Kannada News  /  Sports  /  India Mens Volleyball Team Beat Cambodia Ar Asian Games 2023 Hangzhou China Sports News In Kannada Jra

Asian Games: ಕಾಂಬೋಡಿಯಾ ಮಣಿಸಿದ ಭಾರತ ವಾಲಿಬಾಲ್ ತಂಡ; ಏಷ್ಯನ್‌ ಗೇಮ್ಸ್‌ನಲ್ಲಿ ಶುಭಾರಂಭ

ಪುರುಷರ ವಾಲಿಬಾಲ್ ಪಂದ್ಯದಲ್ಲಿ ಭಾರತವು ಕಾಂಬೋಡಿಯಾವನ್ನು 3-0 ಗೋಲುಗಳಿಂದ ಸೋಲಿಸಿದೆ
ಪುರುಷರ ವಾಲಿಬಾಲ್ ಪಂದ್ಯದಲ್ಲಿ ಭಾರತವು ಕಾಂಬೋಡಿಯಾವನ್ನು 3-0 ಗೋಲುಗಳಿಂದ ಸೋಲಿಸಿದೆ (Twitter/Media_SAI)
Jayaraj • HT Kannada
Sep 19, 2023 09:49 PM IST

Asian Games: ಏಷ್ಯನ್‌ ಗೇಮ್ಸ್‌ ಗುಂಪು ಹಂತದ ಮೊದಲ ಪಂದ್ಯದಲ್ಲಿ ಭಾರತ ವಾಲಿಬಾಲ್‌ ತಂಡವು ತನಗಿಂತ ಕೆಳ ಶ್ರೇಯಾಂಕದ ಕಾಂಬೋಡಿಯಾವನ್ನು ಸೋಲಿಸಿದೆ.

ಏಷ್ಯನ್ ಗೇಮ್ಸ್‌ನ (Asian Games Hangzhou) ಪುರುಷರ ವಾಲಿಬಾಲ್ ಸ್ಪರ್ಧೆಯ ಮೊದಲ ಪಂದ್ಯದಲ್ಲಿ ಭಾರತ ತಂಡವು 3-0 ಗೋಲುಗಳಿಂದ ಕಾಂಬೋಡಿಯಾವನ್ನು ಮಣಿಸಿದೆ. ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಪೂಲ್ ಸಿ ಪಂದ್ಯದಲ್ಲಿ ಭಾರತವು 25-14, 25-13, 25-19 ಅಂಕಗಳೊಂದಿಗೆ ತನಗಿಂತ ಕೆಳ ಶ್ರೇಯಾಂಕದ ಕಾಂಬೋಡಿಯಾವನ್ನು ಸೋಲಿಸಿತು.

ಟ್ರೆಂಡಿಂಗ್​ ಸುದ್ದಿ

ಮುಂದೆ, ಬುಧವಾರದಂದು ಭಾರತಕ್ಕೆ ಕಠಿಣ ಸವಾಲು ಕಾದಿದೆ. ಆ ಪಂದ್ಯದಲ್ಲಿ ತಂಡವು ವಿಶ್ವದ 27ನೇ ಶ್ರೇಯಾಂಕದ ದಕ್ಷಿಣ ಕೊರಿಯಾ ತಂಡವನ್ನು ಎದುರಿಸುತ್ತಿದೆ.

ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ ಪುರುಷರ ವಾಲಿಬಾಲ್‌ ವಿಭಾಗದಲ್ಲಿ ಒಟ್ಟು 19 ತಂಡಗಳು ಭಾಗವಹಿಸುತ್ತಿವೆ. ಜಪಾನ್, ಚೀನಾ ಮತ್ತು ದಕ್ಷಿಣ ಕೊರಿಯಾ ತಂಡಗಳನ್ನು ಸ್ಪರ್ಧೆಯ ಮೂರು ಬಲಿಷ್ಠ ತಂಡಗಳೆಂದು ಪರಿಗಣಿಸಲಾಗಿದೆ.

ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ವಾಲಿಬಾಲ್‌ನಲ್ಲಿ ಜಪಾನ್ 16 ಚಿನ್ನದೊಂದಿಗೆ 27 ಬಾರಿ ಪೋಡಿಯಂ ಫಿನಿಶ್‌ ಮಾಡಿದೆ. ಅತ್ತ ಆತಿಥೇಯ ಚೀನಾ 11 ಚಿನ್ನದೊಂದಿಗೆ ಎರಡನೇ ಮತ್ತು ಕೊರಿಯಾ ಐದು ಚಿನ್ನದ ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಪುರುಷರ ವಾಲಿಬಾಲ್ ಅನ್ನು ಮೊದಲು 1958 ರಲ್ಲಿ ಟೋಕಿಯೊ ಏಷ್ಯನ್ ಗೇಮ್ಸ್‌ನಲ್ಲಿ ಪರಿಚಯಿಸಲಾಯಿತು. ಆ ಟೂರ್ನಿಯಲ್ಲಿ ಭಾರತವು ಕಂಚಿನ ಪದಕ ಗೆದ್ದಿತ್ತು.

ಭಾರತದ ಪುರುಷರ ವಾಲಿಬಾಲ್‌ ತಂಡವು ಇದುವರೆಗೆ ಒಟ್ಟು ಮೂರು ವಾಲಿಬಾಲ್ ಪದಕಗಳನ್ನು ಗೆದ್ದಿದೆ. 1962ರಲ್ಲಿ ರನ್ನರ್ ಅಪ್ ಆಗಿರುವ ಭಾರತ, ತನ್ನ‌ ಅತ್ಯುತ್ತಮ ಪ್ರದರ್ಶನ ನೀಡಿತ್ತು. ಅದರ ಹೊರತಾಗಿ 1958 ಮತ್ತು 1986ರಲ್ಲಿ ಕಂಚಿನ ಪದಕಗಳನ್ನು ಗೆದ್ದಿತ್ತು. ಭಾರತವು ಕೊನೆಯ ಪದಕವನ್ನು ಗೆದ್ದು 37 ವರ್ಷಗಳಾಗಿವೆ.

ಉದ್ಘಾಟನಾ ಪಂದ್ಯದಲ್ಲೇ ಭಾರತ ಫುಟ್ಬಾಲ್ ತಂಡಕ್ಕೆ ಸೋಲು

ಏಷ್ಯನ್‌ ಗೇಮ್ಸ್‌ನ ಮೊದಲ ಪಂದ್ಯದಲ್ಲೇ ಚೀನಾ ತಂಡವು ಭಾರತವನ್ನು 5-1 ಗೋಲುಗಳಿಂದ ಸೋಲಿಸಿದೆ. ಚೀನಾ ಪರ ಕಿಯಾಂಗ್‌ಲಾಂಗ್ ಟಾವೊ ಎರಡು ಗೋಲು ಗಳಿಸಿದರೆ, ಗಾವೊ ತಿಯಾನಿ, ವೈಜುನ್ ಡೈ ಮತ್ತು ಹಾವೊ ಫಾಂಗ್ ತಲಾ ಒಂದು ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಭಾರತದ ಪರ ರಾಹುಲ್ ಕೆಪಿ ಮಾತ್ರ ಏಕೈಕ ಗೋಲು ಗಳಿಸುವಲ್ಲಿ ಯಶಸ್ವಿಯಾದರು.

ಚೀನಾ ವಿರುದ್ಧದ ಸೋಲಿನ ನಂತರ ಭಾರತವು ಗುರುವಾರ ಬಾಂಗ್ಲಾದೇಶ ವಿರುದ್ಧ ಮುಂದಿನ ಪಂದ್ಯವನ್ನು ಆಡಲಿದೆ. ಅದಾದ ಬಳಿಕ ಮುಂದಿನ ಭಾನುವಾರ ಮಯನ್ಮಾರ್ ವಿರುದ್ಧ ಮತ್ತೊಂದು ಪಂದ್ಯ ನಡೆಯಲಿದೆ. ಮುಂದಿನ ಹಂತಕ್ಕೆ ಅರ್ಹತೆ ಪಡೆಯಲು ಭಾರತ ಈಗ ಉಳಿದಿರುವ ಎರಡು ಪಂದ್ಯಗಳಲ್ಲಿ ಬಾಂಗ್ಲಾದೇಶ ಮತ್ತು ಮಯನ್ಮಾರ್ ತಂಡಗಳನ್ನು ಸೋಲಿಸಬೇಕಾಗಿದೆ.