ಕಿವೀಸ್ ವನಿತೆಯರ ವಿರುದ್ಧ 3-1ರಿಂದ ಭರ್ಜರಿ ಗೆಲುವು; ಭಾರತ ಹಾಕಿ ತಂಡದ ಒಲಿಂಪಿಕ್ಸ್ ಭರವಸೆ ಜೀವಂತ
ಕನ್ನಡ ಸುದ್ದಿ  /  ಕ್ರೀಡೆ  /  ಕಿವೀಸ್ ವನಿತೆಯರ ವಿರುದ್ಧ 3-1ರಿಂದ ಭರ್ಜರಿ ಗೆಲುವು; ಭಾರತ ಹಾಕಿ ತಂಡದ ಒಲಿಂಪಿಕ್ಸ್ ಭರವಸೆ ಜೀವಂತ

ಕಿವೀಸ್ ವನಿತೆಯರ ವಿರುದ್ಧ 3-1ರಿಂದ ಭರ್ಜರಿ ಗೆಲುವು; ಭಾರತ ಹಾಕಿ ತಂಡದ ಒಲಿಂಪಿಕ್ಸ್ ಭರವಸೆ ಜೀವಂತ

FIH Women's Olympic Qualifier: ಮೊದಲ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಸೋತ ಭಾರತ ವನಿತೆಯರ ಹಾಕಿ ತಂಡವು ನ್ಯೂಜಿಲ್ಯಾಂಡ್‌ ವಿರುದ್ಧ 3-1 ಗೋಲುಗಳ ಅಂತರದ ಗೆಲುವಿನೊಂದಿಗೆ ಪುಟಿದೆದ್ದಿದೆ. ಇದೀಗ ಪ್ಯಾರಿಸ್‌ ಒಲಿಂಪಿಕ್ಸ್‌ ಟಿಕೆಟ್‌ ಭರವಸೆಯೂ ಹೆಚ್ಚಿದೆ.

ಭಾರತ ವನಿತೆಯರ ಹಾಕಿ ತಂಡ
ಭಾರತ ವನಿತೆಯರ ಹಾಕಿ ತಂಡ (PTI)

ಭಾರತ ವನಿತೆಯರ ಹಾಕಿ ತಂಡವು 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ (Paris Olympics) ಆಡುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಎಫ್‌ಐಎಚ್ ಮಹಿಳಾ ಒಲಿಂಪಿಕ್ ಕ್ವಾಲಿಫೈಯರ್‌ನ (FIH Women's Olympic Qualifier) ಗ್ರೂಪ್‌ ಹಂತದ ಎರಡನೇ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ನಾರಿಯರ ಬಳಗ, ನ್ಯೂಜಿಲ್ಯಾಂಡ್ ತಂಡವನ್ನು 3-1 ಗೋಲುಗಳಿಂದ ಸೋಲಿಸಿದೆ.

ಜನವರಿ 14ರ ಭಾನುವಾರ ಜಾರ್ಖಂಡ್‌ನ ರಾಜಧಾನಿ ರಾಂಚಿಯ ಮಾರಂಗ್ ಗೊಮ್ಕೆ ಜೈಪಾಲ್ ಸಿಂಗ್ ಆಸ್ಟ್ರೋಟರ್ಫ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತವು ಗೆಲುವಿನ ಹಳಿಗೆ ಮರಳಿದೆ.

ಜನವರಿ 13ರ ಶನಿವಾರ ಬಿಡುಗಡೆಯಾದ ವಿಶ್ವ ಹಾಕಿ ಶ್ರೇಯಾಂಕದಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದ್ದ ಭಾರತೀಯರು, ಪಂದ್ಯಾವಳಿಯಲ್ಲಿ ಉತ್ತಮ ಆರಂಭ ಪಡೆದಿರಲಿಲ್ಲ. ಪೂಲ್ ಬಿ ಆರಂಭಿಕ ಪಂದ್ಯದಲ್ಲಿ ತನಗಿಂತ ಕೆಳ ಶ್ರೇಯಾಂಕದ ಯುನೈಟೆಡ್ ಸ್ಟೇಟ್ಸ್ ವಿರುದ್ಧ 0-1 ಅಂತರದಿಂದ ಸೋತು ಮುಜುಗರಕ್ಕೊಳಗಾಯ್ತು. ಹೀಗಾಗಿ ಎರಡನೇ ಪಂದ್ಯದಲ್ಲಿ ಕಿವೀಸ್‌ ವಿರುದ್ಧ ಗೆಲ್ಲಲೇಬೇಕಾದ ಒತ್ತಡವಿತ್ತು.

ಇದನ್ನೂ ಓದಿ | ಮಲೇಷ್ಯಾ ಓಪನ್ 2024: ಫೈನಲ್​ನಲ್ಲಿ ಚೀನಿಯರ ವಿರುದ್ಧ ಭಾರತದ ಸಾತ್ವಿಕ್‌-ಚಿರಾಗ್​ ಜೋಡಿಗೆ ಸೋಲು

ಅತ್ತ ಮೊದಲ ಪಂದ್ಯದಲ್ಲಿ ಇಟಲಿ ವಿರುದ್ಧ 3-0 ಅಂತರದಿಂದ ಸುಲಭ ಜಯ ದಾಖಲಿಸಿದ್ದ ನ್ಯೂಜಿಲ್ಯಾಂಡ್, ಭಾರತದ ವಿರುದ್ಧ ಮುಗ್ಗರಿಸಿರಿಸಿತು. ಯುಎಸ್‌ ವಿರುದ್ಧದ ಸೋಲಿನ ನಿರಾಶೆಯನ್ನು ಬದಿಗಿಟ್ಟು ಆಡಿದ ಭಾರತೀಯರು, ಭಾನುವಾರ ಆಲ್‌ರೌಂಡ್ ಆಟ ಪ್ರದರ್ಶಿಸಿದರು.

