ಕನ್ನಡ ಸುದ್ದಿ  /  Sports  /  India Win Against South Africa In 2nd T20i

IND vs SA 2nd T20: ಮಿಲ್ಲರ್‌ ಅಜೇಯ ಶತಕ ವ್ಯರ್ಥ; ಹೋರಾಡಿ ಸೋತ ಹರಿಣಗಳು, ಭಾರತಕ್ಕೆ ಸರಣಿ

47 ಎಸೆತಗಳಿಂದ ಭರ್ಜರಿ 106 ರನ್‌ ಸಿಡಿಸಿದ ಡೇವಿಡ್ ಮಿಲ್ಲರ್, ಭಾರತದಿಂದ ಗೆಲುವನ್ನು ಕಿತ್ತುಕೊಳ್ಳುವ ಎಲ್ಲಾ ಪ್ರಯತ್ನ ಮಾಡಿದರು. ಇವರನ್ನು ತಡೆಯುವಲ್ಲಿ ಭಾರತದ ಬೌಲರ್‌ಗಳು ಕೂಡಾ ವಿಫಲವಾದರು. ಆದರೆ ಗುರಿ ತುಂಬಾ ದೂರ ಇದ್ದಿದ್ದರಿಂದ ಅದನ್ನು ತಲುಪುವುದು ಅವರಿಂದ ಸಾಧ್ಯವಾಗಲಿಲ್ಲ.

ಟೀಂ ಇಂಡಿಯಾಗೆ ಸರಣಿ ಜಯ
ಟೀಂ ಇಂಡಿಯಾಗೆ ಸರಣಿ ಜಯ (ICC)

ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ರೋಚಕ ಜಯ ಗಳಿಸಿದೆ. ಬೃಹತ್‌ ಮೊತ್ತ ದಾಖಲಾದ ಈ ಪಂದ್ಯದಲ್ಲಿ, ಕೊನೆಯವರೆಗೂ ಪ್ರಬಲ ಹೋರಾಟ ನಡೆಸಿದ ಹರಿಣಗಳು ಅಂತಿಮವಾಗಿ ಸೋಲೊಪ್ಪಿಕೊಂಡಿದ್ದಾರೆ. ಸತತ ಎರಡು ಜಯ ದಾಖಲಿಸಿದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಮೊದಲ ಬಾರಿಗೆ ತವರಿನಲ್ಲಿ ದ್ವಿಪಕ್ಷೀಯ ಸರಣಿ ಗೆದ್ದಿದೆ.

ಟಾಸ್‌ ಸೋತು ಮೊದಲ ಇನ್ನಿಂಗ್ಸ್‌ ಆಡಿದ ಭಾರತ, ಸೂರ್ಯಕುಮಾರ್‌ ಯಾದವ್‌ ಹಾಗೂ ಕೆ ಎಲ್‌ ರಾಹುಲ್‌ ವೈಭವದ ಬ್ಯಾಟಿಂಗ್‌ ನೆರವಿನಿಂದ 3 ವಿಕೆಟ್‌ ಕಳೆದುಕೊಂಡು 237 ರನ್‌ ಸಿಡಿಸಿತು. ಟಿ20 ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಂಡವೊಂದು ಗಳಿಸಿದ ಅತಿ ಹೆಚ್ಚು ಮೊತ್ತ ಇದಾಗಿತ್ತು. ಆರಂಭಿಕ ಆಘಾತದ ನಡುವೆ ಬೃಹತ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತಿದ್ದ ಹರಿಣಗಳು, ಅಂತಿಮ ಹಂತದಲ್ಲಿ ಪ್ರಬಲ ಹೋರಾಟ ನೀಡಿ ಸೋತರು. ಮುರಿಯದ ನಾಲ್ಕನೇ ವಿಕೆಟ್‌ಗೆ 174 ರನ್‌ಗಳ ಜೊತೆಯಾಟ ನೀಡಿದ ಡೇವಿಡ್‌ ಮಿಲ್ಲರ್‌ ಹಾಗೂ ಕ್ವಿಂಟನ್‌ ಡಿ ಕಾಕ್‌, ಭಾರತದಿಂದ ಜಯವನ್ನು ಕಿತ್ತುಕೊಳ್ಳುವಲ್ಲಿ ವಿಫಲರಾದರು. ಆರ್ಭಟಿಸಿದ ಮಿಲ್ಲರ್‌ ಶತಕ ವ್ಯರ್ಥವಾಯ್ತು.

