Ind vs Aus 2nd ODI: ಬೌಲಿಂಗ್ನಲ್ಲಿ ಸ್ಟಾರ್ಕ್, ಬ್ಯಾಟಿಂಗ್ನಲ್ಲಿ ಮಾರ್ಷ್-ಹೆಡ್ ಅಬ್ಬರ; ಭಾರತಕ್ಕೆ ಹೀನಾಯ ಸೋಲು, ಸರಣಿ ಸಮಬಲ
Ind vs Aus 2nd ODI: ಟೀಮ್ ಇಂಡಿಯಾ ನೀಡಿದ 118 ರನ್‍ಗಳ ಸಾಧಾರಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿತು. ವಿಕೆಟ್ ನಷ್ಟವಿಲ್ಲದೇ 11 ಓವರ್‌ಗಳಲ್ಲಿ 121 ರನ್ ಸಿಡಿಸಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಟೀಮ್ ಇಂಡಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದು ಬೀಗಿದೆ. ಖಡಕ್ ಬೌಲಿಂಗ್, ಫೀಲ್ಡಿಂಗ್ ಮತ್ತು ಸಿಡಿಲಬ್ಬರದ ಬ್ಯಾಟಿಂಗ್ಗೆ ಮಂಕಾದ ರೋಹಿತ್, ವಿಶಾಖಪಟ್ಟಣದ ಪಂದ್ಯದಲ್ಲಿ ಶರಣಾಗಿದೆ. ಆಸ್ಟ್ರೇಲಿಯಾ 10 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಸರಣಿಯನ್ನು ಸಮಬಲ ಸಾಧಿಸಿದೆ. ಆ ಮೂಲಕ ಮೊದಲ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಟ್ರೆಂಡಿಂಗ್ ಸುದ್ದಿ
ಟೀಮ್ ಇಂಡಿಯಾ ನೀಡಿದ 118 ರನ್‍ಗಳ ಸಾಧಾರಣ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿತು. ವಿಕೆಟ್ ನಷ್ಟವಿಲ್ಲದೇ 11 ಓವರ್‌ಗಳಲ್ಲಿ 121 ರನ್ ಸಿಡಿಸಿ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ 3 ಪಂದ್ಯಗಳ ಸರಣಿಯನ್ನು 1 - 1ರಲ್ಲಿ ಸಮಗೊಳಿಸಿದೆ. ಇದು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ವಿಶಾಖಪಟ್ಟಣದ ಡಾ. ವೈ.ಎಸ್ ರಾಜಶೇಖರ ರೆಡ್ಡಿ ಕ್ರಿಕೆಟ್ ಮೈದಾನದಲ್ಲಿ ನಡೆದ 2ನೇ ಒಡಿಐ ಪಂದ್ಯದಲ್ಲಿ ಆಸಿಸ್ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಮಾರ್ಷ್ ಭಾರತದ ಬೌಲರ್‌ಗಳನ್ನು ಮೊದಲ ಓವರ್‌ನಿಂದಲೇ ದಂಡಿಸಲು ಆರಂಭಿಸಿದರು. ಅವಕಾಶ ಸಿಕ್ಕಾಗಲೆಲ್ಲಾ ಬೌಂಡರಿ, ಸಿಕ್ಸರ್ಗಳನ್ನು ಸಿಡಿಸಿ ಮನಮೋಹಕ ಬ್ಯಾಟಿಂಗ್ ನಡೆಸಿದರು. ಈ ಜೋಡಿ 66 ಎಸೆತಗಳಲ್ಲಿ ಅಜೇಯ 121 ರನ್‍ಗಳ ಜೊತೆಯಾಟದ ಮೂಲಕ ಅಬ್ಬರಿಸಿ ಬೊಬ್ಬಿರಿಯಿತು.
ಮಾರ್ಷ್ - ಹೆಡ್ ಅರ್ಧಶತಕ
ಭಾರತೀಯ ಬೌಲರ್ಗಳಿಗೆ ಮನಬಂದಂತೆ ದಂಡಿಸಿದ ಆರಂಭಿಕರು, ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಟ್ರಾವಿಸ್ ಹೆಡ್ ಅಜೇಯ 51 ರನ್ (30 ಎಸೆತ, 10 ಬೌಂಡರಿ) ಮತ್ತು ಮಿಚೆಲ್ ಮಾರ್ಷ್ 66 ರನ್ (36 ಎಸೆತ, 6 ಬೌಂಡರಿ, 6 ಸಿಕ್ಸರ್) ಸಿಡಿಸಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಪರಿಣಾಮ ಇನ್ನೂ 39 ಓವರ್ ಬಾಕಿ ಇರುವಂತೆಯೇ ಆಸ್ಟ್ರೇಲಿಯಾ ಜಯ ಗಳಿಸಿ ಸಂಭ್ರಮಿಸಿತು.
