ಕನ್ನಡ ಸುದ್ದಿ  /  Sports  /  India Vs Australia 3rd T20 Preview

India vs Australia 3rd T20I: ಇಂಡೋ-ಆಸೀಸ್‌ ಮೂರನೇ ಪಂದ್ಯಕ್ಕೂ ಮಳೆ ಅಡ್ಡಿಯಾಗುತ್ತಾ? ಹೈದರಾಬಾದ್‌ ಪಿಚ್‌ ಹೇಗಿದೆ?

ಇಂದು ಹೈದರಾಬಾದ್‌ನಲ್ಲಿ 30% ಮಳೆ ಬೀಳುವ ಸಾಧ್ಯತೆಯಿದೆ. ಪಂದ್ಯ ಆರಂಭಕ್ಕಿಂತ ಒಂದೆರಡು ಗಂಟೆಗಳ ಮುಂಚೆ ಮಳೆಯ ಮುನ್ಸೂಚನೆ ಇದ್ದು, ಪಂದ್ಯದ ಸಮಯದಲ್ಲಿ ಮಳೆ ಬಿಡುವು ಪಡೆಯುವ ನಿರೀಕ್ಷೆಯಿದೆ.

ಚುಟುಕು ಸರಣಿಯ ಮೂರನೇ ಪಂದ್ಯಕ್ಕೆ ಕ್ಷಣಗಣನೆ
ಚುಟುಕು ಸರಣಿಯ ಮೂರನೇ ಪಂದ್ಯಕ್ಕೆ ಕ್ಷಣಗಣನೆ (ANI)

ಹೈದರಾಬಾದ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಈಗಾಗಲೇ ಸಮಬಲಗೊಂಡಿದೆ. ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ ರೋಚಕವಾಗಿ ಗೆದ್ದಿದ್ದು, ಇಂದು ನಡೆಯಲಿರುವ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವು ನಿರ್ಣಾಯಕವಾಗಿದೆ. ಇಂದಿನ ಪಂದ್ಯ ಗೆಲ್ಲುವ ತಂಡವು ಸರಣಿ ಗೆಲ್ಲಲಿದೆ.

ಒದ್ದೆ ಮೈದಾನದಿಂದಾಗಿ ಕಳೆದ ಪಂದ್ಯ ಕೇವಲ 8 ಓವರ್‌ಗಳಿಗೆ ಸೀಮಿತಗೊಂಡಿತ್ತು. ಈ ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು ಆರು ವಿಕೆಟ್‌ಗಳಿಂದ ಸೋಲಿಸಿತು. ಹೀಗಾಗಿ ಮೂರು ಪಂದ್ಯಗಳ ಟಿ20 ಸರಣಿಯು 1-1ರಿಂದ ಸಮಬಲಗೊಂಡಿದೆ. ಸದ್ಯ ಪಂದ್ಯವು ಹೈದರಾಬಾದ್‌ಗೆ ಸ್ಥಳಾಂತರಗೊಂಡಿದೆ. ಇಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಇದೇ ರೀತಿಯ ಪ್ರದರ್ಶನವನ್ನು ನೀಡಲು ಸಜ್ಜಾಗಿದೆ. ಈ ಸರಣಿಯಲ್ಲಿ ಗೆದ್ದು,‌ ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಮಾಸ್ಟರ್‌ಪ್ಲಾನ್‌ ರೂಪಿಸಲು ತಯಾರಿ ನಡೆಸುತ್ತಿದೆ.

ಹವಾಮಾನ ಹೇಗಿದೆ? ಮಳೆ ಸಂಭವ ಇದೆಯಾ?