47 ಎಸೆತಗಳಿಂದ ಭರ್ಜರಿ 106 ರನ್‌ ಸಿಡಿಸಿದ ಡೇವಿಡ್ ಮಿಲ್ಲರ್, ಭಾರತದಿಂದ ಗೆಲುವನ್ನು ಕಿತ್ತುಕೊಳ್ಳುವ ಎಲ್ಲಾ ಪ್ರಯತ್ನ ಮಾಡಿದರು. ಇವರನ್ನು ತಡೆಯುವಲ್ಲಿ ಭಾರತದ ಬೌಲರ್‌ಗಳು ಕೂಡಾ ವಿಫಲವಾದರು. ಆದರೆ ಟಾರ್ಗೆಟ್‌ ತುಂಬಾ ದೂರ ಇದ್ದಿದ್ದರಿಂದ ಅದನ್ನು ತಲುಪುವುದು ಅವರಿಂದ ಸಾಧ್ಯವಾಗಲಿಲ್ಲ.

ಭಾರತ ನೀಡಿದ 238 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾಗೆ, ಆರಂಭದಲ್ಲೇ ಎರಡೆರಡು ವಿಘ್ನ ಎದುರಾಯ್ತು. ನಾಯಕ ಬವುಮಾ 7 ಎಸೆತಗಳನ್ನು ವ್ಯರ್ಥ ಮಾಡಿ ಶೂನ್ಯಕ್ಕೆ ನಿರ್ಗಮಿಸಿದರೆ, ರಿಲಿ ರೋಸೋ ಕೂಡಾ ಇವರ ಹಿಂದೆಯೇ ಡಕೌಟ್‌ ಆದರು. ಅಬ್ಬರಿಸುವ ಸುಳಿವು ನೀಡಿದ ಏಡನ್‌ ಮರ್ಕ್ರಾಮ್‌ 33 ರನ್‌ ಸಿಡಿಸಿ ಔಟಾದರು. 6.2 ಓವರ್‌ಗಳಲ್ಲಿ 47 ರನ್‌ಗೆ 3 ವಿಕೆಟ್‌ ಕಳೆದುಕೊಂಡಿದ್ದ ಹರಿಣಗಳ ಬಳಗಕ್ಕೆ ಕ್ರೀಸ್‌ಕಚ್ಚಿ ಆಡುವ ಅವಶ್ಯಕತೆ ಇತ್ತು. ಆಗ ಒಂದಾಗಿದ್ದೇ ಕಾಕ್‌ ಮತ್ತು ಮಿಲ್ಲರ್‌ ಜೋಡಿ. ಇವರಿಬ್ಬರೂ ಭಾರತದ ಬೆವರಿಳಿಸಿದ್ರು. ಭರ್ಜರಿ ಜತೆಯಾಟ ನೀಡಿ, ಬೌಂಡರಿ ಸಿಕ್ಸರ್‌ಗಳ ಸುರಿಮಳೆಗೈದ್ರು. ಕ್ವಿಂಟನ್‌ 69 ರನ್‌ ಸಿಡಿಸಿದರೆ, ಮಿಲ್ಲರ್‌ ಶತಕ ಸಿಡಿಸಿದರು.

ಕೊನೆಯ 5 ಓವರ್‌ಗಳಲ್ಲಿ 78‌ ರನ್‌ ಸಿಡಿಸಿದ ಈ ಜೋಡಿ ಗೆಲುವಿನ ಸನಿಹದಲ್ಲಿತ್ತು. ಟಾರ್ಗೆಟ್‌ ಕೊಂಚ ಕಡಿಮೆ ಇದ್ದರೂ, ಗೆಲ್ಲುವ ಎಲ್ಲಾ ಸಾಧ್ಯತೆ ಇತ್ತು. ಆದರೆ, ಹರಿಣಗಳ ಇನ್ನಿಂಗ್ಸ್‌ ಆರಂಭದಲ್ಲಿ ಸಪ್ಪೆಯಾಗಿದ್ದ ಕಾರಣ ದೊಡ್ಡ ರನ್‌ ಪೇರಿಸಲು ಅವರಿಂದ ಸಾಧ್ಯವಾಗಲಿಲ್ಲ. ಅಂತಿಮವಾಗಿ ತಂಡ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 221 ರನ್‌ ಗಳಿಸಲಷ್ಟೇ ಶಕ್ತವಾಯ್ತು. ಈ ಮೂಲಕ ಭಾರತ 16 ರನ್‌ಗಳ ರೋಚಕ ಜಯ ಸಾಧಿಸಿತು.

