Ind vs Aus 2nd ODI: ಬ್ಯಾಟ್ಸ್ಮನ್ಗಳ ಅಟ್ಟರ್ಫ್ಲಾಪ್ ಶೋ, ಮಿಚೆಲ್ ಸ್ಟಾರ್ಕ್ ಅಬ್ಬರ... ಭಾರತ 117 ರನ್ಗಳಿಗೆ ಸರ್ವಪತನ
ಆಸ್ಟ್ರೇಲಿಯಾದ ಫಾಸ್ಟ್ ಬೌಲರ್ ಮಿಚೆಲ್ ಸ್ಟಾರ್ಕ್ ಅಬ್ಬರಕ್ಕೆ ವಿಲವಿಲ ಒದ್ದಾಡಿದ ಟೀಮ್ ಇಂಡಿಯಾ 117 ರನ್ಗೆ ಸರ್ವಪತನ ಕಂಡಿದೆ. ಪಂದ್ಯವನ್ನು ಕಳೆದುಕೊಳ್ಳುವ ಸ್ಥಿತಿಗೆ ಸಿಲುಕಿದೆ.
ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಕಳಪೆ ಪ್ರದರ್ಶನ ನೀಡಿದೆ. ಆಸಿಸ್ ಬೌಲರ್ಗಳು ಮುಂದೆ ಶರಣಾದ ಭಾರತೀಯ ಬ್ಯಾಟರ್ಗಳು ಅಲ್ಪಮೊತ್ತಕ್ಕೆ ಕುಸಿತ ಕಂಡಿದ್ದಾರೆ. ಮೊದಲ ಪಂದ್ಯದಂತೆ 2ನೇ ಏಕದಿನ ಪಂದ್ಯದಲ್ಲಿ ಬ್ಯಾಟ್ಸ್ಮನ್ಗಳು ತೀವ್ರ ವೈಫಲ್ಯ ಅನುಭವಿಸಿದ್ದು, ಟೀಕೆಗೆ ಕಾರಣವಾಗಿದೆ.
ಟ್ರೆಂಡಿಂಗ್ ಸುದ್ದಿ
ವಿಶಾಖಪಟ್ಟಣದ ಡಾ. ವೈ.ಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಒಡಿಐ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ವೇಗಿ ಮಿಚೆಲ್ ಸ್ಟಾರ್ಕ್ ದಾಳಿಗೆ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ನಾಯಕ ರೋಹಿತ್ ಶರ್ಮಾ ಕಂಬ್ಯಾಕ್ ಮಾಡಿದರೂ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲರಾದರು.
ಇನ್ನು ವೈಜಾಗ್ ಪಂದ್ಯದಲ್ಲೂ ಶುಭ್ಮನ್ ಗಿಲ್, ನಿರಾಸೆ ಮೂಡಿಸಿದರು. ಮೊದಲ ಓವರ್ನಲ್ಲೇ ಕ್ಯಾಚ್ ನೀಡಿ ನಿರ್ಗಮಿಸಿದರು. 2 ಎಸೆತಗಳಲ್ಲಿ ಸೊನ್ನೆ ಸುತ್ತಿದರು. ಬಳಿಕ ಕ್ರೀಸ್ಗೆ ಬಂದ ಸೂರ್ಯಕುಮಾರ್ ಯಾದವ್ ಮತ್ತೆ ಗೋಲ್ಡನ್ ಡಕ್ ಆದರು. ಮೊದಲ ಪಂದ್ಯದಲ್ಲೂ ಮೊದಲ ಎಸೆತದಲ್ಲೇ ಸೂರ್ಯಕುಮಾರ್ ವಿಕೆಟ್ ಒಪ್ಪಿಸಿದ್ದರು. ಕ್ರಿಕೆಟ್ ಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಮುಂಬೈ ಮ್ಯಾಚ್ನಲ್ಲಿ ಮ್ಯಾಚ್ ವಿನ್ನಿಂಗ್ಸ್ ಪರ್ಫಾಮೆನ್ಸ್ ಕೊಟ್ಟಿದ್ದ ಕೆ.ಎಲ್ ರಾಹುಲ್, ಈ ಪಂದ್ಯದಲ್ಲಿ ಕೈ ಎತ್ತಿದರು. 13 ಎಸೆತಗಳಲ್ಲಿ 9 ರನ್ಗಳಿಸಿ ಪೆವಿಲಿಯನ್ ದಾರಿ ಹಿಡಿದರು. ಸತತ ವಿಕೆಟ್ಗಳ ನಡುವೆ ವಿರಾಟ್ ಕೊಹ್ಲಿ, ತಂಡಕ್ಕೆ ಆಧಾರವಾಗುವ ಭರವಸೆ ಮೂಡಿಸಿದ್ದರು. ಆದರೆ 31 ರನ್ಗಳಿಸಿದ್ದ ಕೊಹ್ಲಿ, ನಥನ್ ಎಲಿಸ್ ಬೌಲಿಂಗ್ನಲ್ಲಿ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು.
