ಕನ್ನಡ ಸುದ್ದಿ  /  Sports  /  If I Was Selector Dhawans Blockbuster Response To Gill Vs Shikhar For Team India Sends Shockwaves

Shikhar Dhawan: ಆಯ್ಕೆಗಾರನಾದ್ರೆ ಗಿಲ್​​ಗೆ ಅವಕಾಶ ಕೊಡ್ತೇನೆ, ಆದ್ರೆ ಹೃದಯದಲ್ಲಿ ಪಶ್ಚಾತ್ತಾಪಕ್ಕೆ ಜಾಗ ಕೊಡಲ್ಲ ಎಂದ ಧವನ್​

ಶುಭ್​ಮನ್​ ಈಗಾಗಲೇ ಮೂರು ಮಾದರಿಗಳಲ್ಲಿ ತಮ್ಮ ಸಾಮರ್ಥ್ಯ ನಿರೂಪಿಸಿದ್ದಾರೆ. ತನ್ನ ಸಿಕ್ಕ ಅವಕಾಶಗಳಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡುತ್ತಿದ್ದಾರೆ. ನಾನು ಆಯ್ಕೆಗಾರನಾಗಿದ್ದರೆ, ನನ್ನ ಬದಲಿಗೆ ಗಿಲ್​​ಗೆ ಅವಕಾಶ ನೀಡುತ್ತಿದ್ದೆ ಎಂದು ಹೇಳಿದ್ದಾರೆ.

ಶುಭ್​ಮನ್ ಗಿಲ್​ ಮತ್ತು ಶಿಖರ್ ಧವನ್​
ಶುಭ್​ಮನ್ ಗಿಲ್​ ಮತ್ತು ಶಿಖರ್ ಧವನ್​

ಕಳಪೆ ಪ್ರದರ್ಶನ, ಯುವ ಆಟಗಾರರ ಭರ್ಜರಿ ಪ್ರದರ್ಶನದ ಹಿನ್ನೆಲೆ ಆರಂಭಿಕ ಆಟಗಾರ ಶಿಖರ್​ ಧವನ್ (Shikhar Dhawan)​, ಟೀಮ್​ ಇಂಡಿಯಾದಲ್ಲಿ (Team India) ಸ್ಥಾನ ಕಳೆದುಕೊಂಡಿದ್ದಾರೆ. ಯಂಗ್​ ಕ್ರಿಕೆಟರ್​​ ಶುಭ್​​ಮನ್​ ಗಿಲ್ (Shubman Gill)​​, ಅವರೇ ಧವನ್​ ಸ್ಥಾನವನ್ನು ಕಿತ್ತುಕೊಂಡಿದ್ದಾರೆ ಎಂಬ ಮಾತು, ಈಗಲೂ ಜೀವಂತ. ಅದರಲ್ಲೂ ಗಿಲ್​​ ಬ್ಯಾಕ್​ ಟು ಬ್ಯಾಕ್​​ ಶತಕ ಸಿಡಿಸಿದ್ದಂತೂ ಧವನ್​​ ಕತೆ ಮುಗೀತು ಎಂಬ ಸಂದೇಶವನ್ನ ನೇರವಾಗಿಯೇ ನೀಡಿದೆ.

