ಕನ್ನಡ ಸುದ್ದಿ  /  Sports  /  Icc Reveals Five Players Who Could Perform Well On The Big Stage

T20 World Cup 2022: ವಿಶ್ವಕಪ್‌ನಲ್ಲಿ ಅಬ್ಬರಿಸಲಿರುವ ಆಟಗಾರರನ್ನು ಹೆಸರಿಸಿದ ಐಸಿಸಿ, ಭಾರತದಿಂದ ಯಾರು?

ಮಹತ್ವದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಗೇಮ್‌ ಚೇಂಜರ್‌ ಆಗಬಹುದಾದ ಆಟಗಾರರ ಹೆಸರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಹೆಸರಿಸಿದೆ.

ವಿಶ್ವಕಪ್‌ನಲ್ಲಿ ಅಬ್ಬರಿಸಲಿರುವ ಆಟಗಾರರಿವರು
ವಿಶ್ವಕಪ್‌ನಲ್ಲಿ ಅಬ್ಬರಿಸಲಿರುವ ಆಟಗಾರರಿವರು (ICC)

ಟಿ20 ವಿಶ್ವಕಪ್‌ ಟೂರ್ನಿಗೆ ದಿನಗಣನೆ ಆರಂಭವಾಗಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚಟುಕು ಮಹಾಸಮರದಲ್ಲಿ ಗೆಲ್ಲಲು ವಿವಿಧ ರಾಷ್ಟ್ರಗಳು ಭರ್ಜರಿ ತಯಾರಿ ನಡೆಸಿವೆ. ಮಹಾಸಮರಕ್ಕೂ ಮುನ್ನ ವಿವಿಧ ತಂಡಗಳ ಲೆಕ್ಕಾಚಾರ ಶುರುವಾಗಿದೆ. ಈ ನಡುವೆ ಈ ಮಹತ್ವದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಗೇಮ್‌ ಚೇಂಜರ್‌ ಆಗಬಹುದಾದ ಆಟಗಾರರ ಹೆಸರನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ಹೆಸರಿಸಿದೆ. ಆ ಐದು ಆಗಾರರು ಯಾರು ಎಂಬುದನ್ನು ನೋಡೋಣ.

1. ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)

ಕಳೆದ ವರ್ಷ ನಡೆದ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಬಳಿಕ ಅತಿ ಹೆಚ್ಚು ರನ್‌ ಕಲೆ ಹಾಕಿದ ಆಟಗಾರ ಡೇವಿಡ್‌ ವಾರ್ನರ್‌. ಬ್ಯಾಟ್‌ ಹಿಡಿದು ಒಮ್ಮೆ ಅಬ್ಬರಿಸಲು ಶುರುವಿಟ್ರೆ ಎದುರಾಳಿಗಳಿಗೆ ವಾರ್ನಿಂಗ್‌ ಖಚಿತ ಎಂಬಂತಹ ಆಟಗಾರ ಇವರು. ಆಸ್ಟ್ರೇಲಿಯಾ ನೆಲದಲ್ಲಂತೂ ಇವರ ಅಬ್ಬರ ದುಪ್ಪಟ್ಟಾಗುತ್ತದೆ.

ಕಳೆದ ವರ್ಷದ ಪಂದ್ಯಾವಳಿಯಲ್ಲಿ ವಾರ್ನರ್ ಮೂರು ಅರ್ಧ ಶತಕಗಳನ್ನು ಬಾರಿಸಿದ್ದರು. ಅಲ್ಲದೆ ಸುಮಾರು 150ರ ಪ್ರಭಾವಶಾಲಿ ಸ್ಟ್ರೈಕ್ ರೇಟ್‌ನೊಂದಿಗೆ 289 ರನ್‌ ಕಲೆ ಹಾಕಿದ್ದರು. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡವು ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಇವರ ಭರ್ಜರಿ ಫಾರ್ಮ್‌ ಪ್ರಮುಖ ಪಾತ್ರ ವಹಿಸಿತ್ತು. ಈಗಾಗಲೇ ಇವರನ್ನು ಟೂರ್ನಿಯಲ್ಲಿ ಸುರಕ್ಷಿತವಾಗಿ ಉಳಿಸಲು, ಭಾರತ ಸರಣಿಯಿಂದ ಅವರಿಗೆ ರೆಸ್ಟ್‌ ನೀಡಲಾಗಿತ್ತು. ಅವರ ಪ್ರಾಮುಖ್ಯತೆ ತಂಡಕ್ಕೆ ಎಷ್ಟಿದೆ ಎಂಬುದು ಇದರಲ್ಲೇ ಅರ್ಥವಾಗುತ್ತದೆ.

