Explainer: 11ನೇ ಸುತ್ತಿನಲ್ಲಿ ಜಯ; ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆಲ್ಲಲು ಡಿ ಗುಕೇಶ್‌ಗೆ ಎಷ್ಟು ವಿಜಯದ ಅಗತ್ಯವಿದೆ?
D Gukesh: ಈಗಾಗಲೇ 6-5 ಅಂತರದ ಮುನ್ನಡೆ ಸಾಧಿಸಿರುವ ಡಿ ಗುಕೇಶ್, ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆಲುವಿನ ಸನಿಹವಿದ್ದಾರೆ. ಚೀನಾದ ಪ್ರಬಲ ಎದುರಾಳಿ ಡಿಂಗ್ ಲಿರೆನ್ ವಿರುದ್ಧ ಮುಂದಿನ ಮೂರು ಸುತ್ತುಗಳಲ್ಲಿ ಒಂದರಲ್ಲಿ ಗೆದ್ದರೂ, ಗುಕೇಶ್ ಇತಿಹಾಸ ನಿರ್ಮಿಸಲಿದ್ದಾರೆ.
ಸಿಂಗಾಪುರದಲ್ಲಿ ನಡೆಯುತ್ತಿರುವ 2024ರ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್, ವಿಶ್ವಚಾಂಪಿಯನ್ ಆಗುವ ನಿರೀಕ್ಷೆಯಲ್ಲಿದ್ದಾರೆ. ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ವಿರುದ್ಧ ರೋಚಕ ಹಣಾಹಣಿ ನಡೆಸುತ್ತಿರುವ ಗುಕೇಶ್, ಸತತ ಏಳು ಡ್ರಾಗಳ ನಂತರ ಭಾನುವಾರ (ಡಿಸೆಂಬರ್ 8) ನಡೆದ 11ನೇ ಪಂದ್ಯದಲ್ಲಿ ಕೊನೆಗೂ ಮತ್ತೊಂದು ಗೆಲುವು ಸಾಧಿಸಿದ್ದಾರೆ. ಇದರೊಂದ ನಿರ್ಣಾಯಕ 6-5 ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಈ ಗೆಲುವಿನೊಂದಿಗೆ ಅಂತಿಮ ಸುತ್ತುಗಳು ಮತ್ತಷ್ಟು ರೋಚಕವಾಗಿ ಸಾಗಲಿದೆ.
11ನೇ ಸುತ್ತಿನ ಆಟ ಅತಿ ರೋಚಕವಾಗಿತ್ತು. ಡಿಂಗ್ ತನ್ನ ಎರಡನೇ ಚಲನೆಗೆ 39 ನಿಮಿಷಗಳನ್ನು ತೆಗೆದುಕೊಂಡರು. ಆ ಬಳಿಕ ತಮ್ಮ 5ನೇ ಅವಕಾಶದಲ್ಲಿ ಮತ್ತೊಮ್ಮೆ 22 ನಿಮಿಷಗಳನ್ನು ತೆಗೆದುಕೊಂಡರು. ನಂತರ, ಗುಕೇಶ್ ತನ್ನ 11ನೇ ನಡೆಯನ್ನು ಪೂರ್ಣಗೊಳಿಸಲು ಬರೋಬ್ಬರಿ ಒಂದು ಗಂಟೆಗೂ ಹೆಚ್ಚು ಕಾಲ ತೆಗೆದುಕೊಂಡರು. ಆ ನಂತರ 32 ವರ್ಷದ ಲಿರೆನ್ ಒತ್ತಡಕ್ಕೆ ಸಿಲುಕಿದರು. ತಮ್ಮ 28ನೇ ಚಲನೆಯಲ್ಲಿ ದೊಡ್ಡ ಪ್ರಮಾದ ಮಾಡಿ ಸೋಲನ್ನು ಮೈಮೇಲೆ ಎಳೆದುಕೊಂಡರು. ಚೈನೀಸ್ ಆಟಗಾರ Qc8 ಅನ್ನು ಆಡಿದರು. ಈ ದೋಷವನ್ನು ತಕ್ಷಣ ಗಮನಿಸಿದ ಗುಕೇಶ್ ಕ್ಯಾಪ್ಚರ್ (Qxc6) ಮೂಲಕ ತಮ್ಮ ವಿಜಯದ ಮುದ್ರೆಯೊತ್ತಿದರು.
ಗುಕೇಶ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆಲ್ಲುತ್ತಾರಾ?