ತಂಡದಲ್ಲಿ ಸ್ಥಾನ ಕಳೆದುಕೊಂಡ ಹತಾಶೆಯಲ್ಲಿರುವ ಧವನ್​​, IPL​​​ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಈ ಬಾರಿ ಪಂಜಾಬ್​ ಕಿಂಗ್ಸ್​ ತಂಡವನ್ನು ಮುನ್ನಡೆಸಲಿರುವ ಧವನ್​, ಚೊಚ್ಚಲ ಕಪ್​ ಗೆಲ್ಲಿಸಿಕೊಡುವ ಆತ್ಮ ವಿಶ್ವಾಸದಲ್ಲಿದ್ದಾರೆ. ಗಿಲ್​ರಿಂದಲೇ ತನ್ನ ಸ್ಥಾನ ಕಳೆದುಕೊಂಡೆ ಎಂಬುದು ತಿಳಿದಿರುವ ಗಬ್ಬರ್​, ನಾನು ಸೆಲೆಕ್ಟರ್ ಆದರೆ ಶುಭ್​​ಮನ್​ ಅವರಿಗೇ ಅವಕಾಶ ನೀಡುತ್ತೇನೆ ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾದ ಅನುಭವಿ ಮತ್ತು ಹಿರಿಯ ಆಟಗಾರ 2018ರಲ್ಲಿ ಟೆಸ್ಟ್​ ತಂಡದಲ್ಲಿ ಸ್ಥಾನ ಕಳೆದುಕೊಂಡರು. ಬಳಿಕ 2021ರಿಂದ ಚುಟುಕು ಕ್ರಿಕೆಟ್​​ಗೆ ದೂರವಾಗಿದ್ದಾರೆ. ಏಕದಿನದಲ್ಲಿ ಮಾತ್ರ ಸ್ಥಾನ ಭದ್ರವಾಗಿತ್ತು. ಇದೀಗ ಕಳೆದ ವರ್ಷ ಡಿಸೆಂಬರ್​​ನಿಂದ ಏಕದಿನ ತಂಡದಿಂದಲೂ ಗೇಟ್​ಪಾಸ್ ಸಿಕ್ಕಿದೆ. ಸದ್ಯ ಈ ಬಗ್ಗೆ ಸ್ಪೋರ್ಟ್ಸ್​​​ತಕ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಧವನ್​, ತಮಗೆ ಸ್ಥಾನ ಸಿಗದಿರುವ ಬಗ್ಗೆ ವಿವರಿಸಿದ್ದಾರೆ.

ಒಂದು ವೇಳೆ ನೀವು ನಾಯಕ ಅಥವಾ ಚೀಫ್​​ ಸೆಲೆಕ್ಟರ್ ಆದರೆ ಧವನ್​ ಅಥವಾ ಗಿಲ್ ಅವ​ರಲ್ಲಿ ಒಬ್ಬರನ್ನು ಯಾರನ್ನು ತಂಡಕ್ಕೆ ಆಯ್ಕೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಗಬ್ಬರ್​, ನಾನು ಶುಭ್​ಮನ್​ ಗಿಲ್​ ಅವರನ್ನೇ ಆಯ್ಕೆ ಮಾಡುತ್ತೇನೆ. ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡುತ್ತಿದ್ದಾರೆ. ಅದ್ಭುತ ಫಾರ್ಮ್​​​ನಲ್ಲಿದ್ದಾರೆ. ಆದರೆ ನನ್ನ ಆಟ ಮುಗಿದಿದೆ ಎಂದು ತಿಳಿಸಿದ್ದಾರೆ. ಈ ಉತ್ತರದ ಮೂಲಕ ಅಂತಾರಾಷ್ಟ್ರೀಯ ಇನ್ಮುಂದೆ ಕಾಣಿಸಿಕೊಳ್ಳುವುದಿಲ್ಲ ಎಂಬ ಸುಳಿವನ್ನೂ ನೀಡಿದ್ದಾರೆ.

ಶುಭ್​ಮನ್​ ಈಗಾಗಲೇ ಮೂರು ಮಾದರಿಗಳಲ್ಲಿ ತಮ್ಮ ಸಾಮರ್ಥ್ಯ ನಿರೂಪಿಸಿದ್ದಾರೆ. ತನ್ನ ಸಿಕ್ಕ ಅವಕಾಶಗಳಲ್ಲಿ ಭರ್ಜರಿ ಪ್ರದರ್ಶನ ತೋರುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡುತ್ತಿದ್ದಾರೆ. ನಾನು ನಾಯಕ ಅಥವಾ ಆಯ್ಕೆಗಾರನಾಗಿದ್ದರೆ, ನನ್ನ ಬದಲಿಗೆ ಗಿಲ್​​ಗೆ ಅವಕಾಶ ನೀಡುತ್ತಿದ್ದೆ ಎಂದು ಶಾಕಿಂಗ್​ ಉತ್ತರ ಕೊಟ್ಟಿದ್ದಾರೆ.

