ಕನ್ನಡ ಸುದ್ದಿ  /  Sports  /  Icc World Cup 2023 To Get Underway In October And November

ICC World Cup 2023: ಅಕ್ಟೋಬರ್‌ 5ರಿಂದ ಏಕದಿನ ವಿಶ್ವಕಪ್; ಭಾರತದ 12 ಮೈದಾನಗಳಲ್ಲಿ ಪಂದ್ಯ ಆಯೋಜನೆ ಸಾಧ್ಯತೆ

ವರದಿಯ ಪ್ರಕಾರ, ಏಕದಿನ ವಿಶ್ವಕಪ್‌ಗೆ ಅಕ್ಟೋಬರ್ 5ರಂದು ಭಾರತದಲ್ಲಿ ಚಾಲನೆ ದೊರೆಯಲಿದೆ. ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯವು ಅಹಮದಾಬಾದ್‌ನ ಪ್ರಸಿದ್ಧ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಭಾರತ ತಂಡವನ್ನು ರೋಹಿತ್‌ ಶರ್ಮಾ ಮುನ್ನಡೆಸಲಿದ್ದಾರೆ.
ಭಾರತ ತಂಡವನ್ನು ರೋಹಿತ್‌ ಶರ್ಮಾ ಮುನ್ನಡೆಸಲಿದ್ದಾರೆ. (Getty Images)

ಎರಡು ಬಾರಿಯ ವಿಶ್ವಕಪ್‌ ಚಾಂಪಿಯನ್ ಭಾರತವು, ಈ ವರ್ಷದ ಅಕ್ಟೋಬರ್ ಹಾಗೂ ನವೆಂಬರ್‌ ತಿಂಗಳಲ್ಲಿ ಐಸಿಸಿ ಏಕದಿನ ವಿಶ್ವಕಪ್‌ನ 2023ರ ಆವೃತ್ತಿಯನ್ನು ಆಯೋಜಿಸಲಿದೆ ಎಂದು ವರದಿಯಾಗಿದೆ. ಐಸಿಸಿ ಟೂರ್ನಿಯ ಮುಂಬರುವ ಆವೃತ್ತಿಯು ಅಕ್ಟೋಬರ್ 5ರಂದು ಭಾರತದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಚತುರ್ವಾರ್ಷಿಕ ಟೂರ್ನಿಯ 1983 ಮತ್ತು 2011ರ ಆವೃತ್ತಿಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ಭಾರತವು, ತವರಿನಲ್ಲೇ ನಡೆಯುತ್ತಿರುವ ಟೂರ್ನಿಯಲ್ಲಿ ಗೆದ್ದು ಟ್ರೋಫಿಯ ಬರವನ್ನು ನೀಗಿಸಲು ಆಶಿಸುತ್ತಿದೆ. ಮೆನ್ ಇನ್ ಬ್ಲೂ ಕೊನೆಯ ಬಾರಿಗೆ 2011ರಲ್ಲಿ ಭಾರತದಲ್ಲೇ ನಡೆದಿದ್ದ ಟೂರ್ನಿಯಲ್ಲಿ ಟ್ರೋಫಿಯನ್ನು ಎತ್ತಿ ಹಿಡಿದು ಸಂಭ್ರಮಿಸಿತ್ತು.

2023ರ ಆವೃತ್ತಿಯ ವಿಶ್ವಕಪ್ ಆವೃತ್ತಿಯಲ್ಲಿ ಎರಡು ಬಾರಿಯ ಚಾಂಪಿಯನ್‌ಗಳನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಭಾರತ ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿತ್ತು. ಏಕದಿನ ವಿಶ್ವಕಪ್‌ಗೆ ಮುನ್ನ ಈ ವರ್ಷದ ಜೂನ್‌ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತ ತಂಡವನ್ನು ರೋಹಿತ್ ಮುನ್ನಡೆಸಲಿದ್ದಾರೆ.

ವರದಿ ಏನು ಹೇಳುತ್ತದೆ?

ESPN Cricinfo ವರದಿಯ ಪ್ರಕಾರ, ಏಕದಿನ ವಿಶ್ವಕಪ್‌ಗೆ ಅಕ್ಟೋಬರ್ 5ರಂದು ಭಾರತದಲ್ಲಿ ಚಾಲನೆ ದೊರೆಯಲಿದೆ. ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯವು ಅಹಮದಾಬಾದ್‌ನ ಪ್ರಸಿದ್ಧ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಹಮದಾಬಾದ್ ಮೈದಾನವು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿದೆ.

ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಗುವಾಹಟಿ, ಹೈದರಾಬಾದ್, ಕೋಲ್ಕತ್ತಾ, ಲಖನೌ, ಇಂದೋರ್, ರಾಜ್‌ಕೋಟ್ ಮತ್ತು ಮುಂಬೈ ಮೈದಾನಗಳನ್ನು ಪಂದ್ಯಗಳಿಗೆ ಆತಿಥ್ಯ ವಹಿಸಲು ಶಾರ್ಟ್‌ಲಿಸ್ಟ್ ಮಾಡಲಾಗಿದೆ. 50 ಓವರ್‌ಗಳ ವಿಶ್ವಕಪ್ ಭಾರತದಲ್ಲಿ 46 ದಿನಗಳ ಕಾಲ ನಡೆಯಲಿದೆ. ಅಂದರೆ ಬರೋಬ್ಬರಿ ಒಂದೂವರೆ ತಿಂಗಳು ಕ್ರಿಕೆಟ್‌ ಹಬ್ಬ ಇರಲಿದೆ. ಒಟ್ಟು 48 ಏಕದಿನ ಪಂದ್ಯಗಳು ಈ ಅವಧಿಯಲ್ಲಿ ನಡೆಯಲಿವೆ.

ಕ್ರಿಕೆಟ್ ವಿಶ್ವಕಪ್ 2023ರ ಆವೃತ್ತಿಯನ್ನು ಭಾರತವು ಮೊದಲ ಬಾರಿಗೆ ಸಂಪೂರ್ಣವಾಗಿ ಆಯೋಜಿಸುತ್ತದೆ. ವರದಿಗಳ ಪ್ರಕಾರ, ನವೆಂಬರ್ 19ರಂದು ಫೂಐನಲ್‌ ಪಂದ್ಯ ನಡೆಯುವ ನಿರೀಕ್ಷೆಯಿದೆ. ಈ ಪಂದ್ಯವು ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾಗಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಬಿಸಿಸಿಐ ಇನ್ನೂ ಪಂದ್ಯಗಳಿಗೆ ಆತಿಥ್ಯ ಸ್ಥಳಗಳನ್ನು ಮತ್ತು ಅಭ್ಯಾಸ ಪಂದ್ಯಗಳನ್ನು ಆಯೋಜಿಸುವ ನಗರಗಳನ್ನು ನಿರ್ದಿಷ್ಟಪಡಿಸಿಲ್ಲ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ಸಮಯಗಳಲ್ಲಿ ಮಳೆ ಬರುವ ಸಾಧ್ಯತೆಗಳಿರುವುದರಿಂದ ಕೆಲ ತೊಡಕುಗಳು ಎದುರಾಗಲಿದೆ. ಸಾಮಾನ್ಯವಾಗಿ, ಐಸಿಸಿ ವಿಶ್ವಕಪ್ ವೇಳಾಪಟ್ಟಿಯನ್ನು ಕನಿಷ್ಠ ಒಂದು ವರ್ಷ ಮುಂಚಿತವಾಗಿ ಘೋಷಿಸುತ್ತದೆ. ಆದರೆ ಬಿಸಿಸಿಐ, ಭಾರತ ಸರ್ಕಾರದಿಂದ ಅಗತ್ಯ ಅನುಮತಿಗಾಗಿ ಕಾಯುತ್ತಿದೆ.

ವೇಳಾಪಟ್ಟಿಯಲ್ಲಿ ವಿಳಂಬ ಏಕೆ?

ವರದಿಯ ಪ್ರಕಾರ, ತೆರಿಗೆ ವಿನಾಯಿತಿ ಸಮಸ್ಯೆ ಮತ್ತು ಪಾಕಿಸ್ತಾನ ತಂಡಕ್ಕೆ ವೀಸಾ ಕ್ಲಿಯರೆನ್ಸ್‌ನಿಂದಾಗಿ ವಿಶ್ವಕಪ್ ವೇಳಾಪಟ್ಟಿ ರಚಿಸುವಲ್ಲಿ ವಿಳಂಬವಾಗಿದೆ. ಭಾರತಕ್ಕೆ ಈ ಹಿಂದೆ 2016ರ ಟಿ20 ವಿಶ್ವಕಪ್, 2021ರ ಟಿ20 ವಿಶ್ವಕಪ್ ಮತ್ತು 2023ರ ಏಕದಿನ ವಿಶ್ವಕಪ್ ಆತಿಥ್ಯ ವಹಿಸಲಾಗಿತ್ತು. ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡದ ವೀಸಾವನ್ನು ಭಾರತ ಸರ್ಕಾರ ತೆರವುಗೊಳಿಸುವ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈಗಾಗಲೇ ಐಸಿಸಿಗೆ ಭರವಸೆ ನೀಡಿದೆ ಎಂದು ವರದಿ ತಿಳಿಸಿದೆ.

ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ಐಸಿಸಿ ವಿಶ್ವಕಪ್ 2023ಕ್ಕೆ ಹಾಲಿ ಚಾಂಪಿಯನ್ ಆಗಿ ಪ್ರವೇಶಿಸಲಿದೆ. ಇಯಾನ್ ಮಾರ್ಗನ್ ನಾಯಕತ್ವದಲ್ಲಿ, ಇಂಗ್ಲೆಂಡ್ ತಂಡವು 2019ರಲ್ಲಿ ತವರಿನಲ್ಲೇ ನಡೆದ ವಿಶ್ವಕಪ್‌ ಪಂದ್ಯಾವಳಿಯ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ರೋಚಕ ಜಯದೊಂದಿಗೆ ತನ್ನ ಚೊಚ್ಚಲ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.