Kannada News  /  Sports  /  India And Pakistan To Fight Once More In Asia Cup 2023
ಬಾಬರ್ ಆಜಮ್ ಮತ್ತು ರೋಹಿತ್ ಶರ್ಮಾ
ಬಾಬರ್ ಆಜಮ್ ಮತ್ತು ರೋಹಿತ್ ಶರ್ಮಾ (Getty )

Asia Cup 2023: ಈ ಬಾರಿ ಏಕದಿನ ಏಷ್ಯಾಕಪ್; ಒಂದೇ ಗುಂಪಿನಲ್ಲಿ ಇಂಡೋ-ಪಾಕ್!

05 January 2023, 15:49 ISTHT Kannada Desk
05 January 2023, 15:49 IST

ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆಯಲಿರುವ 2023ರ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕ್‌ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗುವುದು ಖಚಿತವಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳೆಂದರೆ, ಅಭಿಮಾನಿಗಳ ಜೋಶ್‌ ಇಮ್ಮಡಿಯಾಗುತ್ತದೆ. ಕಳೆದ ವರ್ಷ ನಡೆದ ವಿಶ್ವಕಪ್‌ ಪಂದ್ಯಾವಳಿಯಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಆಸ್ಟ್ರೇಲಿಯಾದ ಮೆಲ್ಬೋರ್ನ್‌‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ, 90 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತ್ತು. ಇದೀಗ ಈ ವರ್ಷವೂ ಉಭಯ ತಂಡಗಳ ನಡುವಿನ ಹೈವೋಲ್ಟೇಜ್‌ ಕದನಕ್ಕೆ ಮುಹೂರ್ತ ನಿಗದಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಈ ವರ್ಷದ ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆಯಲಿರುವ 2023ರ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಭಾರತ ಮತ್ತು ಪಾಕ್‌ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಮತ್ತೊಮ್ಮೆ ಮುಖಾಮುಖಿಯಾಗುವುದು ಖಚಿತವಾಗಿದೆ. ಏಷ್ಯಾ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರಾಗಿರುವ ಜಯ್ ಶಾ, ಇಂದು ಈ ವರ್ಷದ ಕ್ರಿಕೆಟ್‌ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನವು ಇರುವ ಗುಂಪಿನಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ ಕೂಡಾ ಇದೆ. ಮತ್ತೊಂದು ತಂಡದಲ್ಲಿ ಬಾಂಗ್ಲಾದೇಶ, ಅಫ್ಘಾನಿಸ್ತಾನದೊಂದಿಗೆ ಮತ್ತೊಂದು ಅರ್ಹತಾ ತಂಡವು ಸೇರಿಕೊಳ್ಳಲಿದೆ. ಈ ವರ್ಷವೇ ಏಕದಿನ ವಿಶ್ವಕಪ್ ನಡೆಯುತ್ತಿರುವ ಹಿನ್ನೆಲೆಯಲ್ಲಿ 2023ರ ಏಷ್ಯಾಕಪ್ ಅನ್ನು 50 ಓವರ್ ಮಾದರಿಯಲ್ಲಿ ಆಡಿಸಲಾಗುತ್ತದೆ.

ಅರ್ಹತಾ ಪಂದ್ಯಗಳನ್ನು ಹೊರತುಪಡಿಸಿ ಒಟ್ಟು 13 ಪಂದ್ಯಗಳು ನಡೆಯಲಿವೆ. ಇವುಗಳಲ್ಲಿ ಆರು ಲೀಗ್ ಪಂದ್ಯಗಳು, ಆರು ಸೂಪರ್ 4 ಪಂದ್ಯಗಳು ಸೇರಿವೆ. ಸೂಪರ್‌ ಫೋರ್‌ ಹಂತದ ಎರಡು ಅಗ್ರ ತಂಡಗಳು ಫೈನಲ್‌ಗೆ ಲಗ್ಗೆ ಇಡಲಿವೆ.

