ಬಲಿಷ್ಠ ಚೀನಾ ಮಣಿಸಿ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ; ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ವನಿತೆಯರು
ಒಲಿಂಪಿಕ್ಸ್ ಪದಕ ವಿಜೇತ ಚೀನಾ ವಿರುದ್ಧ ಜಯ ಸಾಧಿಸಿದ ಭಾರತ ಮಹಿಳಾ ಹಾಕಿ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಈ ಗೆಲುವಿನೊಂದಿಗೆ ಭಾರತವು ಒಟ್ಟು 3 ಬಾರಿ ಮಹಿಳಾ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದಂತಾಗಿದೆ. 2016ರಲ್ಲಿ ಮೊದಲ ಪ್ರಶಸ್ತಿ ಗೆದ್ದ ತಂಡವು, 2023ರಲ್ಲಿ ಚಾಂಪಿಯನ್ ಆಗಿತ್ತು.
ತವರಿನ ಆತಿಥ್ಯದಲ್ಲಿ ನಡೆದ ಮಹಿಳಾ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವನಿತೆಯರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಬಲಿಷ್ಟ ಚೀನಾ ವಿರುದ್ಧ 1-0 ಗೋಲುಗಳ ಅಂತರದಿಂದ ರೋಚಕ ಜಯ ಸಾಧಿಸಿದ ಹಾಲಿ ಚಾಂಪಿಯನ್ ಭಾರತ ಮಹಿಳಾ ತಂಡ, ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ. ಬಿಹಾರದ ರಾಜ್ಗಿರ್‌ನಲ್ಲ ನಡೆದ ರೋಚಕ ಫೈನಲ್ ಪಂದ್ಯದಲ್ಲಿ, ರೋಚಕ ಹೋರಾಟ ನಡೆಸಿದ ನಾರಿಮಣಿಯರು ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಯುವ ಸ್ಟ್ರೈಕರ್ ದೀಪಿಕಾ, ಮತ್ತೊಮ್ಮೆ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಆಕರ್ಷಕ ರಿವರ್ಸ್ ಹಿಟ್ ಗೋಲ್ ಬಾರಿಸುವ ಮೂಲಕ ಮತ್ತೊಮ್ಮೆ ಸ್ಟಾರ್ ಆಗಿ ಹೊರಹೊಮ್ಮಿದರು. ಪಂದ್ಯದ 31ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದ ದೀಪಿಕಾ, ಟೂರ್ನಿಯಲ್ಲಿ ಒಟ್ಟು 11 ಸ್ಟ್ರೈಕ್ ಗಳೊಂದಿಗೆ ಭಾರತದ ಪರ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರ್ತಿ ಎನಿಸಿಕೊಂಡರು.
ಪ್ರಸಕ್ತ ಆವೃತ್ತಿಯ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ, ಭಾರತವು ಚೀನಾವನ್ನು ಇದು ಸತತ ಎರಡನೇ ಬಾರಿ ಮಣಿಸಿದೆ. ಲೀಗ್ ಹಂತದ ಪಂದ್ಯದಲ್ಲಿ 3-0 ಗೋಲುಗಳಿಂದ ಚೀನಾವನ್ನು ಮಣಿಸಿತ್ತು. ಅದಾಗಲೇ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಭಾರತ, ಫೈನಲ್ ಪಂದ್ಯ ಗೆಲ್ಲುವ ವಿಶ್ವಾಸದಲ್ಲಿತ್ತು. ಆದರೆ, ಭಾರತಕ್ಕೆ ಸುಲಭದಲ್ಲಿ ಗೆಲುವು ಬಿಟ್ಟುಕೊಡಲು ಪಾಶ್ಚಿಮಾತ್ಯರು ಸಿದ್ಧರಿರಲಿಲ್ಲ. ಕಠಿಣ ಪೈಪೋಟಿ ನೀಡಿದ ಹೊರತಾಗಿಯೂ, ಚೀನಾದಿಂದ ಒಂದೇ ಒಂದು ಗೋಲು ಗಳಿಸಲು ಕೂಡಾ ಸಾಧ್ಯವಾಗಲಿಲ್ಲ.