ಬಳಿಕ ಹಾರ್ದಿಕ್ ಪಾಂಡ್ಯ (1), ರವೀಂದ್ರ ಜಡೇಜಾ (16) ಕುಲ್ದೀಪ್ ಯಾದವ್ (4), ಮೊಹಮ್ಮದ್ ಶಮಿ (0), ಮೊಹಮ್ಮದ್ ಸಿರಾಜ್ (0) ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಕ್ಷರ್ ಪಟೇಲ್ ಮಾತ್ರ ಅಜೇಯ 29 ರನ್ ಗಳಿಸಿ ತಂಡದ ಮೊತ್ತ ಏರಿಸುವ ವಿಶ್ವಾಸ ನೀಡಿದರು. ಆದರೆ, ಯಾರೊಬ್ಬರೂ ಅಕ್ಷರ್ಗೆ ಸಾಥ್ ನೀಡಲಿಲ್ಲ.
ಮಿಚೆಲ್ ಸ್ಟಾರ್ಕ್ಗೆ 5 ವಿಕೆಟ್
ಮೊದಲು ಬ್ಯಾಟಿಂಗ್ ಮಾಡಿದ ಭಾರತ 26 ಓವರ್ಗಳಲ್ಲಿ 117 ರನ್ಗಳಿಗೆ ಆಲೌಟ್ ಆಗಿದೆ. ಆರಂಭದಿಂದಲೇ ವಿಕೆಟ್ ಬೇಟೆಯಾಡಿದ ಮಿಚೆಲ್ ಸ್ಟಾರ್ಕ್ ಐವರು ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದರು. ಇದರೊಂದಿಗೆ ದಾಖಲೆಯನ್ನೂ ಬರೆದರು. ಏಕದಿನ ಕ್ರಿಕೆಟ್ನಲ್ಲಿ ಇನ್ನಿಂಗ್ಸ್ವೊಂದರಲ್ಲಿ ಹೆಚ್ಚು ಬಾರಿ 5 ವಿಕೆಟ್ ಪಡೆದ ವಿಶ್ವದ 3ನೇ ಬೌಲರ್ ಎನಿಸಿದ್ದಾರೆ.
ಮಿಚೆಲ್ ಸ್ಟಾರ್ಕ್ ಒಟ್ಟು 9 ಬಾರಿ 5 ವಿಕೆಟ್ ಪಡೆದು 3ನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿ ವಕಾರ್ ಯೂನಿಸ್ 13 ಬಾರಿ, ಮುತ್ತಯ್ಯ ಮುರಳೀಧರನ್ 10 ಬಾರಿ, ಶಾಹೀದ್ ಅಫ್ರಿದಿ, ಬ್ರೆಟ್ಲೀ ಕೂಡ 9 ಬಾರಿ ಐದು ವಿಕೆಟ್ ಉರುಳಿಸಿದ್ದಾರೆ.
ಮಿಚೆಲ್ ಸ್ಟಾರ್ಕ್ಗೆ ಸಾಥ್ ನೀಡಿದ ಸೀನ್ ಅಬಾಟ್ 3 ವಿಕೆಟ್, ನಥನ್ ಎಲ್ಲಿಸ್ 2 ವಿಕೆಟ್ ಪಡೆದು ಮಿಂಚಿದ್ದಾರೆ. ವಿರಾಟ್ ಕೊಹ್ಲಿ 31 ರನ್ ಗಳಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿದ್ದಾರೆ. 117 ರನ್ಗೆ ಆಲೌಟ್ ಆದ ಟೀಮ್ ಇಂಡಿಯಾ ಕೆಟ್ಟ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 3ನೇ ಬಾರಿಗೆ ಲೋ ಸ್ಕೋರ್ಗೆ ಔಟಾಗಿದೆ.