ಏಷ್ಯನ್ ಚಾಂಪಿಯನ್ಸ್ ಟ್ರೋಫಿ-2024: ಪಾಕಿಸ್ತಾನ ಮಣಿಸಿ ಐತಿಹಾಸಿಕ ದಾಖಲೆಯೊಂದಿಗೆ ಸೆಮಿಫೈನಲ್​ಗೇರಿದ ಭಾರತ
ಕನ್ನಡ ಸುದ್ದಿ  /  ಕ್ರೀಡೆ  /  ಏಷ್ಯನ್ ಚಾಂಪಿಯನ್ಸ್ ಟ್ರೋಫಿ-2024: ಪಾಕಿಸ್ತಾನ ಮಣಿಸಿ ಐತಿಹಾಸಿಕ ದಾಖಲೆಯೊಂದಿಗೆ ಸೆಮಿಫೈನಲ್​ಗೇರಿದ ಭಾರತ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ-2024: ಪಾಕಿಸ್ತಾನ ಮಣಿಸಿ ಐತಿಹಾಸಿಕ ದಾಖಲೆಯೊಂದಿಗೆ ಸೆಮಿಫೈನಲ್​ಗೇರಿದ ಭಾರತ

India defeat Pakistan: ಏಷ್ಯನ್ ಚಾಂಪಿಯನ್ ಟ್ರೋಫಿ 2024 ಹಾಕಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಭಾರತ ತಂಡ 2-1 ಅಂತರದಿಂದ ಮಣಿಸಿದೆ. ಆ ಮೂಲಕ ಸತತ ಐದನೇ ಗೆಲುವು ಸಾಧಿಸಿ ಸೆಮಿಫೈನಲ್​​ಗೆ ಪ್ರವೇಶ ಮಾಡಿದೆ.

ಪಾಕಿಸ್ತಾನ ಮಣಿಸಿ ಐತಿಹಾಸಿಕ ದಾಖಲೆಯೊಂದಿಗೆ ಸೆಮಿಫೈನಲ್​ಗೇರಿದ ಭಾರತ
ಪಾಕಿಸ್ತಾನ ಮಣಿಸಿ ಐತಿಹಾಸಿಕ ದಾಖಲೆಯೊಂದಿಗೆ ಸೆಮಿಫೈನಲ್​ಗೇರಿದ ಭಾರತ

India defeat Pakistan: ಏಷ್ಯನ್ ಚಾಂಪಿಯನ್ಸ್ ಟ್ರೋಫಿ-2024 ಟೂರ್ನಿಯಲ್ಲಿ ತನ್ನ ಐದನೇ ಲೀಗ್ ಹಂತದ ಪಂದ್ಯದಲ್ಲಿ ಬದ್ದವೈರಿ ಪಾಕಿಸ್ತಾನ ತಂಡವನ್ನು ಭಾರತ ಮಣಿಸಿದೆ. ಆ ಮೂಲಕ ಮೆನ್ ಇನ್ ಗ್ರೀನ್ ವಿರುದ್ಧ 8 ವರ್ಷಗಳ ಕಾಲ ಅಜೇಯ ಓಟ ಮುಂದುವರೆಸಿದೆ. ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲು ಗಳಿಸುವ ಮೂಲಕ ಅಮ್ಮದ್ ಬಟ್ ನೇತೃತ್ವದ ತಂಡದ ವಿರುದ್ಧ ಭಾರತ ತಂಡವನ್ನು 2-1 ಅಂತರದಿಂದ ಗೆಲ್ಲಿಸಿಕೊಡಲು ನೆರವಾದರು. ಇದರೊಂದಿಗೆ ಭಾರತ ತನ್ನ ಎಲ್ಲಾ 5 ಪಂದ್ಯಗಳಲ್ಲಿ ಜಯಗಳಿಸುವುದರೊಂದಿಗೆ ಟೂರ್ನಿಯ ಲೀಗ್ ಹಂತವನ್ನು ಕೊನೆಗೊಳಿಸಿ ಸೆಮಿಫೈನಲ್​ಗೆ ಲಗ್ಗೆ ಇಟ್ಟಿತು.

