ಕನ್ನಡ ಸುದ್ದಿ  /  Sports  /  How India Can Qualify Into Wtc Final If They Draw 4th Test Vs Aus

WTC final scenario: ಭಾರತ ನಾಲ್ಕನೇ ಟೆಸ್ಟ್ ಡ್ರಾ ಮಾಡಿ, ಲಂಕಾ ಕಿವೀಸ್ ಮಣಿಸಿದರೆ ಏನಾಗುತ್ತೆ? ಭಾರತದ ಡಬ್ಲ್ಯೂಟಿಸಿ ಫೈನಲ್ ಸಾಧ್ಯವೇ?

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ ಪಂದ್ಯಕ್ಕೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಭಾರತಕ್ಕೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆದರೆ, ಸದ್ಯದ ಪಂದ್ಯದ ಸನ್ನಿವೇಶದ ಪ್ರಕಾರ ಈ ಪಂದ್ಯವು ಡ್ರಾದಲ್ಲಿ ಅಂತ್ಯವಾಗುವ ಸಾಧ್ಯತೆ ಹೆಚ್ಚಿದೆ.

ಗಿಲ್‌, ರೋಹಿತ್‌ ಶರ್ಮಾ
ಗಿಲ್‌, ರೋಹಿತ್‌ ಶರ್ಮಾ (PTI)

ಬಾರ್ಡರ್‌ ಗವಾಸ್ಕರ್‌ ಟ್ರೋಫಿಯ ಸತತ ಮೂರು ಪಂದ್ಯಗಳಲ್ಲಿ ಬೌಲರ್‌ಗಳೇ ಮೆರೆದಾಡಿದ ಬಳಿಕ, ಅಂತಿಮವಾಗಿ ನಾಲ್ಕನೇ ಹಾಗೂ ನಿರ್ಣಾಯಕ ಟೆಸ್ಟ್‌ ಪಂದ್ಯದಲ್ಲಿ ಬ್ಯಾಟರ್‌ಗಳು ಅಬ್ಬರಿಸಿದ್ದಾರೆ. ಭಾರತ-ಆಸ್ಟ್ರೇಲಿಯಾ ಸರಣಿಯು ಅಂತಿಮವಾಗಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಬ್ಯಾಟರ್‌ಗಳ ಸ್ವರ್ಗವಾಗಿ ಬದಲಾಯ್ತು. ಆಸೀಸ್‌ ನೀಡಿದ ಬೃಹತ್‌ ಟಾರ್ಗೆಟ್‌ಗೆ ಪ್ರತಿಯಾಗಿ ಭಾರತ ಕೂಡಾ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದೆ. ಆದರೆ ಈ ಬೆಳವಣಿಗೆಯು ಆತಿಥೇಯರ ಲೆಕ್ಕಾಚಾರ ತಲೆಕೆಳಗು ಮಾಡುವಂತಿದೆ.

ಏಕೆಂದರೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ ಪಂದ್ಯಕ್ಕೆ ಅರ್ಹತೆ ಪಡೆಯುವ ನಿಟ್ಟಿನಲ್ಲಿ ಭಾರತಕ್ಕೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆದರೆ, ಸದ್ಯದ ಪಂದ್ಯದ ಸನ್ನಿವೇಶದ ಪ್ರಕಾರ ಈ ಪಂದ್ಯವು ಡ್ರಾದಲ್ಲಿ ಅಂತ್ಯವಾಗುವ ಸಾಧ್ಯತೆ ಹೆಚ್ಚಿದೆ.

ನರೇಂದ್ರ ಮೋದಿ ಸ್ಟೇಡಿಯಂನ ಪಿಚ್, ಹಿಂದಿನ ಪಂದ್ಯಗಳಿಗಿಂತ ಸ್ವಾಗತಾರ್ಹ ಬದಲಾವಣೆಯಾಗಿದೆ. ಈ ಹಿಂದೆ ಇದು ಸ್ಪಿನ್ನರ್‌ಗಳಿಗೆ ಅನುಕೂಲಕರವಾದ ಶುಷ್ಕ ಮತ್ತು ಧೂಳಿನ ಪರಿಸ್ಥಿತಿ ಹೊಂದಿತ್ತು. ಆದರೆ, ಅಂತಿಮವಾಗಿ ಇಲ್ಲಿ ಬ್ಯಾಟ್ಸ್‌ಮನ್‌ಗಳು ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶ ಸಿಕ್ಕಿದೆ. ಪಂದ್ಯವು ರನ್ ಮತ್ತು ವಿಕೆಟ್‌ಗಳ ರೋಚಕ ಪ್ರದರ್ಶನ ಕಂಡಿತು.

