ನಾನೊಬ್ಬ ಪರಿಪೂರ್ಣ ಆಟಗಾರ, ನನಗಿಂತ ಶ್ರೇಷ್ಠರಿಲ್ಲ; ಮೆಸ್ಸಿಗೆ ಪರೋಕ್ಷವಾಗಿ ಕುಟುಕಿದರೇ ಕ್ರಿಸ್ಟಿಯಾನೊ ರೊನಾಲ್ಡೊ
Cristiano Ronaldo: ನಾನು ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ. ನಾನು ಎಡಗಾಲಿನಿಂದ ಗಳಿಸಿದ ಗೋಲುಗಳಿಗೆ ಸಂಬಂಧಿಸಿದಂತೆ ಇತಿಹಾಸದಲ್ಲಿ ಅಗ್ರ 10 ರಲ್ಲಿ ಇದ್ದೇನೆ. ನಾನು ನನಗಿಂತ ಶ್ರೇಷ್ಠರನ್ನು ನೋಡಿಲ್ಲ ಎಂದು ಕ್ರಿಸ್ಟಿಯಾನೊ ರೊನಾಲ್ಡೊ ಹೇಳಿದ್ದಾರೆ.
ಪೋರ್ಚುಗಲ್ ಸೂಪರ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಅವರು (Cristiano Ronaldo) ಫೆಬ್ರವರಿ 5ರಂದು 40ನೇ ವಸಂತಕ್ಕೆ ಕಾಲಿಟ್ಟರು. 1985ರಲ್ಲಿ ಜನಿಸಿದ ಫುಟ್ಬಾಲ್ ಕಿಂಗ್ ಪ್ರಸ್ತುತ ಸೌದಿ ಅರೇಬಿಯಾದ ಕ್ಲಬ್ ಅಲ್ ನಾಸ್ಸರ್ ಪರ ಕಣಕ್ಕಿಳಿಯುತ್ತಿದ್ದಾರೆ. 2026ರ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ ಆಡುವುದರ ಜೊತೆಗೆ ಫುಟ್ಬಾಲ್ ಇತಿಹಾಸದಲ್ಲಿ 1,000 ಗೋಲುಗಳ ಮೈಲಿಗಲ್ಲನ್ನು ಮುಟ್ಟುವ ಗುರಿಯನ್ನೂ ಹೊಂದಿರುವ ಅವರ ಗೋಲುಗಳ ಸಂಖ್ಯೆ 923. ಅಂತಾರಾಷ್ಟ್ರೀಯ ಗೋಲುಗಳ ಸಂಖ್ಯೆ 135.
ತಮ್ಮ ವೃತ್ತಿಜೀವನ ಅಂತ್ಯದಲ್ಲಿದ್ದರೂ ರೊನಾಲ್ಡೊ ಅವರಿಗೆ ಫುಟ್ಬಾಲ್ ಮೇಲಿರುವ ಪ್ರೀತಿ ಅಥವಾ ಗೋಲುಗಳ ಹಸಿವು ಕಿಂಚಿತ್ತೂ ಕಡಿಮೆಯಾಗಿಲ್ಲ. ಬದಲಾಗಿ, ಅದೊಂದು ವ್ಯಸನವಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಮ್ಯಾಂಚೆಸ್ಟರ್ ಯುನೈಟೆಡ್ನ ಮಾಜಿ ತಾರೆ ರೊನಾಲ್ಡೊ ಅವರು ಪ್ರತಿಷ್ಠಿತ ಬ್ಯಾಲನ್ ಡಿ'ಓರ್ ಪ್ರಶಸ್ತಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿ ಸುದ್ದಿಯಲ್ಲಿದ್ದಾರೆ. ಇದೇ ವೇಳೆ ಅರ್ಜೆಂಟೈನಾದ ಸ್ಟಾರ್ ಲಿಯೊನೆಲ್ ಮೆಸ್ಸಿ ಅವರನ್ನು ಪರೋಕ್ಷವಾಗಿ ಕುಟುಕಿದ್ದಾರೆ.
