ಇಂದು ಖೋ ಖೋ ವಿಶ್ವಕಪ್ ಸೆಮಿಫೈನಲ್; ಭಾರತದ ಪುರುಷ-ಮಹಿಳಾ ತಂಡಗಳಿಗೆ ದಕ್ಷಿಣ ಆಫ್ರಿಕಾ ಎದುರಾಳಿ
ಕನ್ನಡ ಸುದ್ದಿ  /  ಕ್ರೀಡೆ  /  ಇಂದು ಖೋ ಖೋ ವಿಶ್ವಕಪ್ ಸೆಮಿಫೈನಲ್; ಭಾರತದ ಪುರುಷ-ಮಹಿಳಾ ತಂಡಗಳಿಗೆ ದಕ್ಷಿಣ ಆಫ್ರಿಕಾ ಎದುರಾಳಿ

ಇಂದು ಖೋ ಖೋ ವಿಶ್ವಕಪ್ ಸೆಮಿಫೈನಲ್; ಭಾರತದ ಪುರುಷ-ಮಹಿಳಾ ತಂಡಗಳಿಗೆ ದಕ್ಷಿಣ ಆಫ್ರಿಕಾ ಎದುರಾಳಿ

ಖೋ ಖೋ ವಿಶ್ವಕಪ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತ ಮಹಿಳಾ ತಂಡವು ಬಾಂಗ್ಲಾದೇಶವನ್ನು 109-16 ಅಂಕಗಳಿಂದ ಸೋಲಿಸಿದರೆ, ಪುರುಷರ ತಂಡವು ಶ್ರೀಲಂಕಾವನ್ನು 100-40 ಅಂಕಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು. ಇಂದು ಬಹುನಿರೀಕ್ಷಿಯ ಸೆಮಿಫೈನಲ್‌ ಪಂದ್ಯ ನಡೆಯಲಿದೆ.

ಇಂದು ಖೋ ಖೋ ವಿಶ್ವಕಪ್ ಸೆಮಿಫೈನಲ್; ಭಾರತದ ಪುರುಷ-ಮಹಿಳಾ ತಂಡಗಳಿಗೆ ದಕ್ಷಿಣ ಆಫ್ರಿಕಾ ಎದುರಾಳಿ. (HT Photo)
ಇಂದು ಖೋ ಖೋ ವಿಶ್ವಕಪ್ ಸೆಮಿಫೈನಲ್; ಭಾರತದ ಪುರುಷ-ಮಹಿಳಾ ತಂಡಗಳಿಗೆ ದಕ್ಷಿಣ ಆಫ್ರಿಕಾ ಎದುರಾಳಿ. (HT Photo)

ಚೊಚ್ಚಲ ಖೋ ಖೋ ವಿಶ್ವಕಪ್‌ನಲ್ಲಿ ಭಾರತ ಪುರುಷರ ಹಾಗೂ ವನಿತೆಯರ ತಂಡ ಅಮೋಘ ಪ್ರದರ್ಶನ ನೀಡುತ್ತಿದೆ. ಉಭಯ ತಂಡಗಳು ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದು, ವಿಶ್ವಕಪ್‌ ಗೆಲ್ಲುವ ಫೇವರೆಟ್‌ ತಂಡಗಳಾಗಿವೆ. ಜನವರಿ 17ರ ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಉಭಯ ತಂಡಗಳು ಭರ್ಜರಿ ಅಂತರದಿಂದ ಗೆದ್ದು ಸೆಮೀಸ್‌ ಟಿಕೆಟ್‌ ಪಡೆದುಕೊಂಡಿವೆ. ಭಾರತ ಮಹಿಳಾ ಖೋ ಖೋ ತಂಡವು ಬಾಂಗ್ಲಾದೇಶವನ್ನು 109-16 ಅಂಕಗಳಿಂದ ಮಣಿಸಿ ಸೆಮಿಫೈನಲ್ ಗೆ ಪ್ರವೇಶಿಸಿದೆ. ಇದೇ ವೇಳೆ ಪುರುಷ ತಂಡವು ಶ್ರೀಲಂಕಾ ವಿರುದ್ಧ 100-40 ಅಂಕಗಳಿಂದ ಗೆದ್ದು ಸೆಮೀಸ್‌ ಟಿಕೆಟ್‌ ಪಡೆದುಕೊಂಡಿತು.

ಭಾರತ ವನಿತೆಯರ ತಂಡವು ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡುತ್ತಿದೆ. ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ 100 ಅಂಕಗಳ ಗಡಿ ತಲುಪಿದೆ. ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನಾಯಕಿ ಪ್ರಿಯಾಂಕಾ ಇಂಗಳೆ ನೇತೃತ್ವದ ತಂಡವು ಎರಡನೇ ಸುತ್ತಿನಲ್ಲಿ ಐದು ನಿಮಿಷಗಳ ಕಾಲ ನಡೆದ ಆಕರ್ಷಕ ಡ್ರೀಮ್ ರನ್ ಸೇರಿದಂತೆ ಎಲ್ಲಾ ನಾಲ್ಕು ಹಂತದಲ್ಲೂ ಪ್ರಾಬಲ್ಯ ಸಾಧಿಸಿತು.