ಗುಕೇಶ್ ಸದ್ಯ ಮುನ್ನಡೆಯಲ್ಲಿದ್ದಾರೆ. ಇನ್ನೂ ಮೂರು ಪಂದ್ಯಗಳು ಬಾಕಿ ಇರುವಾಗಲೇ 6-5 ಅಂತರದ ಮುನ್ನಡೆ ಗುಕೇಶ್ ಆತ್ಮವಿಶ್ವಾಸ ಹೆಚ್ಚಿಸಿದೆ. ಹೀಗಾಗಿ ವಿಶ್ವ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆಲುವಿಗೆ ಭಾರತೀಯನಿಗೆ ಹೆಚ್ಚು ಅವಕಾಶವಿದೆ. 12ನೇ ಸುತ್ತು ಇಂದು (ಡಿಸೆಂಬರ್ 9ರ ಸೋಮವಾರ) ನಡೆಯುತ್ತಿದ್ದು, 13 ಮತ್ತು 14ನೇ ಸುತ್ತಿನ ಪಂದ್ಯಗಳು ಕ್ರಮವಾಗಿ ಡಿಸೆಂಬರ್ 11ರ ಮಂಗಳವಾರ ಮತ್ತು ಡಿಸೆಂಬರ್ 12ರ ಬುಧವಾರಕ್ಕೆ ನಿಗದಿಯಾಗಿದೆ.
ಪ್ರಶಸ್ತಿ ಗೆಲ್ಲಲು ಆಟಗಾರನು 7.5 ಅಂಕಗಳ ಗಡಿ ತಲುಪಬೇಕು. ಗುಕೇಶ್ ಚಾಂಪಿಯನ್ ಆಗಲು ಒಂದು ಗೇಮ್ ಗೆದ್ದು ಮತ್ತೊಂದರಲ್ಲಿ ಡ್ರಾ ಸಾಧಿಸಿದರೆ ಸಾಕು. ಇದೇ ವೇಳೆ ಮುಂದಿನ ಮೂರೂ ಪಂದ್ಯಗಳಲ್ಲಿ ಡ್ರಾ ಸಾಧಿಸಿದರೂ 18 ವರ್ಷ ವಯಸ್ಸಿನ ಭಾರತೀಯನಿಗೆ ಟ್ರೋಫಿ ಜಯ ಸಾಧ್ಯ.
ಡಿಂಗ್ ಲಿರೆನ್ ಮೇಲೆ ಒತ್ತಡ
ಮತ್ತೊಂದೆಡೆ, ಪ್ರಶಸ್ತಿ ಗೆಲ್ಲಲು ಇನ್ನು ಕನಿಷ್ಠ ಒಂದು ಪಂದ್ಯವನ್ನಾದರೂ ಗೆಲ್ಲಲೇಬೇಕಾದ ಒತ್ತಡ ಇದೀಗ ಡಿಂಗ್ ಮೇಲಿದೆ. ಆಟವು ಟೈ ಬ್ರೇಕರ್ ಕಡೆಗೆ ಸಾಗುವುದನ್ನು ಖಚಿತಪಡಿಸಿಕೊಳ್ಳಲು ಡಿಂಗ್‌ಗೆ ಕನಿಷ್ಠ ಒಂದು ಗೆಲುವು ಮತ್ತು ಎರಡು ಡ್ರಾಗಳ ಅಗತ್ಯವಿದೆ. ಇಂಥಾ ಸನ್ನಿವೇಶ ಏದುರಾದರೆ, ಡಿಸೆಂಬರ್ 13ರ ಶುಕ್ರವಾರ ನಿಗದಿಯಾಗಿರುವ ಟೈಬ್ರೇಕರ್ ಕಡೆಗೆ ಪಂದ್ಯ ಸಾಗಲಿದೆ.
ಈ ಬಾರಿ ಇತಿಹಾಸ ನಿರ್ಮಿಸುವ ಅವಕಾಶ ಗುಕೇಶ್ ಮೇಲಿದೆ. ಆ ಮೂಲಕ ಇತಿಹಾಸದಲ್ಲಿ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆಗುವ ಮೂಲಕ ಇತಿಹಾಸ ಸೃಷ್ಟಿಸಲು ಗುಕೇಶ್ ಎದುರು ನೋಡುತ್ತಿದ್ದಾರೆ. ಒಂದು ವೇಳೆ ತಮ್ಮ ಮುನ್ನಡೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರೆ, ವಿಶ್ವನಾಥನ್ ಆನಂದ್ ನಂತರ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