ಖೋ ಖೋ ವಿಶ್ವಕಪ್: ಉದ್ಘಾಟನಾ ಪಂದ್ಯದಲ್ಲೇ ರೋಚಕ ಹಣಾಹಣಿ; ನೇಪಾಳ ವಿರುದ್ಧ 5 ಅಂಕಗಳಿಂದ ಗೆದ್ದ ಭಾರತ
ಕನ್ನಡ ಸುದ್ದಿ  /  ಕ್ರೀಡೆ  /  ಖೋ ಖೋ ವಿಶ್ವಕಪ್: ಉದ್ಘಾಟನಾ ಪಂದ್ಯದಲ್ಲೇ ರೋಚಕ ಹಣಾಹಣಿ; ನೇಪಾಳ ವಿರುದ್ಧ 5 ಅಂಕಗಳಿಂದ ಗೆದ್ದ ಭಾರತ

ಖೋ ಖೋ ವಿಶ್ವಕಪ್: ಉದ್ಘಾಟನಾ ಪಂದ್ಯದಲ್ಲೇ ರೋಚಕ ಹಣಾಹಣಿ; ನೇಪಾಳ ವಿರುದ್ಧ 5 ಅಂಕಗಳಿಂದ ಗೆದ್ದ ಭಾರತ

ಖೋ ಖೋ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಭಾರತ ಪುರುಷರ ಖೋ ಖೋ ತಂಡವು ನೇಪಾಳ ವಿರುದ್ಧ 5 ಅಂಕಗಳಿಂದ ಗೆದ್ದಿದೆ. ಎದುರಾಳಿಯ ತೀವ್ರ ಪೈಪೋಟಿಯ ನಡುವೆಯೂ ಆರಂಭದಿಂದಲೂ ಅಂತರ ಕಾಯ್ದುಕೊಂಡ ಭಾರತ, 42-37 ಅಂಕಗಳ ಅಂತರದಿಂದ ಗೆದ್ದು ಶುಭಾರಂಭ ಮಾಡಿತು.

ಖೋ ಖೋ ವಿಶ್ವಕಪ್: ಉದ್ಘಾಟನಾ ಪಂದ್ಯದಲ್ಲೇ ನೇಪಾಳ ವಿರುದ್ಧ 5 ಅಂಕಗಳಿಂದ ಗೆದ್ದ ಭಾರತ
ಖೋ ಖೋ ವಿಶ್ವಕಪ್: ಉದ್ಘಾಟನಾ ಪಂದ್ಯದಲ್ಲೇ ನೇಪಾಳ ವಿರುದ್ಧ 5 ಅಂಕಗಳಿಂದ ಗೆದ್ದ ಭಾರತ (X/@Kkwcindia)

ಖೋ ಖೋ ವಿಶ್ವಕಪ್‌ನ ಉದ್ಘಾಟನಾ ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ಜನವರಿ 13ರ ಸೋಮವಾರ ಭಾರತದ ರಾಜಧಾನಿ ನವದೆಹಲಿಯಲ್ಲಿ ಟೂರ್ನಿ ಆರಂಭವಾಗಿದ್ದು, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಭಾರತ ಪುರುಷರ ಖೋ ಖೋ ತಂಡವು ನೇಪಾಳ ತಂಡವನ್ನು 5 ಅಂಕಗಳಿಂದ ಮಣಿಸಿದೆ. ವಿಶ್ವದ ಎರಡು ಬಲಿಷ್ಠ ತಂಡಗಳ ನಡುವಿನ ರೋಚಕ ಹಣಾಹಣಿಯಲ್ಲಿ ಭಾರತವು 42-37 ಅಂಕಗಳ ಅಂತರದಿಂದ ಗೆದ್ದು ಬೀಗಿದೆ. ಆರಂಭದಿಂದಲೂ ಉಭಯ ತಂಡಗಳ ಯುವ ಆಟಗಾರರು ನಾನಾ ನೀನಾ ಎಂಬಂತೆ ರೋಚಕ ಪೈಪೋಟಿ ನಡೆಸಿದರು. ಮೊದಲ ಸುತ್ತಿನಿಂದಲೇ ಅಂತರ ಕಾಯ್ದುಕೊಂಡ ಭಾರತ, ಕೊನೆಗೂ ರೋಚಕವಾಗಿ ಗೆಲುವನ್ನು ಒಲಿಸಿಕೊಂಡಿತು.

ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡವು ಅಟ್ಯಾಕಿಂಗ್‌ ಆಯ್ಕೆ ಮಾಡಿಕೊಂಡಿತು. ಆರಂಭದಿಂಲೇ ನೇಪಾಳ ತಂಡದ ಆಟಗಾರರನ್ನು ಬೇಗನೆ ಔಟ್‌ ಮಾಡುತ್ತಾ ಸಾಗಿತು. ಆಟಗಾರರು ಮೊದಲ ಸುತ್ತಿನಲ್ಲೇ 24 ಅಂಕಗಳನ್ನು ಕಲೆ ಹಾಕಿ ಮುನ್ನಡೆ ಸಾಧಿಸಿದರು. ಇದಕ್ಕೆ ಪ್ರತಿಯಾಗಿ ನೇಪಾಳ ಕೂಡಾ ಬಿರುಸಿನ ಆಟವಾಡಿತು. ಅಮೋಘ ಸ್ಕೈ ಡೈವ್‌ ಮೂಲಕ ಹೆಚ್ಚುವರಿ ಅಂಕಗಳನ್ನು ಒಟ್ಟುಗೂಡಿಸಿದ ತಂಡವು 20 ಅಂಕಗಳನ್ನು ಕಲೆ ಹಾಕಿತು.