2. ವನಿಂದು ಹಸರಂಗ (ಶ್ರೀಲಂಕಾ)

ಶ್ರೀಲಂಕಾದ ಆಲ್‌ರೌಂಡರ್ ವನಿಂದು ಹಸರಂಗ ಈಗಾಗಲೇ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ತಮ್ಮ ಛಾಪು ಮೂಡಿಸಿದ್ದಾರೆ. ಆರ್‌ಸಿಬಿಯ ಗೇಮ್‌ ಚೇಂಜರ್‌ ಆಗಿ ಹಲವು ಪಂದ್ಯಗಳಲ್ಲಿ ಕೊಡುಗೆ ನೀಡಿದ್ದಾರೆ. ಇತ್ತೀಚೆಗೆ ದ್ವೀಪರಾಷ್ಟ್ರ ಏಷ್ಯಾಕಪ್‌ ಎತ್ತಿಹಿಡಿಯುವಲ್ಲೂ ಇವರ ಪಾತ್ರ ನಿರ್ಣಾಯಕವಾಗಿತ್ತು. ಆಲ್‌ರೌಂಡರ್‌ ಆಗಿರುವ ಹಸರಂಗ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲವಾದರೂ, ಅವರ ಬೌಲಿಂಗ್‌ನಿಂದ ಎದುರಾಳಿ ತಂಡದ ವಿಕೆಟ್‌ಗಳು ಉರುಳುವುದು ಖಚಿತ. ಕಳೆದ ಬಾರಿಯ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್(16) ಪಡೆಯುವ ಮೂಲಕ ಎಲ್ಲರನ್ನೂ ಹಿಂದಿಕ್ಕಿದ್ದರು. ಆಸ್ಟ್ರೇಲಿಯದ ಬೃಹತ್‌ ಮೈದಾನಗಳು 25 ವರ್ಷ ಹರೆಯದ ಹಸರಂಗಗೆ ಸೂಕ್ತ ವೇದಿಕೆಯಾಗಲಿದೆ. ಲಂಕಾ ತಂಡದ ಪ್ರಮುಖ ವಿಕೆಟ್ ಟೇಕರ್‌ಗಳಲ್ಲಿ ಸ್ಟಾರ್ ಸ್ಪಿನ್ನರ್ ಸ್ಥಾನ ಪಡೆಯುವುದು ಖಚಿತವಾಗಿದೆ.

3. ಜೋಸ್ ಬಟ್ಲರ್ (ಇಂಗ್ಲೆಂಡ್)

ಇಂಗ್ಲೆಂಡ್ ತಂಡದ ನಾಯಕ ಪ್ರಸ್ತುತ ಗಾಯದಿಂದ ಬಳಲುತ್ತಿದ್ದಾರೆ. 2010ರ ವಿಶ್ವಕಪ್‌ ಚಾಂಪಿಯನ್‌ ತಂಡಕ್ಕೆ ಅವರು ಶೀಘ್ರದಲ್ಲೇ ಮರಳು ಸಾಧ್ಯತೆ ಇದೆ. ಕಳೆದ 12 ತಿಂಗಳುಗಳಲ್ಲಿ ಬಟ್ಲರ್‌ಗಿಂತ ಉತ್ತಮ ಫಾರ್ಮ್‌ನಲ್ಲಿ ವಿಶ್ವದಲ್ಲೇ ಯಾರೂ ಇಲ್ಲ. 32 ವರ್ಷ ವಯಸ್ಸಿನ ಬ್ರಿಟಿಷ್‌ ಬ್ಯಾಟರ್‌, ಕಳೆದ ವರ್ಷದ ಯುಎಇ ಮತ್ತು ಓಮನ್‌ನಲ್ಲಿ ನಡೆದ ವಿಶ್ವಕಪ್‌ ಕ್ರೀಡಾಕೂಟದಲ್ಲಿ ಶತಕ ಸಿಡಿಸಿದ ಏಕೈಕ ಆಟಗಾರ ಎಂಬುದು ಗಮನಾರ್ಹ ಸಂಗತಿ.

ಬಟ್ಲರ್ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಜೇಯ 101 ರನ್ ಸಿಡಿಸಿದ್ದರು. ಈ ವರ್ಷದ ಐಪಿಎಲ್ ಆವೃತ್ತಿಯಲ್ಲಿ ಅವರು ಮೇಲಿಂದ ಮೇಲೆ ನಾಲ್ಕು ಶತಕಗಳನ್ನು ಸಿಡಿಸಿ, ರಾಜಸ್ಥಾನ್ ರಾಯಲ್ಸ್‌ ಪರ 863 ರನ್ ಗಳಿಸಿದ್ದಾರೆ. ಜುಲೈನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತವರಿನ ಸರಣಿಯಲ್ಲಿ ಕೊಂಚ ಕಳಪೆ ಪ್ರದರ್ಶನ ನೀಡಿದ್ದರು. ಆದರೆ ಆಸ್ಟ್ರೇಲಿಯಾದಲ್ಲಿ ಬಟ್ಲರ್ ಪುಟಿದೇಳುವುದು ಖಚಿತವಾಗಿದೆ.

