Jagbir Singh: ಕುಸ್ತಿಪಟುಗಳ ಆರೋಪಗಳು ನಿಜ, ಬ್ರಿಜ್ಭೂಷಣ್ರ ಅಸಭ್ಯ ವರ್ತನೆ ಕಣ್ಣಾರೆ ನೋಡಿದ್ದೇನೆ; ರೆಫ್ರಿ ಜಗ್ಬೀರ್ ಸಿಂಗ್ ಹೇಳಿಕೆ
Wrestlers Protest: ಕುಸ್ತಿಪಟುಗಳ ಆರೋಪಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ರೆಸ್ಲಿಂಗ್ ರೆಫ್ರಿ ಜಗ್ಬೀರ್ ಸಿಂಗ್ (Jagbir Singh) ಪ್ರತಿಕ್ರಿಯಸಿದ್ದು, ಕುಸ್ತಿಪಟುಗಳ ಆರೋಪಗಳು ನೂರಕ್ಕೆ ನೂರು ಸತ್ಯ. ನಾನು ಕಣ್ಣಾರೆ ನೋಡಿದ್ದೇನೆ ಎಂದು ಬ್ರಿಜ್‌ಭೂಷಣ್ ಸಿಂಗ್ (Brij Bhushan Sharan Singh) ನಿಜ ಬಣ್ಣವನ್ನು ಬಯಲು ಮಾಡಿದ್ದಾರೆ.
ನನ್ನ ಮಗಳ ಮೇಲೆ ಯಾವುದೇ ಲೈಂಗಿಕ ಕಿರುಕುಳ (Sexual Harassment) ನಡೆದಿಲ್ಲ. ದ್ವೇಷದ ಮನೋಭಾವದಿಂದ ನಾನು ಸುಳ್ಳು ದೂರು ದಾಖಲಿಸಿದೆ ಎಂದು ಅಪ್ರಾಪ್ತೆ ಕುಸ್ತಿಪಟು ತಂದೆ ಹೇಳಿಕೆ ನೀಡಿದ ಬೆನ್ನಲ್ಲೇ, ಕುಸ್ತಿಪಟುಗಳ ಆರೋಪಗಳು ಸತ್ಯ ಎಂದು ಅಂತಾರಾಷ್ಟ್ರೀಯ ರೆಸ್ಲಿಂಗ್ ರೆಫ್ರಿಯೊಬ್ಬರು ಹೇಳಿಕೆ ಕೊಟ್ಟಿದ್ದಾರೆ. ಇದು ಭಾರತೀಯ ಕುಸ್ತಿ ಫೆಡರೇಶನ್ ನಿರ್ಗಮಿತ ಮುಖ್ಯಸ್ಥ ಬ್ರಿಜ್‌ಭೂಷಣ್ ಶರಣ್ ಸಿಂಗ್ (Brij Bhushan Sharan Singh) ಅವರ ಮೇಲಿರುವ ಆರೋಪಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಭಾರತದ ಖ್ಯಾತನಾಮ ಕುಸ್ತಿಪಟುಗಳಿಂದ (Wrestlers Protest) ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಬ್ರಿಜ್‌ಭೂಷಣ್ ಅವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಮತ್ತೊಂದೆಡೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಪೊಲೀಸರ ತನಿಖೆಯಲ್ಲೂ ಸಾಬೀತಾಗುವ ಸಾಧ್ಯತೆ ದಟ್ಟವಾಗಿದೆ. ಈ ಬೆನ್ನಲ್ಲೇ ಅಂತಾರಾಷ್ಟ್ರೀಯ ರೆಸ್ಲಿಂಗ್ ರೆಫ್ರಿ ಜಗ್ಬೀರ್ ಸಿಂಗ್ (Jagbir Singh) ಪ್ರತಿಕ್ರಿಯಸಿದ್ದು, ಕುಸ್ತಿಪಟುಗಳ ಆರೋಪಗಳು ನೂರಕ್ಕೆ ನೂರು ಸತ್ಯ. ನಾನು ಕಣ್ಣಾರೆ ನೋಡಿದ್ದೇನೆ ಎಂದು ಬ್ರಿಜ್‌ಭೂಷಣ್ ನಿಜ ಬಣ್ಣವನ್ನು ಬಯಲು ಮಾಡಿದ್ದಾರೆ.