ಭಾರತವು ಸತತ 100+ ಅಂಕಗಳನ್ನು ಗಳಿಸುವ ಮೂಲಕ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ಮುಂದುವರೆಸಿದೆ. ಇದು ಪಂದ್ಯಾವಳಿಯಲ್ಲಿ ಶತಕದ ಗಡಿಯನ್ನು ದಾಟಿದ ಸತತ ನಾಲ್ಕನೇ ಪಂದ್ಯವಾಗಿದೆ. ಅನುಭವಿ ನಸ್ರೀನ್ ಶೇಖ್ ಮತ್ತು ಪ್ರಿಯಾಂಕಾ ಇಂಗಳೆ ನೇತೃತ್ವದ ಭಾರತ, ಟರ್ನ್ 1ರಲ್ಲಿ 50 ಅಂಕಗಳನ್ನು ಗಳಿಸಿತು. ಇಂಗಳೆ, ಅಶ್ವಿನಿ ಶಿಂಧೆ ಮತ್ತು ರೇಷ್ಮಾ ರಾಥೋಡ್ ಡ್ರೀಮ್ ರನ್ ಗಳಿಸುವ ಮೂಲಕ ಡಿಫೆಂಡಿಂಗ್‌ ಸಮಯದಲ್ಲೂ ಪ್ರಾಬಲ್ಯವನ್ನು ಮುಂದುವರಿಸಿದರು. ಪಂದ್ಯದುದ್ದಕ್ಕೂ ಲಯ ಕಂಡುಕೊಳ್ಳಲು ಹೆಣಗಾಡುತ್ತಿದ್ದ ಬಾಂಗ್ಲಾದೇಶ ಕೊನೆಗೂ ಸೋಲೊಪ್ಪಿತು.

ಪುರುಷರ ಬಲಿಷ್ಠ ಪ್ರದರ್ಶನ

ಪುರುಷರ ವಿಭಾಗದಲ್ಲಿ ಭಾರತ ತಂಡವು ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಶತಕ ಸಾಧನೆ ಮಾಡಿತು. 100-40 ಅಂಕಗಳಿಂದ ಶ್ರೀಲಂಕಾವನ್ನು ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು. ರಾಮ್ಜಿ ಕಶ್ಯಪ್, ಪ್ರತೀಕ್ ವೈಕರ್ ಮತ್ತು ಆದಿತ್ಯ ಗನ್ಪುಲೆ ಅವರನ್ನೊಳಗೊಂಡ ಭಾರತ ಮೊದಲ ಅಟ್ಯಾಕಿಂಗ್ ಸುತ್ತಿನಲ್ಲೇ 58 ಅಂಕಗಳನ್ನು ಗಳಿಸಿತು. ಲಂಕಾಗೆ ಡ್ರೀಮ್ ರನ್‌ ಮೂಲಕ ಅಂಕ ಗಳಿಸಲು ಭಾರತ ಅವಕಾಶವೇ ನೀಡಲಿಲ್ಲ. ಶಿವಾ ರೆಡ್ಡಿ, ವಿ ಸುಬ್ರಮಣಿ ಮತ್ತು ವಜೀರ್ ಪ್ರತೀಕ್ ವೈಕರ್ ಅವರು ಸ್ಕೈ ಡೈವ್ ಮತ್ತು ಪೋಲ್ ಡೈವ್‌ ಮೂಲಕ ಅಂಕ ಗಳಿಸಿದರು.

ಇಂದು ಸೆಮಿಫೈನಲ್‌

ಎರಡೂ ವಿಭಾಗಗಳಲ್ಲಿ ಇಂದು (ಜನವರಿ 18 ಶನಿವಾರ) ಖೋ ಖೋ ವಿಶ್ವಕಪ್ ಸೆಮಿಫೈನಲ್‌ ಪಂದ್ಯ ನಡೆಯುತ್ತಿದೆ. ಭಾರತ ಪುರುಷರ ತಂಡವು ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸುತ್ತಿದೆ. ಇಂದು ರಾತ್ರಿ 8:15ಕ್ಕೆ ಪಂದ್ಯ ಆರಂಭವಾಗಲಿದೆ. ಇದೇ ವೇಳೆ ವನಿತೆಯರ ವಿಭಾಗದಲ್ಲಿಯೂ ಭಾರತಕ್ಕೆ ದಕ್ಷಿಣ ಆಫ್ರಿಕಾ ಎದುರಾಳಿ. ಇಂದು ಸಂಜೆ 7 ಗಂಟೆಗೆ ಸೆಮಿಫೈನಲ್‌ ಪಂದ್ಯ ನಡೆಯಲಿದೆ. ನಾಳೆ ಫೈನಲ್‌ ಪಂದ್ಯ ನಡೆಯಲಿದೆ. ಸ್ಟಾರ್‌ ಸ್ಪೋರ್ಟ್‌ ನೆಟ್ವರ್ಕ್‌ ಹಾಗೂ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಮೂಲಕ ಪಂದ್ಯ ವೀಕ್ಷಿಸಬಹುದು.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.