4. ಸೂರ್ಯಕುಮಾರ್ ಯಾದವ್ (ಭಾರತ)

2022ರಲ್ಲಿ ಸೂರ್ಯಕುಮಾರ್ ಯಾದವ್ ಫಾರ್ಮ್‌ ಅಮೋಘವಾಗಿದೆ. ಇವರ ಬಗ್ಗೆ ಈಗಾಗಲೇ ಜಾಗತಿಕ ಕ್ರಿಕೆಟ್‌ ತಜ್ಞರು ಬಹಳ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಸ್ಫೋಟಕ ಫಾರ್ಮ್‌ನಲ್ಲಿರುವ ಬಲಗೈ ಆಟಗಾರ, ಟೀಂ ಇಂಡಿಯಾದ ಪ್ರಬಲ ಅಸ್ತ್ರ. ಈ ವರ್ಷ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಕಲೆ ಹಾಕಿದ ಆಟಗಾರ ಕೂಡಾ ಇವರೇ. ಇತ್ತೀಚೆಗೆ ನಡೆಯುತ್ತಿರುವ ಸರಣಿಯಲ್ಲಿ ಮೇಲಿಂದ ಮೇಲೆ ಉತ್ತಮ ರನ್‌ ಕಲೆ ಹಾಕುತ್ತಿದ್ದಾರೆ. ಯಾವುದೇ ಭೀತಿಯಿಲ್ಲದೆ ಬ್ಯಾಟ್‌ ಬೀಸುತ್ತಿದ್ದಾರೆ.

ಕಳೆದ ಬಾರಿ ಟಿ20 ವಿಶ್ವಕಪ್‌ನಲ್ಲಿ ಸೂರ್ಯ ಕಳಪೆ ಪ್ರದರ್ಶನ ನೀಡಿದ್ದರು. ಆದರೆ ಆ ಬಳಿಕ ಫಾರ್ಮ್‌ಗೆ ಮರಳಿದರು. ಇತ್ತೀಚಿನ ಶ್ರೇಯಾಂಕ ಪಟ್ಟಿಯಲ್ಲಿ ವಿಶ್ವದ ನಂಬರ್‌ 2 ಟಿ20 ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ.

5. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ)

ಅನುಭವಿ ಪಾಕಿಸ್ತಾನದ ಆರಂಭಿಕ ಆಟಗಾರ ರಿಜ್ವಾನ್‌ಗಿಂತ ಹೆಚ್ಚು ಸ್ಥಿರವಾದ ಟಿ20 ಬ್ಯಾಟರ್‌ ಬೇರೊಬ್ಬ ಸಿಗಲು ಸಾಧ್ಯವಿಲ್ಲ. ಪಾಕಿಸ್ತಾನ ತಂಡಕ್ಕೆ ಇವರು ದೊಡ್ಡ ಅಸ್ತ್ರ ಹಾಗೂ ಭರವಸೆಯ ಆಟಗಾರ. ಅವರು ಈಗ ವಿಶ್ವದ ನಂ.1 ಟಿ20 ಬ್ಯಾಟರ್ ಆಗಿರುವುದೇ ಇದಕ್ಕೆ ಸಾಕ್ಷಿ. ಪಾಕಿಸ್ತಾನ ಕಪ್‌ ಗೆಲ್ಲುವುದು ಇವರ ಫಾರ್ಮ್‌ ಮೇಲೆ ನಿಂತಿದೆ ಎಂದರೂ ಅತಿಶಯೋಕ್ತಿ ಅಲ್ಲ. 30 ವರ್ಷ ಹರೆಯದ ಈ ಆಟಗಾರ ಕಳೆದ ವರ್ಷದ ನಡೆದ ಟೂರ್ನಿಯಲ್ಲಿ ಉತ್ತಮವಾಗಿ ಆಡಿದ್ದರು. 2021ರ ಟಿ20 ವಿಶ್ವಕಪ್‌ನಲ್ಲಿ ರಿಜ್ವಾನ್ ಮೂರು ಅರ್ಧ ಶತಕಗಳನ್ನು ಬಾರಿಸಿದರು. 70ರ ಸರಾಸರಿಯಲ್ಲಿ ಒಟ್ಟು 281 ರನ್ ಸಿಡಿಸಿದರು.

ವಿಭಾಗ