ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಹಿಡಿತ ಸಾಧಿಸಿದ ಆಸ್ಟ್ರೇಲಿಯಾ; ದಿನದಂತ್ಯಕ್ಕೆ ಆಸೀಸ್ 86/1, ಭಾರತ 180ಕ್ಕೆ ಆಲೌಟ್
India vs Australia 2nd Test Day 1: ಅಡಿಲೇಡ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ನಲ್ಲಿ ಮೊದಲ ದಿನದ ಅಂತ್ಯಕ್ಕೆ ಆಸ್ಟ್ರೇಲಿಯಾ 1 ವಿಕೆಟ್ ನಷ್ಟಕ್ಕೆ 86 ರನ್ ಪೇರಿಸಿ 94 ರನ್ಗಳ ಹಿನ್ನಡೆಯಲ್ಲಿದೆ. ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 180ಕ್ಕೆ ಆಲೌಟ್ ಆಗಿತ್ತು.
ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಹಿಡಿತ ಸಾಧಿಸಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತದ 180 ರನ್ಗಳಿಗೆ ಪ್ರತಿಯಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ದಿನದಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ. ಆದರೆ ಇನ್ನೂ 94 ರನ್ಗಳ ಹಿನ್ನಡೆಯಲ್ಲಿದೆ. ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ವೈಫಲ್ಯ ಅನುಭವಿಸಿದ ಭಾರತ ಎರಡನೇ ದಿನದಂದು ಆತಿಥೇಯರಿಗೆ ತಿರುಗೇಟು ನೀಡುವ ಯೋಜನೆಯಲ್ಲಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 180 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಮಿಚೆಲ್ ಸ್ಟಾರ್ಕ್ ಸೇರಿದಂತೆ ಆಸೀಸ್ ವೇಗಿಗಳ ದಾಳಿಗೆ ತತ್ತರಿಸಿದ ಭಾರತ ತಂಡ ಎರಡನೇ ಸೆಷನ್ನಲ್ಲೇ ಆಲೌಟ್ ಆಯಿತು. ನಿತೀಶ್ ಕುಮಾರ್ ರೆಡ್ಡಿ 42 ರನ್ ಸಿಡಿಸಿ ಹೋರಾಟ ಮಾಡಿದ್ದರ ಪರಿಣಾಮ ಈ ಸ್ಕೋರ್ ದಾಖಲಿಸಲು ಸಾಧ್ಯವಾಯಿತು. ಅಗ್ರ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಮತ್ತು ಶುಭ್ಮನ್ ಗಿಲ್ ಕ್ರಮವಾಗಿ 37 ಮತ್ತು 31 ರನ್ಗಳ ಕೊಡುಗೆ ನೀಡಿದರು. ಆದರೆ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಬರಲಿಲ್ಲ.
ಭಾರತ ಕಳಪೆ ಬ್ಯಾಟಿಂಗ್
ಯಶಸ್ವಿ ಜೈಸ್ವಾಲ್ 0, ವಿರಾಟ್ ಕೊಹ್ಲಿ 7, ರಿಷಭ್ ಪಂತ್ 21, ರೋಹಿತ್ ಶರ್ಮಾ 3, ರವಿಂಚಂದ್ರನ್ ಅಶ್ವಿನ್ 22, ಹರ್ಷಿತ್ ರಾಣಾ 0, ಜಸ್ಪ್ರೀತ್ ಬುಮ್ರಾ 0, ಮೊಹಮ್ಮದ್ ಸಿರಾಜ್ 4 ರನ್ ಗಳಿಸಿದರು. ಪಿಂಕ್ ಬಾಲ್ ಟೆಸ್ಟ್ನಲ್ಲಿ ಮಿಂಚಿನ ದಾಳಿ ನಡೆಸಿದ ಮಿಚೆಲ್ ಸ್ಟಾರ್ಕ್, ಭಾರತ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಸ್ವಿಂಗ್, ಬೌನ್ಸಿ ಮತ್ತು ಯಾರ್ಕರ್ ಎಸೆತಗಳ ಮೂಲಕ ಭಾರತೀಯ ಬ್ಯಾಟರ್ಗಳನ್ನು ಕಾಡಿದ ಸ್ಟಾರ್ಕ್, ಪ್ರಮುಖ ಆರು ವಿಕೆಟ್ ಕಿತ್ತರು. 14.1 ಓವರ್ಗಳಲ್ಲಿ 6 ವಿಕೆಟ್ ಬುಟ್ಟಿಗೆ ಹಾಕಿಕೊಂಡರು. ಪ್ಯಾಟ್ ಕಮಿನ್ಸ್, ಸ್ಕಾಟ್ ಬೊಲ್ಯಾಂಡ್ ತಲಾ 2 ವಿಕೆಟ್ ಉರುಳಿಸಿದರು.
ಲಬುಶೇನ್-ನಾಥನ್ ಭರ್ಜರಿ ಜೊತೆಯಾಟ
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ಆಸೀಸ್ಗೆ ಜಸ್ಪ್ರೀತ್ ಬುಮ್ರಾ ಆಘಾತ ನೀಡಿದರು. ಉಸ್ಮಾನ್ ಖವಾಜ (13) ಅವರನ್ನು ಆರಂಭದಲ್ಲೇ ಹೊರದಬ್ಬಿದರು. ಆ ಬಳಿಕ ನಾಥನ್ ಮೆಕ್‌ಸ್ವೀನಿ ಮತ್ತು ಮಾರ್ನಸ್ ಲಬುಶೇನ್ ಅವರು ಜವಾಬ್ದಾರಿಯುತ ಆಟವನ್ನು ಪ್ರದರ್ಶಿಸಿದರು. ಭಾರತೀಯ ಬೌಲರ್ಗಳ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ, ಅಜೇಯ ಅರ್ಧಶತಕದ ಜೊತೆಯಾಟವಾಡಿದೆ. ಲಬುಶೇನ್ ಅಜೇಯ 20, ನಾಥನ್ ಅಜೇಯ 38 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಟೀಮ್ ಇಂಡಿಯಾ ಪರ ಬುಮ್ರಾ 1 ವಿಕೆಟ್ ಪಡೆದಿದ್ದಾರೆ.