ಕನ್ನಡ ಸುದ್ದಿ  /  Sports  /  I Am Fit Not Fat I Can Run Between Wickets Faster Than Them Sarfaraz Khan Comments

ದಪ್ಪಗಿದ್ದರೂ ನಾನು ಫಿಟ್​ ಆಗಿದ್ದೇನೆ, ವೇಗವಾಗಿ ಓಡುತ್ತೇನೆ: ಟೀಕಿಸಿದವರಿಗೆ ಸರ್ಫರಾಜ್​ ಖಡಕ್​ ಉತ್ತರ

Sarfaraz Khan: ಸರ್ಫರಾಜ್​ ಖಾನ್​ ಫಿಟ್​ನೆಸ್​​​​ ವಿಚಾರವಾಗಿ ತಂಡಕ್ಕೆ ಆಯ್ಕೆ ಮಾಡುತ್ತಿಲ್ಲ ಎಂಬ ಟೀಕೆಗಳು ಕೇಳಿ ಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಫರಾಜ್​, ನಾನು ಅನೇಕ ಬಾರಿ ಇದೇ ರೀತಿ ಕಾಮೆಂಟ್‌ಗಳನ್ನು ಕೇಳಿದ್ದೇನೆ. ನಿಜವಾಗಿ ನಾನು ತುಂಬಾ ಫಿಟ್ ಆಗಿದ್ದೇನೆ. ನಾನು ನನ್ನ ದೇಹವನ್ನು ಇಷ್ಟಪಡುತ್ತೇನೆ ಎಂದು ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ.

ಸರ್ಫರಾಜ್​ ಖಾನ್​
ಸರ್ಫರಾಜ್​ ಖಾನ್​

25 ವರ್ಷದ ಸರ್ಫರಾಜ್ ಖಾನ್ (Sarfaraz Khan)​​​​ ದೇಶಿ ಕ್ರಿಕೆಟ್​ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ರಣಜಿ, ಸಯ್ಯದ್​ ಮುಷ್ತಾಕ್ ಅಲಿ ಟಿ-ಟ್ವೆಂಟಿ, ವಿಜಯ್​ ಹಜಾರೆ.. ಹೀಗೆ ಎಲ್ಲ ಟೂರ್ನಿಗಳಲ್ಲೂ ರನ್​ ಸುನಾಮಿ ಸೃಷ್ಟಿಸಿದ್ದಾರೆ. ಡೊಮೆಸ್ಟಿಕ್​​​​​ ಕಿಂಗ್ ಪಟ್ಟವನ್ನೂ ಅಲಂಕರಿಸಿದ್ದಾರೆ. ಸರ್ಫರಾಜ್ ಸಾರ್ವಕಾಲಿಕ ಶ್ರೇಷ್ಠ 'ಸರ್' ಡಾನ್ ಬ್ರಾಡ್ಮನ್ ನಂತರ ಹೆಚ್ಚು ಸರಾಸರಿ ಹೊಂದಿದ ವಿಶ್ವದ 2ನೇ ಕ್ರಿಕೆಟರ್​ ಎನಿಸಿದ್ದಾರೆ.

ದೇಶೀ ಕ್ರಿಕೆಟ್​​ನಲ್ಲಿ ರನ್​​​​​ ಪರ್ವವನ್ನೇ ಸೃಷ್ಟಿಸಿದ್ದರೂ ಟೀಮ್​​ ಇಂಡಿಯಾ ಆಯ್ಕೆಗಾರರು ಸರ್ಫರಾಜ್ ಕಡೆಗೆ ಗಮನ ಹರಿಸುತ್ತಲೇ ಇಲ್ಲ. ಕಳೆದ 2 ವರ್ಷದಿಂದ ರಣಜಿ ಕ್ರಿಕೆಟ್​​ನಲ್ಲಿ ರನ್ ​ಶಿಖರವನ್ನೇ ಸರ್ಫರಾಜ್​ ಕಟ್ಟಿದ್ದಾರೆ. ದಾಖಲೆಯ ಮೇಲೆ ದಾಖಲೆ ಬರೆದು ಶತಕಗಳ ಮೇಲೆ ಶತಕ ಸಿಡಿಸಿದರೂ ಅವಕಾಶ ವಂಚಿತರಾಗಿದ್ದಾರೆ. ಇತ್ತೀಚೆಗಷ್ಟೇ ಮುಗಿದ ಬಾರ್ಡರ್​​ - ಗವಾಸ್ಕರ್​ ಟೆಸ್ಟ್​​​​ ಸರಣಿಗೂ ಅವರನ್ನು ಕಡೆಗಣಿಸಲಾಗಿತ್ತು.