2016ರ ದಕ್ಷಿಣ ಏಷ್ಯಾ ಕ್ರೀಡಾಕೂಟದ ಫೈನಲ್‌ನಿಂದ ಹಿಡಿದು ಇಲ್ಲಿ ತನಕ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಸೋತ ಇತಿಹಾಸವೇ ಇಲ್ಲ. ಇದು ಪಾಕಿಸ್ತಾನ ವಿರುದ್ಧ ಗೆದ್ದ 15ನೇ ಜಯವಾಗಿದೆ. ಒಟ್ಟು 17 ಬಾರಿ ಮುಖಾಮುಖಿಯಾಗಿವೆ. ಉಳಿದ 2 ಪಂದ್ಯಗಳು ಡ್ರಾ ಆಗಿವೆ. ಈ ಗೆಲುವಿನ ಹೊರತಾಗಿಯೂ ಮೆನ್ ಇನ್ ಬ್ಲೂ ಆರಂಭದಲ್ಲಿ ಉತ್ತಮ ಸ್ಥಿತಿ ಹೊಂದಿರಲಿಲ್ಲ. ಎದುರಾಳಿ ಮೇಲೆ ಅಟ್ಯಾಕಿಂಗ್ ಮಾಡಲಿಲ್ಲ. ನೀರಸ ಆರಂಭ ಪಡೆದರೂ 2ನೇ ಕ್ವಾರ್ಟರ್​​​ನಲ್ಲಿ ಕಂಬ್ಯಾಕ್ ಮಾಡಿತು. ಹರ್ಮನ್‌ಪ್ರೀತ್ ನೀಡಿದ ಮುನ್ನಡೆ ಭಾರತೀಯರು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆ ಮೂಲಕ ಗೆದ್ದು ದಾಖಲೆ ಬರೆಯಿತು.

ಹರ್ಮನ್‌ಪ್ರೀತ್ ಸಿಂಗ್ 2 ಗೋಲು

ಅಹ್ಮದ್ ನದೀಮ್ 8ನೇ ನಿಮಿಷದಲ್ಲಿ ಗೋಲು ಗಳಿಸುವ ಮೂಲಕ ಪಾಕಿಸ್ತಾನ ಎದುರು ಮುನ್ನಡೆ ತಂದುಕೊಟ್ಟರು. ಈ ಟೂರ್ನಿಯಲ್ಲಿ ಭಾರತ ಗೋಲು ಬಿಟ್ಟುಕೊಟ್ಟು ಪಂದ್ಯ ಆರಂಭಿಸಿದ್ದು, ಇದೇ ಮೊದಲು. ಇದಕ್ಕೂ ಮುನ್ನ ಕಳೆದ ನಾಲ್ಕು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಮೊದಲ ಗೋಲು ದಾಖಲಿಸಿತ್ತು. ಆದಾಗ್ಯೂ, ಮೊದಲ ಕ್ವಾರ್ಟರ್‌ನ ಅಂತ್ಯದಲ್ಲಿ ಭಾರತ ಪೆನಾಲ್ಟಿ ಕಾರ್ನರ್ ಸಹಾಯದಿಂದ ಗೋಲು ಗಳಿಸಿ ಸಮಬಲ ಸಾಧಿಸಿತು. ಹರ್ಮನ್‌ಪ್ರೀತ್ ಸಿಂಗ್ ಭಾರತದ ಖಾತೆಯನ್ನು ತೆರೆದರು. ಎರಡನೇ ಕ್ವಾರ್ಟರ್‌ನ ನಾಲ್ಕನೇ ನಿಮಿಷದಲ್ಲಿ ಭಾರತ ಮತ್ತೊಂದು ಪೆನಾಲ್ಟಿ ಕಾರ್ನರ್ ಮತ್ತು ಹರ್ಮನ್‌ಪ್ರೀತ್ ಸಿಂಗ್ ಮತ್ತೊಂದು ಗೋಲು ಗಳಿಸಿ ಭಾರತಕ್ಕೆ 2-1 ಮುನ್ನಡೆ ತಂದುಕೊಟ್ಟರು.