2ನೇ ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಸಿಡಿಸಿದ ಮಿಚೆಲ್ ಮಾರ್ಷ್ ಮೊದಲ ಏಕದಿನ ಪಂದ್ಯದಲ್ಲೂ ಅರ್ಧಶತಕ ಸಿಡಿಸಿದ್ದರು. ಆಸಿಸ್ ಪರ ಏಕಾಂಗಿ ಹೋರಾಟ ನಡೆಸಿದ್ದರು. ಅಂದು ಕೂಡ 65 ಎಸೆತಗಳಲ್ಲಿ 81 ರನ್ ಚಚ್ಚಿದ್ದರು. 10 ಬೌಂಡರಿ, 5 ಸಿಕ್ಸರ್ ಸಿಡಿಸಿದ್ದರು. ಆದರೆ ಯಾರೊಬ್ಬರೂ ಮಾರ್ಷ್ಗೆ ಸಾಥ್ ನೀಡದಿರುವುದು ಮೊದಲ ಏಕದಿನ ಪಂದ್ಯದ ಸೋಲಿಗೆ ಕಾರಣವಾಗಿತ್ತು.
ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ವೇಗಿ ಮಿಚೆಲ್ ಸ್ಟಾರ್ಕ್ ದಾಳಿಗೆ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ನಾಯಕ ರೋಹಿತ್ ಶರ್ಮಾ ಕಂಬ್ಯಾಕ್ ಮಾಡಿದರೂ ದೊಡ್ಡ ಮೊತ್ತ ಕಲೆ ಹಾಕುವಲ್ಲಿ ವಿಫಲರಾದರು. ಇನ್ನು ವೈಜಾಗ್ ಪಂದ್ಯದಲ್ಲೂ ಶುಭ್ಮನ್ ಗಿಲ್ (0), ರೋಹಿತ್ ಶರ್ಮಾ (13), ವಿರಾಟ್ ಕೊಹ್ಲಿ (31) ಸೂರ್ಯಕುಮಾರ್ ಯಾದವ್ (0), ಕೆ.ಎಲ್ ರಾಹುಲ್ (9), ಹಾರ್ದಿಕ್ ಪಾಂಡ್ಯ (1), ರವೀಂದ್ರ ಜಡೇಜಾ (16) ಕುಲ್ದೀಪ್ ಯಾದವ್ (4), ಮೊಹಮ್ಮದ್ ಶಮಿ (0), ಮೊಹಮ್ಮದ್ ಸಿರಾಜ್ (0) ಕ್ರೀಸ್ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಅಕ್ಷರ್ ಪಟೇಲ್ ಮಾತ್ರ ಅಜೇಯ 29 ರನ್ ಗಳಿಸಿ ತಂಡದ ಮೊತ್ತ ಏರಿಸುವ ವಿಶ್ವಾಸ ನೀಡಿದರು. ಆದರೆ, ಯಾರೊಬ್ಬರೂ ಅಕ್ಷರ್ಗೆ ಸಾಥ್ ನೀಡಲಿಲ್ಲ.
ಮಿಚೆಲ್ ಸ್ಟಾರ್ಕ್ಗೆ 5 ವಿಕೆಟ್
ಮೊದಲು ಬ್ಯಾಟಿಂಗ್ ಮಾಡಿದ ಭಾರತ 26 ಓವರ್‌ಗಳಲ್ಲಿ 117 ರನ್ಗಳಿಗೆ ಆಲೌಟ್ ಆಗಿದೆ. ಆರಂಭದಿಂದಲೇ ವಿಕೆಟ್ ಬೇಟೆಯಾಡಿದ ಮಿಚೆಲ್ ಸ್ಟಾರ್ಕ್ ಐವರು ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದರು. ಇದರೊಂದಿಗೆ ದಾಖಲೆಯನ್ನೂ ಬರೆದರು. ಏಕದಿನ ಕ್ರಿಕೆಟ್ನಲ್ಲಿ ಇನ್ನಿಂಗ್ಸ್ವೊಂದರಲ್ಲಿ ಹೆಚ್ಚು ಬಾರಿ 5 ವಿಕೆಟ್ ಪಡೆದ ವಿಶ್ವದ 3ನೇ ಬೌಲರ್ ಎನಿಸಿದ್ದಾರೆ.
ಮಿಚೆಲ್ ಸ್ಟಾರ್ಕ್ಗೆ ಸಾಥ್ ನೀಡಿದ ಸೀನ್ ಅಬಾಟ್ 3 ವಿಕೆಟ್, ನಥನ್ ಎಲ್ಲಿಸ್ 2 ವಿಕೆಟ್ ಪಡೆದು ಮಿಂಚಿದ್ದಾರೆ. ವಿರಾಟ್ ಕೊಹ್ಲಿ 31 ರನ್ ಗಳಿಸಿ ಭಾರತದ ಪರ ಗರಿಷ್ಠ ಸ್ಕೋರರ್ ಎನಿಸಿದ್ದಾರೆ. 117 ರನ್ಗೆ ಆಲೌಟ್ ಆದ ಟೀಮ್ ಇಂಡಿಯಾ ಕೆಟ್ಟ ದಾಖಲೆಯನ್ನೂ ತಮ್ಮದಾಗಿಸಿಕೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ 3ನೇ ಬಾರಿಗೆ ಲೋ ಸ್ಕೋರ್ಗೆ ಔಟಾಯಿತು.