಶಗಳು ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿವೆ. ಯುವಕರಲ್ಲಿ ಕ್ರೀಡಾಮನೋಭಾವನೆ ಬೆಳೆಸುವುದರಿಂದ‌ ಡ್ರಗ್ಸ್, ಮದ್ಯ ವ್ಯಸನ ಸೇರಿದಂತೆ ಇನ್ನಿತರ ದುಶ್ಚಟಗಳಿಂದ ದೂರ ಉಳಿಯುತ್ತಾರೆ. ದೇಶದ ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ ಎಂಬುದು ಮನಸ್ಥಿತಿ. ಈ ಕಾರಣಕ್ಕೆ ಭಾರತವು ಸಹ ಕ್ರೀಡೆಗೆ ಹೆಚ್ಚು ಒತ್ತು ನೀಡುತ್ತಿದೆ ಎಂದಿದ್ದಾರೆ.

2036 ಒಲಂಪಿಕ್ಸ್ ಕ್ರೀಡಾಕೂಟವನ್ನು ಭಾರತಕ್ಕೆ ತರುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸುತ್ತಿದೆ. ಯುವಕರು ಕ್ರೀಡೆಗೆ ಬಂದರೆ ದುಶ್ಚಟಗಳು ನಿಂತು ಹೋಗುತ್ತವೆ ಎಂದು ಅಭಿಪ್ರಾಯಪಟ್ಟರು. ಇದೇ ವೇಳೆ ಪ್ಯಾರಿಸ್ ಒಲಂಪಿಕ್ಸ್​​ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಜ್ಯದ ಕ್ರೀಡಾಪಟುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು‌. ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ. ಕೆ.ಗೋವಿಂದರಾಜು, ಸರ್ಕಾರದ ಅಪರ‌ ಮುಖ್ಯ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಕ್ರೀಡಾ ಮತ್ತು ಯುವ ಸಬಲೀಕರಣ ಆಯುಕ್ತ ಚೇತನ್ ಇದ್ದರು.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.