ಭಾರತ ಇನ್ನಿಂಗ್ಸ್‌

ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಬವುಮಾ, ಭಾರತ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿದರು. ದೊಡ್ಡ ಟಾರ್ಗೆಟ್‌ ನೀಡಿ, ಹರಿಣಗಳನ್ನು ಕಟ್ಟಿಹಾಕಬೇಕೆಂದು ಮೊದಲೇ ನಿರ್ಧರಿಸಿದ್ದ ಭಾರತದ ಹುಲಿಗಳು ರನ್‌ ಮಳೆ ಸುರಿಸಿದರು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ರೋಹಿತ್‌ ಶರ್ಮಾ ಹಾಗೂ ಕನ್ನಡಿಗ ಕೆ ಎಲ್‌ ರಾಹುಲ್‌, ಆರಂಭದಲ್ಲೇ ಅಬ್ಬರಿಸಲು ಶುರುಮಾಡಿದರು. ಕೊಂಚ ನಿಧಾನ ಕಾಯ್ದುಕೊಂಡ ರೋಹಿತ್‌ ಶರ್ಮಾ, 37 ಎಸೆತಗಳಲ್ಲಿ 43 ರನ್‌ ಸಿಡಿಸಿ ನಿರ್ಗಮಿಸಿದರು. ಮೊದಲ ವಿಕೆಟ್‌ಗೆ ಇಬರಿಬ್ಬರೂ 96 ರನ್‌ಗಳ ಭರ್ಜರಿ ಜೊತೆಯಾಟ ನೀಡಿದರು.

ಆಕರ್ಷಕ ಅರ್ಧಶತಕ ಸಿಡಿಸಿದ ರಾಹುಲ್‌ 28 ಎಸೆತಗಳಲ್ಲಿ 57 ರನ್‌ ಸಿಡಿಸಿದರು. 203.57ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಕನ್ನಡಿಗ, 5 ಫೋರ್‌ ಹಾಗೂ 4 ಭರ್ಜರಿ ಸಿಕ್ಸರ್‌ ಸಿಡಿಸಿದರು. ಆರಂಭಿಕರಿಬ್ಬರು ಔಟಾದ ಬಳಿಕ ಒಂದಾದ ಸೂರ್ಯಕುಮಾರ್‌ ಯಾದವ್‌ ಹಾಗೂ ವಿರಾಟ್‌ ಕೊಹ್ಲಿ, ಕಳೆದ ಪಂದ್ಯದಂತೆಯೇ ಈ ಪಂದ್ಯದಲ್ಲೂ ಅಬ್ಬರಿಸಿದರು.

ಸೂರ್ಯಕುಮಾರ್‌ ಯಾದವ್‌ 22 ಎಸೆತಗಳಲ್ಲಿ 61 ರನ್‌ ಗಳಿಸಿ ಔಟಾದರು. 277.27ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಸ್ಕೈ, 5 ಬೌಂಡರ್‌ ಹಾಗೂ 5 ಬೃಹತ್‌ ಸಿಕ್ಸರ್‌ ಸಿಡಿಸಿದರು. ಆಟ ಇನ್ನೂ ಬಾಕಿ ಇರುವಂತೆಯೇ ಅನಗತ್ಯ ರನ್‌ ಗಳಿಸಲು ಹೋಗಿ ರನೌಟ್‌ ಆದರು. ಇನ್ನೊಂದೆಡೆ ಸೂರ್ಯಕುಮಾರ್‌ಗೆ ಉತ್ತಮ ಸಾಥ್‌ ನೀಡಿದ ಮಾಜಿ ನಾಯಕ ವಿರಾಟ್‌ ಕೊಹ್ಲಿ 49 ರನ್‌ ಗಳಿಸಿ ಅಜೇಯರಾಗಿ ಉಳಿದರು. ಸೂರ್ಯ ಔಟಾದ ಬಳಿಕ ಕ್ರೀಸ್‌ಗೆ ಬಂದ ಮ್ಯಾಚ್‌ ಫಿನಿಶರ್‌ ದಿನೇಶ್‌ ಕಾರ್ತಿಕ್ 2 ಸಿಕ್ಸರ್‌ ಸಹಿತ 17 ರನ್‌ ಗಳಿಸಿದರು. ಭಾರತದ ಪರ ಇಬ್ಬರು ಅರ್ಧಶತಕ ಗಳಿಸಿದರೆ, ಕೊಹ್ಲಿ ಅಜೇಯರಾಗಿ ಉಳಿದು 49 ರನ್‌ ಗಳಿಸಿದರು. ಕನ್ನಡಿಗ ಕೆ ಎಲ್‌ ರಾಹುಲ್‌ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಈ ಗೆಲುವಿನೊಂದಿಗೆ ಭಾರತ 2-0 ಅಂತರದಿಂದ ಸರಣಿ ಜಯ ಸಾಧಿಸಿದೆ. ಇದು ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ತವರಿನಲ್ಲಿ ಮೊದಲ ಸರಣಿ ಜಯ ಎಂಬುದು ವಿಶೇಷ. 2015ರಲ್ಲಿ 2-0ಯಿಂದ ಸೋತಿದ್ದ ಭಾರತ, ಆ ಬಳಿಕ ನಡೆದ ಎರಡು ಸರಣಿಯಲ್ಲಿ ಸಮಬಲ ಸಾಧಿಸಿತ್ತು.