ಎಎಫ್‌ಸಿ ಏಷ್ಯನ್ ಕಪ್ 2027 ಅರ್ಹತಾ ಪಂದ್ಯ; ಬಾಂಗ್ಲಾದೇಶ ವಿರುದ್ಧ ಗೋಲುರಹಿತ ಡ್ರಾ ಸಾಧಿಸಿದ ಭಾರತ
AFC Asian Cup 2027: ಎಎಫ್‌ಸಿ ಏಷ್ಯನ್ ಕಪ್ 2027 ಅರ್ಹತಾ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತ ಗೋಲುರಹಿತ ಡ್ರಾ ಸಾಧಿಸಿದೆ. ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಿತು.

ಶಿಲ್ಲಾಂಗ್ (ಮೇಘಾಲಯ): ಮಂಗಳವಾರ (ಮಾರ್ಚ್ 25) ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಎಎಫ್‌ಸಿ ಏಷ್ಯನ್ ಕಪ್ 2027ರ ಕ್ವಾಲಿಫೈಯರ್ನ ಮೂರನೇ ಸುತ್ತಿನ ಮೊದಲ ಪಂದ್ಯದಲ್ಲಿ ಆತಿಥೇಯ ಭಾರತ ತಂಡಕ್ಕಿಂತ 59 ಸ್ಥಾನ ಕೆಳಗಿರುವ ಬಾಂಗ್ಲಾದೇಶ ವಿರುದ್ಧ ಗೋಲುರಹಿತ ಡ್ರಾದಲ್ಲಿ ಕೊನೆಗೊಳಿಸಿತು. ಭಾರತ ತಂಡದ ಕೋಚ್ ಆಗಿ ಮನೋಲೋ ಮಾರ್ಕ್ವೆಜ್ ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ತಮ್ಮ ಪ್ರಯಾಣವನ್ನು ಡ್ರಾದೊಂದಿಗೆ ಪ್ರಾರಂಭಿಸಿದ್ದಾರೆ.
ಅರ್ಹತಾ ಗುಂಪಿನಲ್ಲಿ ಅತ್ಯಂತ ಕಡಿಮೆ ಶ್ರೇಯಾಂಕಿತ ತಂಡವಾದ ಬಾಂಗ್ಲಾದೇಶ, ಫಲಿತಾಂಶವನ್ನು ಗೆಲುವಿನಂತೆ ಆಚರಿಸಿತು. ಪಂದ್ಯ ಡ್ರಾಗೊಂಡ ಹಿನ್ನೆಲೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ಹಂಚಿಕೆ ಮಾಡಲಾಗಿದೆ. ಇದೇ ಮೈದಾನದಲ್ಲಿ ಕಳೆದ ಬುಧವಾರ ನಡೆದಿದ್ದ ಸೌಹಾರ್ಧ ಪಂದ್ಯದಲ್ಲಿ ಮಾಲ್ಡೀವ್ಸ್ ವಿರುದ್ಧ 3-0 ಗೋಲುಗಳ ಅಂತರದಿಂದ ಗೆದ್ದಿದ್ದ ಭಾರತ, ಮಹತ್ವದ ಪಂದ್ಯದಲ್ಲಿ ಬಾಂಗ್ಲಾ ಎದುರು ಡ್ರಾ ಸಾಧಿಸಿದೆ. ಏಷ್ಯನ್ ಕಪ್ಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಈ ಗೆಲುವು ಮಹತ್ವದ್ದಾಗಿತ್ತು.
ಫಿಫಾ ರ್ಯಾಂಕಿಂಗ್ನಲ್ಲಿ ಭಾರತ 126ನೇ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ 185ನೇ ಸ್ಥಾನ ಪಡೆದಿದೆ. ಹೀಗಾಗಿ ಭಾರತ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಈ ಹಿಂದಿನ ಬಾಂಗ್ಲಾದೇಶ ತಂಡವು ಭಾರತಕ್ಕೆ ಉತ್ತಮ ಪೈಪೋಟಿ ನೀಡಿತ್ತು. ಇದೀಗ ಅಂತಹದ್ದೇ ಪೈಪೋಟಿ ಮತ್ತೆ ನೀಡುವ ಮೂಲಕ ಗಮನ ಸೆಳೆದಿದೆ. 2021ರ ಸ್ಯಾಪ್ ಚಾಂಪಿಯನ್ಶಿಪ್ನ ಪಂದ್ಯದಲ್ಲಿ ಎರಡೂ ತಂಡಗಳು ಡ್ರಾ 1-1ರಿಂದ ಡ್ರಾ ಸಾಧಿಸಿದ್ದವು. 2022ರ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಸುತ್ತಿನಲ್ಲಿ ಭಾರತ 2-0ರಿಂದ ಗೆದ್ದಿತ್ತು.
