ಬೆನ್ ಡಕೆಟ್, ಜೋ ರೂಟ್ ಅರ್ಧಶತಕ; ಉತ್ತಮ ಮೊತ್ತಕ್ಕೆ ಕಲೆ ಹಾಕಿದ ಇಂಗ್ಲೆಂಡ್, ಭಾರತಕ್ಕೆ 305 ರನ್ ಗುರಿ
India vs England 2nd ODI: ಕಟಕ್ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್, ಭಾರತ ತಂಡಕ್ಕೆ 305 ರನ್ಗಳ ಗುರಿ ನೀಡಿದೆ.

ಬೆನ್ ಡಕೆಟ್ (65) ಮತ್ತು ಜೋ ರೂಟ್ (69) ಅವರ ಆಕರ್ಷಕ ಅರ್ಧಶತಕಗಳ ಮತ್ತು ಲಿಯಾಮ್ ಲಿವಿಂಗ್ಸ್ಟನ್ (41) ಸ್ಫೋಟಕ ಆಟದ ಸಹಾಯದಿಂದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಉತ್ತಮ ಮೊತ್ತ ಪೇರಿಸಿದೆ. ಕಟಕ್ನ ಬಾರಾಬತಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ 49.5 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 304 ರನ್ ಕಲೆ ಹಾಕಿದ್ದು, ಮತ್ತೊಮ್ಮೆ 50 ಓವರ್ಗಳನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ಅಂತಿಮ ಓವರ್ನಲ್ಲಿ ಎರಡು ವಿಕೆಟ್ ಕಳೆದುಕೊಂಡು ಒಂದು ಎಸೆತ ಬಾಕಿ ಇರುವಂತೆ ಸರ್ವಪತನ ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಇಂಗ್ಲೆಂಡ್, ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್ಗೆ 65 ಎಸೆತಗಳಲ್ಲಿ 81 ರನ್ ಹರಿದು ಬಂತು. ಬೆನ್ ಡಕೆಟ್ ಮತ್ತು ಫಿಲ್ ಸಾಲ್ಟ್ ನಡುವಿನ ಸ್ಫೋಟಕ ಆಟಕ್ಕೆ ಪದಾರ್ಪಣೆಗೈದ ವರುಣ್ ಚಕ್ರವರ್ತಿ ಬ್ರೇಕ್ ನೀಡಿದರು. 29 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 26 ರನ್ ಸಿಡಿಸಿ ಬೃಹತ್ ಜೊತೆಯಾಟದ ನಿರೀಕ್ಷೆಯಲ್ಲಿದ್ದ ಫಿಲ್ ಸಾಲ್ಟ್, ಜಡೇಜಾಗೆ ಕ್ಯಾಚ್ ನೀಡಿದರು. ತಂಡದ ಮೊತ್ತ 100ರ ಗಡಿ ದಾಟುತ್ತಿದ್ದಂತೆ, ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿ ಅರ್ಧಶತಕ ಸಿಡಿಸಿದ್ದ ಬೆನ್ ಡಕೆಟ್ ನಿರ್ಗಮಿಸಿದರು. 56 ಎಸೆತಗಳಲ್ಲಿ 10 ಬೌಂಡರಿ ಸಹಿತ 65 ರನ್ ಸಿಡಿಸಿದ್ದ ಡಕೆಟ್, ಜಡ್ಡು ಬೌಲಿಂಗ್ನಲ್ಲಿ ನಿರ್ಗಮಿಸಿದರು.
ಜೋ ರೂಟ್ ಉತ್ತಮ ಪ್ರದರ್ಶನ
ಕಳೆದ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದ ಹಿರಿಯ ಆಟಗಾರ ಜೋ ರೂಟ್, ಉತ್ತಮ ಪ್ರದರ್ಶನ ತೋರಿದರು. ಹ್ಯಾರಿ ಬ್ರೂಕ್ ಜೊತೆಗೂಡಿ 3ನೇ ವಿಕೆಟ್ಗೆ 66 ರನ್ಗಳ ಪಾಲುದಾರಿಕೆ ಒದಗಿಸಿದರು. ಅಲ್ಲದೆ, ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಬ್ರೂಕ್ 31 ರನ್, ನಾಯಕ ಜೋಸ್ ಬಟ್ಲರ್ 34 ರನ್ ಸಿಡಿಸಿ ಕಾಣಿಕೆ ನೀಡಿದರು. ಜೋ ರೂಟ್ 76 ಎಸೆತಗಳಲ್ಲಿ 6 ಬೌಂಡರಿ ಸಹಿತ 72 ರನ್ ಬಾರಿಸಿ ಔಟಾದರು. ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಇವರಿಗೆ ಗೇಟ್ ಪಾಸ್ ನೀಡುವಲ್ಲಿ ಯಶಸ್ವಿಯಾದರು.
ಕೊನೆಯಲ್ಲಿ 300 ಗಡಿ ದಾಟಿಸಿದ ಲಿವಿಂಗ್ಸ್ಟನ್
ತಂಡದ ಮೊತ್ತ 5 ವಿಕೆಟ್ ನಷ್ಟಕ್ಕೆ 248 ರನ್ ಆಗಿದ್ದಾಗ ಕಣಕ್ಕಿಳಿದ ಹೊಡಿಬಡಿ ಆಟಗಾರ ಲಿಯಾಮ್ ಲಿವಿಂಗ್ಸ್ಟನ್ ಭರ್ಜರಿ ಇನ್ನಿಂಗ್ಸ್ ಕಟ್ಟಿದರು. ಅಲ್ಲದೆ, ತಂಡವನ್ನು 300ರ ಗಡಿ ದಾಟಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. 32 ಎಸೆತಗಳಲ್ಲಿ 2 ಬೌಂಡರಿ, 2 ಸಿಕ್ಸರ್ ಸಹಿತ 41 ರನ್ ಚಚ್ಚಿದ ಲಿವಿಂಗ್ಸ್ಟನ್, ಕೊನೆಯ ಓವರ್ನಲ್ಲಿ ರನೌಟ್ ಆದರು. ಉಳಿದ ಆಟಗಾರರು ಜೆಮಿ ಓವರ್ಟನ್ 6, ಗಸ್ ಆಟ್ಕಿನ್ಸನ್ 3, ಆದಿಲ್ ರಶೀದ್ 14 ರನ್ ಗಳಿಸಿ ನಿರಾಸೆ ಮೂಡಿಸಿದರು. ಭಾರತದ ಪರ ಜಡೇಜಾ 3 ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ತಲಾ 1 ವಿಕೆಟ್ ಕಿತ್ತರು.