ಇದಾದ ಬಳಿಕ ಮೂರು ಮತ್ತು ನಾಲ್ಕನೇ ಕ್ವಾರ್ಟರ್‌ನಲ್ಲಿ ಎರಡೂ ತಂಡಗಳು ಅತ್ಯಂತ ಆಕ್ರಮಣಕಾರಿ ಆಟವಾಡಿದರೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಇಲ್ಲಿಯವರೆಗೆ ಅಜೇಯವಾಗಿದ್ದವು. ಆದರೆ ಭಾರತ ವಿರುದ್ಧದ ಪಂದ್ಯದಲ್ಲಿ 1-2 ಅಂತರದಿಂದ ಸೋತ ಬಳಿಕ ಇದೀಗ ಭಾರತ ತಂಡ ಮಾತ್ರ ಟೂರ್ನಿಯಲ್ಲಿ ಅಜೇಯವಾಗಿ ಉಳಿದಿದೆ. ಭಾರತ ಇಲ್ಲಿಯವರೆಗೆ ಆಡಿದ ಎಲ್ಲಾ ಐದು ಪಂದ್ಯಗಳಲ್ಲಿ ಗೆದ್ದಿದ್ದರೆ, ಪಾಕಿಸ್ತಾನ ಎರಡು ಪಂದ್ಯಗಳನ್ನು ಗೆದ್ದಿದೆ, ಒಂದು ಸೋಲು ಮತ್ತು ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ.

10 ಆಟಗಾರರೊಂದಿಗೆ ಕಣಕ್ಕಿಳಿದಿದ್ದ ಪಾಕ್

ಪಂದ್ಯದ ಕೊನೆಯ 10 ನಿಮಿಷಗಳಲ್ಲಿ ಪಾಕಿಸ್ತಾನ ತಂಡ ಕೇವಲ 10 ಆಟಗಾರರೊಂದಿಗೆ ಆಡಿತು. ಏಕೆಂದರೆ ವಹೀದ್ ಅಶ್ರಫ್ ರಾಣಾ ಹಳದಿ ಕಾರ್ಡ್ ಪಡೆದು 10 ನಿಮಿಷಗಳ ಕಾಲ ಆಟದಿಂದ ಹೊರಗುಳಿದರು. ಈ ಪಂದ್ಯದಲ್ಲಿ ಭಾರತಕ್ಕೆ 5 ಪೆನಾಲ್ಟಿ ಕಾರ್ನರ್ ಮತ್ತು ಪಾಕಿಸ್ತಾನಕ್ಕೆ 7 ಪೆನಾಲ್ಟಿ ಕಾರ್ನರ್ ಸಿಕ್ಕಿತು. 2024 ರಲ್ಲಿ ಹುಲುನ್‌ಬುಯರ್‌ನ ಮೋಕಿ ಹಾಕಿ ತರಬೇತಿ ನೆಲೆಯಲ್ಲಿ ಈ ಪಂದ್ಯ ನಡೆಯಿತು. ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಭಾರತವು ಚೀನಾವನ್ನು 3-0, ಜಪಾನ್ 5-1, ಮಲೇಷ್ಯಾ 8-1 ಮತ್ತು ಕೊರಿಯಾವನ್ನು 3-1 ರಲ್ಲಿ ಸೋಲಿಸಿತು. ಇದೀಗ ಪಾಕ್​ ತಂಡವನ್ನು 2-1ರ ಅಂತರದಿಂದ ಗೆದ್ದು ಬೀಗಿದೆ. ಇದೀಗ ಸೆಮೀಸ್​​ ಪಂದ್ಯಗಳು ಸೆ. 16 ರಂದು ನಡೆಯಲಿವೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.