ಡಬ್ಲ್ಯಎಫ್ಐ ಬ್ರಿಜ್‌ಭೂಷಣ್ ವಿರುದ್ಧ 7 ಕುಸ್ತಿಪಟುಗಳು ದೂರು ದಾಖಲಿಸಿದ್ದಾರೆ. ಅದರಲ್ಲಿ ಓರ್ವ ಕುಸ್ತಿಪಟು, ‘2022ರ ಲಕ್ನೊದಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ ಟೂರ್ನಿಯ ನಂತರ ತಂಡದ ಜೊತೆಗೆ ಫೋಟೋಶೂಟ್ ನಡೆಯುತ್ತಿದ್ದ ವೇಳೆ, ಮುಖ್ಯಸ್ಥರು ತನ್ನ ಕೆಳಗಿನ ಭಾಗ ಕೈ ಹಾಕಿದ್ದರು ಎಂಬುದನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಆರೋಪಕ್ಕೆ ಸಂಬಂಧಿಸಿ 2007ರಿಂದಲೂ ರೆಫ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ಜಗ್ಬೀರ್ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಮುಖ್ಯಸ್ಥರ ಅಸಭ್ಯ ವರ್ತನೆಯನ್ನು 2013ರಿಂದಲೂ ಕಣ್ಣಾರೆ ಕಂಡಿದ್ದೇನೆ ಎಂದು ಅಸಲಿ ನಿಜವನ್ನು ಹೇಳಿದ್ದಾರೆ.
ಜಗ್ಬೀರ್ ಹೇಳಿದ್ದೇನು?
ಅಂದು ಫೋಟೋಶೂಟ್ ನಡೆದ ಸಂದರ್ಭದಲ್ಲಿ ಆ ಕುಸ್ತಿಪಟು ಪಕ್ಕದಲ್ಲೇ ಬ್ರಿಜ್‌ಭೂಷಣ್ ನಿಂತಿದ್ದರು. ಆ ವೇಳೆ ಆಕೆಯ ಅಲ್ಲಿಂದ ಮುಂದಿನ ಸಾಲಿಗೆ ಬಂದು ನಿಂತಳು. ಆಕೆಯ ಪೃಷ್ಠದ ಮೇಲೆ ಕೈ ಹಾಕಿದ್ದನ್ನು ನಾನು ನೋಡಿದೆ. ಆಕೆ ಮುಂದೆ ಹೋಗಲು ಯತ್ನಿಸಿದಾಗ ಭುಜವನ್ನು ಮೇಲೆ ಕೈ ಹಾಕಿ ಎಳೆದರು. ಮುಖ್ಯಸ್ಥರ ವರ್ತನೆಯಿಂದ ಆ ಕುಸ್ತಿಪಟುವಿಗೆ ತುಂಬಾ ಮುಜುಗರಕ್ಕೆ ಒಳಗಾದರು. ಮುಖ್ಯಸ್ಥರೇ ತಮ್ಮ ಪಕ್ಕ ನಿಂತುಕೊಳ್ಳುವಂತೆ ಕುಸ್ತಿಪಟುಗಳಿಗೆ ಹೇಳುತ್ತಿದ್ದರು ಎಂದು ಜಗ್ಬೀರ್ ವಿವರಿಸಿದ್ದಾರೆ.
ಕುಡಿದು ಅಸಭ್ಯವಾಗಿ ವರ್ತಿಸಿದ್ದರು
ಥಾಯ್ಲೆಂಡ್‌ನ ಫುಕೆಟ್‌ನಲ್ಲಿ ನಡೆದ ಟೂರ್ನಿಯೊಂದರಲ್ಲಿ ಭೋಜನ ಕಾರ್ಯಕ್ರಮದ ವೇಳೆ, ಬ್ರಿಜ್‌ಭೂಷಣ್ ಕುಡಿದು ಮಹಿಳಾ ಕುಸ್ತಿಪಟುಗಳಿಗೆ ಕಿರುಕುಳ ನೀಡಿದ್ದರು. ಅವರ ವರ್ತನೆ ತೀರಾ ಅಸಹನೀಯವಾಗಿತ್ತು. ಬ್ರಿಜ್ ಭೂಷಣ್ ಜೊತೆಗೆ ಅವರ ಸಹಚರರು ಸಹ ತುಂಬಾ ಕುಡಿದು ಮಹಿಳಾ ಕುಸ್ತಿಪಟುಗಳನ್ನು ಅನುಚಿತವಾಗಿ ಸ್ಪರ್ಶಿಸಿದ್ದರು. ಬಲವಂತವಾಗಿ ಅವರನ್ನು ತಬ್ಬಿಕೊಂಡರು. ಕೆಲವರು ಊಟವನ್ನು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದರು ಎಂದು ಜಗ್ಬೀರ್ ಸಿಂಗ್ ಹೇಳಿದ್ದಾರೆ.
2-3 ಯುವತಿಯರು ಜೊತೆಗೇ ಇರುತ್ತಿದ್ದರು
ಬ್ರಿಜ್‌ಭೂಷಣ್ ಅವರನ್ನು ಹಲವು ವರ್ಷಗಳಿಂದ ನೋಡುತ್ತಿದ್ದೇನೆ. ರಾಷ್ಟ್ರಮಟ್ಟದ ಟೂರ್ನಿಗಳು ಜರುಗುವಾಗ ಸಂದರ್ಭದಲ್ಲಿ ಇಬ್ಬರಿಂದ ಮೂವರು ಯುವತಿಯರು ಬ್ರಿಜ್ ಅವರ ಜೊತೆಗೇ ಇರುತ್ತಿದ್ದರು. ಆದರೆ, ನಮ್ಮ ರಕ್ಷಕನೇ ಈ ವರ್ತಿಸುತ್ತಿದ್ದರಿಂದ ನಮಗೆ ಪ್ರತಿಭಟಿಸಲು ಆಗುತ್ತಿರಲಿಲ್ಲ ಎಂದು ಎನ್ಡಿಟಿವಿ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸರೂ ನನ್ನೊಂದಿಗೆ ವಿಚಾರಣೆ ನಡೆಸಿರುವುದಾಗಿಯೂ ತಿಳಿಸಿದ್ದಾರೆ. 2010ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಗೋಲ್ಡ್ ಮೆಡಲ್ ಗೆದ್ದಿದ್ದ ಕುಸ್ತಿಪಟು ಅನಿತಾ ಅವರು ಸಹ, ಕುಸ್ತಿಪಟುಗಳ ಆರೋಪಗಳನ್ನು ನಿಜ ಎನ್ನುವ ರೀತಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.
200ಕ್ಕೂ ಅಧಿಕ ಹೇಳಿಕೆಗಳು ದಾಖಲು
ಇತ್ತೀಚೆಗೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಕುಸ್ತಿಪಟುಗಳು ಭೇಟಿ ಮಾಡಿದ ನಂತರ, ತನಿಖೆ ಬಿರುಸುಗೊಂಡಿದೆ. ಬ್ರಿಜ್‌ಭೂಷಣ್ ಎದುರು ತನಿಖೆ ಕೈಗೊಂಡಿರುವ ದೆಹಲಿ ಪೊಲೀಸರು, ಇಲ್ಲಿಯವರೆಗೂ 4 ರಾಜ್ಯಗಳಲ್ಲಿ 200ಕ್ಕೂ ಅಧಿಕ ಹೇಳಿಕೆಗಳನ್ನು ದಾಖಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹೇಳಿಕೆಗಳ ಪೈಕಿ ರೆಫ್ರಿ ಜಗ್ಬೀರ್, ಚಿನ್ನದ ಪದಕ ವಿಜೇತೆ ಅನಿತಾ ಅವರ ಸಹ ಒಳಗೊಂಡಿದ್ದಾರೆ.
ಉಳಿದ ಕುಸ್ತಿಪಟುಗಳು, ಕೋಚಿಂಗ್ ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಹಲವು ಕಡೆ ಸಿಸಿ ಟಿವಿ ದೃಶ್ಯಗಳನ್ನೂ ಸಂಗ್ರಹಿಸಿದ್ದು, ಶೀಘ್ರದಲ್ಲೇ ಚಾರ್ಜ್ಶೀಟ್ ಸಲ್ಲಿಕೆಯಾಗುವ ಸಾಧ್ಯತೆ ಇದೆ. ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಜೂನ್ 15ಕ್ಕೆ ಚಾರ್ಚ್ ಶೀಟ್ ಸಲ್ಲಿಕೆಯಾಗಲಿದೆ ಎಂದು ಹೇಳಿದ್ದರು. ಸಚಿವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಕುಸ್ತಿಪಟುಗಳು, ಪ್ರತಿಭಟನೆ ಸ್ಥಗಿತಗೊಳಿಸಿದ್ದಾರೆ.