ರೋಚಕವಾಗಿತ್ತು ಉಭಯ ತಂಡಗಳ ನಡುವೆ ಪೈಪೋಟಿ
ಪಂದ್ಯದ ಆರಂಭಗೊಂಡ ಮೊದಲ ಸೆಕೆಂಡ್ನಿಂದಲೂ ರೋಚಕತೆ ಸೃಷ್ಟಿಸಿತ್ತು. ಇದು ಪ್ರತಿಯೊಂದು ನಿಮಿಷವೂ ಕ್ಲೈಮ್ಯಾಕ್ಸ್ನಂತೆ ಭಾಸವಾಗಿತ್ತು. ಗೋಲು ಹೊಡೆಯಲು ಉಭಯ ತಂಡಗಳ ಆಟಗಾರರು ಹೋರಾಟ ನಡೆಸಿದರು. ಕೆಲವೊಮ್ಮೆ ಗೋಲು ಹೊಡೆಯುವ ಅವಕಾಶ ಸಿಕ್ಕರೂ ಗುರಿ ತಲುಪಲು ಸಾಧ್ಯವಾಗಲಿಲ್ಲ. ಹಾಗಾಗಿ ಪಂದ್ಯ ನಿಗದಿತ 90 ನಿಮಿಷಗಳ ತನಕವೂ ಹೋಯಿತು. ಆದರೆ ಗೋಲು ಉಭಯ ತಂಡಗಳಿಂದ ಬರಲೇ ಇಲ್ಲ. ಹಾಗಾಗಿ ಹೆಚ್ಚುವರಿ ಸಮಯವನ್ನೂ ನೀಡಲಾಗಿತ್ತು. ಆದರೆ ಗೋಲು ರಹಿತವಾಗಿ ಪಂದ್ಯ ಮುಕ್ತಾಯಗೊಂಡಿತು.
ಏಷ್ಯನ್ ಕಪ್ ಕ್ವಾಲಿಫೈಯರ್ ಮೂರನೇ ಸುತ್ತಿನ ಸಿ ಗುಂಪಿನಲ್ಲಿ ಭಾರತದ ಜೊತೆಗೆ ಬಾಂಗ್ಲಾದೇಶ, ಹಾಂಗ್ಕಾಂಗ್ ಮತ್ತು ಸಿಂಗಾಪುರ ತಂಡಗಳು ಸ್ಥಾನ ಪಡೆದಿವೆ. ಈ ಗುಂಪಿನಲ್ಲಿ ಅಗ್ರಸ್ಥಾನ ಪಡೆಯುವ ತಂಡವು ಏಷ್ಯನ್ ಕಪ್ಗೆ ಅರ್ಹತೆ ಪಡೆಯಲಿದೆ.
ಗುಂಪಿನ ಎಲ್ಲಾ ತಂಡಗಳಿಗೂ ತಲಾ ಒಂದೊಂದು ಅಂಕ
ಈ ಡ್ರಾ ಫಲಿತಾಂಶದಿಂದ ಭಾರತದ ಗುಂಪಿನ ಎಲ್ಲಾ ತಂಡಗಳು ತಲಾ ಒಂದು ಅಂಕದೊಂದಿಗೆ ಸಮಬಲ ಸಾಧಿಸಿವೆ. ಸಿಂಗಾಪುರ ಮತ್ತು ಹಾಂಗ್ ಕಾಂಗ್, ಚೀನಾ ಕೂಡ ಗೋಲುರಹಿತ ಡ್ರಾ ಪಂದ್ಯವಾಡಿವೆ. ಭಾರತವು ಜೂನ್ 10 ರಂದು ತನ್ನ ಮುಂದಿನ ಅರ್ಹತಾ ಸುತ್ತಿನ ಪಂದ್ಯಕ್ಕಾಗಿ ಚೀನಾದ ಹಾಂಗ್ ಕಾಂಗ್‌ಗೆ ಪ್ರಯಾಣಿಸಲಿದ್ದು, ಬಾಂಗ್ಲಾದೇಶ ತನ್ನ ಮುಂದಿನ ಪಂದ್ಯದಲ್ಲಿ ಅದೇ ದಿನ ಸಿಂಗಾಪುರವನ್ನು ಆತಿಥ್ಯ ವಹಿಸಲಿದೆ.