ಐದು ಬ್ಯಾಲನ್ ಡಿ'ಓರ್ ವಿಶ್ವಾಸಾರ್ಹತೆ ಪ್ರಶ್ನಿಸಿದ ರೊನಾಲ್ಡೊ
'2024ರಲ್ಲಿ ನೀಡಿದ ಬ್ಯಾಲನ್ ಡಿ'ಓರ್ ಪ್ರಶಸ್ತಿಗೆ ಸ್ಪೇನ್ ಆಟಗಾರ ರೋಡ್ರಿ ಅವರಿಗಿಂತ ಬ್ರೆಜಿಲ್ನ ವಿನಿಸಿಯಸ್ ಜೂನಿಯರ್ ಹೆಚ್ಚು ಅರ್ಹರಾಗಿದ್ದರು ಎಂದು ನಾನು ಭಾವಿಸುತ್ತೇನೆ. ಪ್ರಶಸ್ತಿ ಅರ್ಹರಿಗೆ ಸಿಕ್ಕಿಲ್ಲ. ಹಾಗಾಗಿ ನನಗೆ ಯಾವುದೇ ವಿಶ್ವಾಸಾರ್ಹತೆ ಇದೆ ಎಂದು ಅನಿಸುತ್ತಿಲ್ಲ. ನಾನು ಈ ಬಗ್ಗೆ ಈ ಹಿಂದೆ ಯೋಚಿಸಿದ್ದೇನೆ. ಇದು ಕೋಪವನ್ನೂ ತರಿಸಿದೆ. ಆದರೆ ಇದರಿಂದ ಯುದ್ದವನ್ನೇನು ಗೆಲ್ಲಲು ಸಾಧ್ಯವಿಲ್ಲ ಎಂದು ಅರಿತುಕೊಂಡೆ' ಎಂದು ಹೇಳಿದ್ದಾರೆ.
ಐದು ಬ್ಯಾಲನ್ ಡಿ'ಓರ್ ಮಾಲೀಕ ಕ್ರಿಸ್ಟಿಯಾನೊ ರೊನಾಲ್ಡೊ ಮಾತು ಮುಂದುವರೆಸಿ, ‘ನಾನು ಆಟದಲ್ಲಿ ತುಂಬಾ ಮುಂದಿದ್ದೇನೆ. ನಾನು ಸ್ಪರ್ಧೆಯನ್ನು ಪ್ರೀತಿಸುತ್ತೇನೆ. ಕೆಲವೊಮ್ಮೆ ನಾನು ನನ್ನ ದಾಖಲೆಯನ್ನು ಮರೆತುಬಿಡುತ್ತೇನೆ. ನನ್ನ ಸ್ಥಾನದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ, ಅವರು 10 ವರ್ಷಗಳ ಹಿಂದೆ ಫುಟ್ಬಾಲ್ ತೊರೆಯುತ್ತಿದ್ದರು. ಆದರೆ ನಾನು ಉಳಿದವರಿಗಿಂತ ತುಂಬಾ ಭಿನ್ನವಾಗಿದ್ದೇನೆ’ ಎಂದು ಹೇಳಿದ್ದಾರೆ.\
ಅಲ್ ನಾಸ್ಸರ್ ಕ್ಲಬ್ನ ಸ್ಟಾರ್ ಫುಟ್ಬಾಲ್ ಆಟಗಾರ ತನ್ನನ್ನು ಅತ್ಯಂತ ಪರಿಪೂರ್ಣ ಫುಟ್ಬಾಲ್ ಆಟಗಾರ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ತನಗಿಂತ ಯಾರೂ ಉತ್ತರಿಲ್ಲ ಎಂದಿದ್ದಾರೆ. ‘ಪ್ರತಿಯೊಬ್ಬರ ಆಯ್ಕೆ ವಿಭಿನ್ನವಾಗಿರಬಹುದು. ಕೆಲವರು ಮೆಸ್ಸಿಯನ್ನು ಇಷ್ಟಪಡಬಹುದು, ಕೆಲವೊಬ್ಬರು ಪೀಲೆ ಅಥವಾ ಮರಡೋನಾ ಅವರನ್ನು ಇಷ್ಟಪಡಬಹುದು. ಅವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಆದರೆ ಈ ಎಲ್ಲರಿಗಿಂತ ನಾನು ಭಿನ್ನ’ ಎಂದಿದ್ದಾರೆ.