ಭವಿಷ್ಯದಲ್ಲಿ ಸಂಭವಿಸಬಹುದಾದ ಯಾವುದೇ ಅದ್ಭುತ ಕ್ಷಣಗಳಿಗೆ ತನ್ನನ್ನು ತಾನು ಸಿದ್ಧವಾಗಿಟ್ಟುಕೊಳ್ಳಲು ಬಯಸುತ್ತೇನೆ. ಭಾರತ ತಂಡಕ್ಕೆ ಮರಳಲು ಸತತ ಕಠಿಣ ಪರಿಶ್ರಮ ಹಾಕಲಿದ್ದೇನೆ. ಅವಕಾಶ ಸಿಗಲಿಲ್ಲ ಎಂದು ನನ್ನ ಹೃದಯದಲ್ಲಿ ಪಶ್ಚಾತ್ತಾಪಕ್ಕೆ ಜಾಗ ಕೊಟ್ಟಿಲ್ಲ. ಅದಕ್ಕೆ ಅವಕಾಶವೂ ನೀಡುವುದಿಲ್ಲ. ನನ್ನ ಕೈಯಲ್ಲಿ ಏನಿದೆಯೋ ಅದೆಲ್ಲವನ್ನೂ ಮಾಡುತ್ತಿದ್ದೇನೆ. ಪ್ರಯತ್ನಿಸುತ್ತಿದ್ದೇನೆ ಎಂದು ತಂಡಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ಕಳಪೆ ಫಾರ್ಮ್​ಗೆ ಸಿಲುಕಿದಾಗ ರೋಹಿತ್ ಮತ್ತು ದ್ರಾವಿಡ್ ನನಗೆ ಸಾಕಷ್ಟು ಬೆಂಬಲ ಕೊಟ್ಟಿದ್ದಾರೆ. ನನ್ನ ಫಾರ್ಮ್ ಕುಸಿದಾಗ ಶುಭ್​ಮನ್​ ಅವಕಾಶ ಪಡೆದು ಟೀಮ್​​​ ಮ್ಯಾನೇಜ್​ಮೆಂಟ್​ ನಂಬಿಕೆ ಉಳಿಸಿಕೊಂಡರು. ಮತ್ತು ಇದು ಕ್ರಿಕೆಟ್‌ಗೆ ಹೊಸದಲ್ಲ, ಈ ರೀತಿ ಅನೇಕ ಆಟಗಾರರಿಗೆ ಸಂಭವಿಸಿದೆ ಎಂದು ಹೇಳಿದ್ದಾರೆ.

ಕಳೆದ 2022ರ ಐಪಿಎಲ್ ಟೂರ್ನಿಯಲ್ಲಿ 8.25 ಕೋಟಿಗೆ ಪಂಜಾಬ್‌ ಕಿಂಗ್ಸ್ ತಂಡಕ್ಕೆ ಖರೀದಿಯಾಗಿದ್ದ ಶಿಖರ್ ಧವನ್, ಆಡಿದ್ದ 14 ಪಂದ್ಯಗಳಲ್ಲಿ 122.66 ಸ್ಟ್ರೈಕ್ ರೇಟ್‍ನೊಂದಿಗೆ 460 ರನ್ ಗಳಿಸಿದ್ದರು. ಒಟ್ಟಾರೆ ಐಪಿಎಲ್​​ನಲ್ಲಿ 206 ಪಂದ್ಯಗಳಿಂದ 6244 ರನ್ ಗಳಿಸಿದ್ದಾರೆ. ಮೊದಲು ನಾಯಕನಾಗಿದ್ದ ಮಯಾಂಕ್​ ಅಗರ್ವಾಲ್​ ಅವರನ್ನು ಕೆಳಿಸಿದ ಪಂಜಾಬ್​​, ಧವನ್​ಗೆ ನಾಯಕನ ಪಟ್ಟ ಕಟ್ಟಿದೆ. ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಸ್ಥಾನ ಕಳೆದುಕೊಂಡಿರುವ ಎಡಗೈ ಆಟಗಾರ, ಐಪಿಎಲ್​ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ.