ಹೋಗಿದ್ದು 117 ಮಂದಿ, ತಂದಿದ್ದು ಆರೇ ಪದಕ; ಬಂಗಾರವಿಲ್ಲದೆ ಬರಿಗೈಲಿ ಬಂದ ಭಾರತ, ನಿರೀಕ್ಷೆ-ನಿರಾಸೆ, ಹಲವು ವಿವಾದ
Paris Olympics 2024: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಪ್ರದರ್ಶನ ಹೇಗಿತ್ತು? ಯಾರೆಲ್ಲಾ ಪದಕದ ನಿರೀಕ್ಷೆ ಮೂಡಿಸಿ, ನಿರಾಸೆ ಮೂಡಿಸಿದವರು ಯಾರು? ಪದಕ ಗೆದ್ದವರು ಯಾರು? ಇಲ್ಲಿದೆ ವಿವರ.
ಜುಲೈ 26ರಿಂದ 17 ದಿನಗಳ ಕಾಲ ನಡೆದ ವಿಶ್ವದ ಅತಿದೊಡ್ಡ ಕ್ರೀಡಾಕೂಟ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತದ ಅಭಿಯಾನ ಕೊನೆಗೊಂಡಿದೆ. ಈ ಬಾರಿ ಎರಡಂಕಿ ಪದಕದ ಗೆರೆ ದಾಟುವ ಧ್ಯೇಯದೊಂದಿಗೆ ಅಖಾಡಕ್ಕಿಳಿದ ಭಾರತ, ಅಂದುಕೊಂಡಂತೆ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ಸಿಹಿಗಿಂತ ಕಹಿಯೇ ಕಂಡಿರುವ ಭಾರತ, ಒಂದೇ ಒಂದು ಬಂಗಾರವಿಲ್ಲದೆ ಬರಿಗೈಲಿ ಮರಳಿದೆ. 6 ಪದಕಗಳನ್ನಷ್ಟೇ ಗೆದ್ದಿದೆ.
ಹೋಗಿದ್ದು 117 ಮಂದಿ, ತಂದಿದ್ದು ಆರೇ ಪದಕ
ಒಲಿಂಪಿಕ್ಸ್ಗೆ ಭಾರತವು ಕಳುಹಿಸಿಕೊಟ್ಟಿದ್ದು 117 ಕ್ರೀಡಾಪಟುಗಳನ್ನು. ಆದರೆ ತಂದಿದ್ದು ಮಾತ್ರ ಆರೇ ಪದಕಗಳನ್ನು ಮಾತ್ರ. ಶೂಟಿಂಗ್ನಲ್ಲಿ 3, ಹಾಕಿಯಲ್ಲಿ 1, ಜಾವೆಲಿನ್ 1, ಕುಸ್ತಿಯಲ್ಲಿ 1 ಪದಕವನ್ನು ಭಾರತ ಗೆದ್ದಿದೆ. ಆದರೆ ಟೊಕಿಯೊ ಒಲಿಂಪಿಕ್ಸ್ನಲ್ಲಿ ಮೆನ್ ಇನ್ ಬ್ಲ್ಯೂ 7 ಪದಕಗಳನ್ನು ಗೆದ್ದಿತ್ತು. ಆದರೆ ಈ ಬಾರಿಗೆ 6 ಮೆಡಲ್ಸ್ಗೆ ಮುತ್ತಿಕ್ಕಿದರೂ ಒಂದೇ ಒಂದು ಚಿನ್ನ ಗೆಲ್ಲಲಿಲ್ಲ ಎಂಬ ಕೊರಗು ಕಾಡುತ್ತಿದೆ. ಕಳೆದ ಬಾರಿ ನೀರಜ್ ಚೋಪ್ರಾ ಬಂಗಾರ ಗೆದ್ದಿದ್ದರು.
ಬಂಗಾರವಿಲ್ಲದೆ ಬರಿಗೈಲಿ ಬಂದ ಭಾರತ
ಭಾರತಕ್ಕೆ ಒಂದೇ ಒಂದು ಕೊರಗು ಕಾಡುತ್ತಿದೆ. ಹೌದು, ಈ ಸಲ ಭಾರತ ಬಂಗಾರದ ಪದಕ ಗೆದ್ದಿಲ್ಲ ಎಂಬ ಕೊರಗು ತುಂಬಾ ಕಾಡುತ್ತಿದೆ. ನೀರಜ್ ಚೋಪ್ರಾ ಅವರು ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದಿರುವುದೇ ನಮ್ಮ ದೊಡ್ಡ ಸಾಧನೆಯಾಗಿದೆ. ವಿನೇಶ್ ಫೋಗಾಟ್ ಚಿನ್ನ ಗೆಲ್ಲುವ ಅವಕಾಶ ಇದ್ದರೂ ಅನರ್ಹಗೊಂಡ ಕಾರಣ ಪದಕ ಕೈ ತಪ್ಪುವಂತೆ ಮಾಡಿತು. ಆದರೆ ಕೆಲವರು ಪದಕದಂಚಿನಲ್ಲಿ ಎಡವಿದ್ದಾರೆ.
ಏಳು ಆಟಗಾರರಿಗೆ ಪದಕ ಮಿಸ್
ಭಾರತ ಒಂದು ಬೆಳ್ಳಿ ಮತ್ತು 5 ಕಂಚಿನ ಪದಕ ಗೆದ್ದಿದೆ. ನಾವು ಗೆದ್ದಿದ್ದು 6 ಪದಕವಾದರೂ, ಕಳೆದುಕೊಂಡಿದ್ದು ಮಾತ್ರ 7 ಪದಕ. ಇನ್ನೂ 7 ಪದಕ ಗೆಲ್ಲುವ ಅವಕಾಶ ಇತ್ತು. ಆದರೆ, ನಾಲ್ಕನೇ ಸ್ಥಾನ ಪಡೆಯುವ ಮೂಲಕ ಪದಕ ಮಿಸ್ ಮಾಡಿಕೊಂಡರು. ಮನು ಭಾಕರ್, ಅರ್ಜುನ್ ಬಬುಟಾ, ಧೀರಜ್ ಬೊಮ್ಮದೇವರ-ಅಂಕಿತಾ ಭಕತ್ (ಮಿಶ್ರ ತಂಡ), ಅನಂತ್‌ಜೀತ್ ಸಿಂಗ್ ನರುಕಾ ಮತ್ತು ಮಹೇಶ್ವರಿ ಚೌಹಾಣ್ (ಮಿಶ್ರ ತಂಡ), ಲಕ್ಷ್ಯ ಸೇನ್, ಮೀರಾಬಾಯಿ ಚಾನು, ವಿನೇಶ್ ಫೋಗಟ್ ಅವರು ನಾಲ್ಕನೇ ಸ್ಥಾನ ಪಡೆದರು.
ನಿರೀಕ್ಷೆ ಮತ್ತು ನಿರಾಸೆ
ಒಲಿಂಪಿಕ್ಸ್ಗೂ ಮುನ್ನ ಭಾರತದ ಪರ ಹಲವರು ಪದಕದ ನಿರೀಕ್ಷೆ ಮೂಡಿಸಿದ್ದರು. ಅವರ ಪೈಕಿ ಪಿವಿ ಸಿಂಧು, ಸಾತ್ವಿಕ್ ರಾಂಕಿರೆಡ್ಡಿ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ, ಅಶ್ವಿನಿ ಪೊನ್ನಪ್ಪ, ದೀಪಿಕಾ ಕುಮಾರಿ, ಮೀರಾಬಾಯಿ ಚಾನು, ವಿನೇಶ್ ಫೋಗಾಟ್, ಲವ್ಲಿನಾ ಬೊರ್ಗೊಹೈನ್, ನಿಕತ್ ಜರೀನ್, ಅವಿನಾಶ್ ಸೇಬಲ್ ಸೇರಿದಂತೆ ಪ್ರಮುಖರ ಮೇಲೆ ಭರವಸೆ ಹೆಚ್ಚಾಗಿತ್ತು. ಆದರೆ, ಇವರೆಲ್ಲರೂ ನಿರೀಕ್ಷೆ ಹುಟ್ಟಿಸಿ ನಿರಾಸೆ ಮೂಡಿಸಿದರು.
ಹಲವು ವಿವಾದಗಳು
ವಿನೇಶ್ ಫೋಗಾಟ್ ಅವರನ್ನು ಫೈನಲ್ನಿಂದ 100 ಗ್ರಾಂ ಹೆಚ್ಚು ತೂಕ ಇದ್ದ ಕಾರಣಕ್ಕೆ ಅವರನ್ನು ಅನರ್ಹಗೊಳಿಸಲಾಗಿತ್ತು. ಇದು ಭಾರಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಮತ್ತೊಂದೆಡೆ ನಿಶಾ ದಹಿಯಾ ಅವರು ಕುಸ್ತಿ ವೇಳೆ ಕೈಗೆ ತೀವ್ರ ಗಾಯಗೊಂಡರೂ ಅವರಿಗೆ ವಿಶ್ರಾಂತಿ ನೀಡದೆ ಕಣಕ್ಕಿಳಿಸಲಾಯಿತು. ಪ್ರೀತಿ ಹೂಡಾ ಅವರು ಆರಂಭದಲ್ಲಿ 1 ಅಂಕ ಗಳಿಸಿದ್ದರೂ ಕೊನೆಯಲ್ಲಿ ಅವರ ಎದುರಾಳಿ ಅಂಕ ಪಡೆದರು. ಇದು ಡ್ರಾ ಆಗಿತ್ತು. ಆದರೆ ನಿಯಮದಂತೆ, ಕೊನೆಯಲ್ಲಿ ಅಂಕ ಪಡೆದವರಿಗೆ ಗೆಲುವು ನೀಡಲಾಯಿತು. ಇದೆಂತಹಾ ನಿಯಮ ಎಂದು ಭಾರತದ ಕ್ರೀಡಾಪಟುಗಳು ಬೇಸರ ಹೊರಹಾಕಿದ್ದಾರೆ.
ಭಾರತದ ಪರ ಪದಕ ಗೆದ್ದವರು
- ಮನು ಭಾಕರ್ (ಶೂಟಿಂಗ್) : ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ - ಕಂಚು
- ಮನು ಭಾಕರ್-ಸರಬ್ಜೋತ್ ಸಿಂಗ್ (ಶೂಟಿಂಗ್) : 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡದ ಸ್ಪರ್ಧೆ - ಕಂಚು
- ಸ್ವಪ್ನಿಲ್ ಕುಸಾಲೆ (ಶೂಟಿಂಗ್) : ಪುರುಷರ 50 ಮೀಟರ್ ರೈಫಲ್ - ಕಂಚು
- ಹಾಕಿ : ಸ್ಪೇನ್ ವಿರುದ್ಧ ಗೆಲುವು - ಕಂಚು
- ನೀರಜ್ ಚೋಪ್ರಾ (ಜಾವೆಲಿನ್) : ಬೆಳ್ಳಿ ಪದಕ
- ಅಮನ್ ಸೆಹ್ರಾವತ್ (ಕುಸ್ತಿ) : 57 ಕೆಜಿ ವಿಭಾಗ - ಕಂಚಿನ ಪದಕ