ಸಲೀಮಾ ಟೆಟೆ ಮಿಂಚಿನ ಆಟ

ಭಾರತದ ಪರ ಸಲೀಮಾ ಟೆಟೆ ಅಮೋಘ ಆಟ ತೋರಿದರು. ತ್ವರಿತ ರನ್ ಮತ್ತು ಡ್ರಿಬ್ಲಿಂಗ್ ಸಾಮರ್ಥ್ಯದಿಂದ ತಂಡದ ದಾಳಿಗಳಲ್ಲಿ ಭಾಗಿಯಾದರು. ಪಂದ್ಯದ ಆರಂಭದಲ್ಲೇ ಭಾರತವು ಮೊದಲ ದಾಳಿಯೊಂದಿಗೆ ಮುನ್ನಡೆ ಸಾಧಿಸಿತು. ಕಿವೀಸ್‌ ರಕ್ಷಣೆಯನ್ನು ಬಲ ಪಾರ್ಶ್ವದಿಂದ ಭೇದಿಸಿ ಅದ್ಭುತ ಗೋಲು ಗಳಿಸಿದ ನಂತರ ಸಂಗೀತಾ ಅವರು ಸಮೀಪದಿಂದ ಗೋಲು ಗಳಿಸಿದರು. ಗೋಲಿಗೆ ಸಲಿಮಾ ಟೆಟೆ ಹಾಕಿಕೊಟ್ಟ ದಾರಿ ಸಫಲವಾಯ್ತು.

ಭಾರತದ ಗೋಲಿನಿಂದ ದಿಗ್ಭ್ರಮೆಗೊಂಡ ನ್ಯೂಜಿಲ್ಯಾಂಡ್‌ ತಕ್ಷಣವೇ ಪ್ರತಿಕ್ರಿಯಿಸಿತು. ಅದಾದ ಎರಡು ನಿಮಿಷಗಳ ನಂತರ ಪೆನಾಲ್ಟಿ ಕಾರ್ನರ್ ಪಡೆದುಕೊಂಡಿತು. ಆದರೆ ಸಿಕ್ಕ ಅವಕಾಶದಲ್ಲಿ ಗೋಲು ಗಳಿಸಲು ವಿಫಲವಾಯ್ತು. ಪಂದ್ಯದ 8ನೇ ನಿಮಿಷದಲ್ಲಿ ಭಾರತ ಮೊದಲ ಪೆನಾಲ್ಟಿ ಕವರ್ ಪಡೆಯಿತು. ದೀಪಿಕಾ ಹೊಡೆತವನ್ನು ನ್ಯೂಜಿಲ್ಯಾಂಡ್ ಡಿಫೆಂಡರ್ ತಡೆದರು.

ಭಾರತದ ಮುನ್ನಡೆಯಿಂದ ಎಚ್ಚೆತ್ತುಕೊಂಡ ನ್ಯೂಜಿಲ್ಯಾಂಡ್‌, ಶೀಘ್ರದಲ್ಲೇ ಮತ್ತೊಂದು ಪೆನಾಲ್ಟಿ ಕಾರ್ನರ್ ಪಡೆದುಕೊಂಡಿತು. ಗ್ರೌಂಡ್ ಶಾಟ್‌ನೊಂದಿಗೆ ಆಟಗಾರ್ತಿ ಹಲ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.

ಇದನ್ನೂ ಓದಿ | Explainer: ಆಸ್ಟ್ರೇಲಿಯಾ ವಿರುದ್ಧ ಸೋತರೂ ಏಷ್ಯನ್ ಕಪ್ ನಾಕೌಟ್ ಹಂತಕ್ಕೆ ಭಾರತ ಅರ್ಹತೆ ಪಡೆಯಬಹುದು; ಹೇಗೆಂದರೆ

ಆ ಬಳಿಕ ಭಾರತವು ಬ್ಯಾಕ್-ಟು-ಬ್ಯಾಕ್ ಪೆನಾಲ್ಟಿ ಕಾರ್ನರ್‌ಗಳನ್ನು ಪಡೆದುಕೊಂಡರು. ಅದರಲ್ಲಿ ಎರಡನೆಯದನ್ನು ನೇಹಾ ಅವರು ನೆಟ್‌ಗೆ ಹೊಡೆದು ಗೋಲಾಗಿ ಪರಿವರ್ತಿಸಿದರು.

ಸದ್ಯ ಸತತ ಎರಡು ಪಂದ್ಯಗಳಲ್ಲಿ ಎರಡು ಗೆಲುವು ಸಾಧಿಸಿರುವ ಯುಎಸ್ಎ ಪೂಲ್ ಬಿ ಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನದಲ್ಲಿದೆ. ಭಾರತ ಮಂಗಳವಾರ ತನ್ನ ಅಂತಿಮ ಪೂಲ್ ಪಂದ್ಯದಲ್ಲಿ ಇಟಲಿಯನ್ನು ಎದುರಿಸಲಿದೆ. ಅತ್ತ ನ್ಯೂಜಿಲೆಂಡ್ ಯುಎಸ್ಎಯನ್ನು ಎದುರಿಸಲಿದೆ.

Whats_app_banner

ವಿಭಾಗ

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.