ಮೊದಲ ಬ್ಯಾಚ್‌ ಬಳಿಕ ಭಾರತವು 4 ಅಂಕಗಳ ಮುನ್ನಡೆಯೊಂದಿಗೆ ಎರಡನೇ ಬ್ಯಾಚ್‌ ಶುರು ಮಾಡಿತು. ಎರಡನೇ ಬ್ಯಾಚ್‌ನಲ್ಲಿ ದಾಳಿ ನಡೆಸಿದ ಭಾರತ 18 ಅಂಕಗಳನ್ನು ಕಲೆ ಹಾಕಿತು. ಅಂತಿಮ ಸುತ್ತಿನಲ್ಲಿ ನೇಪಾಳ 16 ಅಂಕಗಳನ್ನು ಗಳಿಸುವ ಮೂಲಕ ಕೂದಲೆಳೆ ಅಂತರದಲ್ಲಿ ಪಂದ್ಯ ಕಳೆದುಕೊಂಡಿತು. ಇದರೊಂದಿಗೆ ಭಾರತವು ಉದ್ಘಾಟನಾ ಆವೃತ್ತಿಯ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿತು.

ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್

ಇದು ಚೊಚ್ಚಲ ಖೋ ಖೋ ವಿಶ್ವಕಪ್‌ ಆಗಿದ್ದು, ವಿಶ್ವದ ಖೋ ಖೋ ಪವರ್‌ ಹೌಸ್‌ ಆಗಿರುವ ಭಾರತದ ಆತಿಥ್ಯದಲ್ಲೇ ನಡೆಯುತ್ತಿದೆ. ನವದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನಾ ಸಮಾರಂಭಕ್ಕೆ ಅಧಿಕೃತ ಚಾಲನೆ ನೀಡಿದರು. ಈ ವೇಳೆ ಕ್ರೀಡಾ ಸಚಿವ ಮಾನ್ಸುಖ್ ಮಾಂಡವಿಯಾ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಪಿಟಿ ಉಷಾ ಸೇರಿದಂತೆ ಸಾವಿರಾರು ಅಭಿಮಾನಿಗಳು ಕ್ರೀಡಾಂಗಣದಲ್ಲಿ ನೆರೆದಿದ್ದರು.

ಪಂದ್ಯಾವಳಿಯ ಅಧಿಕೃತ ಉದ್ಘಾಟನೆಗೆ ಮುಂಚಿತವಾಗಿ ವರ್ಣರಂಜಿತ ಸಾಂಸ್ಕೃತಿಕ ಪ್ರದರ್ಶನ ನಡೆಯಿತು. ಖೋ ಖೋ ಫೆಡರೇಶನ್ ಆಫ್ ಇಂಡಿಯಾ (ಕೆಕೆಎಫ್ಐ) ಪುರುಷರ ಮತ್ತು ಮಹಿಳಾ ಪಂದ್ಯಾವಳಿಯ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಲಾಯ್ತು.

23 ದೇಶಗಳು ಭಾಗಿ

ವಿಶ್ವಕಪ್‌ನಲ್ಲಿ ಪುರುಷರ ಮತ್ತು ಮಹಿಳೆಯರ ಎರಡೂ ಪ್ರತ್ಯೇಕ ವಿಭಾಗಗಳ ಸ್ಪರ್ಧೆ ನಡೆಯಲಿದ್ದು, ಒಟ್ಟು 23 ದೇಶಗಳ ಆಟಗಾರರು ಭಾಗವಹಿಸುತ್ತಿದ್ದಾರೆ. ಜನವರಿ 13ರಿಂದ 19ರವರೆಗೆ ನಡೆಯಲಿರುವ ಪಂದ್ಯಾವಳಿಯಲ್ಲಿ ಪುರುಷರ ಮತ್ತು ಮಹಿಳೆಯರ ವಿಭಾಗಗಳಲ್ಲಿ ಒಟ್ಟಾರೆ 39 ತಂಡಗಳು ಭಾಗವಹಿಸಲಿವೆ. ಪುರುಷರ ಸ್ಪರ್ಧೆಯಲ್ಲಿ ಭಾಗವಹಿಸುವ 20 ತಂಡಗಳನ್ನು ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಮಹಿಳೆಯರ ವಿಭಾಗದಲ್ಲಿ ಭಾಗವಹಿಸುವ 19 ತಂಡಗಳನ್ನೂ 4 ಗುಂಪುಗಳಾಗಿ ಮಾಡಲಾಗಿದೆ. ಗುಂಪು ಹಂತವು ಜನವರಿ 16ರಂದು ಕೊನೆಗೊಳ್ಳಲಿದೆ. ಪ್ಲೇಆಫ್‌ ಪಂದ್ಯಗಳು ಜನವರಿ 17ರಂದು ಆರಂಭವಾಗುತ್ತವೆ. ಪುರುಷರ ಮತ್ತು ಮಹಿಳಾ ವಿಭಾಗದ ಫೈನಲ್ ಪಂದ್ಯ ಜನವರಿ 19ರಂದು ನಡೆಯಲಿದೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.