ಇಂದು ಹೈದರಾಬಾದ್‌ನಲ್ಲಿ 30% ಮಳೆ ಬೀಳುವ ಸಾಧ್ಯತೆಯಿದೆ. ಪಂದ್ಯ ಆರಂಭಕ್ಕಿಂತ ಒಂದೆರಡು ಗಂಟೆಗಳ ಮುಂಚೆ ಮಳೆಯ ಮುನ್ಸೂಚನೆ ಇದ್ದು, ಪಂದ್ಯದ ಸಮಯದಲ್ಲಿ ಮಳೆ ಬಿಡುವು ಪಡೆಯುವ ನಿರೀಕ್ಷೆಯಿದೆ. ಹೀಗಾಗಿ ಪಂದ್ಯ ಆರಂಭವಾಗುವ ಹೊತ್ತಿಗೆ ಮೈದಾನ ಸಿದ್ಧವಾಗಲಿದೆ. ಈ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ನಡೆಯದೆ ಮೂರು ವರ್ಷಗಳಾಗಿವೆ. ಆ ಬಳಿಕ ಮೈದಾನದಲ್ಲಿ ಕೆಲ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಹೀಗಾಗಿ ಇಂದಿನ ಪಂದ್ಯದ ವೇಳೆ ಮೈದಾನದ ಬಗ್ಗೆಯೂ ಕುತೂಹಲ ಹೆಚ್ಚಿದೆ. ಈಗಾಗಲೇ ಟಿಕೆಟ್‌ಗಳು ಸೋಲ್ಡ್‌ ಔಟ್‌ ಆಗಿವೆ ಎಂದು ಮೈದಾನದ ಆಡಳಿತ ತಿಳಿಸಿದೆ.

ಪಿಚ್ ವರದಿ

ಭಾರತದ ಇತರ ಮೈದಾನಗಳಿಗಿಂತ ಹೈದರಾಬಾದ್ ನಿಧಾನಗತಿಯ ಮೇಲ್ಮೈಯನ್ನು ಹೊಂದಿದೆ. ಇಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಅಡ್ಡಿಯಾಗುತ್ತದೆ. ಹೀಗಾಗಿ ಎರಡನೇ ಹಂತದಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಸವಾಲು ಜಾಸ್ತಿ. ಆದ್ದರಿಂದ, ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ. ಹೈದರಾಬಾದ್‌ನಲ್ಲಿ ಮೊದಲ ಇನಿಂಗ್ಸ್‌ನ ಸರಾಸರಿ ಮೊತ್ತ 150 ಆಗಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಅದು 135ಕ್ಕೆ ಇಳಿಯುತ್ತದೆ.

ಪಂದ್ಯದ ಸಮಯ ಮತ್ತು ನೇರಪ್ರಸಾರ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟಿ20 ಪಂದ್ಯವು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಂದು ಸಂಜೆ 7 ಗಂಟೆಗೆ ಪಂದ್ಯ ಪ್ರಾರಂಭವಾಗುತ್ತದೆ. ಈ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಮೊಬೈಲ್‌ ಅಥವಾ ಆನ್‌ಲೈನ್ ಸ್ಟ್ರೀಮಿಂಗ್ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತದೆ. ಇದರೊಂದಿಗೆ ನೀವು https://www.hindustantimes.com/cricketನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 3ನೇ ಟಿ20 ಪಂದ್ಯದ ಲೈವ್ ಕಾಮೆಂಟರಿ, ಸ್ಕೋರ್‌ಕಾರ್ಡ್ ಮತ್ತು ಹೊಸ ಅಪ್ಡೇಟ್‌ ಕೂಡಾ ಪಡೆಯಬಹುದು.

ಭಾರತ ಸಂಭಾವ್ಯ ಆಡುವ ಬಳಗ

ರೋಹಿತ್ ಶರ್ಮಾ (ನಾಯಕ), ಕೆ ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್‌), ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಾಲ್.

ಆಸ್ಟ್ರೇಲಿಯಾ ಸಂಭಾವ್ಯ ಆಡುವ ಬಳಗ

ಆರನ್ ಫಿಂಚ್ (ನಾಯಕ), ಕ್ಯಾಮರೂನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್‌ ಕೀಪರ್), ಜೋಶ್ ಇಂಗ್ಲಿಸ್ / ಡೇನಿಯಲ್ ಸ್ಯಾಮ್ಸ್, ಸೀನ್ ಅಬಾಟ್, ಪ್ಯಾಟ್ ಕಮ್ಮಿನ್ಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್‌.