ಸರ್ಫರಾಜ್​ ಖಾನ್​ ಫಿಟ್​ನೆಸ್​​​​ ವಿಚಾರವಾಗಿ ತಂಡಕ್ಕೆ ಆಯ್ಕೆ ಮಾಡುತ್ತಿಲ್ಲ ಎಂಬ ಟೀಕೆಗಳು ಕೇಳಿ ಬಂದಿವೆ. ತನ್ನ ತೂಕದ ಬಗ್ಗೆಯೇ ಹೆಚ್ಚು ಚರ್ಚೆ ನಡೀತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸರ್ಫರಾಜ್​, ನಾನು ಅನೇಕ ಬಾರಿ ಇದೇ ರೀತಿ ಕಾಮೆಂಟ್‌ಗಳನ್ನು ಕೇಳಿದ್ದೇನೆ. ನಿಜವಾಗಿ ನಾನು ತುಂಬಾ ಫಿಟ್ ಆಗಿದ್ದೇನೆ. ನಾನು ನನ್ನ ದೇಹವನ್ನು ಇಷ್ಟಪಡುತ್ತೇನೆ ಎಂದು ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ.

ನಾನು ಹೆಚ್ಚಿನ ಆಟಗಾರರಿಗಿಂತ ವೇಗವಾಗಿ ಓಡಬಲ್ಲೆ. ಎಲ್ಲರ ದೇಹ ಒಂದೇ ಆಗಿರುವುದಿಲ್ಲ. ಆಟಗಾರರ ಫಿಟ್ನೆಸ್ ಅನ್ನು ಅವರ ದೇಹದಿಂದ ನಿರ್ಣಯಿಸುವುದು ಸರಿಯಲ್ಲ. ನಾನು ಮೊದಲು ಯೋ-ಯೋ ಪರೀಕ್ಷೆಗಳನ್ನು ತೆಗೆದುಕೊಂಡು ಉತ್ತೀರ್ಣನಾಗಿದ್ದೆ. ಯೋ-ಯೋ ಟೆಸ್ಟ್‌ನಲ್ಲಿ ತೇರ್ಗಡೆಯಾಗದಿದ್ದರೆ ಬಿಸಿಸಿಐ, ಐಪಿಎಲ್‌ಗೂ ಅವಕಾಶ ನೀಡುವುದಿಲ್ಲ ಎಂಬುದು ಅನೇಕರಿಗೆ ತಿಳಿದಿಲ್ಲ' ಎಂದು ಸರ್ಫರಾಜ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಆಟಗಾರರ ಫಿಟ್​​​ನೆಸ್​ ವಿಚಾರದಲ್ಲಿ ಟೀಮ್​​​ ಇಂಡಿಯಾ ಹೆಚ್ಚು ಗಮನ ಹರಿಸಿದೆ. ಯೋ-ಯೋ ಟೆಸ್ಟ್‌ನಲ್ಲಿ ವಿಫಲರಾದ ಯಾವುದೇ ಆಟಗಾರನನ್ನೂ ತಂಡಕ್ಕೆ ಕರೆಸಿಕೊಳ್ಳುತ್ತಿಲ್ಲ. ಅಡಿಲೇಡ್ ಟೆಸ್ಟ್ ಬಳಿಕ ಪೃಥ್ವಿ ಶಾಗೆ ಒಂದೇ ಒಂದು ಟೆಸ್ಟ್ ಪಂದ್ಯ ಆಡುವ ಅವಕಾಶವನ್ನೂ ನೀಡಲಾಗಿಲ್ಲ. ಐಪಿಎಲ್ 2022 ಸೀಸನ್‌ಗೆ ಮುನ್ನ ಬಿಸಿಸಿಐ ನಡೆಸಿದ ಯೋ-ಯೋ ಟೆಸ್ಟ್‌ನಲ್ಲಿ ಪೃಥ್ವಿ ಶಾ ವಿಫಲರಾಗಿದ್ದಾರೆ. ಈ ಕಾರಣದಿಂದಲೇ ದೇಶಿ ಟೂರ್ನಿಗಳಲ್ಲಿ ಎಷ್ಟೇ ಉತ್ತಮ ಪ್ರದರ್ಶನ ನೀಡಿದರೂ ಭಾರತ ತಂಡದಲ್ಲಿ ಸ್ಥಾನ ಪಡೆಯುವುದಿಲ್ಲ ಎಂಬ ಅನುಮಾನ ಹಲವರದ್ದು.

ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ​ 37 ಪಂದ್ಯಗಳನ್ನು ಆಡಿರುವ ಸರ್ಫರಾಜ್ ಖಾನ್, 79.65 ಸರಾಸರಿಯಲ್ಲಿ 3505 ರನ್ ಗಳಿಸಿದ್ದಾರೆ. ಮುಂಬೈನ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸರ್ಫರಾಜ್, ಫಸ್ಟ್​ ಕ್ಲಾಸ್​ ಕ್ರಿಕೆಟ್​​ನಲ್ಲಿ ಸರ್ ಡಾನ್ ಬ್ರಾಡ್ಮನ್‌ಗೆ ಹತ್ತಿರವಾಗಿದ್ದಾರೆ. ಒಟ್ಟು 13 ಶತಕ, 9 ಅರ್ಧಶತಕಗಳನ್ನೂ ಸಿಡಿಸಿ ಗಮನ ಸೆಳೆದಿದ್ದಾರೆ.

ಸರ್ಫರಾಜ್​ ಖಾನ್​.. ದೇಶಿಯ ಕ್ರಿಕೆಟ್​​ನ ಮಿಸ್ಟರ್​ ಕನ್ಸಿಸ್ಟೆಂಟ್​. 3 ರಣಜಿ ಸೀಸನ್​ಗಳಲ್ಲಿ ಧಮಾಕ ಸೃಷ್ಟಿಸಿದ್ದಾರೆ. 2019-20ರ ರಣಜಿ ಸೀಸನ್​ನಲ್ಲಿ 154.66ರ ಸರಾಸರಿಯಲ್ಲಿ ಸರ್ಫರಾಜ್​, 928 ರನ್​ ಸಿಡಿಸಿದ್ದರು. 2021-22ರ ಸೀಸನ್​ನಲ್ಲಿ 122.75ರ ಸರಾಸರಿಯಲ್ಲಿ 982 ರನ್​ಗಳಿಸಿದ್ದ ಮುಂಬೈಕರ್​, ಈ ವರ್ಷದ ಟೂರ್ನಿಯಲ್ಲಿ 92.66ರ ಸರಾಸರಿಯಲ್ಲಿ 556 ರನ್​ಗಳಿಸಿದ್ದಾರೆ.

ಆದರೆ ಟೀಮ್​ ಇಂಡಿಯಾ ಸೆಲೆಕ್ಷನ್​ ಕಮಿಟಿಗೆ ಮಾತ್ರ ಇದ್ಯಾವುದೂ ಕಂಡಿಲ್ಲ.. ಇದನ್ನ ಯುವ ಆಟಗಾರರ ಬಗೆಗಿನ ನಿರ್ಲ್ಯಕ್ಷ ಅನ್ನಬೇಕೋ ಅಥವಾ ಆಯ್ಕೆಯಲ್ಲಿ ರಣಜಿ ಟೂರ್ನಿಯ ಕಡೆಗಣನೆ ಅನ್ನಬೇಕೋ? ಅರ್ಥವಾಗ್ತಿಲ್ಲ.!