ಈ ಹಿಂದೆ ನಿರ್ಧಾರವಾದ ಪ್ರಕಾರ, ಈ ಬಾರಿಯ ಏಷ್ಯಾಕಪ್‌ ಪಾಕಿಸ್ತಾನದಲ್ಲಿ ನಡೆಯಬೇಕು. ಆದರೆ, ಭಾರತ ಮತ್ತು ಪಾಕ್‌ ನಡುವೆ ಆತಿಥ್ಯ ಕುರಿತು ಭಾರಿ ವಾದ ವಿವಾದಗಳು ನಡೆಯುತ್ತಿವೆ. ಹೀಗಾಗಿ ಯಾವ ದೇಶವು ಪಂದ್ಯಾವಳಿಯನ್ನು ಆಯೋಜಿಸುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಏನೇ ಆದರೂ ಪಾಕಿಸ್ತಾನಕ್ಕೆ ಭಾರತ ತಂಡ ಬರಲು ಸಾಧ್ಯವೇ ಇಲ್ಲ ಎಂದು ಬಿಸಿಸಿಐ ಕಡ್ಡಿ ಮುರಿದಂತೆ ಹೇಳಿದೆ. ಹೀಗಾಗಿ ಯುಎಇ ಅಥವಾ ಬೇರೆ ದೇಶಗಳಲ್ಲಿ ಪಂದ್ಯಾವಳಿ ಆಯೋಜಿಸುವ ಸಾಧ್ಯತೆಯೂ ದಟ್ಟವಾಗಿದೆ.

ಮತ್ತೊಂದೆಡೆ, ಆತಿಥ್ಯ ಕುರಿತ ಗೊಂದಲದಿಂದಾಗಿ ಪಂದ್ಯದ ನಿಖರ ದಿನಾಂಕ ಅಥವಾ ಸ್ಥಳದ ಬಗ್ಗೆ ಸ್ಪಷ್ಟತೆ ಇಲ್ಲ. ಉಭಯ ದೇಶಗಳ ನಡುವೆ ಅಸ್ತಿತ್ವದಲ್ಲಿರುವ ರಾಜಕೀಯ ಉದ್ವಿಗ್ನತೆಯಿಂದಾಗಿ, ಪಾಕ್‌ಗೆ ಪ್ರಯಾಣಿಸಲು ಭಾರತ ಸ್ವಲ್ಪವೂ ಉತ್ಸುಕವಾಗಿಲ್ಲ. ಈ ಸಂಬಂಧ ಪಿಸಿಬಿ ಮಾಜಿ ಅಧ್ಯಕ್ಷ ರಮೀಜ್ ರಾಜಾ ಅವರು ಬಿಸಿಸಿಐ ನಿಲುವಿಗೆ ಪ್ರತಿಕ್ರಿಯೆಯಾಗಿ, ಏಕದಿನ ವಿಶ್ವಕಪ್ ಅನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೂ, ಇದಕ್ಕೆ ಭಾರತ ಜಗ್ಗಿಲ್ಲ. ಸದ್ಯ ನಜಮ್ ಸೇಥಿ ಅವರು ಪಿಸಿಬಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದು, ಮುಂದೇನಾಗಲಿದೆ ಎಂದು ಕಾದುನೋಡಬೇಕಿದೆ.

ಭಾರತ ಮತ್ತು ಪಾಕಿಸ್ತಾನವು ಕಳೆದ ವರ್ಷ 20 ಓವರ್‌ಗಳ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಿದ್ದವು. ಲೀಗ್ ಹಂತದಲ್ಲಿ, ಭಾರತವು ಕೊನೆಯ ಓವರ್ ಥ್ರಿಲ್ಲರ್‌ನಲ್ಲಿ ಗೆದ್ದಿತ್ತು. 148 ರನ್‌ಗಳನ್ನು ಬೆನ್ನಟ್ಟಿದ ಭಾರತ, ಐದು ವಿಕೆಟ್‌ಗಳಿಂದ ಗೆದ್ದಿತ್ತು. ಹಾರ್ದಿಕ್ ಪಾಂಡ್ಯ ಗೆಲುವಿನ ರನ್ ಬಾರಿಸುವ ಮೂಲಕ ಬಾಬರ್ ಪಡೆಯನ್ನು ಸೋಲಿಸಿದ್ದರು. ಭಾರತ ಅಂತಿಮವಾಗಿ ಸೂಪರ್ 4ಗೆ ಅರ್ಹತೆ ಪಡೆಯಲು ವಿಫಲವಾಯಿತು. ನಂತರ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಶ್ರೀಲಂಕಾ ಕಪ್ ಗೆದ್ದಿತು.

ಏಷ್ಯಾಕಪ್ ಜೊತೆಗೆ, ಎಸಿಸಿ ಘೋಷಿಸಿದ ಎರಡು ವರ್ಷಗಳ (2023-2024ರ ನಡುವೆ) ಅವಧಿಯಲ್ಲಿ ಒಟ್ಟು 145 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಾಗುತ್ತದೆ. 2023ರಲ್ಲಿ 75 ಪಂದ್ಯಗಳು ಮತ್ತು 2024 ರಲ್ಲಿ 70 ಪಂದ್ಯಗಳು ನಡೆಯಲಿವೆ.