ಚೀನಾದ ಪ್ರಯತ್ನ ವಿಫಲ
ಎರಡನೇ ಕ್ವಾರ್ಟರ್‌ನಲ್ಲಿ ಚೀನಾ ಮೊದಲ ಪೆನಾಲ್ಟಿ ಕಾರ್ನರ್ ಪಡೆದುಕೊಂಡಿತು. ಆದರೆ ಭಾರತದ ಎರಡನೇ ಗೋಲ್ ಕೀಪರ್ ಬಿಚು ದೇವಿ ಖರಿಬಾಮ್ ಅವರು ಜಿನ್ಜುವಾಂಗ್ ಟಾನ್ ಅವರ ಹೊಡೆತವನ್ನು ಅದ್ಭುತ ಡೈವಿಂಗ್ ಮೂಲಕ ಸೇವ್ ಮಾಡಿದರು. ಮುಂದಿನ ಎರಡು ನಿಮಿಷಗಳಲ್ಲಿ ಭಾರತೀಯರು ನಾಲ್ಕು ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿದರು. ಆದರೆ ಇದರಲ್ಲಿ ಒಂದೇ ಒಂದು ಅವಕಾಶವನ್ನು ಬಳಸಿಕೊಳ್ಳಲು ಭಾರತೀಯರು ವಿಫಲರಾದರು.
ಪಂದ್ಯದುದ್ದಕ್ಕೂ ಭಾರತವು ಚೀನಾದ ಡಿಫೆನ್ಸ್ ಮೇಲೆ ಒತ್ತಡ ಹೇರಿತು. 42ನೇ ನಿಮಿಷದಲ್ಲಿ ದೀಪಿಕಾ ಅವರು ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಗಳಿಸುವ ಅವಕಾಶ ಪಡೆದರು. ಆದರೆ ಚೀನಾದ ಗೋಲ್ ಕೀಪರ್ ಲಿ ಟಿಂಗ್ ಅದನ್ನು ಸೇವ್ ಮಾಡಿದರು.
ಮೂರನೇ ಬಾರಿ ಚಾಂಪಿಯನ್ ಪಟ್ಟ
ಈ ಗೆಲುವಿನೊಂದಿಗೆ ಭಾರತವು ಒಟ್ಟು ಮೂರು ಬಾರಿ ಮಹಿಳಾ ಹಾಕಿ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಗೆದ್ದಂತಾಗಿದೆ. 2016ರಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದಿದ್ದ ತಂಡವು, 2023ರಲ್ಲಿ ಚಾಂಪಿಯನ್ ಆಗಿತ್ತು. ಈ ಬಾರಿ ಮತ್ತೆ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಬಾರಿಗೆ ಎಸಿಟಿ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.
ಭಾರತ ತಂಡವು ಈಗ ಪಂದ್ಯಾವಳಿಯ ಇತಿಹಾಸದಲ್ಲಿ ದಕ್ಷಿಣ ಕೊರಿಯಾಗೆ ಸಮನಾಗಿ ತಲಾ ಮೂರು ಪ್ರಶಸ್ತಿ ಗೆದ್ದ ಅತ್ಯಂತ ಯಶಸ್ವಿ ತಂಡವಾಗಿದೆ. ಮತ್ತೊಂದೆಡೆ, ಚೀನಾ ಮೂರನೇ ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಡಬೇಕಾಯ್ತು. ಅತ್ತ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಮಲೇಷ್ಯಾವನ್ನು 4-1 ಗೋಲುಗಳಿಂದ ಮಣಿಸಿದ ಜಪಾನ್ ಮೂರನೇ ಸ್ಥಾನ ಪಡೆಯಿತು.
ವಿಭಾಗ