ಉಭಯ ತಂಡಗಳ ನಡುವೆ ಎರಡೂವರೆ ದಿನಗಳಿಗೆ ಅಂತ್ಯಗೊಂಡ ಮೂರನೇ ಟೆಸ್ಟ್‌ ಬಳಿಕ, ಇಂದೋರ್‌ ಪಿಚ್ ಅನ್ನು ಐಸಿಸಿಯು ಕಳಪೆ ಎಂದು ರೇಟ್ ಮಾಡಿತು. ಇದು ಅಹಮಾದಾಬಾದ್‌ ಪಿಚ್‌ ರೂಪಿಸುವ ತಂತ್ರದಲ್ಲಿ ಬದಲಾವಣೆ ತರಲು ಪ್ರೇರೇಪಿಸಿತು. ಇದರ ಪರಿಣಾಮವಾಗಿ, ಇಲ್ಲಿ ಬ್ಯಾಟಿಂಗ್ ಸ್ನೇಹಿ ಪಿಚ್ ನಿರ್ಮಿಸಲಾಗಿದೆ. ಟಾಸ್ ಗೆದ್ದ ನಂತರ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ಅದರ ಲಾಭ ಗಳಿಸಿತು.

ಸದ್ಯ ನಾಲ್ಕನೇ ಟೆಸ್ಟ್‌ನ್ಲಿ ನಾಳಿನ ಒಂದು ದಿನದಾಟ ಮಾತ್ರ ಬಾಕಿ ಉಳಿದಿದೆ. ಸದ್ಯ ಡಬ್ಲ್ಯುಟಿಸಿ ಫೈನಲ್‌ನಲ್ಲಿ ಭಾರತದ ಭವಿಷ್ಯವು ಅಸ್ತಿರವಾಗಿದೆ. ಆಸ್ಟ್ರೇಲಿಯದ ಪ್ರಭಾವಶಾಲಿ ಫಾರ್ಮ್, ಭಾರತದ ಕೆಲಸವನ್ನು ಇನ್ನಷ್ಟು ಸವಾಲಿನ ವಿಷಯವನ್ನಾಗಿ ಮಾಡಿದೆ. ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು, ಭಾರತವು ಈ ಪಂದ್ಯವನ್ನು ಗೆಲ್ಲಬೇಕು. ಡ್ರಾ ಸಾಧಿಸಿದರೂ ಭಾರತ ಬೇರೆ ತಂಡದ ಫಲಿತಾಂಶವನ್ನು ಅವಲಂಬಿಸಬೇಕಾಗುತ್ತದೆ.

ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ, ಡಬ್ಲ್ಯೂಟಿಸಿ PCTಯು 62.5ಕ್ಕೆ ಏರುತ್ತದೆ. ಅದೇ ವೇಳೆ ಸೋತರೆ 56.9ಕ್ಕೆ ಗಮನಾರ್ಹ ಕುಸಿತ ಕಾಣುತ್ತದೆ. ಮತ್ತೊಂದೆಡೆ ಡ್ರಾಗೊಂಡರೆ ಭಾರತದ PCT 58.7ಕ್ಕೆ ಬಂದು ನಿಲ್ಲುತ್ತದೆ. ಹೀಗಾಗಿ ಭಾರತವು ಡ್ರಾ ಸಾಧಿಸುವುದಕ್ಕೂ ಹೆಚ್ಚು ಗೆಲ್ಲುವ ಒತ್ತಡದಲ್ಲಿದೆ.