ನನಗಿಂತ ಉತ್ತಮರಿಲ್ಲ ಎಂದ ರೊನಾಲ್ಡೊ
‘ರೊನಾಲ್ಡೊ ಸಂಪೂರ್ಣ ಆಟಗಾರನಲ್ಲ ಎಂದು ಯಾರಾದರೂ ಹೇಳಿದರೆ, ಅದು ಸುಳ್ಳು. ನಾನು ಅತ್ಯಂತ ಪರಿಪೂರ್ಣ ಆಟಗಾರ. ನನಗಿಂತ ಉತ್ತಮವಾದವರನ್ನು ನಾನು ನೋಡಿಲ್ಲ. ಇದನ್ನು ನನ್ನ ಹೃದಯದಿಂದ ಹೇಳುತ್ತೇನೆ ಎಂದು ಹೇಳಿದ್ದಾರೆ. ಲಿಯೊನೆಲ್ ಮೆಸ್ಸಿ ಅವರು ಆಧುನಿಕ ಫುಟ್ಬಾಲ್ ಜಗತ್ತಿನ ದಿಗ್ಗಜ ಎಂದು ಕರೆಸಿಕೊಳ್ಳುತ್ತಾರೆ. ಹೀಗಿದ್ದರೂ ತನಗಿಂತ ಶ್ರೇಷ್ಠರಿಲ್ಲ’ ಎಂದು ಹೇಳುವ ಮೂಲಕ ರೊನಾಲ್ಡೊ ಟೀಕೆಗೆ ಗುರಿಯಾಗಿದ್ದಾರೆ. ಅಲ್ಲದೆ, ಮೆಸ್ಸಿಗೆ ಪರೋಕ್ಷವಾಗಿ ಕುಟುಕಿದರೇ ಎನ್ನುವ ಚರ್ಚೆಯೂ ಹುಟ್ಟು ಹಾಕಿದೆ.
‘ನಾನು ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ. ನಾನು ಎಡಗಾಲಿನಿಂದ ಗಳಿಸಿದ ಗೋಲುಗಳಿಗೆ ಸಂಬಂಧಿಸಿ ಇತಿಹಾಸದಲ್ಲಿ ಅಗ್ರ 10 ರಲ್ಲಿ ಇದ್ದೇನೆ. ಇವು ಸಂಖ್ಯೆಗಳು, ನಾನು ಇದುವರೆಗೆ ಅಸ್ತಿತ್ವದಲ್ಲಿದ್ದ ಅತ್ಯಂತ ಸಂಪೂರ್ಣ ಆಟಗಾರ. ನಾನು ನನ್ನ ತಲೆಯಿಂದ ಚೆನ್ನಾಗಿ ಆಡುತ್ತೇನೆ. ಉತ್ತಮ ಫ್ರೀ ಕಿಕ್‌ಗಳನ್ನು ತೆಗೆದುಕೊಳ್ಳುತ್ತೇನೆ. ನಾನು ಬಲಶಾಲಿಯಾಗಿದ್ದೇನೆ. ನಾನು ಜಿಗಿಯುತ್ತೇನೆ. ನಾನು ನನಗಿಂತ ಉತ್ತಮರನ್ನು ನೋಡಿಲ್ಲ’ ಎಂದು ರೊನಾಲ್ಡೊ ಸ್ಪ್ಯಾನಿಷ್ ದೂರದರ್ಶನ ಚಾನೆಲ್ ಲಾ ಸೆಕ್ಸ್ಟಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಪೋರ್ಚುಗಲ್‌ನ ಈ ತಾರೆ ಪುರುಷರ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ದಾಖಲೆ ಹೊಂದಿದ್ದಾರೆ. ಇದರಲ್ಲಿ 217 ಪಂದ್ಯಗಳಲ್ಲಿ 135 ಗೋಲು ಗಳಿಸಿ ದಾಖಲೆ ನಿರ್ಮಿಸಿದ್ದಾರೆ. 2006 ರಿಂದ ಪ್ರತಿ ಟೂರ್ನಿಯಲ್ಲೂ ಕಾಣಿಸಿಕೊಂಡಿರುವ ಐದು ವಿಭಿನ್ನ ಫಿಫಾ ವಿಶ್ವಕಪ್ ಆವೃತ್ತಿಗಳಲ್ಲಿ ಗೋಲು ಗಳಿಸಿದ ಏಕೈಕ ಆಟಗಾರ ರೊನಾಲ್ಡೊ. 2026ರ ವಿಶ್ವಕಪ್ ಆಡಲು ಸಜ್ಜಾಗಿರುವ ಅವರು, ಆರು ವಿಶ್ವಕಪ್ಗಳಲ್ಲಿ ಕಾಣಿಸಿಕೊಂಡ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ರೊನಾಲ್ಡೊ ಪಾತ್ರರಾಗುವ ಸಾಧ್ಯತೆ ಇದೆ.