ಆತಿಥೇಯರಿಗೆ ಪಂದ್ಯದ ಫಲಿತಾಂಶ ಗೆಲುವಿನ ಹೊರತಾಗಿ ಬೇರೇನಾದರೂ ಆದರೆ, ಭಾರತದ ಭವಿಷ್ಯ ಶ್ರೀಲಂಕಾ ಕೈಯಲ್ಲಿರುತ್ತದೆ. ಪ್ರಸ್ತುತ, ಕ್ರೈಸ್ಟ್‌ಚರ್ಚ್‌ನಲ್ಲಿ ನ್ಯೂಜಿಲೆಂಡ್ ಮತ್ತು ಲಂಕಾ ವಿರುದ್ದದ ಮೊದಲ ಟೆಸ್ಟ್‌ ಪಂದ್ಯ ನಡೆಯುತ್ತಿದೆ.‌ ಸದ್ಯ ಶ್ರೀಲಂಕಾ ತಂಡವು 256 ರನ್‌ಗಳ ಮುನ್ನಡೆ ಸಾಧಿಸಿದೆ. ಶ್ರೀಲಂಕಾದ PCT(ಗಳಿಸಿದ ಅಂಕಗಳ ಶೇಕಡಾವಾರು)ಯು ಪ್ರಸ್ತುತ 53.33ರಷ್ಟಿದೆ. ಒಂದು ವೇಳೆ ಶ್ರೀಲಂಕಾ ಸರಣಿಯ ಆರಂಭಿಕ ಪಂದ್ಯವನ್ನು ಗೆದ್ದರೆ, ಅವರ ಪಿಸಿಟಿ 57.58ಕ್ಕೆ ಏರುತ್ತದೆ. ಆದರೆ, ಲಂಕಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲು ಕಿವೀಸ್‌ ವಿರುದ್ಧದ ಎರಡೂ ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕು. ಆಗ ಮಾತ್ರ ಅವರ ಪಿಸಿಟಿಯು 61.1ಕ್ಕೆ ಏರುತ್ತದೆ.

ಒಂದು ವೇಳೆ ಈ ಪಂದ್ಯದಲ್ಲಿ ಭಾರತ ಡ್ರಾ ಸಾಧಿಸಿ, ನ್ಯೂಜಿಲೆಂಡ್ ವಿರುದ್ಧ ಮುಂಬರುವ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದನ್ನು ಗೆಲ್ಲಲು ಶ್ರೀಲಂಕಾ ವಿಫಲವಾದರೆ, ಫೈನಲ್‌ಗೆ ಅರ್ಹತೆ ಪಡೆಯುವ ಸಾಧ್ಯತೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಆದಾಗ್ಯೂ, ಅವರು ಒಂದು ಪಂದ್ಯವನ್ನು ಗೆದ್ದು ಮತ್ತೊಂದು ಪಂದ್ಯದಲ್ಲಿ ಸೋತರೆ, ಅವರ PCT (ಪಡೆದ ಅಂಕಗಳ ಶೇಕಡಾವಾರು) 52.77 ಆಗುತ್ತದೆ. ಇದೇ ವೇಳೆ ಲಂಕಾ ಒಂದು ಪಂದ್ಯವನ್ನು ಗೆದ್ದರೆ ಮತ್ತು ಇನ್ನೊಂದು ಪಂದ್ಯವನ್ನು ಡ್ರಾ ಮಾಡಿಕೊಂಡರೆ, ಪಿಸಿಟಿಯು 55.55ಕ್ಕೆ ಹೆಚ್ಚಾಗುತ್ತದೆ.

ಅಹಮದಾಬಾದ್ ಟೆಸ್ಟ್‌ನಲ್ಲಿ ಭಾರತ ಸೋತರೂ ಅಥವಾ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ ಫೈನಲ್‌ಗೆ ಅರ್ಹತೆ ಪಡೆಯುವ ಅವಕಾಶವಿದೆ ಎಂಬುದು ಗಮನಿಸಬೇಕಾದ ಸಂಗತಿ. ಹೀಗಾಗಿ, ಫೈನಲ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಶ್ರೀಲಂಕಾ ಮುಂಬರುವ ಪಂದ್ಯಗಳಲ್ಲಿ ತಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಬೇಕು. ನಾಳೆ ಕಿವೀಸ್‌ ವಿರುದ್ಧದ ಅಂತಿಮ ದಿನದಾಟದಲ್ಲಿ ಕಿವೀಸ್‌ ಗೆಲುವಿಗೆ 257 ರನ್‌ ಬೇಕು. ಕಿವೀಸ್‌ ಇದರಲ್ಲಿ ಯಶಸ್ವಿಯಾದರೆ, ಭಾರತದ ಒತ್ತಡ ಕಡಿಮೆಯಾಗುತ್ತದೆ.